ಕಂಕನಾಡಿಯಲ್ಲಿ ತಾತ್ಕಾಲಿಕ ಮಾರುಕಟ್ಟೆಗೆ ಸಿದ್ಧತೆ: ಸಚಿವ ಖಾದರ್ ಪರಿಶೀಲನೆ
ಮಂಗಳೂರು, ಮೇ 2: ಕಂಕನಾಡಿಯ ಮಾರುಕಟ್ಟೆ ಅಭಿವೃದ್ಧಿ ನಿಟ್ಟಿನಲ್ಲಿ ತಾತ್ಕಾಲಿಕ ಮಾರುಕಟ್ಟೆ ನಿರ್ಮಾಣಕ್ಕೆ ಭರದ ಸಿದ್ಧತೆ ನಡೆಯುತ್ತಿರುವ ಮಧ್ಯೆಯೇ ಬಸ್, ಕಾರು, ಆಟೊ ಚಾಲಕರು ಮತ್ತು ಸ್ಥಳೀಯ ತಳ್ಳುಗಾಡಿ ವ್ಯಾಪಾರಸ್ಥರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಂಕನಾಡಿ ಮೈದಾನ ಪ್ರದೇಶದಲ್ಲಿ ಬಸ್‌ಗಳನ್ನು ನಿಲುಗಡೆ ಮಾಡಲಾಗುತ್ತಿತ್ತು. ಈಗ ತಾತ್ಕಾಲಿಕ ಮಾರುಕಟ್ಟೆ ನಿರ್ಮಾಣದಿಂದ ಬಸ್ ನಿಲ್ಲಿಸಲಾಗದೆ ಸಮಸ್ಯೆ ಎದುರಿಸುತ್ತಿದ್ದೇವೆ ಎಂದು ಬಸ್ ಚಾಲಕರು ದೂರಿಕೊಂಡರು.
ಮಾಜಿ ಕಾರ್ಪೊರೇಟರ್ ನವೀನ್ ಡಿಸೋಜ ಮಾತನಾಡಿ ಹೊಸ ಮಾರುಕಟ್ಟೆ ನಿರ್ಮಾಣದ ಹಿನ್ನಲೆಯಲ್ಲಿ ತಾತ್ಕಾಲಿಕ ಮಾರುಕಟ್ಟೆ ನಿರ್ಮಿಸುತ್ತಿದ್ದೇವೆ. ಇದು ಬಸ್ ನಿಲ್ದಾಣ ಅಲ್ಲ. ಈಗಾಗಲೇ ಬಸ್ ತಂಗುದಾಣ ಮಾಡಿದ್ದರಿಂದ ಪರಿಸರ ಹಾಳಾಗಿದೆ. ಆದ್ದರಿಂದ ಬಸ್‌ಗಳು ಮುಖ್ಯ ರಸ್ತೆಯಿಂದಲೇ ಸಂಚರಿಸುವ ವ್ಯವಸ್ಥೆ ಮಾಡಬೇಕು ಎಂದರು.
ಕಂಕನಾಡಿ ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಅಲಿ ಹಸನ್ ಮಾತನಾಡಿ ಹೊಸ ಮಾರುಕಟ್ಟೆ ನಿರ್ಮಿಸುವವರೆಗೆ ಇಲ್ಲಿನ ವ್ಯಾಪಾರಿಗಳಿಗೆ ತಾತ್ಕಾಲಿಕ ವ್ಯವಸ್ಥೆ ಆಗಲೇಬೇಕಿದೆ. ಈ ಸಂದರ್ಭ ಮೈದಾನದಲ್ಲಿ ಬಸ್ ಮತ್ತಿತರ ವಾಹನಗಳ ನಿಲುಗಡೆ, ತಳ್ಳುಗಾಡಿಗಳ ವ್ಯಾಪಾರಕ್ಕೆ ಅವಕಾಶ ಕಲ್ಪಿಸಬಾರದು ಎಂದು ಒತ್ತಾಯಿಸಿದರು.
ಕಂಕನಾಡಿ ಪ್ರದೇಶ ಅಭಿವೃದ್ಧಿಗೊಳ್ಳುತ್ತಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಕಾರ್ಪೊರೇಟರ್ ಆಗಿದ್ದ ನವೀನ್ ಡಿಸೋಜರ ಮುತುವರ್ಜಿಯಿಂದ ರಾಜ್ಯ ಸರಕಾರದ 41 ಕೋಟಿ ರೂ. ವೆಚ್ಚದಲ್ಲಿ ಮಾರುಕಟ್ಟೆ ನಿರ್ಮಿಸಲಾಗುತ್ತಿದೆ. ಈ ಸಂದರ್ಭ ಸಣ್ಣ ಪುಟ್ಟ ಸಮಸ್ಯೆಗಳಾಗುವುದು ಸ್ವಾಭಾವಿಕ. ವ್ಯಾಪಾರಸ್ಥರು, ಗ್ರಾಹಕರು, ಬಸ್, ಟ್ಯಾಕ್ಸಿ, ಆಟೊ ಚಾಲಕರಿಗೆ ಸಮಸ್ಯೆ ಆಗದಂತೆ ತಾತ್ಕಾಲಿಕ ವ್ಯವಸ್ಥೆ ಮಾಡಲು ಸೂಚನೆ ನೀಡಲಾಗಿದೆ. ಇದಕ್ಕೆ ಎಲ್ಲರೂ ಸಹಕರಿಸಬೇಕಿದೆ ಎಂದು ಸಚಿವ ಯು.ಟಿ.ಖಾದರ್ ಹೇಳಿದರು.
ಮುಖ್ಯ ರಸ್ತೆ ಪಕ್ಕದ ಈಗ ಆಟೊ ಪಾರ್ಕ್ ಇರುವವರೆಗೆ ರಸ್ತೆ ಅಗಲಗೊಳಿಸಿ ಅಲ್ಲಿ ನಾಲ್ಕು ಬಸ್ ನಿಲ್ಲಿಸಲು ವ್ಯವಸ್ಥೆ ಮಾಡುವಂತೆ ಮತ್ತು ಪಕ್ಕದಲ್ಲಿ ಟ್ಯಾಕ್ಸಿ ಪಾರ್ಕ್, ಪಕ್ಕದ ಶಾಲೆ ಬಳಿ ಆಟೊ ಪಾರ್ಕ್ ನಿರ್ಮಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಎಂಜಿನಿಯರ್ ಲಿಂಗೇಗೌಡ ಮತ್ತು ಸಲಹೆಗಾರ ಧರ್ಮರಾಜ್‌ಗೆ ಸಚಿವರು ಸೂಚಿಸಿದರು.