ಮೂಳೂರಿನಿಂದ ನಿರ್ಗಮಿಸಿದ ಸಿಎಂ
ಕಾಪು, ಮೇ 12: ಕಳೆದ ಐದು ದಿನಗಳ ಕಾಲ ಮೂಳೂರಿನ ಸಾಯಿರಾಧ ರೆಸಾರ್ಟ್ನಲ್ಲಿ ಆಯುರ್ವೇದ ಹಾಗೂ ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಇಂದು ಅಪರಾಹ್ನ ಚಿಕ್ಕಮಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ.
ಅಪರಾಹ್ನ 1:50ರ ಸುಮಾರಿಗೆ ರೆಸಾರ್ಟ್ನಿಂದ ಹೊರಬಂದ ತಂದೆ-ಮಗ, ಕಾರಿನಲ್ಲಿ ಶೃಂಗೇರಿಯತ್ತ ತೆರಳಿದರು. ಕೊನೆಯ ದಿನ ಇಲ್ಲಿಂದ ತೆರಳುವ ಮೊದಲು ಸಹ ಪತ್ರಕರ್ತರೊಂದಿಗೆ ಮಾತನಾಡಲು ಅವರು ನಿರಾಕರಿಸಿದರು. ಕಳೆದ ರವಿವಾರ ಇಲ್ಲಿಗೆ ಬಂದ ದಿನದಿಂದ ಅವರು ಮಾಧ್ಯಮದಿಂದ ದೂರವೇ ಉಳಿದಿದ್ದು, ರೆಸಾರ್ಟ್ನ ಆಸುಪಾಸು ಉಳಿಯದಂತೆ ನಿರ್ಬಂಧಿಸಲಾಗಿತ್ತಲ್ಲದೇ, ರೆಸಾರ್ಟ್ನ ಸುತ್ತ ಬಿಗು ಪೊಲೀಸ್ ಭದ್ರತೆ ಯನ್ನು ಏರ್ಪಡಿಸಲಾಗಿತ್ತು.
ಇದಕ್ಕೆ ಮುನ್ನ ಜಿ.ಶಂಕರ್ ಹಾಗೂ ಮಾಜಿ ಮೀನುಗಾರಿಕಾ ಸಚಿವ ಪ್ರಮೋದ್ ಮದ್ವರಾಜ್ ನೇತೃತ್ವದ ನಿಯೋಗವೊಂದು ಮುಖ್ಯಮಂತ್ರಿಯನ್ನು ಭೇಟಿಯಾಗಿ ಮಾತುಕತೆ ನಡೆಸಿತು. ನಾಪತ್ತೆಯಾಗಿ ಇದೀಗ ಮಹಾರಾಷ್ಟ್ರದಲ್ಲಿ ಅವಶೇಷ ಪತ್ತೆಯಾಗಿರುವ ಸುವರ್ಣ ತ್ರಿಭುಜ ಬೋಟಿನಲ್ಲಿದ್ದ ಮೀನುಗಾರರ ಕುಟುಂಬಗಳಿಗೆ ಪರಿಹಾರ ನೀಡುವ ಕುರಿತು ಇವರು ಮಾತನಾಡಿದ್ದಾರೆಂದು ಹೇಳಲಾಗಿದೆ.