137 ದಿನಗಳ ಬಳಿಕ ಸುವರ್ಣ ತ್ರಿಭುಜ ಬೋಟು ಅವಶೇಷ ಪತ್ತೆ
ನೌಕಸೇನೆಯಿಂದ ಕಾರ್ಯಾಚರಣೆ: ಮಲ್ಪೆಗೆ ಮರಳಿದ ಶಾಸಕರ ತಂಡ
ಮಲ್ಪೆ, ಮೇ 3: ದೇಶಾದ್ಯಂತ ಭಾರೀ ಆತಂಕಕ್ಕೆ ಕಾರಣವಾಗಿದ್ದ, ಏಳು ಮಂದಿ ಮೀನುಗಾರರು ಸಹಿತ 137 ದಿನಗಳಿಂದ ನಾಪತ್ತೆಯಾಗಿದ್ದ ಸುವರ್ಣ ತ್ರಿಭುಜ ಬೋಟಿನ ಅವಶೇಷಗಳು ಮೇ 1ರಂದು ಮಹಾರಾಷ್ಟ್ರದ ಮಾಲ್ವಾನ್‌ನ ಕರಾವಳಿ ತೀರದಿಂದ 33 ಕಿ.ಮೀ. ದೂರದಲ್ಲಿ ಸಮುದ್ರದ 60 ಅಡಿ ಆಳದಲ್ಲಿ ಪತ್ತೆಯಾಗಿದೆ.
ಮಲ್ಪೆ ಬಡಾನಿಡಿಯೂರು ಚಂದ್ರಶೇಖರ್ ಕೋಟ್ಯಾನ್ ಮಾಲಕತ್ವದ ಸುವರ್ಣ ತ್ರಿಭುಜ ಬೋಟಿನಲ್ಲಿ ಚಂದ್ರಶೇಖರ್ ಕೋಟ್ಯಾನ್, ಬಡಾನಿಡಿ ಯೂರಿನ ದಾಮೋದರ ಸಾಲ್ಯಾನ್, ಕುಮಟಾದ ಲಕ್ಷ್ಮಣ ಹರಿಕಂತ್ರ, ಸತೀಶ್ ಹರಿಕಂತ್ರ, ಹೊನ್ನಾವರದ ರವಿ ಮಂಕಿ, ಭಟ್ಕಳದ ಹರೀಶ್, ರಮೇಶ್ ಎಂಬವರು 2018ರ ಡಿ.13ರಂದು ರಾತ್ರಿ ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದರು.
ಡಿ.15ರಂದು ರಾತ್ರಿ ಸಂಪರ್ಕ ಕಡಿದುಕೊಂಡ ಸುವರ್ಣ ತ್ರಿಭುಜ ಬೋಟು ಆ ಬಳಿಕ ನಾಪತ್ತೆಯಾಗಿತ್ತು. ಈ ಬಗ್ಗೆ ಇತರ ಬೋಟಿನವರು ಹುಡುಕಾಟ ನಡೆಸಿದರೂ ಪತ್ತೆಯಾಗದ ಕಾರಣ ಡಿ. 22ರಂದು ಚಂದ್ರಶೇಖರ್ ಕೋಟ್ಯಾನ್‌ರ ಸಹೋದರ ನಿತ್ಯಾನಂದ ಕೋಟ್ಯಾನ್ ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಡಿ. 23ರಿಂದ ಈವರೆಗೆ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರದ ಸೂಚನೆಯಂತೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಕರಾವಳಿ ಕಾವಲು ಪಡೆ, ಕೋಸ್ಟ್ ಗಾರ್ಡ್ ಮತ್ತು ಭಾರತೀಯ ನೌಕ ಸೇನೆ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ಸಮುದ್ರ ಪ್ರದೇಶಗಳಲ್ಲಿ ಶೋಧ ಕಾರ್ಯ ನಡೆಸಿತ್ತು. ಆದರೆ ಈವರೆಗೂ ಬೋಟು ಹಾಗೂ ಅದರಲ್ಲಿದ್ದ ಏಳು ಮಂದಿ ಮೀನುಗಾರರು ಪತ್ತೆಯಾಗಿರಲಿಲ್ಲ.
ಈ ಸಂಬಂಧ ಮೀನುಗಾರರ ನಿಯೋಗ ಹಲವು ಬಾರಿ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿತ್ತು. ಮೀನುಗಾರರ ಕುಟುಂಬದ ಬೇಡಿಕೆಯಂತೆ ಉಡುಪಿ ಶಾಸಕ ಕೆ.ರಘುಪತಿ ಭಟ್, ಕುಂದಾಪುರ ಮೀನುಗಾರಿಕೆ ಸಹಾಯಕ ನಿರ್ದೇಶಕ ಚಂದ್ರಶೇಖರ್, ಮಂಗಳೂರು ಮೀನುಗಾರಿಕಾ ಕಾಲೇಜಿನ ಪ್ರೊ.ಕ್ಯಾಪ್ಟನ್ ಜಯಪ್ರಕಾಶ್ ಮೆಂಡನ್, ನಾಪತ್ತೆಯಾದ ದಾಮೋದರ ಸಾಲ್ಯಾನ್ ಸಹೋದರ ದಾಮೋದರ ಸಾಲ್ಯಾನ್, ಚಂದ್ರಶೇಖರ್ ಕೋಟ್ಯಾನ್ ಸಹೋದರ ನಿತ್ಯಾನಂದ ಕೋಟ್ಯಾನ್, ಸಂಬಂಧಿಕ ಹರೀಶ್ ಕುಂದರ್, ಭಟ್ಕಳದ ನಾಪತ್ತೆಯಾದ ಮೀನುಗಾರರ ಸಂಬಂಧಿಕರಾದ ದೇವೇಂದ್ರ ಭಟ್ಕಳ್, ನಾಗಾರಾಜ್ ಭಟ್ಕಳ್, ಮಲ್ಪೆ ತಾಂಡೇಲರ ಸಂಘದ ಅಧ್ಯಕ್ಷ ರವಿರಾಜ್ ಸುವರ್ಣ, ಮೀನುಗಾರರ ಸಂಘದ ಸದಸ್ಯ ಕರುಣಾಕರ ಸಾಲ್ಯಾನ್ ಬೋಟು ನಾಪತ್ತೆಯಾದ ಸ್ಥಳ ಪರಿಶೀಲನೆಗಾಗಿ ಭಾರತೀಯ ನೌಕಾ ಸೇನೆಯ ‘ಎಎನ್‌ಎಸ್ ನಿರೀಕ್ಷಕ್’ ಹಡಗಿನಲ್ಲಿ ಎ.28 ರಂದು ಕಾರವಾರದಿಂದ ಹೊರಟಿದ್ದರು.
ಎ.29ರಿಂದ ಮೇ 1ರವರೆಗೆ ಹುಡುಕಾಟ ನಡೆಸಿದಾಗ ಸುಮಾರು 60 ಅಡಿ ಆಳದ ಸಮುದ್ರದಲ್ಲಿ ಸುವರ್ಣ ತ್ರಿಭುಜ ಬೋಟಿನ ಅವಶೇಷಗಳು ಪತ್ತೆಯಾಗಿವೆ ಎಂದು ನೌಕಾಪಡೆಯ ಅಧಿಕಾರಿಗಳು ಟ್ವೀಟ್ ಮೂಲಕ ದೃಢಪಡಿಸಿದ್ದಾರೆ.
ಮಲ್ಪೆಗೆ ವಾಪಾಸ್ಸಾದ ತಂಡ: ನೌಕಾ ಸೇನೆಯ ‘ನಿರೀಕ್ಷಕ್’ ಹಡಗಿನಲ್ಲಿ ತೆರಳಿದ್ದ ಉಡುಪಿ ಶಾಸಕರು, ಮೀನುಗಾರರ ಹಾಗೂ ಕುಟುಂಬಸ್ಥರ ತಂಡವು ಇಂದು ಮಧ್ಯಾಹ್ನ ವೇಳೆ ಮಲ್ಪೆಗೆ ವಾಪಾಸ್ಸಾಗಿದೆ.
ಬಳಿಕ ಮಲ್ಪೆಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಕೆ.ರಘುಪತಿ ಭಟ್, ‘ಎ.29ರಂದು ಬೆಳಗ್ಗೆಯಿಂದ ತೀವ್ರತರ ಕಾರ್ಯಾಚರಣೆ ನಡೆಸಲಾಗಿದೆ. ಸೋನಾರ್ ತಂತ್ರಜ್ಞಾನವನ್ನು ಬಳಸಿ ಆಳ ಸಮುದ್ರದಲ್ಲಿ ಹುಡುಕಾಟ ನಡೆಸಲಾಗಿದೆ. ಮೇ1ರಂದು ಸಮುದ್ರದ ಆಳದಲ್ಲಿ ಸೋನಾರ್ ತಂತ್ರಜ್ಞಾನದಲ್ಲಿ ಪ್ರತಿಧ್ವನಿ ಕೇಳಿಸಿತು. ಅದೇ ಸ್ಥಳದಲ್ಲಿ ವಿಡಿಯೋಗ್ರಫಿ ಮಾಡಿದಾಗ ಅದರಲ್ಲಿ ಬೋಟಿನ ಅವಶೇಷಗಳು ಕಂಡು ಬಂದವು ಎಂದರು.
‘ನಮ್ಮ ಬೇಡಿಕೆಯಂತೆ ಮರುದಿನ ನೌಕ ಸೇನೆಯ ಮೂವರು ಮುಳುಗು ತಜ್ಞರು ಸಮುದ್ರದ ಆಳಕ್ಕೆ ಹೋಗಿ ಫೋಟೋಗ್ರಫಿ, ವಿಡಿಯೋಗ್ರಫಿಯನ್ನು ಮಾಡಿದ್ದಾರೆ. ಇದರಿಂದ ಅಲ್ಲಿರುವುದು ಸುವರ್ಣ ತ್ರಿಭುಜ ಬೋಟು ಎಂಬುದು ನಮಗೆ ಮತ್ತಷ್ಟು ದೃಢವಾಯಿತು. ಮೃತದೇಹಗಳಿಗೂ ಹುಡುಕಾಟ ನಡೆಸಲಾಗಿತ್ತು. ಆದರೆ ಯಾವುದೇ ಮೃತದೇಹಗಳು ಪತ್ತೆಯಾಗಿಲ್ಲ. ಬೋಟಿನ ಒಂದು ಬದಿ ಹಾನಿಯಾಗಿರುವುದು ಕಂಡುಬಂದಿದ್ದು, ಸುವರ್ಣ ತ್ರಿಭುಜ ಎಂಬ ಹೆಸರು ಸ್ಪಷ್ಟವಾಗಿ ಕಾಣಸಿಕ್ಕಿದೆ. ಬೋಟಿನ ಕ್ಯಾಬಿನ್ ತೆರೆದಿತ್ತು. ಬೋಟಿನ ಮೇಲೆ ಬಲೆಗಳು ಸುತ್ತಿಕೊಂಡಿದ್ದವು ಎಂದು ಅವರು ತಿಳಿಸಿದರು.
ಈ ಕಾರ್ಯಾಚರಣೆಯನ್ನು ಮೇ 2ರ ರಾತ್ರಿ ಮುಗಿಸಿ ಇಂದು ಬೆಳಗ್ಗೆ 6 ಗಂಟೆಗೆ ಕಾರವಾರ ತಲುಪಿದ್ದೇವೆ ಈ ಕುರಿತ ವೀಡಿಯೊ ಹಾಗೂ ಫೋಟೋ ಗಳನ್ನು ನೌಕಾಸೇನೆಯು ಸಂಗ್ರಹಿಸಿದ್ದು, ಆ ದಾಖಲೆಗಳನ್ನು ನೌಕಸೇನೆಯು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಸಲ್ಲಿಸಲಿದೆ ಎಂದು ಅವರು ಮಾಹಿತಿ ನೀಡಿದರು.
‘ಈ ಹಿಂದೆ ನೌಕಾಸೇನೆಯವರು ಸರಿಯಾಗಿ ಹುಡುಕಾಟ ನಡೆಸಿಲ್ಲ. ನಾವು ಹೋದಾಗ ಹುಡುಕಾಟ ನಡೆಸಿದ ಜಾಗದಲ್ಲಿ ಅವರು ಶೋಧ ನಡೆಸಿಯೇ ಇಲ್ಲ. ಹೀಗಾಗಿ ಈವರೆಗೆ ಅವಶೇಷ ಪತ್ತೆಯಾಗಿಲ್ಲ. ಈ ಬೋಟಿನಲ್ಲಿದ್ದ ನಮ್ಮವರು ಪಾರಾಗಿದ್ದರೂ ನಾಲ್ತೈದು ದಿನಗಳಲ್ಲಿ ಅವರು ಮನೆಗೆ ಬರಬೇಕಾಗಿತ್ತು. ಆದರೆ ನಾಲ್ಕೈದು ತಿಂಗಳಾದರೂ ಅವರು ಬಾರದೆ ಇರುವುದರಿಂದ ಅವರು ಮೃತಪಟ್ಟಿರುವ ಸಂಶಯ ಕಾಡುತ್ತದೆ’ ಎಂದು ನಾಪತ್ತೆಯಾದ ಚಂದ್ರಶೇಖರ್ ಕೋಟ್ಯಾನ್‌ರ ಸಹೋದರ ನಿತ್ಯಾನಂದ ಕೋಟ್ಯಾನ್ ತಿಳಿಸಿದರು.
''ಮೀನುಗಾರರ ನಾಪತ್ತೆ ಪ್ರಕರಣದಲ್ಲಿ ಮೀನುಗಾರರ ಸಂಘ ನಮಗೆ ತುಂಬಾ ಬೆಂಬಲ ನೀಡಿದೆ. ಮುಂದೆ ಸಂಘ ಯಾವ ತೀರ್ಮಾನ ತೆಗೆದು ಕೊಳ್ಳುತ್ತದೆಯೋ ಅದರಂತೆ ನಡೆದುಕೊಳ್ಳಲಾಗುವುದು. ನನ್ನ ಸಹೋದರ 45 ಲಕ್ಷ ರೂ. ಬ್ಯಾಂಕ್ ಸಾಲ ಮಾಡಿ ಬೋಟು ಖರೀದಿಸಿದ್ದಾನೆ. ಸಾಲ ಪಾವತಿ ಇನ್ನು ಕೂಡ ಬಾಕಿ ಇದೆ. ಅದೇ ರೀತಿ ನಾಪತ್ತೆಯಾದವರ ಎಲ್ಲ ಕುಟುಂಬಗಳು ತುಂಬಾ ಕಷ್ಟದಲ್ಲಿವೆ. ಅವರಿಗೆ ಸರಕಾರಗಳು ಪರಿಹಾರ ಒದಗಿಸಬೇಕು''.
- ನಿತ್ಯಾನಂದ ಕೋಟ್ಯಾನ್, ನಾಪತ್ತೆಯಾದ ಚಂದ್ರಶೇಖರ್ ಕೋಟ್ಯಾನ್‌ರ ಸಹೋದರ