ನೌಕಾಸೇನೆ ಹಡಗು ಢಿಕ್ಕಿ ಹೊಡೆದಿರುವ ಶಂಕೆ: ಗರಿಷ್ಠ ಪರಿಹಾರಕ್ಕೆ ಒತ್ತಾಯ
ಮಲ್ಪೆ, ಮೇ 3: ‘ನೌಕಸೇನೆಯ ಐಎನ್‌ಎಸ್ ಕೊಚ್ಚಿನ್ ಹಡಗು ಢಿಕ್ಕಿ ಹೊಡೆದ ಪರಿಣಾಮ ಸುವರ್ಣ ತ್ರಿಭುಜ ಬೋಟು ಅವಘಡಕ್ಕೀಡಾಗಿರಬಹುದು ಎಂಬುದು ನಮ್ಮ ಸಂಶಯ. ಬೋಟು ನೋಡುವಾಗ ಅವಘಡ ಆಗಿರುವುದು ಸ್ಪಷ್ಟ’ ಎಂದು ಉಡುಪಿ ಶಾಸಕ ಕೆ. ರಘುಪತಿ ಭಟ್ ತಿಳಿಸಿದ್ದಾರೆ.
ಮಲ್ಪೆಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ನಾವು ನೇರವಾಗಿ ಐಎನ್‌ಎಸ್ ಕೊಚ್ಚಿನ್ ವಿರುದ್ಧ ಆರೋಪ ಮಾಡಲ್ಲ. ಅದಕ್ಕೆ ನಮ್ಮಲ್ಲಿ ಯಾವುದೇ ಸಾಕ್ಷಿ ಇಲ್ಲ. ಅದು ತನಿಖೆಯಿಂದ ಹೊರಬರಬೇಕು. ನೌಕಸೇನೆಯವರು ಕೂಡ ನಮ್ಮವರೇ ಆಗಿದ್ದಾರೆ ಎಂದು ಹೇಳಿದರು.
ಈ ಕುರಿತು ಮುಂದಿನ ಹೆಜ್ಜೆ ಬಗ್ಗೆ ಮೀನುಗಾರರೊಂದಿಗೆ ಸಭೆ ನಡೆಸಿ ನಿರ್ಧರಿಸಲಾಗುವುದು. ಮುಂದಿನ ವಾರ ಮೀನುಗಾರರ ನಿಯೋಗ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಮತ್ತೆ ಭೇಟಿ ಮಾಡಿ ಈ ವಿಚಾರವನ್ನು ತಿಳಿಸಿ, ನೌಕಸೇನೆಯ ಅಧಿಕಾರಿಗಳಿಂದ ತನಿಖೆ ಮಾಡುವಂತೆ ಒತ್ತಾಯಿಸಲಾಗುವುದು ಎಂದರು.
ಬೋಟಿನ ಅವಶೇಷಗಳು ಪತ್ತೆಯಾಗಿರುವುದರಿಂದ ಈ ಕುರಿತ ಎಲ್ಲ ಸಂಶಯಗಳು ಪರಿಹಾರವಾಗಿವೆ. ಈ ಅವಘಡದಿಂದ ಅದರಲ್ಲಿದ್ದ ಏಳು ಮಂದಿ ಮೀನುಗಾರರು ಬದುಕಿರುವ ಸಾಧ್ಯತೆಗಳೇ ಇಲ್ಲ. ಅವರೆಲ್ಲ ಈ ಅವಘಡದಿಂದ ಮೃತಪಟ್ಟಿರುವುದು ದೃಢವಾಗಿದೆ ಎಂದು ಅವರು ಹೇಳಿದರು.
ನಾಪತ್ತೆಯಾದ ಏಳು ಕುಟುಂಬದವರು ತುಂಬಾ ಕಷ್ಟದಲ್ಲಿದ್ದಾರೆ. ಈ ಕುಟುಂಬಗಳಿಗೆ ಕೇಂದ್ರ ಹಾಗೂ ರಾಜ್ಯ ಸರಕಾರ ಗರಿಷ್ಠ ಮಟ್ಟದಲ್ಲಿ ಪರಿಹಾರ ನೀಡಬೇಕು. ನೌಕಸೇನೆಯ ಹಡಗು ಢಿಕ್ಕಿ ಹೊಡೆದಿದ್ದರೆ ಕೇಂದ್ರ ಸರಕಾರ ದೊಡ್ಡ ಮೊತ್ತದಲ್ಲಿ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್, ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಪಾಶ್ವನಾರ್ಥ್, ಸಹಾಯಕ ನಿರ್ದೇಶಕರಾದ ಚಂದ್ರಶೇಖರ್, ಕಿರಣ್, ಪ್ರೊಫೆಸರ್ ಕ್ಯಾಪ್ಟನ್ ಜಯಪ್ರಕಾಶ್ ಮೆಂಡನ್, ರವಿರಾಜ್ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.