ಮಂಗಳೂರು: ನಾಲ್ವರು ಕ್ರೈಸ್ತ ಧರ್ಮಗುರುಗಳಿಗೆ ದೀಕ್ಷೆ
ಮಂಗಳೂರು, ಮೇ 3: ಮಂಗಳೂರು ಧರ್ಮ ಪ್ರಾಂತದಲ್ಲಿ ಗುರುಗಳಾಗಿ ಸೇವೆ ಸಲ್ಲಿಸಲು ಅಪೇಕ್ಷಿಸಿ ತರಬೇತಿ ಪಡೆದ ನಾಲ್ಕು ಮಂದಿ ಯುವಕರಿಗೆ ನಗರದ ರೊಜಾರಿಯೊ ಕೆಥಡ್ರಲ್‌ನಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಬಿಷಪ್ ರೆ.ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ ದೀಕ್ಷೆಯನ್ನು ಪ್ರದಾನ ಮಾಡಿದರು.
ಮಂಗಳೂರು ತಾಲೂಕು ಫೆರಾರ್‌ನ ಲ್ಯಾರಿ ಫ್ರಾಂಕ್ಲಿನ್ ಪಿಂಟೊ, ಕಾಸರಗೋಡಿನ ಪ್ರಮೋದ್ ಕ್ರಾಸ್ತಾ, ಬಂಟ್ವಾಳ ತಾಲೂಕು ನಿವಾಸಿ ನೆಲ್ಸನ್ ಪೆರಿಸ್, ಶಿವಮೊಗ್ಗದ ಓಜ್ಮಾಂಡ್ ರೋಶನ್ ಡಿಸೋಜ ಧರ್ಮ ಗುರು ದೀಕ್ಷೆ ಸ್ವೀಕರಿಸಿದವರು.
ಗುರು ದೀಕ್ಷೆಯ ಬಲಿಪೂಜೆಯಲ್ಲಿ ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ನೇತೃತ್ವ ವಹಿಸಿದ್ದು, ಧರ್ಮ ಪ್ರಾಂತದ ಪ್ರಧಾನ ಗುರು ಮೊ.ಮ್ಯಾಕ್ಸಿಂ ಎಲ್. ನೊರೋನ್ಹಾ, ಛಾನ್ಸಲರ್ ಫಾ.ವಿಕ್ಟರ್ ಜಾರ್ಜ್ ಡಿಸೋಜ, ಜಪ್ಪು ಸಂತ ಜೋಸೆಫ್ ಸೆಮಿನರಿಯ ರೆಕ್ಟರ್ ಫಾ.ಜೋಸೆಫ್ ಮಾರ್ಟಿಸ್, ರೊಜಾರಿಯೋ ಕೆಥಡ್ರಲ್‌ನ ರೆಕ್ಟರ್ ಫಾ. ಜೆ.ಬಿ. ಕ್ರಾಸ್ತಾ ಉಪಸ್ಥಿತರಿದ್ದರು.
ಬಿಷಪ್ ಅವರು ತಮ್ಮ ಪ್ರವಚನದಲ್ಲಿ ನೂತನ ಗುರುಗಳಿಗೆ ಗುರುತ್ವದ ಮಹತ್ವ ಹಾಗೂ ಕ್ರೈಸ್ತ ಸಭೆಯಲ್ಲಿ ಅವರ ಪಾತ್ರದ ಬಗ್ಗೆ ವಿವರಿಸಿದರು. ದೀಕ್ಷೆಯ ವಿಧಿವಿಧಾನಗಳ ಬಳಿಕ ನೂತನ ಗುರುಗಳು ಬಿಷಪ್ ಜತೆ ಬಲಿಪೂಜೆಯಲ್ಲಿ ಸಹಭಾಗಿಗಳಾದರು.
ಬಲಿಪೂಜೆಯ ಬಳಿಕ ನೂತನ ಗುರುಗಳನ್ನು ಅಭಿನಂದಿಸುವ ಸಮಾರಂಭ ನಡೆಯಿತು. ಕೆಥೆಡ್ರಲ್‌ನ ರೆಕ್ಟರ್ ಫಾ.ಜೆ.ಬಿ. ಕ್ರಾಸ್ತಾ ಸ್ವಾಗತಿಸಿದರು. ಧರ್ಮ ಪ್ರಾಂತದ ಪ್ರಧಾನ ಗುರು ಮೊ. ಮ್ಯಾಕ್ಸಿಂ ಎಲ್. ನೊರೊನ್ಹಾ ನೂತನ ಗುರುಗಳನ್ನು ಅಭಿನಂದಿಸಿದರು.
ಎಲ್ಲ ನಾಲ್ವರು ನೂತನ ಗುರುಗಳ ಪರವಾಗಿ ಫಾ.ಲ್ಯಾರಿ ಫ್ರಾಕ್ಲಿನ್ ಪಿಂಟೊ ಮಾತನಾಡಿ ಕೃತಜ್ಞತೆ ಸಲ್ಲಿಸಿದರು. ಫಾ.ರೋಹನ್ ಲೋಬೊ ಕಾರ್ಯಕ್ರಮ ನಿರ್ವಹಿಸಿದರು. ಮಂಗಳ ಜ್ಯೋತಿಯ ನಿರ್ದೇಶಕ ಫಾ.ವಿಜಯ್ ಮಚಾದೊ ಧಾರ್ಮಿಕ ಕಾರ್ಯಕ್ರಮದ ನಿರೂಪಣೆ ಮಾಡಿದರು. ಯುವಜನರ ವರ್ಷಾಚರಣೆಯ ಅಂಗವಾಗಿ ಭಕ್ತಿಗೀತೆಗಳ ಗಾಯನವನ್ನು ಯುವಜನರು ಫಾ.ಫ್ಲೇವಿಯನ್ ಲೋಬೊ ನೇತೃತ್ವದಲ್ಲಿ ನಡೆಸಿಕೊಟ್ಟರು.