ಕೋಟ ಜೋಡಿ ಕೊಲೆ ಪ್ರಕರಣ: ತನಿಖಾಧಿಕಾರಿ ಬದಲಾವಣೆಗೆ ಆಗ್ರಹಿಸಿ ಕುಟುಂಬಸ್ಥರಿಂದ ಎಸ್ಪಿಗೆ ಮನವಿ
ಉಡುಪಿ, ಮೇ 3: ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜ. 26ರಂದು ನಡೆದ ಜೋಡಿ ಕೊಲೆ ಪ್ರಕರಣದ ತನಿಖಾಧಿಕಾರಿ, ಆರೋಪಿಗಳ ಪರವಾಗಿ ಕೆಲಸ ಮಾಡುತ್ತಿದ್ದು, ಅವರನ್ನು ಬದಲಾಯಿಸುವ ಮೂಲಕ ನ್ಯಾಯ ಒದಗಿಸ ಬೇಕೆಂದು ಒತ್ತಾಯಿಸಿ ಕುಟುಂಬಸ್ಥರು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದ್ದಾರೆ.
ಈ ಪ್ರಕರಣದ ಕುರಿತು ಪ್ರಾಮಾಣಿಕವಾಗಿ ತನಿಖೆ ನಡೆಸಿ ಆರೋಪಿಗಳಿಗೆ ಶಿಕ್ಷೆ ಒದಗಿಸಬೇಕು. ಈ ಮೂಲಕ ಮೃತರ ಆತ್ಮಕ್ಕೆ ಶಾಂತಿ ಸಿಗು ವಂತೆ ಮಾಡಬೇಕು ಎಂದು ಕೊಲೆಗೀಡಾದ ಭರತ್ ತಾಯಿ ಪಾರ್ವತಿ ಕಣ್ಣೀರು ಹಾಕಿ ದರು. ಇವರೊಂದಿಗೆ ಮೃತ ಯತೀಶ್ ಸಹೋದರ ಮನೋಜ್ ಮತ್ತು ಹೇಮಂತ್ ಹಾಗೂ ಸ್ನೇಹಿತರು ಹಾಜರಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ಸರಕಾರಿ ಅಭಿಯೋಜಕರಿಗೆ ಪೊಲೀಸ್ ಇಲಾಖೆ ನೀಡಿರುವ ತನಿಖಾ ವರದಿಯಲ್ಲಿ ಸಾಕಷ್ಟು ಲೋಪದೋಷಗಳಿವೆ. ವರದಿಯನ್ನು ಸರಿಪಡಿಸಲು ಸೂಚನೆ ಕೊಟ್ಟರೂ ಯಾವುದೇ ತನಿಖೆ ನಡೆಸಿಲ್ಲ. ಆದುದರಿಂದ ಸೂಕ್ತ ತನಿಖಾಧಿಕಾರಿಯನ್ನು ನಿಯೋಜಿಸಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಈ ಕುರಿತು ನ್ಯಾಯ ಸಿಗದಿದ್ದರೆ ಸಾರ್ವಜನಿಕವಾಗಿ ಪ್ರತಿಭಟನೆ ನಡೆಸಲಾಗು ವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.
ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿದ ಎಸ್ಪಿ ನಿಶಾ ಜೇಮ್ಸ್, ನಿರ್ದಿಷ್ಟ ಸಮಯ ದೊಳಗೆ ದೋಷರೋಷಣಾ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಕೆಯಾಗದೇ ಹೋದರೆ ಆರೋಪಿ ಜಾಮೀನು ಪಡೆದು ಹೊರಬರುವ ಸಾಧ್ಯತೆ ಇದೆ. ಇದಕ್ಕಾಗಿ ವಿಳಂಬ ಮಾಡದೆ ದೋಷರೋಷಣಾ ಪಟ್ಟಿಯನ್ನು ಸಲ್ಲಿಕೆ ಮಾಡಿದ್ದೇವೆ. ಇದೇ ಅಂತಿಮ ವರದಿಯಲ್ಲ. ಇನ್ನಷ್ಟು ದಾಖಲೆ, ಸಾಕ್ಷಿ ಸಂಗ್ರಹ ಮಾಡಿ ಹೆಚ್ಚುವರಿ ದೋಷರೋಷಣಾ ಪಟ್ಟಿ ಸಲ್ಲಿಕೆಗೂ ಅವಕಾಶವಿದೆ ಎಂದರು.
ತನಿಖೆಯಲ್ಲಿ ಯಾವುದೇ ವಿಳಂಬ ಹಾಗೂ ಲೋಪ ಆಗಿಲ್ಲ. ಆರೋಪಿಗಳಿಗೆ ಗರಿಷ್ಠ ಪ್ರಮಾಣದ ಶಿಕ್ಷೆಯಾಗಬೇಕೆಂಬುದು ನಮ್ಮ ಉದ್ದೇಶವಾಗಿದೆ. ನಮ್ಮ ಕಡೆಯಿಂದ ಆಗಬೇಕಾದ ಎಲ್ಲಾ ಪ್ರಯತ್ನವೂ ನಡೆದಿದೆ. ತನಿಖೆ ಬಗ್ಗೆ ಸ್ವತಃ ನಾನೇ ಪರಿಶೀಲನೆ ಮಾಡುತ್ತಿದ್ದೇನೆ ಎಂದು ಅವರು ಭರವಸೆ ನೀಡಿದರು.