ಸ್ಮಾರ್ಟ್ ಸಿಟಿ ಯೋಜನೆ: ಮಂಗಳೂರಿನ 13 ಶಾಲೆಗಳಿಗೆ ಸ್ಮಾರ್ಟ್ ಭಾಗ್ಯ
ಮಂಗಳೂರು, ಮೇ 4: ಸ್ಮಾರ್ಟ್ ಸಿಟಿ ಯೋಜನೆಯ ಪ್ರದೇಶ ಆಧಾರಿತ ಅಭಿವೃದ್ಧಿಯಡಿ ನಗರದ 8 ವಾರ್ಡ್‌ಗಳ 13 ಸರಕಾರಿ ಶಾಲೆಗಳಿಗೆ ‘ಸ್ಮಾರ್ಟ್ ಭಾಗ್ಯ’ ಲಭಿಸಲಿದೆ.
ಆ ಮೂಲಕ ಸರಕಾರಿ ಶಾಲೆಗಳ ಬಗ್ಗೆ ಸರಕಾರ ಮಲತಾಯಿ ಧೋರಣೆ ತಾಳುತ್ತಿವೆ ಎಂಬ ಆರೋಪವನ್ನು ಅಲ್ಲಗಳೆಯುವ ಪ್ರಯತ್ನ ನಡೆಸಿದಂತಾಗಿದೆ. ಅಲ್ಲದೆ ಗುಣಮಟ್ಟದಲ್ಲಿ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ ಸಲುವಾಗಿ ಇದೊಂದು ಮಹತ್ವದ ಹೆಜ್ಜೆಯಾಗಿಯೂ ಪರಿಣಮಿಸಿದೆ.
ನಗರದ ಬಸ್ತಿಗಾರ್ಡನ್‌ನ ಸರಕಾರಿ ಹಿ.ಪ್ರಾ.ಶಾಲೆ, ಬಂದರು ನೀರೇಶ್ವಾಲ್ಯದ ಸರಕಾರಿ ಹಿ.ಪ್ರಾ.ಶಾಲೆ, ಪಾಂಡೇಶ್ವರದ ಸರಕಾರಿ ಹಿ.ಪ್ರಾ.ಶಾಲೆ, ಹೊಗೆ ಬಜಾರ್‌ನ ಸರಕಾರಿ ಕಿ.ಪ್ರಾ.ಶಾಲೆ, ಹೊಗೆ ಬಜಾರ್‌ನ ಸರಕಾರಿ ಪ್ರೌಢಶಾಲೆ, ಸರಕಾರಿ ಪ್ರಾಕ್ಟಿಸಿಂಗ್ ಎಚ್.ಎಸ್ ಮಂಗಳೂರು, ಬಂದರ್‌ನ ಸರಕಾರಿ ಹಿ.ಪ್ರಾ. ಶಾಲೆ (ಉರ್ದು), ಬಂದರ್‌ನ ಸರಕಾರಿ ಪ್ರೌಢಶಾಲೆ (ಉರ್ದು), ಜ್ಯೋತಿಯ ಪ್ರೈಮರಿ ಶಾಲೆ, ಜ್ಯೋತಿಯ ಸೆಕೆಂಡರಿ ಸ್ಕೂಲ್, ಬೋಳಾರದ ಸರಕಾರಿ ಹಿ.ಪ್ರಾ.ಶಾಲೆ, ಬೋಳಾರ (ಪಶ್ಚಿಮ) ಸರಕಾರಿ ಹಿ.ಪ್ರಾ.ಶಾಲೆ, ಕಾರ್‌ಸ್ಟ್ರೀಟ್‌ನ ಸರಕಾರಿ ಹಿ.ಪ್ರಾ. ಶಾಲೆಯನ್ನು ಸುಮಾರು 14 ಕೋ.ರೂ. ವೆಚ್ಚದಲ್ಲಿ ‘ಸ್ಮಾರ್ಟ್ ಸ್ಕೂಲ್’ ಆಗಿ ಪರಿವರ್ತಿಸಲು ಯೋಜನೆ ರೂಪಿಸಲಾಗಿದೆ. ಮೊದಲ ಹಂತದಲ್ಲಿ 9 ಕೋ.ರೂ. ವೆಚ್ಚದಲ್ಲಿ ಶಾಲೆಗಳ ಮೂಲ ಸೌಕರ್ಯ ಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದ್ದು, ಎರಡನೇ ಹಂತದಲ್ಲಿ ಶಾಲೆಗಳಿಗೆ ಇ-ಟಚ್ ದೊರೆಯಲಿದೆ.
ಸ್ಮಾರ್ಟ್‌ಸಿಟಿಯ ಪ್ರದೇಶ ಆಧಾರಿತ ಅಭಿವೃದ್ಧಿ ಯೋಜನೆಯಡಿ ನಗರದ 8 ವಾರ್ಡ್‌ಗಳ 13 ಶಾಲೆಗಲಿಗೆ ಮೂಲ ಸೌಕರ್ಯ ಕಲ್ಪಿಸಲು 9 ಕೋಟಿ ರೂ. ಮೀಸಲಿಡಲಾಗಿದೆ. ಅಭಿವೃದ್ಧಿಗಾಗಿ ಆಯ್ಕೆ ಮಾಡಿರುವ ಶಾಲೆಗಳು ತುಂಬಾ ಹಳೆಯದಾಗಿದೆ. ಅಂದರೆ ಈ ಶಾಲೆಗಳ ಗೋಡೆ, ಕಾಂಪೌಂಡುಗಳು ಶಿಥಿಲಾವಸ್ಥೆಯಲ್ಲಿವೆ. ಈ ಶಾಲೆಗೆ ಕಂಪ್ಯೂಟರ್‌ಗಳನ್ನು ಒದಗಿಸುವ ಮುನ್ನ ಶಾಲೆಗಳ ಕಟ್ಟಡ, ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲಾಗುತ್ತದೆ. ಈ ನಿಟ್ಟಿನಲ್ಲಿ 13 ಶಾಲೆಗಳ ಕಾಂಪೌಂಡ್, ಗೋಡೆ, ಶೌಚಾಲಯ, ಮೈದಾನ, ನೀರಿನ ವ್ಯವಸ್ಥೆ, ಮೇಲ್ಛಾವಣಿಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಈಗಾಗಲೇ ಟೆಂಡರ್ ಕರೆಯಲಾಗಿದೆ.
ಇ- ಸ್ಮಾರ್ಟ್ ಸ್ಕೂಲ್
13 ಶಾಲೆಗಳಿಗೆ ಮೂಲಸೌಕರ್ಯಗಳನ್ನು ಕಲ್ಪಿಸಿದ ಬಳಿಕ 5 ಕೋ.ರೂ. ವೆಚ್ಚದಲ್ಲಿ ಕಂಪ್ಯೂಟರ್, ಪ್ರೊಜೆಕ್ಟರ್‌ಗಳನ್ನು ಅಳವಡಿಸಲಾಗುತ್ತದೆ. ಈ ಶಾಲೆಗಳ ಎಲ್ಲಾ ಪಾಠಗಳನ್ನು ಚಿತ್ರ, ವೀಡಿಯೊ ಸಹಿತ ಪ್ರೊಜೆಕ್ಟರ್‌ಗಳ ಮೂಲಕ ತೋರಿಸಲಾಗುತ್ತದೆ. ಅಂದರೆ ಮಕ್ಕಳಿಗೆ ಪಾಠ ಸುಲಭದಲ್ಲಿ ಅರ್ಥವಾಗಬೇಕು ಎಂಬ ಉದ್ಧೇಶದಿಂದ ಪಠ್ಯದಲ್ಲಿರುವ ವಿಷಯಗಳಿಗೆ ವೀಡಿಯೊ, ಚಿತ್ರಗಳನ್ನು ಅಳವಡಿಸಿ ಪಾಠ ಮಾಡಲಾಗುತ್ತದೆ. ಇದಕ್ಕಾಗಿ ಶಿಕ್ಷಕರಿಗೆ ಪ್ರತ್ಯೇಕ ತರಬೇತಿ ಯನ್ನೂ ನೀಡಲಾಗುತ್ತದೆ. ಈ ಪ್ರಕ್ರಿಯೆ ಮುಂದಿನ ಶೈಕ್ಷಣಿಕ ವರ್ಷದಿಂದ ಆರಂಭವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶಾಲೆಗಳು ಸ್ಮಾರ್ಟ್ !
''ಸ್ಮಾರ್ಟ್ ಸಿಟಿಯ ಪ್ರದೇಶ ಆಧಾರಿತ ಅಭಿವೃದ್ಧಿಯಡಿ 13 ಶಾಲೆಗಳ ಸರ್ವತೋಮುಖ ಅಭಿವೃದ್ಧಿ ಮಾಡಲಾಗುತ್ತದೆ. ಮೂಲಸೌಕರ್ಯ ಒದಗಿಸಿ ಪಾಠ ಗಳನ್ನು ಪ್ರೊಜೆಕ್ಟರ್ ಮೂಲಕ ಕಲಿಸಿ ಕೊಡಲಾಗುತ್ತದೆ. ಖಾಸಗಿ ಶಾಲೆಯಂತೆ ಸರಕಾರಿ ಶಾಲೆಯನ್ನು ಅಭಿವೃದ್ಧಿಪಡಿಸುವುದು ಯೋಜನೆಯ ಮುಖ್ಯ ಗುರಿಯಾಗಿದೆ. ಶಿಕ್ಷಣ ಇಲಾಖೆಯೂ ಸಹಕಾರದ ಭರವಸೆ ನೀಡಿದೆ''.
- ನಾರಾಯಣಪ್ಪ,
ಆಡಳಿತ ನಿರ್ದೇಶಕರು, ‘ಸ್ಮಾರ್ಟ್‌ಸಿಟಿ’ ಮಂಗಳೂರು