ಮಣಿಪಾಲ ರಾ.ಹೆದ್ದಾರಿ ಕಾಮಗಾರಿಯಿಂದ ಅಪಘಾತ: ಗುತ್ತಿಗೆದಾರ, ಇಂಜಿನಿಯರ್ ವಿರುದ್ಧ ದೂರು
ಉಡುಪಿ, ಮೇ 4: ಉಡುಪಿ ಮಣಿಪಾಲ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಯಿಂದ ಆಗುತ್ತಿರುವ ಅನಾಹುತಕ್ಕೆ ತಪ್ಪಿತಸ್ಥ ಗುತ್ತಿಗೆದಾರರು ಮತ್ತು ಇಂಜಿನಿ ಯರ್‌ಗಳ ವಿರುದ್ಧ ಉಡುಪಿಯ ಭಾರತೀಯ ಸಹಾಯ ಸೇವಾ ಮೇ 3ರಂದು ಮಣಿಪಾಲ ಪೊಲೀಸ್ ಠಾಣೆಗೆ ದೂರು ನೀಡಿದೆ.
ಈ ಕುರಿತು ಉಡುಪಿ ಜಿಲ್ಲಾಧಿಕಾರಿ ಹೆಫ್ಸಿಬಾ ರಾಣಿ ಕೊರ್ಲಪಾಟಿ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ಅವರಿಗೂ ಸಹಾಯ ಸೇವಾ ಮನವಿ ಸಲ್ಲಿಸಿದೆ. ಈ ಸಂದರ್ಭದಲ್ಲಿ ಭಾರತೀಯ ಸಹಾಯ ಸೇವಾ ಅಧ್ಯಕ್ಷ ಪ್ರಶಾಂತ್ ಜತ್ತನ್ನ, ಉಪಾಧ್ಯಕ್ಷ ರಮೇಶ್ ಕಾಂಚನ್, ಕಾರ್ಯದರ್ಶಿಗಳಾದ ನ್ಯಾಯವಾದಿ ಅಸದುಲ್ಲಾ, ಸಂತೋಷ್ ಜಿ., ಸುನೀಲ್ ಡಿ.ಬಂಗೇರ, ಪ್ರಮೀಳಾ ಜತ್ತನ್ನ ಉಪಸ್ಥಿತರಿದ್ದರು.
ಉಡುಪಿ ಮಣಿಪಾಲ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯು ಕಳೆದ ನಾಲ್ಕು ತಿಂಗಳುಗಳಿಂದ ನಡೆಯುತ್ತಿದ್ದು, ಕಾಮಗಾರಿ ಕೈಗೆತ್ತಿಕೊಂಡಿರುವ ಗುತ್ತಿಗೆದಾರರು ಮತ್ತು ಇಲಾಖೆಯ ಇಂಜಿನಿಯರ್‌ಗಳ ಕರ್ತವ್ಯ ಲೋಪದಿಂದ ಈವರೆಗೆ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಏಳು ಅಪಘಾತಗಳು ಸಂಭವಿ ಸಿದ್ದು, ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕಾಮಗಾರಿ ಸ್ಥಳದಲ್ಲಿ ಯಾವುದೇ ಎಚ್ಚರಿಕೆ, ಸೂಚನಾ ಫಲಕಗಳನ್ನು ಅವಳವಡಿಸದೆ ಅವೈಜ್ಞಾನಿಕ ರೀತಿಯಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಇಂದ್ರಾಳಿ ರೈಲ್ವೆ ಸೇತುವೆ ಬಳಿ, ಮಣಿಪಾಲ ಎಂಐಟಿ ಬಳಿ ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿದೆ. ಇದು ವಾಹನ ಸಂಚಾರಕ್ಕೆ ಅಡ್ಡಿ ಉಂಟು ಮಾಡುತ್ತಿದೆ. ಅಲ್ಲದೆ ಪಾದಾಚಾರಿಗಳು ಜೀವ ಕೈಯಲ್ಲಿ ಹಿಡಿದು ನಡೆಯುವ ಪರಿಸ್ಥಿತಿ ಎದುರಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಪ್ರದೇಶಗಳಲ್ಲಿ ಈವರೆಗೆ ನಡೆದಿರುವ ಪ್ರಾಣಹಾನಿ ಮತ್ತು ಅಪಘಾತ ಗಳಿಗೆ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರು ಮತ್ತು ಇಂಜಿನಿಯರ್‌ಗಳೇ ನೇರ ಹೊಣೆಗಾರರಾಗಿದ್ದು, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಿ ನ್ಯಾಯ ಒದಗಿಸಬೇಕೆಂದು ಭಾರತೀಯ ಸಹಾಯ ಸೇವಾ ದೂರಿನಲ್ಲಿ ಒತ್ತಾಯಿಸಿದೆ.