ಸುವರ್ಣ ತ್ರಿಭುಜ ಬೋಟಿನ ಅವಶೇಷ ಪತ್ತೆ: ರಕ್ಷಣಾ ಸಚಿವರ ಭೇಟಿಗೆ ಮೀನುಗಾರರ ಸಂಘ ನಿರ್ಧಾರ
ಉಡುಪಿ, ಮೇ 18: ನಾಪತ್ತೆಯಾದ ಸುವರ್ಣ ತ್ರಿಭುಜ ಬೋಟಿನ ಅವಶೇಷಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮಲ್ಪೆ ಮೀನುಗಾರರ ಸಂಘದ ನಿಯೋಗವು ಕೇಂದ್ರ ರಕ್ಷಣಾ ಸಚಿವೆ ನಿರ್ಮಲ ಸೀತಾರಾಮನ್ ಅವರನ್ನು ಭೇಟಿ ಮಾಡಲು ನಿರ್ಧರಿಸಿದೆ.
ಮಲ್ಪೆ ಬಂದರಿನಲ್ಲಿರುವ ಮೀನುಗಾರರ ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ಉಡುಪಿ ಶಾಸಕ ಕೆ.ರಘುಪತಿ ಭಟ್, ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಪಾಶ್ವನಾರ್ಥ್, ಸಹಾಯಕ ನಿರ್ದೇಶಕರಾದ ಚಂದ್ರಶೇಖರ್, ಕಿರಣ್ ಹಾಗೂ ಮಲ್ಪೆ ಮೀನುಗಾರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ಮತ್ತು ಮುಖಂಡರು ಹಾಜರಿದ್ದ ಸಭೆಯಲ್ಲಿ ಈ ಕುರಿತು ತೀರ್ಮಾನ ತೆಗೆದು ಕೊಳ್ಳಲಾಗಿದೆ.
ಚುನಾವಣಾ ಪ್ರಚಾರದಲ್ಲಿರುವ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಮೇ 16ರೊಳಗೆ ಪ್ರಚಾರದ ಸ್ಥಳದಲ್ಲಿ ಭೇಟಿ ಮಾಡಿ, ನೌಕಸೇನೆಯ ಐಎನ್‌ಎಸ್ ಕೊಚ್ಚಿನ್ ಹಡಗು ಢಿಕ್ಕಿ ಹೊಡೆದಿರುವುದರಿಂದ ಸುವರ್ಣ ತ್ರಿಭುಜ ಬೋಟು ಅವಘಡಕ್ಕೀಡಾಗಿ ಸಮುದ್ರದಲ್ಲಿ ಮುಳುಗಿರುವ ಬಗ್ಗೆ ಸಂಶಯವಿದ್ದು, ಈ ಬಗ್ಗೆ ತನಿಖೆ ನಡೆಸಬೇಕೆಂಬುದಾಗಿ ಒತ್ತಾಯಿಸಲಾಗುವುದು ಎಂದು ಸಂಘದ ಅಧ್ಯಕ್ಷ ಸತೀಶ್ ಕುಂದರ್ ತಿಳಿಸಿದರು.
ಅದೇ ರೀತಿ ನಾಪತ್ತೆಯಾದ ಮೀನುಗಾರ ಕುಟುಂಬಗಳಿಗೆ ಕೇಂದ್ರ ಸರಕಾರ ದಿಂದ ಗರಿಷ್ಠ ಪ್ರಮಾಣದ ಪರಿಹಾರ ಮೊತ್ತವನ್ನು ನೀಡಬೇಕು ಎಂದು ಒತ್ತಾಯಿಸಲಾಗುವುದು. ಡಿ.15ರಂದು ಐಎನ್‌ಎಸ್ ಕೊಚ್ಚಿನ ಹಡಗು ಸಾಗಿ ರುವ ಸಮಯ ಮತ್ತು ಸುವರ್ಣ ತ್ರಿಭುಜ ಬೋಟು ಸಂಪರ್ಕ ಕಡಿದುಕೊಂಡ ಸಮಯ ಒಂದೇ ಆಗಿದ್ದು, ಈ ಅವಘಡಕ್ಕೆ ನೌಕಸೇನೆಯ ಹಡಗೇ ಕಾರಣ ಎಂಬುದು ಶೇ.99ರಷ್ಟು ನಮ್ಮ ಸಂಶಯವಾಗಿದೆ. ನೌಕಸೇನೆ ಇದನ್ನು ಒಪ್ಪದಿದ್ದರೆ ನಮ್ಮ ಮುಂದಿನ ನಿಲುವಿನ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗು ವುದು ಎಂದು ಸತೀಶ್ ಕುಂದರ್ ತಿಳಿಸಿದರು.