ಬಂಟ್ವಾಳ: ರಕ್ಷಿಸಿ ಕಾಡಿಗೆ ಬಿಟ್ಟಿದ್ದ ಕಾಡುಕೋಣದಿಂದ ಬಾಲಕಿ, ಮಹಿಳೆಗೆ ತಿವಿದು ಗಾಯ
ಬಂಟ್ವಾಳ, ಮೇ 4: ಗುಂಡಿಯಿಂದ ರಕ್ಷಿಸಿ ಕಾಡಿಗೆ ಬಿಟ್ಟಿದ್ದ ಕಾಡುಕೋಣವೊಂದು ಬಾಲಕಿ ಹಾಗೂ ಮಹಿಳೆಗೆ ತಿವಿದು ಗಾಯಗೊಳಿಸಿದ ಪರಿಣಾಮ ಅವರು ಆಸ್ಪತ್ರೆಗೆ ದಾಖಲಾದ ಘಟನೆ ಕಾಡಬೆಟ್ಟು ಕಂದಾಡಿ ಎಂಬಲ್ಲಿ ಶನಿವಾರ ನಡೆದಿದೆ.
ಇಲ್ಲಿನ ಕಂದಾಡಿ ನಿವಾಸಿ ರಾಮನಾಯ್ಕ ಎಂಬವರ ಪುತ್ರಿ ಹರ್ಷಾ (12), ಬಾಲಕಿಯ ಚಿಕ್ಕಮ್ಮ, ಅಂಗನವಾಡಿ ಶಿಕ್ಷಕಿ ಚಂದ್ರಾವತಿ ಗಾಯಗೊಂಡವರು.
ಇವರಿಬ್ಬರು ಬಂಟ್ವಾಳ ಮಹಾಲಿಂಗೇಶ್ಬರ ದೇವಾಲಯದಿಂದ ಮನೆಯ ಕಡೆಗೆ ವಾಪಸಾಗುವ ಸಂದರ್ಭ ಕಾಡಬೆಟ್ಟುವಿನ ಕಂದಾಡಿ ರಸ್ತೆಯಲ್ಲಿ ಕಾಡುಕೋಣ ಇವರಿಬ್ಬರ ಮೇಲೆ ಎರಗಿ ಗಾಯಗೊಳಿಸಿದೆ. ಪರಿಣಾಮ ಬಾಲಕಿಯ ಕೈಯ ಎಲುಬು ಮುರಿದಿದ್ದು, ಗಾಯಗಳಾಗಿವೆ. ಅದಲ್ಲದೆ, ಮಹಿಳೆಯ ಎದೆಗೆ ಹಾಗೂ ಇನ್ನಿತರ ಭಾಗಗಳಿವೆ ಗಾಯಗಳಾಗಿದ್ದು, ಇವರಿಬ್ಬರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ವಿವರ:
ಬಂಟ್ವಾಳ ತಾಲೂಕಿನ ಕಾಡಬೆಟ್ಟು ಗ್ರಾಮದ ಕಾಡಬೆಟ್ಟು ಪೂರ್ಲೊಟ್ಟು ಎಂಬಲ್ಲಿನ ನಿವಾಸಿ ಎಲ್ಪ್ರೆಡ್ ಡಿಸೋಜ ಎಂಬವರ ಮನೆಯ ಗೊಬ್ಬರ ಗ್ಯಾಸ್‍ನ ಗುಂಡಿಗೆ ಕಾಡುಕೋಣವೊಂದು ಬಿದ್ದು, ಮೇಲೆರಲು ಸಾಧ್ಯವಾಗದೇ ಸಿಲುಕಿಕೊಂಡಿತ್ತು. ಇಂದು ಬೆಳಗ್ಗೆ ಮನೆಯವರು ಗೊಬ್ಬರ ಗ್ಯಾಸ್‍ಗೆ ಗೊಬ್ಬರ ಹಾಕಲು ಬಂದ ಸಂದರ್ಭ ಈ ಘಟನೆ ಬೆಳಕಿಗೆ ಬಂದಿದ್ದು, ಬಳಿಕ ಮನೆಮಂದಿ ಬಂಟ್ವಾಳ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಬಂಟ್ವಾಳ ಉಪವಲಯ ಸಂರಕ್ಷಣಾಧಿಕಾರಿ ಸುರೇಶ್ ಸ್ಥಳಕ್ಕೆ ಭೇಟಿ ನೀಡಿ, ಸಿಬ್ಬಂದಿಯ ಸಹಕಾರದೊಂದಿಗೆ ಕಾಡು ಕೋಣವನ್ನು ಯಶ್ವಿಯಾಗಿ ಮೇಲೆಕೆತ್ತಲಾಯಿತು. ರಾತ್ರಿಯ ವೇಳೆ ಕಾಡಿನಿಂದ ಬಂದಿರುವ ಈ ಕಾಡುಕೋಣ, ಯಾವುದೋ ಪ್ರಾಣಿಯನ್ನು ಅಟ್ಟಿಸಿಕೊಂಡು ಹೋಗುವ ವೇಳೆ ಗೊಬ್ಬರ ಗ್ಯಾಸ್ ಗುಂಡಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.
ಅರಣ್ಯ ಇಲಾಖೆಯ ಸಿಬ್ಬಂದಿ ವಿನಯ್, ಭಾಸ್ಕರ್, ಸ್ಮಿತಾ, ಅನಿತಾ ಅನಿಲ್ ಹಾಗೂ ಪರಿಸರ ಸ್ನೇಹಿ ಕಿರಣ್ ಪಿಂಟೋ ಮತ್ತು ಗ್ರಾಮಸ್ಥರ ಸ್ಥಳದಲ್ಲಿದ್ದು ಕಾಡು ಕೋಣದ ರಕ್ಷಣೆಯಲ್ಲಿ ಸಹಕರಿಸಿದರು. ವಿಷಯ ತಿಳಿಯುದ್ದಿದಂತೆ ಕಾಡುಕೋಣವನ್ನು ನೋಡಲು ಭಾರೀ ಸಂಖ್ಯೆಯಲ್ಲಿ ಕುತೂಹಲಿಗರು ನೆರೆದಿದ್ದರು.
ಗುಂಡಿಗೆ ಬಿದ್ದು ಗಾಯಗೊಂಡಿದ್ದ ಕಾಡುಕೋಣಕ್ಕೆ ವಗ್ಗದ ಪಶುವೈದ್ಯಾಧಿಕಾರಿಯಲ್ಲಿ ಚಿಕಿತ್ಸೆ ನೀಡಿ, ಬಳಿಕ ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿತ್ತು. ಇದಾದ ಬಳಿಕ ಕಾಡಿನಿಂದ ವಾಪಸು ಬಂದ ಕಾಡುಕೋಣವು, ಇದೇ ರಸ್ತೆಯಲ್ಲಿ ಬರುತ್ತಿದ್ದ ಬಾಲಕಿ ಹಾಗೂ ಮಹಿಳೆಗೆ ತಿವಿದು ಗಾಯಗೊಳಿಸಿದೆ.