ಮೇ 5: ಮಕ್ಕಳ ಪಾರ್ಕ್ ಉದ್ಘಾಟನೆ
ಮಂಗಳೂರು, ಮೇ 4: ರಾಮಕೃಷ್ಣ ಮಿಷನ್ ನೇತೃತ್ವದ ‘ಸ್ವಚ್ಛ ಮಂಗಳೂರು ಅಭಿಯಾನ’ದಡಿ ಪಾಂಡೇಶ್ವರದ ಪೊಲೀಸ್ ಲೇನ್‌ನಲ್ಲಿ ನಿರ್ಮಿಸಲಾದ ನವೀಕೃತ ಮಕ್ಕಳ ಪಾರ್ಕ್‌ನ ಲೋಕಾರ್ಪಣೆಯು ಮೇ 5ರಂದು ಬೆಳಗ್ಗೆ 7:30ಕ್ಕೆ ನಡೆಯಲಿದೆ.
20 ವರ್ಷದ ಹಿಂದೆ ನಿರ್ಮಿಸಲಾದ ಈ ಪಾರ್ಕ್ ಸೂಕ್ತ ನಿರ್ವಹಣೆ ಇಲ್ಲದ್ದರಿಂದ ಹಲವು ಸಮಯದಿಂದ ಪಾಳುಬಿದ್ದ ಸ್ಥಿತಿಯಲ್ಲಿತ್ತು. ಇದೀಗ ಪಾರ್ಕ್‌ನ ಆವರಣ ಗೋಡೆಯನ್ನು ದುರಸ್ತಿಗೊಳಿಸಿ ಚಿತ್ರಗಳಿಂದ ಅಂದಗೊಳಿಸಲಾಗಿದೆ. ಹೊರ ಆವರಣವನ್ನು ಸಾಮಾಜಿಕ ಸಂದೇಶಗಳುಳ್ಳ ಕಲಾಕೃತಿಗಳಿಂದ ಚೆಂದಗೊಳಿಸಲಾಗಿದೆ. ಮುರಿದುಬಿದ್ದ ಆಟಿಕೆ ಸಾಮಾನುಗಳನ್ನು ಬದಲಿಸಿ ನೂತನ ಆಟಿಕೆ ಸಾಮಾನುಗಳನ್ನು ಜೋಡಿಸ ಲಾಗಿದೆ. ಇಂಟರ್‌ಲಾಕ್ ಅಳವಡಿಸುವ ಕಾರ್ಯಸಂಪನ್ನಗೊಂಡಿದ್ದು, ಅಲಂಕಾರಿಕ ಗಿಡಗಳನ್ನು ನೆಡಲಾಗಿದೆ. ವಿಶೇಷ ವಿನ್ಯಾಸದ ಆಸನಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಜಾರುಬಂಡಿಯನ್ನು ದುರಸ್ತಿಗೊಳಿಸಲಾಗಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಜಿಲ್ಲಾ ಎಸ್ಪಿ ಲಕ್ಷ್ಮಿಪ್ರಸಾದ್, ಎಸಿಬಿ ಎಸ್ಪಿ ಉಮಾ ಪ್ರಶಾಂತ್, ಡಿಸಿಪಿ ಹನುಮಂತರಾಯ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.