ಕಾಂಗ್ರೆಸ್‍ನಲ್ಲಿ ನಿಷ್ಟಾವಂತ ಕಾರ್ಯಕರ್ತರಿಗೆ ಅವಕಾಶ ದೊರೆಯುತ್ತದೆ ಎನ್ನುವುದಕ್ಕೆ ನನ್ನ ಆಯ್ಕೆ ಸಾಕ್ಷಿ- ಮಿಥುನ್ ರೈ
ಪುತ್ತೂರು ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮ
ಪುತ್ತೂರು: ಕಾಂಗ್ರೆಸ್‍ನಲ್ಲಿ ಮಾತ್ರ ನಿಷ್ಟಾವಂತ ಕಾರ್ಯಕರ್ತರಿಗೆ ಅವಕಾಶ ದೊರೆಯುತ್ತದೆ ಎನ್ನುವುದಕ್ಕೆ ಲೋಕಸಭಾ ಅಭ್ಯರ್ಥಿಯಾಗಿ ಪಕ್ಷವು ನನ್ನನ್ನು ಆಯ್ಕೆ ಮಾಡಿರುವುದೇ ಸಾಕ್ಷಿಯಾಗಿದೆ ಎಂದು ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಹೇಳಿದರು.
ಅವರು ಶನಿವಾರ ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ ನೀಡಿ ದೇಶ ಸೇವೆ ಮಾಡುವ ಅವಕಾಶ ದೊರಕಿಸಿ ಕೊಡುವುದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಸಾಧ್ಯ ಎಂದ ಕಳೆದ 28 ವರ್ಷಗಳಿಂದ ಕಾಂಗ್ರೆಸ್‍ನ ಸಂಸದರು ಇಲ್ಲದಿರುವ ಕಾರಣ ಬದಲಾವಣೆಗೆ ಪ್ರಯತ್ನ ನಡೆಸಲಾಗಿದೆ. ನನಗೆ 17 ದಿನ ಪ್ರಚಾರ ನಡೆಸಲು ಅವಕಾಶ ದೊರಕಿದೆ. ಈ ದಿನಗಳಲ್ಲಿ ಹೆಚ್ಚಿನ ಕಡೆಗೆ ತೆರಳಿ ಕಾಂಗ್ರೆಸ್ ಕಾರ್ಯಕರ್ತರನ್ನು ಮತದಾರರನ್ನು ಭೇಟಿಯಾಗಿದ್ದೇನೆ. ಕಾರ್ಯಕರ್ತರು, ಮುಖಂಡರು ಒಗ್ಗಟ್ಟಿನಿಂದ ಹುಮ್ಮಸ್ಸಿನಿಂದ ನನ್ನ ಪರವಾಗಿ ಕೆಲಸ ಮಾಡಿದ್ದಾರೆ. ಎಲ್ಲಾ ಅಂಶಗಳೂ ಪಕ್ಷದ ಗೆಲುವಿಗೆ ಪೂರಕವಾಗಿದೆ ಎಂದರು.
ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿಯೊಂದು ಬೂತ್ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಮಾತಿಗೆ ಹೆಚ್ಚಿನ ಮನ್ನಣೆ ಮುಂದೆ ದೊರಕಲಿದೆ. ಮುಂದಿನ 5 ವರ್ಷದಲ್ಲಿ ಪ್ರತಿಯೊಂದು ಬೂತ್‍ನ ಓರ್ವ ಕಾರ್ಯಕರ್ತರಿಗೆ 100 ಮನೆಗಳ ಸಂಪರ್ಕ ಕೊಡಲಾಗಿದೆ. ಈ ಸಂದರ್ಭದಲ್ಲಿ ಅವರು ಪಕ್ಷದ ಸಾಧನೆ ಹಾಗೂ ಮತದಾರರ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಲಿದ್ದಾರೆ. ಈ ಎಲ್ಲಾ ಅಂಶಗಳು ಪಕ್ಷಕ್ಕೆ ಪೂರಕವಾಗಲಿದೆ ಎಂದು ಹೇಳಿದರು.
ನೈಜ ಗೋಪ್ರೇಮಿ ಮಿಥುನ್ ರೈ ಅವರು ಅಭ್ಯರ್ಥಿಯಾಗಿರುವ ಕಾರಣ ಈ ಚುನಾವಣೆಯಲ್ಲಿ ಬಿಜೆಪಿಗರಿಗೆ ಗೋ ಹತ್ಯೆ ವಿಷಯವನ್ನು ಪ್ರತಿಪಾದಿಸಲು ಸಾಧ್ಯವಿರಲಿಲ್ಲ. ಮಿಥುನ್ ರೈ ಎಲ್ಲಾ ವರ್ಗದ ಜನರ ಮೇಲೆ ಪ್ರೀತಿ ವಿಶ್ವಾವಿಟ್ಟಿದ್ದು ಈ ಹಿನ್ನಲೆಯಲ್ಲಿ ಅವರು ಗೆಲುವು ಸಾಧಿಸಲಿದ್ದಾರೆ. ಈ ಗೆಲುವು ಎಲ್ಲಾ ವರ್ಗದ ಜನರ ಗೆಲುವಾಗಲಿದೆ ಎಂದರು.
ವೇದಿಕೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಯಾದ ಪುತ್ತೂರು ಬ್ಲಾಕ್ ಉಸ್ತುವಾರಿ ಸುಭೋದ್ ಆಳ್ವ ಮಂಗಳೂರು, ಕೆಪಿಸಿಸಿ ಸದಸ್ಯ ಎಂ.ಬಿ. ವಿಶ್ವನಾಥ ರೈ, ಯುವ ಕಾಂಗ್ರೆಸ್ ಅಧ್ಯಕ್ಷ ಯು.ಟಿ. ತೌಸೀಫ್, ನಗರ ಕಾಂಗ್ರೆಸ್ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ ಮತ್ತಿತರರು ಉಪಸ್ಥಿತರಿದ್ದರು.
ಅಗಲಿದ ಕಾಂಗ್ರೆಸ್ ನಾಯಕರಿಗೆ ಶ್ರದ್ಧಾಂಜಲಿ
ಸಭೆಯಲ್ಲಿ ಅಗಲಿದ ಕಾಂಗ್ರೆಸ್ ನಾಯಕರಾದ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ಎಪಿಎಂಸಿ ಮಾಜಿ ಉಪಾಧ್ಯಕ್ಷರಾದ ಸಂಪ್ಯ ಉಸ್ಮಾನ್ ಹಾಜಿ, ಹಿರಿಯ ಕಾಂಗ್ರೆಸ್ ಮುಖಂಡ ಬನ್ನೂರು ರೈತರ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎ.ಮುರಳೀಧರ ರೈ, ಉಪ್ಪಿನಂಗಡಿ ದೇವಸ್ಥಾನದ ಮಾಜಿ ಮುಕ್ತೇಸರ ಕೋಟಿಚೆನ್ನಯ ಕಂಬಳ ಸಮಿತಿ ಸದಸ್ಯ ಸುಂದರೇಶ್ ಅತ್ತಾಜೆ, ಪುತ್ತೂರು ಪುರಸಭೆಯ ಮಾಜಿ ಸದಸ್ಯ ಜೋಕಿಂ ರೆಬೆಲ್ಲೋ, ಹಿರಿಯ ಕಾಂಗ್ರೆಸ್ ಕಾರ್ಯಕರ್ತ ಪಾಂಗಳಾಯಿ ಶಂಕರ ಆಚಾರ್ಯ, ಪುರಸಭಾ ಮಾಜಿ ಸದಸ್ಯ ದೇವದಾಸ ಶೆಟ್ಟಿ ಅವರ ತಂದೆ ಪ್ರಕಾಶ್ಚಂದ್ರ ಶೆಟ್ಟಿ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಸ್ವಾಗತಿಸಿದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಅಮಳ ರಾಮಚಂದ್ರ ವಂದಿಸಿದರು. ಕೃಷ್ಣಪ್ರಸಾದ್ ಆಳ್ವ ನಿರೂಪಿಸಿದರು.