ಪೊರ್ಕೋಡಿ: ಮತ್ತೆ ಕಾಣಿಸಿಕೊಂಡ ಬೆಂಕಿ
ಮಂಗಳೂರು, ಮೇ 5: ಮೂರು ದಿನಗಳ ಹಿಂದೆ ಬೆಂಕಿ ಬಿದ್ದ ಜಾಗಕ್ಕೆ ಸ್ಥಳೀಯರು ಮತ್ತು ಅಗ್ನಿಶಾಮಕ ದಳದವರು ನೀರು ಹಾಯಿಸಿ ನಂದಿಸಿದ್ದರೂ ಕೂಡ ಸುಡುಬಿಸಿಲಿನ ತಾಪದಿಂದ ಮತ್ತೆ ಬೆಂಕಿ ಕಾಣಿಸಿಕೊಂಡ ಘಟನೆ ಬಜ್ಪೆ ಸಮೀಪದ ಪೊರ್ಕೋಡಿ ದೇವಸ್ಥಾನದ ಬಳಿ ರವಿವಾರ ನಡೆದಿದೆ.
ಮಳವೂರು ಗ್ರಾಪಂ ವ್ಯಾಪ್ತಿಯ ಕೆಂಜಾರು ಗ್ರಾಮದ ಪೋರ್ಕೋಡಿ ದೇವಸ್ಥಾನದ ಬಳಿಯ ಖಾಸಗಿ ಜಮೀನಿನಲ್ಲಿ ಉತ್ತರ ಭಾರತ ಮೂಲದ ಕೂಲಿ ಕಾರ್ಮಿಕರ ವಾಸಕ್ಕಾಗಿ ಬೃಹತ್ ಶೆಡ್ ನಿರ್ಮಾಣಕ್ಕೆ ಸ್ಥಳೀಯರ ಆಕ್ಷೇಪದ ನಡುವೆಯೂ ಗ್ರಾಪಂ ಅವಕಾಶ ಮಾಡಿಕೊಟ್ಟಿತ್ತು. ಶುಕ್ರವಾರ ಮಧ್ಯಾಹ್ನ ಈ ಶೆಡ್ನಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿ ಸಮೀಪದ ಖಾಸಗಿ ಜಮೀನಿಗೆ ವ್ಯಾಪಿಸಿದೆ. ಇದರಿಂದ ಅಪಾಯ ಸಂಭವಿಸದಿದ್ದರೂ ಬೆಂಕಿಯನ್ನು ನಂದಿಸುವುದೇ ಸಮಸ್ಯೆಯಾಗಿತ್ತು ಎನ್ನಲಾಗಿದೆ.
ಶುಕ್ರವಾರ ಮಧ್ಯಾಹ್ನ ಕಾಣಿಸಿಕೊಂಡ ಬೆಂಕಿಯನ್ನು ಅಗ್ನಿಶಾಮಕ ದಳದವರು ನಂದಿಸಿದ್ದರು. ಆದರೆ, ಶನಿವಾರ ಮತ್ತೆ ಬೆಂಕಿ ಕಾಣಿಸಿಕೊಂಡ ಕಾರಣ ಸ್ಥಳೀಯ ನೂರಾರು ಮಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಸಿಕೊಂಡರು. ಸುಮಾರು 20 ಎಕರೆ ಪ್ರದೇಶಕ್ಕೆ ಬೆಂಕಿ ಹಬ್ಬಿದ್ದರಿಂದ ಅದನ್ನು ನಂದಿಸುವುದೇ ಸವಾಲಾಗಿ ಪರಿಣಮಿಸಿತ್ತು ಎಂದು ಸ್ಥಳೀಯರಾದ ದಯಾನಂದ ಪ್ರಸಾದ್ ಪತ್ರಿಕೆಗೆ ತಿಳಿಸಿದ್ದಾರೆ.
ರವಿವಾರ ಮಧ್ಯಾಹ್ನ ಬಿಸಿಲಿನ ಹೊಡೆತ ಮತ್ತಷ್ಟು ಹೆಚ್ಚಾದ ಕಾರಣ ಮೂರು ದಿನಗಳ ಹಿಂದೆ ಬಿದ್ದ ಬೆಂಕಿಯ ಕಿಡಿ ಮತ್ತೆ ಹೊತ್ತಿದೆ. ಇದರಿಂದ ಪರಿಸರ ಹೊಗೆಯಾವೃತವಾಗಿದೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದ್ದು, ವಿರೋಧದ ಮಧ್ಯೆಯೂ ಸುಮಾರು 300ರಷ್ಟು ಮಂದಿಗೆ ವಸತಿ ಕಲ್ಪಿಸುವ ಶೆಡ್ನ ನಿರ್ಮಾಣಕ್ಕೆ ಅವಕಾಶ ಕಲ್ಪಿಸಬಾರದಿತ್ತು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.