ಏಳು ಗಂಟೆಗಳ ನಿದ್ರೆ ಮಾಡಲಾಗುತ್ತಿಲ್ಲವೇ?: ಅದು ಹೃದ್ರೋಗಕ್ಕೆ ಕಾರಣವಾಗಬಹುದು
ನಿದ್ರೆಯ ಕೊರತೆ ಹೃದ್ರೋಗಗಳಿಗೆ ಗುರಿಯಾಗುವ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಬೆಟ್ಟು ಮಾಡಿರುವ ಇತ್ತೀಚಿನ ಸಂಶೋಧನೆಯೊಂದು ಇದಕ್ಕೆ ಕಾರಣಗಳನ್ನು ವಿವರಿಸಿದೆ.
ದೀರ್ಘಕಾಲೀನ ಅಲ್ಪನಿದ್ರೆಯು ಅಪಧಮನಿಗಳಲ್ಲಿ ತಡೆಗಳುಂಟಾಗುವ,ಹೃದೋಗಗಳುಂಟಾಗುವ ಅಪಾಯವನ್ನು ಹೆಚ್ಚಿಸುತ್ತದೆ,ತನ್ಮೂಲಕ ಮಾನಸಿಕ ಅಸ್ವಸ್ಥತೆ ಮತ್ತು ಸಾವುಗಳನ್ನೂ ಹೆಚ್ಚಿಸುತ್ತದೆ ಎಂದು ಜರ್ನಲ್ ಆಫ್ ಎಕ್ಸ್ಪೆರಿಮೆಂಟಲ್ ಫಿಝಿಯಾಲಜಿಯಲ್ಲಿ ಪ್ರಕರಣಗೊಂಡಿರುವ ಸಂಶೋಧನಾ ವರದಿಯು ತಿಳಿಸಿದೆ.
ಪ್ರತಿ ದಿನ ರಾತ್ರಿ ಏಳು ಗಂಟೆಗಳ ಕಾಲ ನಿದ್ರಿಸದ ವಯಸ್ಕರಲ್ಲಿ ಕೆಲವು ಮೈಕ್ರೋಆರ್ಎನ್ಎಗಳ ಮಟ್ಟವು ಕಡಿಮೆಯಾಗಿರುತ್ತದೆ. ಈ ಮೈಕ್ರೋ ಆರ್ಎನ್ಎಗಳು ಹೃದಯನಾಳಗಳ ಆರೋಗ್ಯವನ್ನು ಕ್ರಮಬದ್ಧಗೊಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಹೀಗಾಗಿ ಅವುಗಳ ಮಟ್ಟವು ಹೃದಯನಾಳೀಯ ಆರೋಗ್ಯ,ಉರಿಯೂತ ಮತ್ತು ಕಾಯಿಲೆಯ ನಿರ್ದಿಷ್ಟ ಸಂಕೇತಗಳಾಗಿವೆ ಎಂದು ಈಗ ಗುರುತಿಸಲಾಗಿದೆ.
ಸರಳವಾಗಿ ಹೇಳುವುದಾದರೆ ಮೈಕ್ರೋಆರ್ಎನ್ಎಗಳ ಕಡಿಮೆ ಮಟ್ಟವು ಹೃದ್ರೋಗಗಳೊಂದಿಗೆ ಗುರುತಿಸಿಕೊಂಡಿದೆ,ಹೀಗಾಗಿ ವ್ಯಕ್ತಿಯು ಹೃದ್ರೋಗಕ್ಕೆ ಗುರಿಯಾಗುವ ಅಪಾಯವನ್ನು ನಿರ್ಧರಿಸಲು ಇವುಗಳನ್ನು ಸೂಚಕಗಳನ್ನಾಗಿ ಬಳಸಬಹುದಾಗಿದೆ. ಮೈಕ್ರೋಆರ್ಎನ್ಎಗಳಲ್ಲಿ ಬದಲಾವಣೆ ಕಡಿಮೆ ನಿದ್ರೆ ಮತ್ತು ಹೃದಯನಾಳೀಯ ರೋಗಗಳ ನಡುವಿನ ಸಂಬಂಧಕ್ಕೆ ಭಾಗಶಃ ಕಾರಣವಾಗಿರಬಹುದು. ಈ ಕಣಗಳ ಮಟ್ಟಕ್ಕೂ ನಿದ್ರೆಯ ಪ್ರಮಾಣಕ್ಕೂ ಸಂಬಂಧವಿದೆ. ಹೀಗಾಗಿ ಮೈಕ್ರೋಆರ್ಎನ್ಎ ಮಟ್ಟಗಳಲ್ಲಿ ಏರಿಳಿತಗಳು ಹೃದ್ರೋಗದ ಅಪಾಯದ ಎಚ್ಚರಿಕೆಯನ್ನು ನೀಡಬಲ್ಲವು ಎಂದು ಸಂಶೋಧನಾ ತಂಡದ ಜಮೀ ಹಿಜ್ಮನ್ಸ್ ಅವರು ವರದಿಯಲ್ಲಿ ಹೇಳಿದ್ದಾರೆ.