ಪಾಂಡೇಶ್ವರ: ಚಿಣ್ಣರ ನವೀಕೃತ ಪಾರ್ಕ್ ಉದ್ಘಾಟನೆ
ಮಂಗಳೂರು, ಮೇ 5: ನಗರದ ರಾಮಕೃಷ್ಣ ಮಿಷನ್ ನೇತೃತ್ವದ ಸ್ವಚ್ಛ ಮಂಗಳೂರು ಅಭಿಯಾನದಡಿ ಪಾಂಡೇಶ್ವರದ ಪೊಲೀಸ್ ಲೇನ್ನ ನವೀಕೃತ ಚಿಣ್ಣರ ಪಾರ್ಕ್ ರವಿವಾರ ಉದ್ಘಾಟನೆಗೊಂಡಿತು.
ಪಾರ್ಕ್ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಿಪ್ರಸಾದ್, ರಾಮಕೃಷ್ಣ ಮಿಷನ್ ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ. ಅತ್ಯಂತ ಬದ್ಧತೆಯಿಂದ ಸ್ವಚ್ಛ ಮಂಗಳೂರು ಜಾಗೃತಿ ನಡೆಯುತ್ತಿದ್ದು, ಬೇರೆಲ್ಲೂ ಇಂತಹ ಕೆಲಸ ಕಾಣಲು ಸಿಗುವುದಿಲ್ಲ. ನಮ್ಮ ದೇಹ, ಮನೆ ಸ್ವಚ್ಛವಾಗಿಟ್ಟರೆ ಸಾಲದು. ನಾವು ವಾಸಿಸುವ ಸುತ್ತಮುತ್ತಲು ನಿರ್ಮಲವಾಗಿಟ್ಟುಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ಹಾಗಾಗಿ ಪೊಲೀಸ್ಲೇನ್ ಸ್ವಚ್ಛವಾಗಿಡುವ ಉದ್ದೇಶದಿಂದ ಇಲ್ಲಿನ ನಿವಾಸಿಗಳು ಪ್ರತಿವಾರ ಲೇನ್ನ ಸ್ವಚ್ಛತಾ ಕಾರ್ಯ ನಡೆಸುವಂತೆ ಅಧಿಕೃತ ಸೂಚನೆ ಹೊರಡಿಸಲಾಗುವುದು ಎಂದರು.
ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಮಾತನಾಡಿ ಮಕ್ಕಳಲ್ಲಿಯೂ ಸ್ವಚ್ಛತೆಯ ಬಗ್ಗೆ ಅರಿವು ಮೂಡಲಿ ಎಂಬ ಉದ್ದೇಶದಿಂದ ಪಾಳುಬಿದ್ದ ಪಾರ್ಕ್ಗಳಿಗೆ ಮರುಜೀವ ಕೊಡುವ ಕೆಲಸ ನಡೆಯುತ್ತಿದೆ. ಜನಜಾಗೃತಿ ಉದ್ದೇಶದಿಂದ ನಿರಂತರವಾಗಿ ಸ್ವಚ್ಛತಾ ಅಭಿಯಾನವನ್ನು ರಾಮಕೃಷ್ಣ ಮಿಷನ್ ಕೈಗೊಳ್ಳುತ್ತಿದ್ದು, ಜನರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿದರೆ ನಾವು ಮಾಡುವ ಕಾರ್ಯ ಸಾಕಾರಗೊಳ್ಳುತ್ತದೆ ಎಂದರು.
ಸ್ವಚ್ಛ ಮಂಗಳೂರು ಅಭಿಯಾನ ಸಂಯೋಜಕ ಏಕಗಮ್ಯಾನಂದ ಸ್ವಾಮೀಜಿ ಮಾತನಾಡಿ ಮಂಗಳೂರಿನಲ್ಲಿ ಹಲವು ಪಾಳುಬಿದ್ದ ಪುಟಾಣಿ ಪಾರ್ಕ್ಗಳನ್ನು ಗುರುತಿಸಲಾಗಿದೆ. ಹಂತ ಹಂತವಾಗಿ ಅವುಗಳನ್ನು ಸ್ವಚ್ಛಮಾಡಿ ಸಾರ್ವಜನಿಕರ ಉಪಯೋಗಕ್ಕೆ ಯೋಗ್ಯವಾಗುವಂತೆ ಮಾಡಲಾಗುವುದು ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ಮಾಜಿ ಕಾರ್ಪೊರೇಟರ್ ದಿವಾಕರ್, ಸಮಾಜ ಸೇವಕ ರಾಜಶೇಖರ್ ಮಳಲಿ, ಅಭಿಯಾನದ ಸಂಯೋಜಕರಾದ ದಿಲ್ರಾಜ್ಆಳ್ವ, ಉಮಾನಾಥ್ ಕೋಟೆಕಾರ್ ಮತ್ತಿತರರು ಉಪಸ್ಥಿತರಿದ್ದರು. ಸಂತೋಷ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಲೇನ್ನಲ್ಲಿ ಸ್ವಚ್ಛತಾ ಆಂದೋಲನ ನಡೆಯಿತು.