ದಡ್ಡಲಕಾಡು ಸರಕಾರಿ ಶಾಲೆಯಲ್ಲಿ ಪೋಷಕರಿಂದ ಶ್ರಮದಾನ
ಬಂಟ್ವಾಳ, ಮೇ 5: ದಡ್ಡಲಕಾಡು ಸರಕಾರಿ ಹಿರಿಯ ಉನ್ನತೀಕರಿಸಿದ ಪ್ರಾಥಮಿಕಶಾಲೆಯ ಮೂರನೇ ಹಂತದ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು, ರವಿವಾರ ವಿದ್ಯಾರ್ಥಿಗಳ ಪೋಷಕರು ಶ್ರಮದಾನ ನಡೆಸಿ ಗಮನ ಸೆಳೆದರು. ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಹೊಸ ಕೊಠಡಿಗಳು, ಆವರಣ ಗೋಡೆ, ಸಭಾಂಗಣ ನಿರ್ಮಾಣಗೊಳ್ಳಲಿದ್ದು, ವಿದ್ಯಾರ್ಥಿಗಳ ಪೋಷಕರೇ ಸ್ವಯಂ ಪ್ರೇರಣೆಯಿಂದ ಶ್ರಮದಾನದಲ್ಲಿ ಪಾಲ್ಗೊಂಡರು.
ಬೆಳಿಗ್ಗೆ 8 ಗಂಟೆಯಿಂದ ಶ್ರಮದಾನ ಆರಂಭಗೊಂಡಿದ್ದು ಪ್ರತಿಯೊಬ್ಬ ಪೋಷಕರು 2 ಗಂಟೆಗಳ ಶ್ರಮ ಸೇವೆ ನೀಡಿದರು. ಶಾಲಾ ಮೈದಾನ ದಲ್ಲಿದ್ದ ಕೆಂಪುಕಲ್ಲು, ಸಿಮೆಂಟ್ ಬ್ಲಾಕ್ ಹಾಗೂ ಮರಳನ್ನು ಕೇವಲ ಒಂದೂವರೆ ಗಂಟೆಯಲ್ಲಿ ಮೇಲಂತಸ್ತಿಗೆ ಸಾಗಿಸಿ ಶಾಲೆಯ ಅಭಿವೃದ್ಧಿಗೆ ತಮ್ಮ ಕೊಡುಗೆಯನ್ನು ನೀಡಿದರು. ಈಗಾಗಲೇ ಶಾಲೆಯ ಆವರಣ ಗೋಡೆಯ ನಿರ್ಮಾಣ ಕಾಮಗಾರಿ ಆರಂಭಗೊಂಡಿದ್ದು, ಮುಂದಿನ ದಿನಗಳಲ್ಲಿ 11 ತರಗತಿ ಕೋಣೆಗಳ ನಿರ್ಮಾಣ ಕಾಮಗಾರಿ ಆರಂಭಗೊಳ್ಳಲಿದೆ.
ಈ ಸಂಧರ್ಭ ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ ಅಧ್ಯಕ್ಷ ಪ್ರಕಾಶ್ ಅಂಚನ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಮಚಂದ್ರ ಪೂಜಾರಿ ಕರೆಂಕಿ, ಪುರುಷೋತ್ತಮ ಅಂಚನ್, ಪಂಜಿಕಲ್ಲು ಗ್ರಾಪಂ ಸದಸ್ಯ ಪೂವಪ್ಪ ಮೆಂಡನ್, ನವೀನ್ ಸೇಸಗುರಿ, ಬಾಲಕೃಷ್ಣ, ಅಶ್ವಥ್, ನಾಗೇಶ್, ಶಾಲಾ ಮುಖ್ಯೋಪಾಧ್ಯಾಯ ಮೌರೀಸ್ ಡಿಸೋಜಾ ಹಾಗೂ ವಿದ್ಯಾರ್ಥಿಗಳ ಪೋಷಕರು ಹಾಜರಿದ್ದರು.