ನೀಟ್ ಗೊಂದಲ: ಮರುಪರೀಕ್ಷೆಗೆ ಕ್ಯಾಂಪಸ್ ಫ್ರಂಟ್ ಒತ್ತಾಯ
ಬೆಂಗಳೂರು: ಹಂಪಿ ಎಕ್ಸ್ಪ್ರೆಸ್ ರೈಲು ವಿಳಂಬ ಮತ್ತು ಪರೀಕ್ಷಾ ಕೇಂದ್ರಗಳ ಬದಲಾವಣೆಯಿಂದ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೀಟ್) ಬರೆಯಲು ಅಸಾಧ್ಯರಾದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಗೆ ಕ್ಯಾಂಪಸ್ ಫ್ರಂಟ್ ಆಗ್ರಹಿಸಿದೆ.
ಉತ್ತರ ಕರ್ನಾಟಕ ಅಂದರೆ ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಯ ಹಲವು ವಿದ್ಯಾರ್ಥಿಗಳು ಹಂಪಿ ಎಕ್ಸ್ಪ್ರೆಸ್ ರೈಲು ತಡವಾಗಿ ಬೆಂಗಳೂರು ತಲುಪಿದ ಕಾರಣ ಸುಮಾರು 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಿದ್ದಾರೆ.
ಇನ್ನು ಬೆಂಗಳೂರು, ಮೈಸೂರು ಮತ್ತು ಕಲಬುರ್ಗಿ ಜಿಲ್ಲೆಯ ಹಲವು ಪರೀಕ್ಷಾ ಕೇಂದ್ರಗಳು ಏಕಾಏಕಿ ಬದಲಾವಣೆ ಮಾಡಿರುವುದರಿಂದ ವಿದ್ಯಾರ್ಥಿಗಳು ಪರೀಕ್ಷಾ ದಿನದಂದು ಒತ್ತಡಕ್ಕೆ ಒಳಗಾಗುವಂತಾಗಿದೆ.ಹಂಪಿ ಎಕ್ಸ್ಪ್ರೆಸ್ ರೈಲಿನ ಮೂಲಕ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಬೆಂಗಳೂರಿಗೆ ಬರುತ್ತಿದ್ದರು ಆದರೆ ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ಇವತ್ತು ರೈಲು ಮಾರ್ಗ ಬದಲಾವಣೆ ಮಾಡಿ ಬೆಂಗಳೂರು ತಲುಪಿದ ಕಾರಣ ವಿದ್ಯಾರ್ಥಿಗಳು ತಡವಾಗಿದ್ದರು.
ಹಲವು ದಿನಗಳ ಹಿಂದೆ ಟಿಕೆಟ್ ಕಾಯ್ದಿರಿಸಿದ್ದರಿಂದ ವಿದ್ಯಾರ್ಥಿಗಳಿಗೆ ಅಥವಾ ಸಂಬಂಧ ಪಟ್ಟ ಇಲಾಖೆಗೆ ರೈಲ್ವೇ ಇಲಾಖೆಯು ಮುಂಚಿತವಾಗಿ ಸೂಚಿಸಬೇಕಿತ್ತು. ನೀಟ್ ಕೇಂದ್ರ ಸರಕಾರದ ವ್ಯಾಪ್ತಿಗೆ ಒಳಪಟ್ಟರೂ ಈ ಘಟನೆಗೆ ರಾಜ್ಯ ಸರಕಾರ ಪ್ರತಿಕ್ರಿಯೆ ನೀಡದ ಕಾರಣ ಕೇಂದ್ರ ಮತ್ತು ರಾಜ್ಯ ಸರಕಾರಗಳು ನೇರ ಹೊಣೆಯಾಗಲಿದೆ ಎಂದು ಕ್ಯಾಂಪಸ್ ಫ್ರಂಟ್ ಅಭಿಪ್ರಾಯ ಪಟ್ಟಿದೆ. ಅಲ್ಲದೇ ರೈಲ್ವೆ ಇಲಾಖೆಯು ಈ ಘಟನೆಯನ್ನು ಲಘುವಾಗಿ ಪರಿಗಣಿಸಿದ್ದು ಇದು ಇಲಾಖೆಯ ಬೇಜವಬ್ದಾರಿತನವನ್ನು ಎತ್ತಿ ತೋರಿಸುತ್ತಿದೆ.ಅದುದರಿಂದ ವೈದ್ಯಕೀಯ ಇಲಾಖೆಯು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ವಂಚಿತರಾದ ವಿದ್ಯಾರ್ಥಿಗಳಿಗೆ ಶೀಘ್ರ ಮರು ಪರೀಕ್ಷೆ ಮಾಡಬೇಕೆಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿ ಒತ್ತಾಯಿಸುತ್ತಿದೆ ಎಂದು ರಾಜ್ಯಾಧ್ಯಕ್ಷ ಫಯಾಝ್ ದೊಡ್ಡಮನೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.