ಕೊಣಾಜೆ: ಕಂದಕಕ್ಕೆ ಉರುಳಿದ ಗ್ಯಾಸ್ ಸಿಲಿಂಡರ್ ತುಂಬಿದ ಲಾರಿ
ಕೊಣಾಜೆ: ಕೊಣಾಜೆ ಠಾಣೆ ವ್ಯಾಪ್ತಿಯ ಪಜೀರು ಗ್ರಾಮದ ಅರ್ಕಾಣ ಬಳಿ ಎಚ್ಪಿ ಗ್ಯಾಸ್ ಗೋಡೌನ್ ಬಳಿ ವಿತರಣೆಗಾಗಿ ಗ್ಯಾಸ್ ಸಿಲಿಂಡರ್ ಗಳನ್ನು ತುಂಬಿಕೊಂಡಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಘಟನೆ ಸೋಮವಾರ ಬೆಳಗ್ಗೆ ಸಂಭವಿಸಿದೆ.
ಅವಘಡದಿಂದ ಲಾರಿಯೊಳಗಿದ್ದ ಗ್ಯಾಸ್ ಸಿಲಿಂಡರ್ ಸೋರಿಕೆಯಾಗದ ಕಾರಣ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ಪಜೀರಿನ ಅರ್ಕಾಣದ ಬಳಿ ಇರುವ ಫಯಾಝ್ ಎಂಬವರಿಗೆ ಸೇರಿದ ಎಚ್ಪಿ ಎಲ್ಪಿಜಿ ಗೋದಾಮಿನ ಬಳಿಯಲ್ಲೇ ಈ ಅಪಘಾತ ಸಂಭವಿಸಿದೆ. ಲಾರಿಯನ್ನು ಗೋದಾಮಿನಿಂದ ಕೊಂಡೊಯ್ಯುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಲಾರಿ ಗೋದಾನಿನ ಆವರಣಗೋಡೆಗೆ ಢಿಕ್ಕಿ ಹೊಡೆದು ಬಳಿಕ ಬೃಹತ್ ಕಂದಕಕ್ಕೆ ಚಲಿಸಿದೆ. ಈ ಸಂದರ್ಭದಲ್ಲಿ ಮರವೊಂದು ಅಡ್ಡ ಸಿಕ್ಕಿದ ಪರಿಣಾಮ ಲಾರಿ ಪಲ್ಟಿಯಾಗುವುದು ತಪ್ಪಿದೆ. ಲಾರಿಯಲ್ಲಿದ್ದ ಚಾಲಕನಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ತಪ್ಪಿದ ಭಾರೀ ಅನಾಹುತ: ಸ್ಥಳೀಯರಲ್ಲಿ ಆತಂಕ
ಗ್ಯಾಸ್ ಸಿಲಿಂಡರ್ ಇದ್ದ ಲಾರಿಯು ಅಪಘಾತಕ್ಕೀಡಾದಾಗ ಸಿಲಿಂಡರ್ ಸೋರಿಕೆಯಾಗಿಲ್ಲ. ಒಂದು ವೇಳೆ ಗ್ಯಾಸ್ ಸೋರಿಕೆಯಾಗಿದ್ದರೆ ಎಲ್ಲಾ ಸಿಲಿಂಡರ್ ಗಳು ಬ್ಲಾಸ್ಟ್ ಆಗಿ ಅರ್ಕಾಣ ಪ್ರದೇಶದಲ್ಲಿಯೇ ದೊಡ್ಡ ಅನಾಹುತ ಸಂಭವಿಸುತ್ತಿತ್ತು. ಅಲ್ಲದೆ ಗೋದಾಮಿನ ಸಮೀಪ ಲಾರಿ ಅವಘಡ ಸಂಭವಿಸಿದ ಜಾಗದಲ್ಲಿ ಹಲವಾರು ಮನೆಗಳು ಇದ್ದು ಮನೆ ಮಂದಿ ಬೆಳಗ್ಗಿನಿಂದಲೇ ಆತಂಕಗೊಂಡಿದ್ದರು.
ಅಗ್ನಿಶಾಮಕ ದಳ-ಸ್ಕೂಟರ್ ಢಿಕ್ಕಿ: ಸವಾರ ಗಂಭೀರ ಗಾಯ
ಅರ್ಕಾಣ ಪ್ರದೇಶದಲ್ಲಿ ಗ್ಯಾಸ್ ಸಿಲಿಂಡರ್ ಲಾರಿ ಉರುಳಿ ಬಿದ್ದ ಸ್ಥಳಕ್ಕೆ ಅನಾಹುತ ತಪ್ಪಿಸಲು ಎರಡು ಅಗ್ನಿಶಾಮಕ ದಳದ ವಾಹನಗಳು ಆಗಮಿಸಿದ್ದು ಈ ಸಂದರ್ಭ ಅಸೈಗೋಳಿ ಬಳಿ ಸ್ಕೂಟರಿಗೆ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ
ಗ್ಯಾಸ್ ಸಿಲಿಂಡರ್ ಲಾರಿಯು ಉರುಳಿ ಬಿದ್ದ ಸಂದರ್ಭ ಅಪಾಯವನ್ನರಿತ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದ ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಗ್ಯಾಸ್ ಸೋರಿಕೆಯ ಬಗ್ಗೆ ಪರಿಶೀಲನೆ ನಡೆಸಿದ್ದರು. ಬಳಿಕ ಗ್ಯಾಸ್ ಸಿಲಿಂಡರ್ ಗಳನ್ನು ಕೆಳಗಿಳಿಸಿ ಲಾರಿಯನ್ನು ಕ್ರೇನ್ ಮೂಲಕ ಮೇಲಕ್ಕೆತ್ತುವ ವ್ಯವಸ್ಥೆ ಮಾಡಲಾಗಿತ್ತು.