ಮೇ 8ರಂದು ನೂತನ ಕೃತಕ ಅವಯವ ಜೋಡಣಾ ಘಟಕ ಉದ್ಘಾಟನೆ
ಉಡುಪಿ, ಮೇ 6: ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಉಡುಪಿ ಜಿಲ್ಲಾ ಘಟಕದಲ್ಲಿ ಮೇ 8ರಂದು ಬೆಳಗ್ಗೆ 10 ಕ್ಕೆ ವಿಶ್ವ ರೆಡ್ಕ್ರಾಸ್ ದಿನಾಚರಣೆ ಹಾಗೂ ನೂತನ ಕೃತಕ ಅವಯವ ಜೋಡಣಾ ಘಟಕವನ್ನು ಉಡುಪಿ ಜಿಲ್ಲಾಧಿಕಾರಿ ಹಾಗೂ ರೆಡ್ಕ್ರಾಸ್ ಸಂಸ್ಥೆಯ ಅಧ್ಯಕ್ಷೆ ಹೆಪ್ಸಿಬಾ ರಾಣಿ ಕೊರ್ಲಪಾಟಿ ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಜಿಲ್ಲಾ ವಿಕಲಚೇತನರ ಪುನರ್ವಸತಿ ಘಟಕದಲ್ಲಿ ಗುರುತಿಸ ಲಾದ 7ಮಂದಿ ಫಲಾನುಭವಿಗಳಿಗೆ ಕೃತಕ ಅವಯವಗಳನ್ನು ಜಿಲ್ಲಾಧಿಕಾರಿಗಳು ಹಸ್ತಾಂತರಿಸುವರು. ವಿವಿಧ ಕಾಲೇಜುಗಳ ಯುವ ರೆಡ್ಕ್ರಾಸ್ ಘಟಕದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ಡಾ. ಜಿ. ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜು, ಮಾಧವ ಪೈ ಮೆಮೋರಿಯಲ್ ಕಾಲೇಜು, ಶ್ರೀಮತಿ ರುಕ್ಮಿಣಿ ಶೆಡ್ತಿ ಮೆಮೋರಿಯಲ್ ಸರಕಾರಿ ಪ್ರಥಮ ದರ್ಜೆ ಕಾಲೇಜು, ಉಪೇಂದ್ರ ಪೈ ಸ್ಮಾರಕ ಕಾಲೇಜು, ಭಂಡಾರ್ಕಾರ್ಸ್ ಆರ್ಟ್ಸ್ ಎಂಡ್ ಸಾಯಿನ್ಸ್ ಕಾಲೇಜು, ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾರ್ಕಳ ಮತ್ತು ವಿದ್ಯಾರತ್ನ ಕಾಲೇಜು ಆಫ್ ನರ್ಸಿಂಗ್ನ ಯೋಜನಾಧಿಕಾರಿಗಳನ್ನು ಗುರುತಿಸಿ, ಸನ್ಮಾನಿಸಲಾಗುವುದು. ವಿದ್ಯಾರ್ಥಿಗಳಿಗೆ ನಡೆದ ಕ್ವಿಜ್ ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಗುವುದು.
ಈ ಕಾರ್ಯಕ್ರಮಕ್ಕೆ ಹೊಸದಿಲ್ಲಿಯ ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಆಡಳಿತ ಸಮಿತಿಯ ಸದಸ್ಯ ಬಸ್ರೂರು ರಾಜೀವ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ರುವರು. ಡಾ. ಉಮೇಶ್ ಪ್ರಭು ಅಧ್ಯಕ್ಷತೆ ವಹಿಸಲಿದ್ದು, ಉಪ ಸಭಾಪತಿ ಡಾ. ಅಶೋಕ್ ಕುಮಾರ್ ವೈ.ಜಿ., ಗೌರವ ಖಜಾಂಜಿ ಟಿ. ಚಂದ್ರಶೇಖರ್, ಗೌರವ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಕೆ. ಹಾಗೂ ಇತರ ಸದಸ್ಯರು ಉಪಸ್ಥಿತರಿರುವರು.