ಗೃಹ ಸಚಿವರ ದಬ್ಬಾಳಿಕೆ ವಿರುದ್ಧ ಬಿಜೆಪಿ ರಾಜ್ಯಪಾಲರಿಗೆ ಮನವಿ
ಉಡುಪಿ, ಮೇ 6: ರಾಜ್ಯ ಸರಕಾರದ ಗೃಹ ಸಚಿವರ ದಬ್ಬಾಳಿಕೆ, ಅಭಿವ್ಯಕ್ತಿ ಸ್ವಾತಂತ್ರ ಹರಣದ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಉಡುಪಿ ಜಿಲ್ಲಾ ಬಿಜೆಪಿಯು ಉಡುಪಿ ಜಿಲ್ಲಾಧಿಕಾರಿ ಹೆಫ್ಸಿಬಾ ರಾಣಿ ಕೊರ್ಲಪಾಟಿ ಮೂಲಕ ರಾಜ್ಯ ಪಾಲರಿಗೆ ಸೋಮವಾರ ಮನವಿ ಸಲ್ಲಿಸಿತು.
ಕಳೆದ ಕೆಲವು ತಿಂಗಳುಗಳಿಂದ ಸಮ್ಮಿಶ್ರ ಸರಕಾರ ಮಾಧ್ಯಮ ಸೇರಿದಂತೆ ರಾಜ್ಯದ ರಾಜಕೀಯ ಎದುರಾಳಿಗಳನ್ನು ಹತ್ತಿಕ್ಕಲು ಸೇಡಿನ ಕ್ರಮಗಳನ್ನು ನಡೆಸು ತ್ತಿದೆ. ಈ ಬಗ್ಗೆ ಬಿಜೆಪಿ ದೂರುಗಳನ್ನು ನೀಡಿದರೂ ರಾಜ್ಯ ಸರಕಾರ ಯಾವುದೇ ಕ್ರಮ ಜರಗಿಸಿಲ್ಲ ಎಂದು ಮನವಿಯಲ್ಲಿ ದೂರಲಾಗಿದೆ.
ಸರಕಾರದ ಮಂತ್ರಿಗಳನ್ನು ಟೀಕಿಸಿದ ವಿರೋಧ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿ ಭಯದ ವಾತಾವರಣ ನಿರ್ಮಿಸಲಾಗುತ್ತದೆ. ರಾಜ್ಯದಲ್ಲಿ ತುರ್ತು ಪರಿಸ್ಥಿತಿಯ ಕರಾಳ ನೆನಪು ಮರು ಕಳಿಸುವಂತಹ ಹಲವು ಪ್ರಕರಣಗಳು ನಡೆದಿವೆ. ಮಾಧ್ಯಮಗಳನ್ನು ನಿಯಂತ್ರಿ ಸುವ ಸರ್ವಾಧಿಕಾರಿ ಮನೋಭಾವವನ್ನು ಸರಕಾರ ತೋರಿಸುತ್ತಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಜಿಪಂ ಸದಸ್ಯೆ ಗೀತಾಂಜಲಿ ಸುವರ್ಣ, ನಯನ ಗಣೇಶ್, ನಗರಸಭೆ ಸದಸ್ಯರಾದ ಗಿರೀಶ್ ಅಂಚನ್, ಪ್ರಭಾಕರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.