ಮಾಜಿ ಪ್ರಧಾನಿ ರಾಜೀವ ಗಾಂಧಿ ಬಗ್ಗೆ ಮೋದಿ ಹೇಳಿಕೆ: ದ.ಕ ಕಾಂಗ್ರೆಸ್ ಮುಖಂಡರಿಂದ ಆಕ್ರೊಶ
ಮಂಗಳೂರು, ಮೇ 6: ದೇಶವನ್ನು ಪ್ರಗತಿಗೆ ಸಾಕಷ್ಟು ಕೊಡುಗೆ ನೀಡಿದ ಮಹಾನ್ ನಾಯಕ ಮಾಜಿ ಪ್ರಧಾನಿ ರಾಜೀವ ಗಾಂಧಿಯವರ ಬಗ್ಗೆ ಪ್ರಧಾನಿ ಮೋದಿಯಿಂದ ಹತಾಶ ಹೇಳಿಕೆ ವ್ಯಕ್ತವಾಗಿದೆ ಎಂದು ದ.ಕ ಜಿಲ್ಲಾ ಕಾಂಗ್ರೆಸ್ ವಕ್ತಾರ ವಿನಯ ರಾಜ್ ಸುದ್ದಿಗೋಷ್ಠಿಯಲ್ಲಿಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾರ್ಗಿಲ್ ಕಾರ್ಯಾಚರಣೆಯ ಸಂದರ್ಭದಲ್ಲಿ ಬಿಜೆಪಿ ನಾಯಕ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಬೋಪೋರ್ಸ್ ಗನ್‌ಗಳ ಬಗ್ಗೆ ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ.
ಬೋಪೋರ್ಸ್ ಹಗರಣದಲ್ಲಿ ನ್ಯಾಯಾಲಯ ರಾಜೀವ ಗಾಂಧಿಯವರನ್ನು ದೋಷ ಮುಕ್ತಿಗೊಳಿಸಿದ್ದರೂ ಪ್ರಧಾನಿ ಹುದ್ದೆಯಲ್ಲಿರುವ ನರೇಂದ್ರ ಮೋದಿ ಅತ್ಯಂತ ಕೀಳು ಮಟ್ಟದ ಭಾಷೆಯಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ದಿವಂಗತ ರಾಜೀವ ಗಾಂಧಿಯವರ ಬಗ್ಗೆ ಟೀಕೆ ಮಾಡಿರುವುದನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸುವುದಾಗಿ ವಿನಯ ರಾಜ್ ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರತಿನಿಧಿಗಳಾದ ಸಂತೋಷ್ ಕುಮಾರ್ ಶೆಟ್ಟಿ, ಮಾಜಿ ಮನಪಾ ಸದಸ್ಯರಾದ ಅಪ್ಪಿ, ಪ್ರಕಾಶ ಸಾಲ್ಯಾನ್, ಆಶಾ ಡಿ ಸಿಲ್ವ ಸಿ.ಎಂ. ಮುಸ್ತಾಫ ಮೊದಲಾದವರು ಉಪಸ್ಥಿತರಿದ್ದರು.