ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ; ರಾಜ್ಯ ಗೃಹ ಸಚಿವ ಪಾಟೀಲ್ ಜೈಲಿಗೆ: ನಳಿನ್
ದ.ಕ. ಜಿಲ್ಲಾ ಬಿಜೆಪಿಯಿಂದ ಪ್ರತಿಭಟನೆ
ಮಂಗಳೂರು, ಮೇ 6: ಇದೇ ಮೇ 24ರಂದು ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲಿದ್ದು, ಅದೇ ದಿನ ರಾಜ್ಯ ಸರಕಾರ ಪತನವಾಗಲಿದೆ. ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಜೈಲಿಗಟ್ಟಿದ ಪತ್ರಕರ್ತರು, ಬರಹಗಾರರು ಅಂದು ಹೊರಗೆ ಬರಲಿದ್ದಾರೆ. ಗೃಹ ಸಚಿವ ಎಂ.ಬಿ.ಪಾಟೀಲ್ ಜೈಲು ಸೇರಲಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.
ಬಿಜೆಪಿ ಬೆಂಬಲಿಗರು, ರಾಷ್ಟ್ರೀಯ ವಿಚಾರಧಾರೆಯುಳ್ಳ ಸಾಮಾಜಿಕ ಜಾಲತಾಣ ಪ್ರತಿನಿಧಿಗಳು, ಪತ್ರಕರ್ತರನ್ನು ಬಂಧಿಸಿದ ರಾಜ್ಯ ಸರಕಾರದ ನಿಲುವನ್ನು ವಿರೋಧಿಸಿ ದ.ಕ. ಜಿಲ್ಲಾ ಬಿಜೆಪಿ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯದ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಸೇಡಿನ ರಾಜಕಾರಣ ಮಾಡ್ತಿದ್ದಾರೆ. ಅವರ ಕಾರ್ಯ ವೈಖರಿಗಳನ್ನು ಯಾರು ಟೀಕಿಸುತ್ತಾರೊ ಅಂಥವರನ್ನು ಜೈಲಿಗೆ ತಳ್ಳುವ ಹೀನ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಮೇ 23ರ ನಂತರ ಚಿತ್ರಣ ಬದಲಾಗಲಿದೆ ಎಂದರು.
ಮುಖ್ಯಮಂತ್ರಿ ಹುದ್ದೆಯ ಮೇಲೆ ಈಗಾಗಲೇ ಕಾಂಗ್ರೆಸ್ ನಾಯಕರು ಕಣ್ಣಿಟ್ಟಿದ್ದಾರೆ. ಕುಮಾರಸ್ವಾಮಿ ತಮ್ಮ ಹುದ್ದೆ ಉಳಿಸಿಕೊಳ್ಳುವುದಕ್ಕಾಗಿ ಸಾಹಸ ಪಡುವಂತಾಗಿದೆ. ಇದರಿಂದಾಗಿ ಅಭಿವೃದ್ಧಿ ಕಾರ್ಯಗಳು ಕಡೆಗಣಿಸಲ್ಪಟ್ಟಿವೆ. ವಿಚಲಿತರಾದ ಮುಖ್ಯಮಂತ್ರಿ ಪತ್ರಕರ್ತರು, ಬರಹಗಾರರನ್ನು ಜೈಲಿಗೆ ಹಾಕುವ ಮೂಲಕ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಸಂಸದರು ಆರೋಪಿಸಿದರು.
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಆಡಳಿತವನ್ನು ಟೀಕಿಸುವ ಪತ್ರಕರ್ತರು, ಸಾಮಾಜಿಕ ಜಾಲತಾಣದ ಪ್ರತಿನಿಧಿಗಳ ಮೇಲೆ ಕೇಸು ಹಾಕಿ ಬಂಧಿಸುವುದು ನ್ಯಾಯಸಮ್ಮತ ಅಲ್ಲವೇ ಅಲ್ಲ. ಮುಖ್ಯಮಂತ್ರಿ, ಗೃಹ ಸಚಿವರಿಗೆ ಪ್ರಜಾಪ್ರಭುತ್ವ ದ ಮೇಲೆ ನಂಬಿಕೆ ಇಲ್ಲ ಎನ್ನುವುದಕ್ಕೆ ಇದು ಸಾಕ್ಷಿ. ತುರ್ತು ಪರಿಸ್ಥಿತಿಯಂತೆ ರಾಜ್ಯ ಸರಕಾರ ನಡೆದುಕೊಳ್ಳುತ್ತಿದೆ ಎಂದು ಹೇಳಿದರು.
ಈ ಸಂದರ್ಭ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಮೋನಪ್ಪ ಭಂಡಾರಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರವಿಶಂಕರ ಮಿಜಾರು, ಮುಖಂಡರಾದ ಸಂಜಯ ಪ್ರಭು, ಸುಧೀರ್ ಹೆಗ್ಡೆ, ವಿಜಯ ಕುಮಾರ್ ಶೆಟ್ಟಿ, ಭಾಸ್ಕರಚಂದ್ರ ಶೆಟ್ಟಿ ಮತ್ತಿತರರು ಇದ್ದರು.