ಆರೋಗ್ಯ ಕ್ಷೇತ್ರದಲ್ಲಿ ಗೋಮೂತ್ರ: ವಾಸ್ತವವೇನು?
ಪಶು ಜೀವಶಾಸ್ತ್ರದ ಬಗ್ಗೆ ಅಧ್ಯಯನ ಮಾಡುವ ಪ್ರಮುಖ ಸಂಶೋಧನಾ ಸಂಸ್ಥೆಗಳಲ್ಲೂ ಗೋಮೂತ್ರದ ಉಪಯುಕ್ತತೆ ಬಗ್ಗೆ ಮಾಹಿತಿಯಿರುವ ಯಾವುದೇ ದಾಖಲೆಗಳು ಇಲ್ಲ. ವಾಸ್ತವದಲ್ಲಿ, ಕೆಲವೊಂದು ಅಧ್ಯಯನಗಳ ಪ್ರಕಾರ, ಗೋಮೂತ್ರ ಸೇವನೆಯಿಂದ ವಿಷಕಾರಿ ಪರಿಣಾಮ ಉಂಟಾಗಬಹುದು ಮತ್ತು ಸೋಂಕುಗಳನ್ನು ಉಂಟು ಮಾಡಬಹುದು ಮತ್ತು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು.
ಬಿಜೆಪಿಯ ಭೋಪಾಲ್ನ ಲೋಕಸಭಾ ಅಭ್ಯರ್ಥಿ ಪ್ರಜ್ಞಾ ಠಾಕೂರ್ ತನ್ನ ಕ್ಯಾನ್ಸರ್ ಗೋಮೂತ್ರ ಸೇವನೆಯಿಂದ ಗುಣವಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಅವರ ಈ ಹೇಳಿಕೆಯಿಂದ, ನಮ್ಮ ದೇಶದಲ್ಲಿ ವೈದ್ಯಕೀಯ ವಿಜ್ಞಾನ ಕಟ್ಟುಕತೆಗಳನ್ನು ಆಧರಿಸಿರುವುದೇ ಅಥವಾ ಸಾಕ್ಷಿ ಆಧಾರಿತ ಯೋಚನೆಗಳಿಂದಲೇ ಎಂಬ ವಿಷಯವನ್ನು ಚರ್ಚೆಗೆ ತಂದಿತು.
ಇದೇ ವೇಳೆ, ಲಕ್ನೋದ ರಾಮ ಮನೋಹರ್ ಲೋಹಿಯಾ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಶಸ್ತ್ರಚಿಕಿತ್ಸಕ ಡಾ.ಎಸ್.ಎಸ್ ರಜಪೂತ್. ತಾನು ಠಾಕೂರ್ ಅವರ ಸ್ತನಗಳ ಮೇಲೆ ಮೂರು ಶಸ್ತ್ರ ಚಿಕಿತ್ಸೆಗಳನ್ನು ನಡೆಸಿ ಕ್ಯಾನ್ಸರನ್ನು ತೆಗೆದಿರುವುದಾಗಿ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಯಿಂದ ಠಾಕೂರ್ ಅವರ ಹೇಳಿಕೆ ಸುಳ್ಳೆಂಬುದು ಸಾಬೀತಾಗುತ್ತದೆ.
ಹಿಂದುತ್ವ ಬ್ರಿಗೇಡ್ ಗೋಮೂತ್ರ ಸೇವನೆಯ ವಿವಿಧ ಲಾಭದಾಯಕ ಪರಿಣಾಮಗಳ ಬಗ್ಗೆ ಹೇಳಿಕೊಂಡು ಬರುತ್ತಲೇ ಇದೆ. ಅದರಲ್ಲೂ 2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರವಂತೂ ಈ ಪ್ರಯತ್ನಗಳನ್ನು ದುಪ್ಪಟ್ಟುಗೊಳಿಸಲಾಗಿದೆ. ಆದರೆ ಅವರ ಹೇಳಿಕೆಗಳು ಪುರಾವೆಗಳ ಬೆಂಬಲವನ್ನು ಹೊಂದಿಲ್ಲ. ಮಾನವ ಸೇವನೆಗೆ ಗುರುತಿಸಲಾಗುವ ಯಾವುದೇ ವಸ್ತುವೂ ಅದು ಉಪಯುಕ್ತವಾಗಿದೆ ಮತ್ತು ಅಪಾಯಕಾರಿಯಾಗಿಲ್ಲ ಎಂಬುದನ್ನು ಸಾಬೀತುಪಡಿಸಲು ಪರೀಕ್ಷೆಗೊಳಪಡಬೇಕಾಗುತ್ತದೆ. ಮುಖ್ಯವಾಗಿ, ಔಷಧಿ ಎಂದು ಹೆಸರಿಸಲಾಗಿರುವ ಉತ್ಪನ್ನಗಳು. ಗೋಮೂತ್ರದ ವಿಷಯದಲ್ಲಿ ಹೀಗಾಗಿಲ್ಲ.
ಏನು ಅಗತ್ಯವಿದೆಯೋ ಅದನ್ನು ಬಳಸಿಕೊಳ್ಳುವ ಮತ್ತು ಅನಗತ್ಯ ಹಾಗೂ ಅಪಾಯಕಾರಿ ವಸ್ತುಗಳನ್ನು ಹೊರಗೆಡವಲು ನಮ್ಮ ದೇಹದಲ್ಲಿ ಸಮರ್ಥವಾದ ವ್ಯವಸ್ಥೆಯಿದೆ. ನಾವು ತಿನ್ನುವ ಆಹಾರದ ಒಂದು ಭಾಗ ಜೀರ್ಣವಾಗುತ್ತದೆ ಮತ್ತು ಉಳಿದ ಭಾಗ ದೇಹದಿಂದ ಹೊರಗೆ ಹೋಗುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಜೀರ್ಣಕ್ರಿಯೆಯ ಸಂದರ್ಭದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳು ಕಿಡ್ನಿಗಳ ಮೂಲಕ ಶುದ್ಧೀಕರಣಗೊಂಡು ಮೂತ್ರದ ರೂಪದಲ್ಲಿ ದೇಹದಿಂದ ಹೊರಗೆ ಬರುತ್ತದೆ. ಬಹುತೇಕ ಸಸ್ತನಿಗಳ ಹೊಟ್ಟೆ ಇದೇ ರೀತಿ ಕಾರ್ಯಾಚರಿಸುವುದರಿಂದ ಅವುಗಳ ಮೂತ್ರದ ರಾಸಾಯನಿಕ ಅಂಶವೂ ಸಾಮಾನ್ಯವಾಗಿ ಒಂದೇ ಆಗಿರುತ್ತದೆ.
ಕಿಡ್ನಿಯು ರಕ್ತಪ್ರವಾಹದಿಂದ ತ್ಯಾಜ್ಯಗಳನ್ನು ತೆಗೆಯುವ ವೇಳೆ ಉತ್ಪತಿಯಾಗುವ ದ್ರವವೇ ಮೂತ್ರ. ಗೋವು ಮತ್ತು ಮಾನವನ ಮೂತ್ರ ಮುಖ್ಯವಾಗಿ ನೀರು, ಯೂರಿಯಾ, ಸೋಡಿಯಂ, ಕ್ಲೋರೈಡ್, ಸಲ್ಫೇಟ್, ಫಾಸ್ಪೇಟ್, ಪೊಟಾಶಿಯಂ, ಕ್ರಿಯೆಟಿನೈನ್, ಅಮೋನಿಯ, ಯೂರಿಕ್ ಆಮ್ಲ ಇತ್ಯಾದಿಗಳನ್ನು ಹೊಂದಿರುತ್ತದೆ. ಪರಿಣಾಮದಲ್ಲೂ, ಗೋಮೂತ್ರ ಮಾನವನ ಮೂತ್ರಕ್ಕಿಂತ ವಿಭಿನ್ನವಾಗೇನೂ ಇರುವುದಿಲ್ಲ. ಹಾಗಾಗಿ ಗೋಮೂತ್ರ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು; ಮಾನವನ ಮೂತ್ರ ಕುಡಿಯಲು ಯೋಗ್ಯವಲ್ಲ ಎನ್ನುವುದನ್ನು ನಂಬಲು ಸಾಧ್ಯವಿಲ್ಲ.
ಈ ವಿಷಯದಲ್ಲಿ ಇನ್ನಷ್ಟು ಸ್ಪಷ್ಟನೆ ಪಡೆಯುವ ಉದ್ದೇಶದಿಂದ ಲೇಖಕರು ಮಾಹಿತಿ ಹಕ್ಕಿನಡಿ ಪಶುಸಂಗೋಪನಾ, ಡೇರಿ ಮತ್ತು ಮೀನುಗಾರಿಕೆ ಇಲಾಖೆಗೆ ಅರ್ಜಿ ಹಾಕಿದರು. ಅದಕ್ಕುತ್ತರವಾಗಿ, ಗೋಮೂತ್ರ ಸೇವನೆಯ ಒಳಿತಿನ ಬಗ್ಗೆ ಜಾನುವಾರು ವಿಭಾಗದ ಸಿಪಿಐಒದಲ್ಲಿ ಯಾವುದೇ ಮಾಹಿತಿಯನ್ನು ಶೇಖರಿಸಿಡಲಾಗಿಲ್ಲ ಎಂದು ಇಲಾಖೆ ತಿಳಿಸಿತು. ದೇಶದ ಅಗ್ರ 14 ಸರಕಾರಿ ಜಾನುವಾರು ವಿಶ್ವವಿದ್ಯಾನಿಲಯಗಳಲ್ಲಿ ಒಂದಾಗಿರುವ ಲುಧಿಯಾನದ ಗುರು ಅಂಗದ ದೇವ ಜಾನುವಾರು ಮತ್ತು ಪಶು ವಿಜ್ಞಾನ ವಿಶ್ವವಿದ್ಯಾನಿಲಯದ 22 ಇಲಾಖೆಗಳಿಗೆ ಹಾಕಲಾದ ಅರ್ಜಿಗೂ ಇದೇ ರೀತಿಯ ಉತ್ತರ ಸಿಕ್ಕಿತು.
ಅಂದರೆ, ಪಶು ಜೀವಶಾಸ್ತ್ರದ ಬಗ್ಗೆ ಅಧ್ಯಯನ ಮಾಡುವ ಪ್ರಮುಖ ಸಂಶೋಧನಾ ಸಂಸ್ಥೆಗಳಲ್ಲೂ ಗೋಮೂತ್ರದ ಉಪಯುಕ್ತತೆ ಬಗ್ಗೆ ಮಾಹಿತಿಯಿರುವ ಯಾವುದೇ ದಾಖಲೆಗಳು ಇಲ್ಲ. ವಾಸ್ತವದಲ್ಲಿ, ಕೆಲವೊಂದು ಅಧ್ಯಯನಗಳ ಪ್ರಕಾರ, ಗೋಮೂತ್ರ ಸೇವನೆಯಿಂದ ವಿಷಕಾರಿ ಪರಿಣಾಮ ಉಂಟಾಗಬಹುದು ಮತ್ತು ಸೋಂಕುಗಳನ್ನು ಉಂಟು ಮಾಡಬಹುದು ಮತ್ತು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು.
ಗೋಮೂತ್ರ, ಬೆಟಡಿನ್ ಎಂಬ ಕ್ರಿಮಿನಾಶಕ ವಸ್ತುವಿಗೆ ಪರ್ಯಾಯವಾಗಬಹುದು ಎಂಬ ಬಾಬಾ ರಾಮ್ದೇವ್ ಸೇರಿದಂತೆ ಹಲವರ ಹೇಳಿಕೆಯನ್ನು ಅನೇಕ ವಿಜ್ಞಾನಿಗಳು ತಳ್ಳಿಹಾಕಿದ್ದಾರೆ. ಈ ಬಗ್ಗೆ ಪ್ರಯೋಗ ನಡೆಸಿರುವ ರಾಮ್ದೇವ್, ಗಾಜಿನಲ್ಲಿದ್ದ ಶುದ್ಧ ನೀರಿಗೆ ಬೆಟಡಿನ್ ಸೇರಿಸಿದಾಗ ಆ ನೀರು ಕೆಂಪು ಮಿಶ್ರಿತ ಕಂದು ಬಣ್ಣಕ್ಕೆ ತಿರುಗುತ್ತದೆ. ನಂತರ ಅದಕ್ಕೆ ವಾಪಸ್ ಗೋಮೂತ್ರ ಸೇರಿಸಿದಾಗ ಗಾಜಿನಲ್ಲಿದ್ದ ನೀರು ಪುನಃ ಬಣ್ಣರಹಿತವಾಗುತ್ತದೆ ಎನ್ನುವುದನ್ನು ತೋರಿಸಿದ್ದರು. ಇದು ಯಾವ ಪ್ರಾಣಿಯ ಮೂತ್ರದಿಂದಲೂ ಸಾಧ್ಯವಾಗಿದೆ. ಯಾಕೆಂದರೆ, ಮೂತ್ರದಲ್ಲಿರುವ ಸೋಡಿಯಂ ತಿಯೋಸಲ್ಫೇಟ್ ಬೆಟಡಿನ್ನಲ್ಲಿರುವ ಟ್ರಯೊಡೈಡ್ ಜೊತೆ ಸೇರಿ ಸೋಡಿಯಂ ಐಯೊಡೈಡ್ ಆಗಿ ಬದಲಾಗುತ್ತದೆ. ಇದು ಒಂದು ಬಣ್ಣರಹಿತ ರಾಸಾಯನಿಕವಾಗಿದೆ.
ಜಾನುವಾರು ಇತಿಹಾಸತಜ್ಞ ಡಿ.ಎನ್. ಝಾ ಪ್ರಕಾರ, ಗೋವಿನಿಂದ ಪಡೆಯುವ ಉತ್ಪನ್ನಗಳಾದ ಹಾಲು, ಮೊಸರು, ಬೆಣ್ಣೆ, ಸೆಗಣಿ ಮತ್ತು ಮೂತ್ರವನ್ನು ಒಟ್ಟಾಗಿ ಪಂಚಗವ್ಯ ಎಂದು ಹೆಸರಿಸಲಾಗಿದ್ದು ಮಧ್ಯಮ ಯುಗದಲ್ಲಿ ಶುದ್ಧೀಕರಣ ಕ್ರಿಯೆಗಳಲ್ಲಿ ಪ್ರಮುಖ ಪಾತ್ರವಹಿಸುತ್ತಿತ್ತು. ಆದರೆ ಸಂಸ್ಕೃತದ ಅನೇಕ ಪುಸ್ತಕಗಳಲ್ಲಿ ಮಹಿಳೆಯರು ಪಂಚಗವ್ಯವನ್ನು ಬಳಸುವುದರ ಮೇಲೆ ನಿಷೇಧ ಹೇರಲಾಗಿರುವ ಬಗ್ಗೆ ಉಲ್ಲೇಖಿಸಲಾಗಿದೆ ಮತ್ತು ಕೆಳಜಾತಿಯ ವ್ಯಕ್ತಿ ಗೋಮೂತ್ರ ಕುಡಿದರೆ ಅವನಿಗೆ ನರಕ ಪ್ರಾಪ್ತಿಯಾಗುವುದು ಎಂದು ತಿಳಿಸಲಾಗಿದೆ.
ಇಂತಹ ಆಚರಣೆಗಳು ಗೋಮೂತ್ರ ಮಾನವ ಆರೋಗ್ಯದ ಮೇಲೆ ಮಾಡುವ ಪರಿಣಾಮಗಳ ಬಗ್ಗೆ ಮತ್ತಷ್ಟು ಸಂಶಯ ಮೂಡಿಸುತ್ತದೆ. ಗೋಮೂತ್ರವನ್ನು ಬಳಸುವ ಕಲ್ಪನೆಗೆ ನಂಬಿಕೆಯ ಬೆಂಬಲವಿದೆಯೇ ಹೊರತು ವಿಜ್ಞಾನದ್ದಲ್ಲ, ಮತ್ತು ಇತ್ತೀಚೆಗೆ ಈ ನಂಬಿಕೆಯಲ್ಲಿ ಏರಿಕೆಯುಂಟಾಗಲು ಕಾರಣ ಸಂಘ ಪರಿವಾರದ ಹಿಂದುತ್ವ ಸಿದ್ಧಾಂತ ಮತ್ತು ಭಾರತವನ್ನು ಮತ್ತೆ ಮಧ್ಯಮ ಯುಗಕ್ಕೆ ಕೊಂಡೊಯ್ಯುವ ಉದ್ದೇಶ.
ಔಷಧಿ ಕಂಪೆನಿಗಳು ಮತ್ತು ಆರೋಗ್ಯ ಸಚಿವಾಲಯ ಜೊತೆಯಾಗಿ ಈ ಡಂಭಾಚಾರದ ಪ್ರಚಾರವನ್ನು ತಡೆಯಲು ಇದು ಸಕಾಲವಾಗಿದೆ. ಇಂತಹ ಅವೈಜ್ಞಾನಿಕ ಮತ್ತು ಅವಾಸ್ತವ ಯೋಚನೆಗಳನ್ನು ಹರಡುವುದು ಪ್ರಜ್ಞಾ ಠಾಕೂರ್ ಅವರ ನಾಮಪತ್ರವನ್ನು ರದ್ದುಗೊಳಿಸಲು ಸಾಕಷ್ಟು ಕಾರಣ ಒದಗಿಸುತ್ತದೆಯೇ ಎನ್ನುವುದನ್ನು ಚುನಾವಣಾ ಆಯೋಗ ಪರಿಗಣಿಸಬೇಕು.
ಕೃಪೆ: Thewire.in