ಉಡುಪಿ: ನಗರಕ್ಕೆ ಟ್ಯಾಂಕರ್ ನೀರು ಸರಬರಾಜು ಮಾಡಿ; ಜಿಲ್ಲಾಧಿಕಾರಿಗಳಿಗೆ ಶಾಸಕರ ಮನವಿ
ಉಡುಪಿ, ಮೇ 7: ಉಡುಪಿ ನಗರಸಭೆಗೆ ನೀರುಣಿಸುವ ಬಜೆ ಅಣೆಕಟ್ಟಿನಲ್ಲಿ ಕಳೆದ ನಾಲ್ಕು ದಿನಗಳಿಂದ ಪಂಪಿಂಗ್ ನಡೆಯುತ್ತಿಲ್ಲ. ಜನರು ನೀರಿಲ್ಲದೇ ಪರದಾಡುವಂತಾಗಿದೆ. ಆದುದರಿಂದ ನಾಳೆಯಿಂದಲೇ ನಗರಸಭೆಯ ಎಲ್ಲಾ ವಾರ್ಡುಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಅನುಮೋದನೆ ನೀಡುವಂತೆ ಉಡುಪಿ ಶಾಸಕ ಕೆ.ರಘುಪತಿ ಭಟ್ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರಲ್ಲಿ ಮನವಿ ಮಾಡಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗ ನಾಲ್ಕು ವಾರ್ಡುಗಳಿಗೆ ಟ್ಯಾಂಕರ್ ನೀರು ಸರಬರಾಜು ಮಾಡಲು ಅನುಮತಿ ನೀಡಲಾಗಿದೆ. ಅವುಗಳನ್ನೇ ಬಳಸಿಕೊಂಡು ಎಲ್ಲಾ ವಾರ್ಡುಗಳಿಗೆ ಟ್ಯಾಂಕರ್ ಮೂಲಕ ನೀರು ನೀಡುವಂತೆ ಅವರು ಆಗ್ರಹಿಸಿದರು.
ಚುನಾವಣಾ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಈ ಕುರಿತು ತಮಗೆ ಜಿಲ್ಲಾಧಿಕಾರಿ ಹಾಗೂ ನಗರಸಭಾ ಅಧಿಕಾರಿಗಳ ಸಭೆ ಕರೆದು ಚರ್ಚಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಕಿವುಡಾಗಿದ್ದಾರೆ. ಪ್ರತಿಯೊಂದಕ್ಕೂ ನೀತಿ ಸಂಹಿತೆಯನ್ನೇ ನೆಪವಾಗಿ ಬಳಸಿಕೊಳ್ಳುತಿದ್ದಾರೆ ಎಂದವರು ದೂರಿದರು.
ಅಧಿಕಾರಿಗಳು ಸ್ವಲ್ಪ ವಿವೇಚನೆಯಿಂದ ಸರಿಯಾಗಿ ಕಾರ್ಯನಿರ್ವಹಿಸಿದ್ದರೆ ಉಡುಪಿಗೆ ಖಂಡಿತವಾಗಿಯೂ ನೀರಿನ ಸಮಸ್ಯೆ ಬರುತ್ತಿರಲಿಲ್ಲ. ಇನ್ನೂ 20-25 ದಿನಗಳಿಗಾಗುವಷ್ಟು ನೀರು ಶಿರೂರು ಅಣೆಕಟ್ಟು, ಮಾಣೈ ಸೇತುವೆ, ಭಂಡಾರಿಬೆಟ್ಟು, ಪುತ್ತಿಗೆ ಪರಿಸರದ ಸ್ವರ್ಣನದಿಯ ಹೊಂಡಗಳಲ್ಲಿ ಸಂಗ್ರಹವಾಗಿದೆ. ಅವುಗಳನ್ನು ಈ ಮೊದಲೇ ಡ್ರೆಜ್ಜಿಂಗ್ ಮೂಲಕ ಪಂಪ್ ಮಾಡಿದ್ದರೆ, ಈಗಲೂ ಉಡುಪಿಗೆ ನೀರು ನೀಡಲು ಸಾಧ್ಯವಿತ್ತು ಎಂದವರು ನುಡಿದರು.
ಈ ಬಾರಿ ಕಳೆದ ಸೆಪ್ಟಂಬರ್ ಬಳಿಕ ಉಡುಪಿ ನಗರ ಆಸುಪಾಸಿನಲ್ಲಿ ಮಳೆಯೇ ಆಗಿಲ್ಲ. ಡಿಸೆಂಬರ್ ಬಳಿಕ ಮಾರ್ಚ್-ಎಪ್ರಿಲ್ ತಿಂಗಳಲ್ಲಿ ಸಾಮಾನ್ಯವಾಗಿ ಸುರಿಯುವ ಮುಂಗಾರುಪೂರ್ವ ಮಳೆ ಈ ಬಾರಿ ಒಂದು ಹನಿ ಕೂಡಾ ಬಂದಿಲ್ಲ. ಇದರಿಂದ ಎಚ್ಚೆತ್ತು ಅಧಿಕಾರಿಗಳು ಪೂರ್ವಸಿದ್ಧತೆ ನಡೆಸದೇ ಇರುವುದೇ ಈಗಿನ ಪರಿಸ್ಥಿತಿಗೆ ಕಾರಣ ಎಂದವರು ಆರೋಪಿಸಿದರು.
ಕಳೆದ ಎ.26ರಂದು ಬಜೆಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ ಕೂಡಲೇ ತುರ್ತು ಕ್ರಮ ಕೈಗೊಳ್ಳುವಂತೆ ನಾನು ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದೆ. ಅವರು ತಾನು ಕ್ರಮಕ್ಕೆ ನಗರಸಭೆಗೆ ತಿಳಿಸಿರುವುದಾಗಿ ಹೇಳಿದರೆ, ಪೌರಾಯುಕ್ತರು ಟ್ಯಾಂಕರ್ ನೀರು ಸರಬರಾಜು ಹಾಗೂ ಡ್ರೆಜ್ಜಿಂಗ್ಗೆ ಜಿಲ್ಲಾಧಿಕಾರಿ ಅನುಮತಿ ನೀಡಬೇಕಾಗಿದೆ ಎಂದು ಸಬೂಬು ಹೇಳುತ್ತಾ ಬಂದರು. ಒಟ್ಟಿನಲ್ಲಿ ಅಧಿಕಾರಿಗಳ ಬೇಜವಾಬ್ದಾರಿಗೆ ಜನರು ಸಂಕಷ್ಟಕ್ಕೊಳಗಾಗಿದ್ದಾರೆ ಎಂದರು.
ನಗರಸಭೆ ಚುನಾವಣೆ ನಡೆದು 9 ತಿಂಗಳು ಕಳೆದರೂ, ಚುನಾಯಿತ ಸದಸ್ಯರನ್ನೊಳಗೊಂಡ ನಗರಸಭೆ ಇನ್ನೂ ಅಸ್ತಿತ್ವಕ್ಕೆ ಬಂದಿಲ್ಲ. ಇದರಿಂದ ಅಧಿಕಾರಿಗಳ ಮೇಲೆ ಯಾವುದೇ ನಿಯಂತ್ರಣ ಇಲ್ಲದಂತಾಗಿದೆ. ಈಗ ಸಮಸ್ಯೆ ಬಂದಾಗ ಜನರು ತಾವು ಆಯ್ಕೆ ಮಾಡಿದ ಜನಪ್ರತಿನಿಧಿಗಳನ್ನು ಕೇಳುತಿದ್ದು, ಇದರಿಂದ ನಗರಸಭಾ ಸದಸ್ಯರು ಸದ್ಯಕ್ಕೆ ತಮ್ಮ ಕೈಯಾರೆ ದುಡ್ಡು ಖರ್ಚು ಮಾಡಿ ತಮ್ಮ ವಾರ್ಡಿಗೆ ಟ್ಯಾಂಕರ್ ನೀರು ತಂದು ಹಂಚುತಿದ್ದಾರೆ ಎಂದು ರಘುಪತಿ ಭಟ್ ನುಡಿದರು.
ರಾಜ್ಯ ಸರಕಾರಕ್ಕೆ ಆಗ್ರಹ: ಸ್ವರ್ಣ ಕುಡಿಯುವ ನೀರು ಯೋಜನೆಯ ಎರಡನೇ ಹಂತ ವಿಫಲವಾಗಿದೆ ಎಂದು ಬಿಂಬಿಸಲು ಯಾರೋ ಕೆಲವರು ಈ ಹುನ್ನಾರ ಮಾಡುತ್ತಿರಬಹುದೆಂಬ ಸಂಶಯ ತಮಗೆ ಬರುತ್ತಿದೆ ಎಂದು ಹೇಳಿದ ಭಟ್, ಕುಡಿಯುವ ನೀರು ವಿಷಯದ ಕುರಿತು ಆಧಿಕಾರಿಗಳೊಂದಿಗೆ ಸಭೆ ನಡೆಸಲು ಶಾಸಕರಿಗೆ ಅವಕಾಶ ನೀಡುವಂತೆ ಚುನಾವಣಾ ನೀತಿ ಸಂಹಿತೆಯಲ್ಲಿ ಸಡಿಲಿಕೆ ಮಾಡುವಂತೆ ಕೇಳಲು ತಾವು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳನ್ನು ಆಗ್ರಹಿಸುವುದಾಗಿ ತಿಳಿಸಿದರು.
ಶುಕ್ರವಾರ ವಿಶೇಷ ಪೂಜೆ: ಈ ನಡುವೆ ಸೋಮವಾರ ತಾವು ಪರ್ಯಾಯ ಫಲಿಮಾರು ಶ್ರೀಗಳನ್ನು ಭೇಟಿಯಾಗಿ, ಕುಡಿಯುವ ನೀರಿನ ಸಮಸ್ಯೆಯಿಂದ ಪಾರಾಗಲು ವರುಣನ ಕೃಪೆಗಾಗಿ ಉಡುಪಿ ಶ್ರೀಕೃಷ್ಣ, ಮುಖ್ಯಪ್ರಾಣ, ಅನಂತೇಶ್ವರ, ಚಂದ್ರವೌಳೀಶ್ವರನಿಗೆ ವಿಶೇಷ ಪ್ರಾರ್ಥನೆ ಹಾಗೂ ಪೂಜೆ ನಡೆಸುವಂತೆ ಕೋರಿದ್ದು, ಅವರು ಶುಕ್ರವಾರ ಸಂಜೆ 6:00 ಗಂಟೆಗೆ ವಿಶೇಷ ಪೂಜೆ ನಡೆಸಲು ಒಪ್ಪಿರುವುಗಾಗಿ ಭಟ್ ನುಡಿದರು.
ಹೀಗಾಗಿ ಉಡುಪಿ, ಆಸುಪಾಸಿನ ಎಲ್ಲಾ ದೇವಸ್ಥಾನ, ಮಸೀದಿ, ಚರ್ಚುಗಳಲ್ಲಿ ಅವರವರ ನಂಬಿಕೆಗನುಗುಣವಾಗಿ ಮಳೆಗಾಗಿ ಪ್ರಾರ್ಥಿಸುವಂತೆ ತಾವು ಎಲ್ಲಾ ಧರ್ಮದವರನ್ನೂ ವಿನಂತಿಸುವುದಾಗಿ ರಘುಪತಿ ಭಟ್ ನುಡಿದರು. ಬುದವಾರ ಸಂಜೆ ಕರಂಬಳ್ಳಿ ವೆಂಕಟರಮಣ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಮ್ಮಿಕೊಂಡಿರುವುದಾಗಿ ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿಯ ನಗರಸಭಾ ಸದಸ್ಯರಾದ ಪ್ರಭಾಕರ ಪೂಜಾರಿ, ಮಂಜುನಾಥ ಮಣಿಪಾಲ, ಶ್ರೀಶನಾಯಕ್, ಬಾಲಕೃಷ್ಣ ಶೆಟ್ಟಿ, ಗಿರೀಶ್ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.