ಅಕ್ರಮ ಮರಳು ಸಾಗಾಟ: ಚಾಲಕರ ಸಹಿತ 2 ಲಾರಿ ವಶ
ಕಾಪು, ಮೇ 7: ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಎರಡು ಲಾರಿ ಹಾಗೂ ಚಾಲಕರನ್ನು ಕಾಪು ಪೊಲೀಸರು ಪ್ರತ್ಯೇಕ ಪ್ರಕರಣಗಳಲ್ಲಿ ವಶ ಪಡಿಸಿಕೊಂಡಿದ್ದಾರೆ.
ಮೇ 6ರಂದು ರಾತ್ರಿ 9.30ರ ಸುಮಾರಿಗೆ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಕ್ರಮವಾಗಿ ಮರಳು ಸಾಗಿಸು ತ್ತಿದ್ದ ಲಾರಿಯನ್ನು ಪೊಲೀಸರು ಉದ್ಯಾವರ ಸಮೀಪ ತಡೆದು ನಿಲ್ಲಿಸಿದ್ದು, ಲಾರಿ ಚಾಲಕ ಹಾಸನದ ಮಂಜುನಾಥ(24) ಎಂಬಾತನನ್ನು ಬಂಧಿಸಿದ್ದಾರೆ. ಲಾರಿ ಸಮೇತ ಅದರಲ್ಲಿದ್ದ 17,000ರೂ. ಮೌಲ್ಯದ 17 ಟನ್ ಮರಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮೇ 7ರಂದು ನಸುಕಿನ ವೇಳೆ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬರುತ್ತಿರುವ ಲಾರಿಯನ್ನು ಕಾಪು ಪೊಲೀಸರು ಕಟಪಾಡಿ ಸಮೀಪ ತಡೆದು ನಿಲ್ಲಿಸಿದ್ದು, ಚಾಲಕ ಹಾಸನದ ಪ್ರಸನ್ನ ಎಚ್.ಆರ್. (32) ಎಂಬಾತನನ್ನು ಬಂಧಿಸಿದ್ದಾರೆ. ಲಾರಿ ಸಹಿತ ಅದರಲ್ಲಿದ್ದ 17,000ರೂ. ಮೌಲ್ಯದ 17ಟನ್ ಮರಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.