ಚಿಕಿತ್ಸೆಯ ಬಗ್ಗೆ ಸಮಿತಿ ಶಂಕೆ ವ್ಯಕ್ತಪಡಿಸಿದರೆ ಸಿಬಿಐ ತನಿಖೆಯಾಗಲಿ: ಹಿರಿಯ ವಕೀಲರ ಆಗ್ರಹ
ಡಾ.ಮಧುಕರ ಶೆಟ್ಟಿ ಸಾವು ಪ್ರಕರಣ
ಮಂಗಳೂರು : ಹಿರಿಯ ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿಯವರ ಅಕಾಲಿಕ ಮರಣ ಸಂಶಯಕ್ಕೆ ಕಾರಣವಾಗಿದ್ದು, ಈ ಹಿನ್ನೆಲೆಯಲ್ಲಿ ಅವರಿಗೆ ನೀಡಲಾದ ಚಿಕಿತ್ಸೆಯ ಬಗ್ಗೆ ಪರಿಶೀಲನೆ ನಡೆಸಲು ರಾಜ್ಯ ಸರಕಾರ ನೇಮಿಸಿದ ಸಮಿತಿ ಸಲ್ಲಿಸುವ ವರದಿಯಲ್ಲಿ ಚಿಕಿತ್ಸೆ ಬಗ್ಗೆ ಅನುಮಾನ ವ್ಯಕ್ತವಾದರೆ ಈ ಪ್ರಕರಣವನ್ನು ಸಿಬಿಐಗೆ ವಹಿಸಿ ತನಿಖೆ ನಡೆಸಬೇಕು. ತೆಲಂಗಾಣ ಸರಕಾರ ಕೂಡಾ ಸಿಬಿಐ ತನಿಖೆಗೆ ಕೈಜೋಡಿಸಬೇಕು ಎಂದು ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಸ್.ಪಿ.ಚಂಗಪ್ಪ ಆಗ್ರಹಿಸಿದ್ದಾರೆ.
ನಗರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧುಕರ ಶೆಟ್ಟಿ ಹೃದಯ ಸಂಬಂಧಿ ರೋಗಕ್ಕೆ ಒಳಗಾಗಿ ಹೈದರಾಬಾದ್‌ನ ಕಾಂಟಿನೆಂಟಲ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅಲ್ಲಿ ಅವರಿಗೆ 36 ಗಂಟೆಗಳ ಕಾಲ ಅವರ ಅನಾರೋಗ್ಯಕ್ಕೆ ಸಂಬಂಧಿಸಿದ ಚಿಕಿತ್ಸೆ ನೀಡಲಿಲ್ಲ. ಬದಲಾಗಿ ಎಚ್1ಎನ್1ಗೆ ಚಿಕಿತ್ಸೆ ನೀಡಲಾಗಿತ್ತು ಎಂಬ ಆರೋಪ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಸರಕಾರವು ಐವರು ತಜ್ಞರ ಸಮಿತಿಯೊಂದನ್ನು ನೇಮಿಸಿ ಮಧುಕರ ಶೆಟ್ಟಿಗೆ ನೀಡಲಾದ ಚಿಕಿತ್ಸೆಯ ಬಗ್ಗೆ ಪರಿಶೀಲಿಸಿ ವರದಿ ನೀಡಲು ಸೂಚಿಸಿದೆ.
ಡಾ.ದೇವಿಪ್ರಸಾದ್ ಶೆಟ್ಟಿ ಹಾಗೂ ಡಾ.ಪಿ.ಜಿ.ಗಿರೀಶ್ ಅವರನ್ನೊಳಗೊಂಡ ಸಮಿತಿ ಇನ್ನು ಕೆಲವೇ ದಿನಗಳಲ್ಲಿ ವರದಿ ನೀಡಲಿದೆ ಎಂದವು ಹೇಳಿದರು.
ರಾಜ್ಯದ ಪ್ರತಿಷ್ಠಿತ ಪೊಲೀಸ್ ತರಬೇತಿ ಸಂಸ್ಥೆಯೊಂದಕ್ಕೆ ಮಧುಕರ ಶೆಟ್ಟಿ ಸ್ಮರಣಾರ್ಥ ಅವರ ಹೆಸರಿನಲ್ಲಿ ‘ಡಾ.ಮಧುಕರ ಶೆಟ್ಟಿ ಪೊಲೀಸ್ ತರಬೇತಿ ಕೇಂದ್ರ’ ಎಂದು ನಾಮಕರಣ ಮಾಡಲಾಗುವುದು ಎಂದು ಹಿರಿಯ ಸಚಿವರೊಬ್ಬರು ಹೇಳಿದ್ದರು. ಈ ವಿಚಾರವನ್ನು ಕಾರ್ಯರೂಪಕ್ಕೆ ತರಬೇಕು. ಮಧುಕರ ಶೆಟ್ಟಿ ತಮ್ಮ ಪೊಲೀಸ್ ಇಲಾಖೆ ಸೇವೆಯ ಸಂದರ್ಭ ಪ್ರತಿಪಾದಿಸಿದ ಮೌಲ್ಯಗಳಿಗೆ ಗೌರವ ನೀಡುವ ನಿಟ್ಟಿನಲ್ಲಿ ಮತ್ತು ಮುಂದಿನ ಪೀಳಿಗೆಗೆ ಅವರು ಪ್ರತಿಪಾದಿಸಿದ ಮೌಲ್ಯವನ್ನು ಕೊಂಡೊಯ್ಯುವ ನಿಟ್ಟಿನಲ್ಲಿ ಅವರ ಸ್ಮರಣಾರ್ಥ ಶಾಶ್ವತ ಕಾರ್ಯಕ್ರಮ ರೂಪಿಸಬೇಕು ಎಂದು ಚಂಗಪ್ಪ ಸರಕಾರವನ್ನು ಒತ್ತಾಯಿಸಿದರು.
ವಕೀಲರಾದ ಕಿಶೋರ್ ಡಿ., ಪ್ರಮೋದ್ ಕುಮಾರ್, ವಿಜಯ್ ಮಹಂತೇಶ್ ಹಿರೇಮಠ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.