ಮೇ 13-16: ‘ಕೊರಗರ ಡೋಲು’ ವಸತಿ ಸಹಿತ ಕಮ್ಮಟ
ಉಡುಪಿ, ಮೇ 6: ಕೊರಗ ಸಮುದಾಯದ ಡೋಲು ಸಂಗೀತ ಪ್ರಾಕಾರ ವನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಉಡುಪಿಯ ಪ್ರಾಚೀ ಫೌಂಡೇಶನ್ ವತಿಯಿಂದ ಐಟಿಡಿಪಿಯ ಸಹಯೋಗದೊಂದಿಗೆ ವಸತಿ ಸಹಿತ ಕಮ್ಮಟವನ್ನು ಮೇ 13ರಿಂದ 16ರವರೆಗೆ ಕಾರ್ಕಳ ತಾಲೂಕಿನ ಮಾಳ ಗ್ರಾಮದ ಮಣ್ಣಪಾಪು ಮನೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಮ್ಮಟದಲ್ಲಿ ಕುಂಭಾಶಿ ಹಾಗೂ ಬಾರಕೂರಿನ ಕೊರಗರ ಡೋಲು ತಂಡದ 12 ಮಂದಿ ಭಾಗವಹಿಸಲಿದ್ದು, ಇವರಿಗೆ ಸಂಗೀತಕಾರ ಪ್ರವೀಣ್ ಡಿ. ರಾವ್, ಕಲಾವಿದರುಗಳಾದ ಪ್ರಮದ್ ಕಿರಣ ಹಾಗೂ ವಾರಿಜಾಕ್ಷಿ ವೇಣುಗೋಪಾಲ್ ತರಬೇತಿ ನೀಡಲಿರುವರು ಎಂದು ರಂಗಕರ್ಮಿ ನಂದಕಿಶೋರ್ ಸುದ್ದಿಗೋಷ್ಠಿ ಯಲ್ಲಿಂದು ತಿಳಿಸಿದ್ದಾರೆ.
ಕಮ್ಮಟವನ್ನು ಮೇ 13ರಂದು ಬೆಳಗ್ಗೆ 10ಗಂಟೆ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಊರ್ಮಿಳಾ ಉದ್ಘಾಟಿಸಲಿರುವರು. ಈ ನಾಲ್ಕು ದಿನಗಳಲ್ಲಿ ಪಡೆದ ತರಬೇತಿಯ ಪ್ರದರ್ಶನ ಮೇ 16ರಂದು ಬೆಳಗ್ಗೆ 10:30ಕ್ಕೆ ನಡೆಯಲಿದೆ. ಇದರಲ್ಲಿ ಜಿಲ್ಲಾಧಿಕಾರಿ ಹೆಫ್ಸಿಬಾ ಾಣಿ ಕೊರ್ಲಪಾಟಿ ಭಾಗವಹಿಸಲಿರುವರು.
ತುಳುನಾಡು ಮತ್ತು ಇಲ್ಲಿನ ಜನಸಂಸ್ಕೃತಿಯ ಮೂಲಸೆಲೆಯ ಹುಡುಕಾಟದ ಗುರಿಯೊಂದಿಗೆ ಮುನ್ನಡೆಯುತ್ತಿರುವ ಪ್ರಾಚೀ ಫೌಂಡೇಷನ್, ತುಳುನಾಡಿನ ಮೂಲ ಜನಾಂಗವಾದ ಕೊರಗ ಕಲೆ ಹಾಗೂ ಸಾಂಸ್ಕೃತಿಕ ಸಂಪ್ರದಾಯಗಳನ್ನು ಬದಲಾಗಿರುವ ಕಾಲದ ಅಗತ್ಯಕ್ಕನುಗುಣವಾಗಿ ಸಂರಕ್ಷಿಸಲು ಇಟ್ಟಿರುವ ಮೊದಲ ಹೆಜ್ಜೆ ‘ಕೊರಗ ಡೋಲು-ತಾ’ ಎಂದು ನಂದಕಿಶೋರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಾಚೀ ಫೌಂಡೇಶನ್‌ನ ಸಂಚಾಲಕ ಪುರುಷೋತ್ತಮ ಅಡ್ವೆ ಉಪಸ್ಥಿತರಿದ್ದರು.