ಸವಾಲುಗಳನ್ನು ಧೈರ್ಯ ದಿಂದ ಎದುರಿಸಿ: ಅಲ್ವಿನ್ ದಾಂತಿ
ಉದ್ಯಾವರ, ಮೇ 8: ಸಮಾಜದಲ್ಲಿ ಸಂಸ್ಥೆಯನ್ನು ಆರಂಭಿಸಿ, ಕಲಾವಿದರನ್ನು ಬೆಳೆಸುವಾಗ ಬಹಳಷ್ಟು ಸವಾಲು, ಟೀಕೆ ಹಾಗೂ ಅವಮಾನ ಗಳನ್ನು ಎದುರಿಸ ಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಧೃತಿಗೆಡದೆ ಧೈರ್ಯದಿಂದ ಸವಾಲನ್ನು ಸ್ವೀಕರಿಸಿ ಮತ್ತು ಎದುರಿಸಿ ಕೊಂಕಣಿ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಟಿವಿ ನಿರೂಪಕ, ಕಲಾವಿದ ಅಲ್ವಿನ್ ದಾಂತಿ ಹೇಳಿದ್ದಾರೆ.
ನಿರಂತರ ಉದ್ಯಾವರ ಸಂಘಟನೆಯ ವತಿಯಿಂದ ಉದ್ಯಾವರದ ಸಂತ ಫ್ರಾನ್ಸಿಸ್ ಜೇವಿಯರ್ ದೇವಾಲಯದ ವಠಾರದಲ್ಲಿ ಇತ್ತೀಚೆಗೆ ಜರಗಿದ ಶಂಕರಪುರದ ಕೊಂಕಣಿ ಕಲಾವಿದರ ‘ಮಮ್ಮಿ ಮಾಕಾ ಜಾಯಿ’ ನಾಟಕ ಪ್ರದರ್ಶನದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಸಂತ ಫ್ರಾನ್ಸಿಸ್ ಜೇವಿಯರ್ ದೇವಾಲಯದ ಸಹಾಯಕ ಧರ್ಮಗುರು ವಂ. ರಾಲ್ವಿನ್ ಅರಾನ್ನ ಶುಭ ಹಾರೈಸಿದರು. ನಾಟಕ ರಚಿಸಿದ ವಾಲ್ಸಟನ್ ಡೇಸಾ ಶಂಕರಪುರ ಮತ್ತು ನಿರ್ದೇಶಕ ಗಣೇಶ್ ರಾವ್ ಎಲ್ಲೂರು ಅವರನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಸ್ಟೀವನ್ ಕುಲಾಸೊ ಸ್ವಾಗತಿಸಿದರು. ಸಂಚಾಲಕರಾದ ಅನಿಲ್ ಡಿಸೋಜ ವಂದಿಸಿದರು. ಒಲಿವಿರಾ ಮತಾಯಸ್ ಕಾರ್ಯಕ್ರಮ ನಿರೂಪಿಸಿದರು.