‘ಬ್ರಾಂಡ್ ಮಂಗಳೂರು’ ಪ್ರಶಸ್ತಿಗೆ ಪತ್ರಕರ್ತರಿಂದ ಅರ್ಜಿ ಆಹ್ವಾನ
ಮಂಗಳೂರು, ಮೇ 8: ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದಿಂದ ಜಿಲ್ಲೆಯಲ್ಲಿ ಶಾಂತಿ, ಸೌಹಾರ್ದ ಮೂಡಿಸುವ ವರದಿಗಾರಿಕೆಗೆ ‘ಬ್ರ್ಯಾಂಡ್ ಮಂಗಳೂರು’ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದ್ದು, 2019ನೇ ವರ್ಷದ ಪ್ರಶಸ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುವ ಪತ್ರಕರ್ತರು ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಪ್ರಶಸ್ತಿ 5,001 ರೂ. ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ಒಳಗೊಂಡಿದೆ. ಪ್ರಶಸ್ತಿಗೆ 2018ರ ಜ.1ರಿಂದ ಡಿ.31ರವರೆಗಿನ ವರದಿಗಳನ್ನು ಪರಿಗಣಿಸಲಾಗುವುದು.
ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸುವವರು ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿಯ ನಾಲ್ಕು ಪ್ರತಿಗಳನ್ನು (ಒಂದು ಮೂಲಪ್ರತಿ ಕಡ್ಡಾಯ) ಸಲ್ಲಿಸಬೇಕು. ವರದಿ ಪ್ರಕಟವಾದ ದಿನಾಂಕದ ಕುರಿತಂತೆ ಸೂಕ್ತ ದಾಖಲೆ ಅಗತ್ಯ. ಅರ್ಜಿಗಳನ್ನು ಕಳುಹಿಸಲು 2019 ಮೇ 31 ಕೊನೆಯ ದಿನಾಂಕವಾಗಿದೆ.
ಜು.1ರಂದು ಮಂಗಳೂರಿನಲ್ಲಿ ನಡೆಯಲಿರುವ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಮ್ಮೇಳನ ಸಂದರ್ಭ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಅರ್ಜಿ ಸಲ್ಲಿಸಲು ವಿಳಾಸ: ಅಧ್ಯಕ್ಷರು, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಪತ್ರಿಕಾ ಭವನ, ಲೇಡಿಹಿಲ್, ಉರ್ವ ಮಾರ್ಕೆಟ್ ರಸ್ತೆ, ಮಂಗಳೂರು-6 ಇಲ್ಲಿಗೆ ಕಳುಹಿಸುವಂತೆ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಇಬ್ರಾಹೀಂ ಅಡ್ಕಸ್ಥಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.