ವಿದ್ಯುತ್ ಸ್ಥಗಿತಗೊಳಿಸಿದ ಕೆಪಿಟಿಸಿಎಲ್: ಸಾರ್ವಜನಿಕರ ಆಕ್ರೋಶ
ಬಂಟ್ವಾಳ, ಮೇ 8: ಯಾವುದೇ ಮುನ್ಸೂಚನೆ ನೀಡದೇ ದಿನಪೂರ್ತಿ ವಿದ್ಯುತ್ ಸ್ಥಗಿತಗೊಳಿಸಿದ ಕೆಪಿಟಿಸಿಎಲ್ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ
ವಿಟ್ಲ ಭಾಗದಲ್ಲಿ ಪ್ರತಿ ಬುಧವಾರದ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನವರೆಗೆ ಹಾಗೂ ಸಂಜೆವರೆಗೂ ವಿದ್ಯುತ್ ಸ್ಥಗಿತಗೊಳಿಸಲಾಗುತ್ತಿದೆ. ಆದರೆ, ಬುಧವಾರ ಬೆಳಗ್ಗೆ 7 ಗಂಟೆಗೆ ಕೆಪಿಟಿಸಿಎಲ್ ಅಧಿಕಾರಿಗಳು ವಿದ್ಯುತ್ ಸ್ಥಗಿತಗೊಳಿಸಿದ್ದರು. ಸಂಜೆ ಐದು ಗಂಟೆಯಾದರೂ ವಿದ್ಯುತ್ ಸಂಪರ್ಕ ಬಂದಿಲ್ಲ. ಇದರಿಂದ ಆಕ್ರೋಶಿತರಾದ ಗ್ರಾಹಕರು ಮೆಸ್ಕಾಂ ಇಲಾಖೆಯಲ್ಲಿ ಪ್ರಶ್ನಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಸಬ್‍ಸ್ಟೇಶನ್‍ನಲ್ಲಿ ಕೆಲಸ ಕಾರ್ಯ ನಡೆಯುವ ಹಿನ್ನೆಲೆಯಲ್ಲಿ ಕೆಪಿಟಿಸಿಎಲ್ ಇಲಾಖೆ ಸ್ಥಗಿತಗೊಳಿಸಿದ್ದಾರೆ. ಇದಕ್ಕೆ ನಮಗೆ ಸಂಬಂಧವಿಲ್ಲ ಎಂದು ಉತ್ತರಿಸಿದ್ದಾರೆ.
ಬಳಿಕ ಗ್ರಾಹಕರು ಕೆಪಿಟಿಸಿಎಲ್ ಅಧಿಕಾರಿ ಸುನೀಲ್ ಅವರಿಗೆ ಕರೆ ಮಾಡಿದಾಗ, ನಮಗೆ ಕೆಲಸ ಇದೆ. ಅದರಿಂದ ತೆಗೆದಿದ್ದೇವೆ. ನಮಗೆ ಇಷ್ಟ ಬಂದಾಗ ವಿದ್ಯುತ್ ಹಾಕುತ್ತೇವೆ. ನೀವು ಫೋನ್ ಕಟ್ ಮಾಡಿ ಎಂದು ಉಡಾಫೆಯಿಂದ ಉತ್ತರಿಸಿ ಫೋನ್ ಕಟ್ ಮಾಡಿದ್ದಾರೆ. ಇದರಿಂದ ಆಕ್ರೋಶಿತರಾದ ಗ್ರಾಮಸ್ಥರು ಉನ್ನತ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.
ಮುಸ್ಲಿಮರಿಗೆ ಉಪವಾಸ ಇರುವುದರಿಂದ ಕೆಪಿಟಿಸಿಎಲ್ ನಿರ್ಧಾರದಿಂದ ತೊಂದರೆ ಅನುಭವಿಸಿದ್ದಾರೆ. ಬೆಳಿಗ್ಗೆ ಏಳು ಗಂಟೆಗೆ ತೆಗೆದ ವಿದ್ಯುತ್ ಸಂಜೆ ಆರು ಗಂಟೆ ಬಳಿಕ ಹಾಕಿದ್ದಾರೆ. ಯಾವುದೇ ಮುನ್ಸೂಚನೆ ನೀಡದೇ ಬೆಳ್ಳಂಬೆಳಿಗ್ಗೆ ವಿದ್ಯುತ್ ಸ್ಥಗಿತ ಮಾಡಿದ್ದಲ್ಲದೇ ಈ ಬಗ್ಗೆ ಸಮರ್ಪಕ ಉತ್ತರ ನೀಡದೇ ಬೇಜಾಬ್ದಾರಿತನದಿಂದ ಉತ್ತರಿಸಿದ ಕೆಪಿಟಿಸಿಎಲ್ ಅಧಿಕಾರಿಯ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.