ಶರಾಬಿ ಹೊಳೆಗೆ ಹಾಕಿದ ಮಣ್ಣು ತೆರವುಗೊಳಿಸುವಂತೆ ತಂಝೀಮ್ ಆಗ್ರಹ
ಭಟ್ಕಳ: ಇಲ್ಲಿನ ಗೌಸೀಯಾ ಸ್ಟ್ರೀಟ್ ನ ಶರಾಬಿ ಹೊಳೆಗೆ ಚಿಕ್ಕ ನೀರಾವರಿ ಇಲಾಖೆಯಿಂದ ಅಡ್ಡಲಾಗಿ ಕಟ್ಟಿಸಿರುವ ಡ್ಯಾಂ ಕಾಮಗಾರಿ ಮುಕ್ತಾಯದ ಹಂತದಲ್ಲಿದ್ದು ಈ ಡ್ಯಾಂ ನ ನೀರನ್ನು ತಡೆಯಲು ಆರಂಭದಲ್ಲಿ ಹಾಕಿದ 300 ಲೋಡ್ ಮಣ್ಣು ನದಿಯಲ್ಲಿ ಹಾಗೆಯೆ ಬಿಟ್ಟಿದ್ದು ಅದನ್ನೂ ಕೂಡಲೆ ತೆರವುಗೊಳಿಸುವಂತೆ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಸಂಸ್ಥೆಯ ನಿಯೋಗ ಸಹಾಯಕ ಆಯುಕ್ತರನ್ನು ಭೇಟಿ ಮಾಡಿ ಆಗ್ರಹಿಸಿದೆ.
ಬುಧವಾರ ತಂಝೀಮ್ ಸಂಸ್ಥೆಯ ನಿಯೋಗವು ಸಹಾಯಕ ಆಯುಕ್ತ ಸಾಜಿದ್ ಮುಲ್ಲಾ ರನ್ನು ಭೇಟಿ ಮಾಡಿ ಮಳೆಗಾಲ ಆರಂಭಕ್ಕೆ ಮುನ್ನಾ ಶರಾಬಿ ಹೊಳೆಯನ್ನು ಸ್ವಚ್ಚಗೊಳಿಸದೆ ಇದ್ದಲ್ಲಿ ಈ ಭಾಗದ ಜನರು ಮಳೆಗಾಲದಲ್ಲಿ ಸಾಕಷ್ಟು ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಡ್ಯಾಂ ನಲ್ಲಿ ನೀರು ತುಂಬಿಕೊಂಡು ಅಕ್ಕಪಕ್ಕ ನೂರಾರು ಮನೆ, ಬಾವಿ, ತೋಟ ಬಯಲು ಗದ್ದೆಗಳಿಗೆ ನೀರು ನುಗ್ಗಿ ಜನಜೀವನ ವ್ಯಸ್ಥವಾಗುತ್ತದೆ. ಭಾರಿ ಅನಾಹುತವನ್ನು ಎದುರಿಸಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದೆ.
ನಿಯೋಗದಲ್ಲಿ ತಂಝೀಮ್ ಅಧ್ಯಕ್ಷ ಎಸ್.ಎಂ.ಸೈಯ್ಯದ್ ಪರ್ವೇಝ್, ಪ್ರಧಾನ ಕಾರ್ಯದರ್ಶಿ ಎಂ.ಜೆ.ಅಬ್ದುಲ್ ರಖೀಬ್, ಮುಹಿದ್ದೀನ್ ಅಲ್ತಾಫ್ ಖರೂರಿ, ಜೈಲಾನಿ ಶಾಬಂದ್ರಿ, ಸೈಯ್ಯದ್ ಇಮ್ರಾನ್ ಲಂಕಾ, ಅಶ್ಫಾಖ್ ಕೆ.ಎಂ. ಮತ್ತಿತರರು ಉಪಸ್ಥಿತರಿದ್ದರು.