ಅಕ್ರಮ ಬಿಟಿ ಬದನೆ ಬೆಳೆ: ನಿಜವಾಗಿ ಯಾರು ಇದನ್ನು ನಿಯಂತ್ರಿಸುತ್ತಿದ್ದಾರೆ?
2010ರ ಫೆಬ್ರವರಿಯಲ್ಲಿ ಭಾರತ ಸರಕಾರವು ಬಿಟಿ ಬದನೆಯ ವಾಣಿಜ್ಯ ಬಿಡುಗಡೆಯ ಮೇಲೆ ಅನಿರ್ದಿಷ್ಟಾವಧಿಯವರೆಗೆ ನಿರ್ಬಂಧ ಹೇರಿತು. ಅದಕ್ಕೆ ಮೊದಲು ಹಲವಾರು ವಿಜ್ಞಾನಿಗಳು ಬಿಟಿ ಬದನೆಯ ಸುರಕ್ಷತೆಯ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದರು. ಕರುಣಾ ರಾಡ್ರಿಗಸ್ ಬಿಟಿ ಬದನೆ ಮನುಷ್ಯರ ಆರೋಗ್ಯದ ಮೇಲೆ ಅದರ ವಿಷಕಾರಿ ಗುಣ ಬೀರಬಹುದಾದ ಪರಿಣಾಮದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಅಲ್ಲದೆ ಬಿಟಿ ಬದನೆ ಬಹಳ ಬೇಗನೆ ತೋರುವ ಪ್ರತಿರೋಧ ಗುಣದಿಂದಾಗಿ ಅದರ ಬೆಳೆ ನಾಲ್ಕರಿಂದ ಹನ್ನೆರಡು ವರ್ಷಗಳೊಳಗೆ ನಾಶವಾಗಬಹುದೆಂದು ಹೇಳಲಾಗಿತ್ತು.
ಆದರೂ ಇತ್ತೀಚೆಗೆ ಹರ್ಯಾಣದಲ್ಲಿ ಅದನ್ನು ಅಕ್ರಮವಾಗಿ ಬೆಳೆಯಲಾಗುತ್ತಿದೆ. ಕೃಷಿ ವ್ಯಾಪಾರ ನೀತಿ ವಿಶ್ಲೇಷಕ ಅಪ್ಸರ್ ಜಾಫ್ರಿ ಈ ಬೆಳೆಯ ಮೇಲೆ ಸರಕಾರ ಹೇರಿರುವ ನಿರ್ಬಂಧ ಸಕಾರಣವಾಗಿದೆ ಎಂದಿದ್ದಾರೆ. ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕಾಗಿದ್ದ ಜನೆಟಿಕ್ ಇಂಜಿನಿಯರಿಂಗ್ ಅಪ್ರೈಸಲ್ ಕಮಿಟಿ (ಜಿಇಎಸಿ)ಒಂದು ನಿಯಂತ್ರಕ ಏಜೆನ್ಸಿಯಾಗಿ ಕೆಲಸ ಮಾಡದೆ ಬಿಟಿ ಬದನೆ ಬೆಳೆಸಲು ಒಂದು ಪ್ರಾಯೋಜಕ ಏಜೆನ್ಸಿಯಂತೆ ಕೆಲಸ ಮಾಡಿರುವುದೇ ಸಮಸ್ಯೆಗೆ ಮೂಲ ಕಾರಣ ಎನ್ನಲಾಗಿದೆ. ಅನುವಂಶ (ಜೀನ್) ತಂತ್ರಜ್ಞಾನದ ಅಪಾಯಗಳಿಂದ ಪರಿಸರ, ಪಕೃತಿ ಮತ್ತು ಜನರ ಆರೋಗ್ಯವನ್ನು ಕಾಪಾಡಬೇಕಾದ ಒಂದು ಸಂಸ್ಥೆಯಾಗಿ ಜಿಇಎಸಿಯನ್ನು ಸ್ಥಾಪಿಸಲಾಗಿತ್ತು.
ಹರ್ಯಾಣದಲ್ಲಿ ಬಿಟಿ ಬದನೆ ಬೆಳೆಯುತ್ತಿರುವುದು ಅಂತಹ ಅಪಾಯಕಾರಿ ಬೀಜಗಳು ಮಾರುಕಟ್ಟೆಯನ್ನು ಪ್ರವೇಶಿಸದಂತೆ ತಡೆಯುವಲ್ಲಿ ಸರಕಾರದ ಸಂಬಂಧಿತ ಏಜೆನ್ಸಿಗಳ ಮತ್ತು ಕೃಷಿ ಇಲಾಖೆಗಳ ವೈಫಲ್ಯವನ್ನು ತೋರಿಸುತ್ತದೆ. ಬಿಟಿ ಬದನೆ ಬೆಳೆ ಪರಿಸರಕ್ಕೆ ಹಾನಿ ಮಾಡುವ ಬೆಳೆಯಾಗಿದ್ದು ಅದನ್ನು ನಿಯಂತ್ರಿಸಿ ನಾಶ ಮಾಡಲೇ ಬೇಕಾಗಿದೆ ಎಂದಿದ್ದಾರೆ ಕೇರಳದ ಥಾನಲ್ ಆಗ್ರೋಕಾಲಜಿ ಸೆಂಟರ್ನ ಶ್ರೀಧರ್ ರಾಧಾಕೃಷ್ಣನ್.
ಭಾರತದಲ್ಲಿ ಜೆನೆಟಿಕಲಿ ಮೊಡಿಫೈಡ್ (ಜಿಎಂ)ಬೆಳೆಗಳ ಮಾಲಿನ್ಯದ ಕಿರು ಇತಿಹಾಸ.
ಇದುವರೆಗೆ ಭಾರತದಲ್ಲಿ ಐದು ಉತ್ಪನ್ನ ಮಟ್ಟದ ವರದಿಗಳು ಅನುವಂಶೀಯವಾಗಿ ಸುಧಾರಿತ (ಜೆನೆಟಿಕಲಿ ಮೊಡಿಫೈಡ್ -ಜಿಎಂ)ಬೆಳೆಗಳನ್ನು ಬೆಳೆಸುವುದರ ವಿರುದ್ಧ ವಿವರವಾದ ವರದಿ ನೀಡಿದೆ. ಇದಕ್ಕೆ ಒಂದು ಮುಖ್ಯ ಕಾರಣವೆಂದರೆ ಜಿಎಂ ಬೆಳೆಗಳನ್ನು ನಿಯಂತ್ರಿಸುವ ಸಂಸ್ಥೆಗಳು ದಕ್ಷವಾಗಿಲ್ಲ ಮತ್ತು ಪರಸ್ಪರ ಹಿತಾಸಕ್ತಿಗಳ ತಿಕ್ಕಾಟಗಳಿಂದ ಅವುಗಳು ಉದ್ಯಮಿಗಳಿಗೆ ಲಾಭವಾಗುವಂತೆ ನಡೆದುಕೊಳ್ಳುತ್ತಿವೆ.
ಭಾರತದ ಮೊದಲ ಹಾಗೂ ಏಕೈಕ ಕಾನೂನು ಬದ್ಧ ಬಿಟಿ ಹತ್ತಿಯನ್ನು 2001ರಲ್ಲಿ ಗುಜರಾತಿನಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತಿರುವುದು ಪತ್ತೆಯಾಯಿತು. ಬಯೋಟೆಕ್ ಉದ್ಯಮವು ಗುಟ್ಟಾಗಿ ಮತ್ತು ಅಕ್ರಮವಾಗಿ ಇದನ್ನು ಬೆಳೆಸುತ್ತಿತ್ತು. ಭಾರತ ಇದರ ಬೆಳೆಯನ್ನು ಅಂಗೀಕರಿಸುತ್ತದೋ ಇಲ್ಲವೋ ಎಂಬುದು ಆಗಿನ್ನೂ ನಿರ್ಧಾರವಾಗಿರಲಿಲ್ಲ. 2005ರಲ್ಲಿ ಪ್ರಾಣಿಶಾಸ್ತ್ರಜ್ಞೆ ಪುಷ್ಪ ಭಾರ್ಗವರವರು ಸರಕಾರ ಮಾನ್ಯ ಮಾಡಿರದ ಜಿಎಂ ಬೆಳೆಗಳ ಹಲವು ತಳಿಗಳನ್ನು ರೈತರಿಗೆ ಮಾರಲಾಗುತ್ತಿರುವುದನ್ನು ಪತ್ತೆ ಹಚ್ಚಿದರು. ಅಕ್ರಮವಾಗಿ ಕೃಷಿ ಮಾಡಲಾದ ಜಿಎಂ ಓಕ್ರಾ ಹತ್ತಿಯನ್ನು ಭಾರತದಲ್ಲಿ ಬೆಳೆಯಲಾಗುತ್ತಿದೆ ಮತ್ತು ಎಲ್ಲಾ ರೀತಿಯ ತರಕಾರಿಗಳ ಜಿಎಂ ಮಾದರಿಯ ‘ವಿಶೇಷ ಬೀಜ’ಗಳನ್ನು ಬಿತ್ತಲು ರೈತರಿಗೆ ಆಕರ್ಷಕ ಕೊಡುಗೆಗಳನ್ನು ನೀಡಲಾಗುತ್ತಿದೆ ಎಂದು ವರದಿ ಮಾಡಲಾಯಿತು.
2013ರಲ್ಲಿ ಟ್ರಾನ್ಸ್ ಜೆನಿಕ್ ಬದನೆ ಬೆಳೆಯನ್ನು ಬಾಂಗ್ಲಾದೇಶದಲ್ಲಿ ಪರಿಚಯಿಸುವುದರ ವಿರುದ್ಧ ವಿಜ್ಞಾನಿಗಳು ಮತ್ತು ಎನ್ಜಿಒಗಳಿಂದ ಪ್ರತಿಭಟನೆ ವ್ಯಕ್ತವಾಯಿತು. ಭಾರತದಲ್ಲಿ ಬೆಳೆಯುವ ಬದನೆ ಬೆಳೆಗೆ ಇದರಿಂದಾಗಿ ಮಾಲಿನ್ಯ ಉಂಟಾಗುತ್ತದೆ ಎಂಬುದು ಆ ಪ್ರತಿಭಟನೆಗೆ ಕಾರಣವಾಗಿತ್ತು.
2018ರಲ್ಲಿ ಭಾರತದಲ್ಲಿ ಕೀಟನಾಶಕವನ್ನು ಸಹಿಸಿಕೊಳ್ಳುವ (ಎಚ್ಟಿ) ಹತ್ತಿಯನ್ನು ಅಕ್ರಮವಾಗಿ ಬೆಳೆಸುತ್ತಿರುವುದು ಬೆಳಕಿಗೆ ಬಂತು. ರೈತರಿಗೆ ಇಂತಹ ಬೆಳೆಗಳನ್ನು ಬೆಳೆಸಲು ಬಯೋಟೆಕ್ ಕಂಪೆನಿಗಳು ಪ್ರೋತ್ಸಾಹ ನೀಡಲು ಮುಖ್ಯ ಕಾರಣವೆಂದರೆ, ಇಂತಹ ಬೆಳೆಗಳು ಹೆಚ್ಚು ಹೆಚ್ಚು ಕೀಟನಾಶಕಗಳನ್ನು ಸಹಿಸಿಕೊಳ್ಳುವ ಗುಣಪಡೆಯುತ್ತವೆ. ಇದರಿಂದಾಗಿ ಕೀಟನಾಶಕಗಳನ್ನು ಉತ್ಪಾದಿಸುವ ಬಹುರಾಷ್ಟ್ರೀಯ ಕಂಪೆನಿಗಳಿಗೆ ಹೆಚ್ಚು ಹೆಚ್ಚು ಕೀಟನಾಶಕಗಳ ಮಾರಾಟದಿಂದ ಅಪಾರ ಲಾಭ ದೊರಕುತ್ತದೆ. ಈ ವರ್ಷ 800 ಮಿಲಿಯ ಡಾಲರ್ಗಳಷ್ಟು ಬೆಲೆಯ ಕೀಟನಾಶಕಗಳು ಮಾರಾಟವಾಗುವ ನಿರೀಕ್ಷೆ ಇದೆ.
ಇದೇ ರೀತಿಯಾಗಿ ಸಾಸಿವೆಯ ಜಿಎಂ ತಳಿಯನ್ನು ಕೂಡ ಪಂಜಾಬ್ನಲ್ಲಿ ಬೆಳೆಸುವಂತೆ ರೈತರನ್ನು ಪ್ರೋತ್ಸಾಹಿಸುವ ಹುನ್ನಾರ ಕೂಡ ನಡೆದಿದೆ. ಹಾಗಾದರೆ, ಇಂತಹ ಮಾರಕ ಬೀಜಗಳನ್ನು, ಬೆಳೆಗಳನ್ನು ಭಾರತದಲ್ಲಿ ಬೆಳೆಯದಂತೆ ನಿಯಂತ್ರಿಸಬೇಕಾದ ಸರಕಾರಿ ಸಂಸ್ಥೆಗಳು, ಏಜೆನ್ಸಿಗಳು ತಾವು ಮಾಡಬೇಕಾದ ಕೆಲಸ ಮಾಡದಿರುವಾಗ, ಈ ನಿಯಂತ್ರಣದ ಜವಾಬ್ದಾರಿ ಯಾರು ಹೊರಬೇಕು?
ಕೃಪೆ: countercurrents