ಇಂದಿನ ಸೋಲು ನಾಳಿನ ಗೆಲುವಿಗೆ ನಾಂದಿಯಾಗಲಿ
ಅಬ್ರಹಾಂ ಲಿಂಕನ್ ತನ್ನ ಮಗನನ್ನು ಕುರಿತು ಶಿಕ್ಷಕರಿಗೆ ಬರೆದ ಸಾಲುಗಳಲ್ಲಿ ‘‘ಕಲಿಸು ಗುರುವೆ ಕಲಿಸು ನೋವಿನೊಳಗೆ ನಗುವುದನ್ನು ಕಲಿಸು..ಸೋಲಿನೊಳಗೆ ಗೆಲುವುದನ್ನು ಕಲಿಸು’’ ಎಂಬ ಸಾಲುಗಳು ನನಗೆ ತುಂಬ ಇಷ್ಟ.
ಮೊನ್ನೆ ಎಸೆಸೆಲ್ಸಿ ಫಲಿತಾಂಶ ಬಂತು. ಈ ಪರೀಕ್ಷೆಯಲ್ಲಿ ಫೇಲಾದ ಹೆಣ್ಣು ಮಗುವೊಂದು ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿರುವ ಘಟನೆ ತಿಳಿದು SIRD AIT ಅಧಿಕಾರಿಗಳೊಟ್ಟಿಗೆ ಅವರ ಮನೆಗೆ ತೆರಳಿ ಅವರ ಕುಟುಂಬವನ್ನು ಮಾತನಾಡಿಸಿದೆವು. ಆ ಕುಟುಂಬದಲ್ಲಿ ವಿದ್ಯಾರ್ಥಿನಿಯ ತಾಯಿಯ ಪರಿಸ್ಥಿತಿ, ಮಾತ್ರೆ ನುಂಗಿದ ಆ ವಿದ್ಯಾರ್ಥಿನಿಯ ಪರಿಸ್ಥಿತಿಗಿಂತ ಗಂಭೀರವಾಗಿತ್ತು. ಕಣ್ಣೀರು, ದುಃಖ, ಆತಂಕ ಬಿಟ್ಟರೆ ಅಲ್ಲಿ ಮತ್ತೇನೂ ಇಲ್ಲ. ಇದಕ್ಕೆಲ್ಲ ಕಾರಣ ಒಂದು ಲಿಖಿತ ಪರೀಕ್ಷೆಯಲ್ಲಿ ಫೇಲಾದ ಮಾತ್ರಕ್ಕೆ ಬದುಕೇ ಕೊನೆಯಾದಂತೆ ಎಂದು ನಂಬಿಸಿರುವ ವಾತಾವರಣ. ಉತ್ತೀರ್ಣರಾದ ವಿದ್ಯಾರ್ಥಿಯ ಕುಟುಂಬದವರು ಫೇಲಾದ ವಿದ್ಯಾರ್ಥಿನಿ ಮತ್ತು ಕುಟುಂಬದ ನಡುವೆಯೇ ಪದೇಪದೇ ಸಂಭ್ರಮಿಸುವ, ಚರ್ಚೆ ಮಾಡುವ ನಡವಳಿಕೆ, ಈ ಎರಡೂ, ಸೋತ ವಿದ್ಯಾರ್ಥಿನಿ ಮತ್ತು ಕುಟುಂಬವನ್ನು ಹೆಚ್ಚು ಹೆಚ್ಚು ಘಾಸಿಗೊಳಿಸಿದ್ದು ಅವರ ಮಾತಿನಿಂದ ತಿಳಿದು ಬಂತು. ಮತ್ತೊಬ್ಬ ವಿದ್ಯಾರ್ಥಿನಿ 470 ಅಂಕಗಳನ್ನು ಗಳಿಸಿಯೂ ಮೂರ್ನಾಲ್ಕುದಿನ ಅನ್ನ ಆಹಾರ ತ್ಯಜಿಸಿ ಮನೆಯಿಂದ ಹೊರಬಾರದಂತೆ ಮಲಗಿದ್ದಳು. ಅದಕ್ಕೆ ಕಾರಣ ಫಲಿತಾಂಶ ಬಂದಾಕ್ಷಣ ವಿದ್ಯಾರ್ಥಿನಿಯ ತಾಯಿ ಆತ್ಮಹತ್ಯೆಗೆ ಯತ್ನಿಸಿದ್ದರು. ಆನಂತರ ವಿದ್ಯಾರ್ಥಿ ಜೊತೆ ನಾನು ಮಾತನಾಡಿದಾಗ, ನಾನು ನನ್ನ ರಕ್ತ ಸಂಬಂಧಿಗಿಂತ 30 ಕಡಿಮೆ ಅಂಕಗಳಿಸಿರುವುದೇ ನನ್ನ ಮತ್ತು ನನ್ನ ಕುಟುಂದ ನೋವಿಗೆ ಕಾರಣ ಎಂದಳು. ಇಲ್ಲಿ ಪರೀಕ್ಷೆ ಬರೆದಿರೋದು ವಿದ್ಯಾರ್ಥಿ. ಸ್ಪರ್ಧೆ ಇರೋದು ಪೋಷಕರಿಗೆ. ಮಕ್ಕಳು ಕಡಿಮೆ ಅಂಕಗಳಿಸಿದಾಕ್ಷಣ ಮೊದಲು ಖಿನ್ನರಾಗುವುದು ಅವರ ಪೋಷಕರು. ಅದಕ್ಕೆ ಕಾರಣ ತಮ್ಮ ಮಕ್ಕಳನ್ನು ಇತರ ವಿದ್ಯಾರ್ಥಿಗಳ ಜೊತೆ ಅನವಶ್ಯಕವಾಗಿ ತೂಗಿ ನೋಡುವುದು.
ಇದೆಲ್ಲ ಯಾಕೆ ಹೀಗಾಗುತ್ತಿದೆ. ನಮ್ಮ ಕನಸುಗಳ ಈಡೇರಿಕೆಗೆ ಮಕ್ಕಳನ್ನು ಬಳಸಿಕೊಂಡು ಬಲವಂತದ ಒತ್ತಡಕ್ಕೆ ನೂಕುವುದಿದೆಯಲ್ಲ ಇದೊಂದು ಅಗೋಚರಾತ್ಮಕ ಶೋಷಣೆ. ಅಂಕಗಳ ಗಳಿಕೆಗಾಗಿ ಮಕ್ಕಳನ್ನು ದುಡಿಸುವ ಪ್ರವೃತ್ತಿಯನ್ನೆ ನಾವು ಶಿಕ್ಷಣ ಎಂದು ಭಾವಿಸಿದ್ದೇವೆ. ಇದು ಮುಂದಿನ ಪೀಳಿಗೆಯನ್ನು ಸಾಮಾಜಿಕ ವಿವೇಕದಿಂದ ದೂರ ಇಡಲು ಯತ್ನಿಸುತ್ತಿರುವಂತೆ ಭಾಸವಾಗುತ್ತಿದೆ. ಅಂಕಗಳ ಆಧಾರದ ಮೇಲೆಯೇ ನಾವು ಕೂಡ ವಿದ್ಯಾರ್ಥಿಯ ಬೆನ್ನು ತಟ್ಟುವ ಪ್ರವೃತ್ತಿಯನ್ನು ಬೆಳಿಸಿಕೊಂಡಿದ್ದೇವೆ. ಹೀಗೆ ಮಾಡುವುದರ ಮೂಲಕ ಕಡಿಮೆ ಅಂಕಗಳಿಸಿದ ಬಹುದೊಡ್ಡವರ್ಗವನ್ನು ನಾವು ನಿರ್ಲಕ್ಷಿಸುತ್ತಿದ್ದೇವೆ. ಇಲ್ಲಿ ಸಮಸ್ಯೆ ಇರುವುದು ವಿದ್ಯಾರ್ಥಿಗಳಲ್ಲಲ್ಲ, ಬೆನ್ನುತಟ್ಟುವವರಲ್ಲಿ. ಸಾಧಕರನ್ನು ಪ್ರಶಂಸಿಸಬೇಕು. ದುರ್ಬಲರನ್ನು ಮೇಲೆತ್ತಲೇಬೇಕು. ಆದರೆ ಈಗಿನ ಪರಿಸ್ಥಿತಿಯೇ ಬೇರೆ. ನಮ್ಮ ದೃಷ್ಟಿಯೇನಿದ್ದರೂ ಸಾಧಕರ ಕಡೆಯೇ ಹೆಚ್ಚು ಇರುತ್ತದೆ ದುರ್ಬಲರ ಕಡೆಯಲ್ಲ.
ಕಳೆದ ಬಾರಿ ಶೇ. 50 ಫಲಿತಾಂಶವನ್ನು ಪಡೆದು ಈ ಬಾರಿ ಶೇ. 88 ಫಲಿತಾಂಶ ಪಡೆದ ಶಾಲೆಯೊಂದರ ಮುಖ್ಯೋಪಾಧ್ಯಾಯರೊಬ್ಬರಿಗೆ ಅಭಿನಂದನೆ ಹೇಳಲು ಕರೆಮಾಡಿದ್ದೆ. ಅವರು ಸಂಭ್ರಮದಲ್ಲಿರಲಿಲ್ಲ. ನಾನು ‘‘ನಿಮ್ಮ ನಿರೀಕ್ಷೆ ಶೇ. 100 ಇರಬೇಕಿತ್ತೆ?’’ ಎಂದೆ. ಅವರು ಉತ್ತರಿಸುತ್ತಾ ‘‘ಖಂಡಿತ ಇಲ್ಲ, ವಿದ್ಯಾರ್ಥಿಗಳ ಶೇ. 100ರಷ್ಟು ಪರೀಕ್ಷಾ ಫಲಿತಾಂಶಕ್ಕಿಂತ ನಾನು ಬಯಸಿದ್ದು ಶೇ. 100ರಷ್ಟು ಅವರ ವ್ಯಕ್ತಿತ್ವ ವಿಕಸನವನ್ನು, ಅದಕ್ಕಾಗಿ ನಾನು ಅವಿರತವಾಗಿ ಶ್ರಮಿಸಿದೆ. ಅದು ಸಾಧ್ಯವಾಗದ ಕೊರಗು ನನ್ನನ್ನು ಕಾಡುತ್ತಿದೆ. ಅವರೆಲ್ಲ ಪಾಸ್ ಆಗಿದ್ದಾರೆ, ಆದರೆ ಅವರ ಮುಂದಿನ ಜವಾಬ್ದಾರಿಗಳನ್ನು ನಾವು ಕಲಿಸದೆ ಅವರನ್ನು ಬಿಟ್ಟುಕೊಡುವ ಈ ವಾತಾವರಣ, ಈ ವ್ಯವಸ್ಥೆ ಬದಲಾಗಬೇಕಿದೆ. ಮಕ್ಕಳಲ್ಲಿ ಪರೀಕ್ಷೆಯೆಂದರೆ ಅದೊಂದು ಅಂಕಗಳಿಕೆಯ ವೇದಿಕೆಯಾಗಿಬಿಟ್ಟಿದೆ. ಗ್ರಹಿಕೆಯ ಸಾಮರ್ಥ್ಯ ಕ್ಷೀಣಿಸುತ್ತಿದೆ. ಈ ವ್ಯವಸ್ಥೆ ಕೂಡ ಅಂಕಗಳ ಸುತ್ತಲೇ ವಿದ್ಯಾರ್ಥಿಗಳನ್ನು ಕಟ್ಟಿಹಾಕಿದೆ. ಆ ಕಾರಣಕ್ಕಾಗಿಯೇ ಎಸೆಸೆಲ್ಸಿಯಲ್ಲಿ ಶೇ.70..80..ಫಲಿತಾಂಶ ಬಂದರೆ ಪಿಯುಸಿಯಲ್ಲಿ ಶೇ. 50,55ಕ್ಕೆ ಇಳಿಯುತ್ತದೆ. ವಿದ್ಯಾರ್ಥಿಗಳ ತಲೆಯೊಳಗೆ ಅಂಕಗಳನ್ನು ತುಂಬುವುದಕ್ಕಿಂತ ಕನಸುಗಳನ್ನು ತುಂಬಬೇಕು’’ ಎಂದರು.
ಇವರ ಮಾತುಗಳನ್ನು ಕೇಳಿದ ಮೇಲೆ ಬಹುಶಃ ಪರೀಕ್ಷೆಯಲ್ಲಿ ಅಂಕಗಳಿಕೆಗೂ, ವಿದ್ಯಾರ್ಥಿ ಬದುಕಿನ ಗ್ರಹಿಕೆಗೂ ವ್ಯತ್ಯಾಸ ಸ್ಪಷ್ಟವಾಯಿತು. ಇಲ್ಲಿ ನಾನು ಗಮನಿಸಿದ್ದು, ಪರೀಕ್ಷಾ ಪೂರ್ವದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯನಿವಾರಣೆ ಬಗ್ಗೆ ನಾವು ಬೇಕಾದಷ್ಟು ಮಾತನಾಡುತ್ತೇವೆ. ಆದರೆ ಬದುಕಿನ ಭಯದ ನಿವಾರಣೆಯ ಬಗ್ಗೆ ನಾವು ಬೇಕಾದಷ್ಟು ಮಾತನಾಡಿಲ್ಲ. ಅನುತ್ತೀರ್ಣತೆಯ ನಂತರದ ಗುರಿಗಳ ಬಗ್ಗೆ ಮಾತನಾಡಿಲ್ಲ. ಪರೀಕ್ಷೆಯ ನೈಜತೆಯನ್ನು ಅವರ ಪೋಷಕರಿಗೆ ಅರ್ಥಮಾಡಿಸಿಲ್ಲ. ಫೇಲಾದ ವಿದ್ಯಾರ್ಥಿಯ ಜವಾಬ್ದಾರಿಯನ್ನು ಹೊರುವ ಸುವ್ಯವಸ್ಥಿತ ವಾತಾವರಣದ ಬಗ್ಗೆ ನಮಗೆ ನಿಖರತೆ ಇಲ್ಲ. ನಾವು ಆ ಫೇಲಾದ ವಿದ್ಯಾರ್ಥಿಗೆ ಭರವಸೆಯೂ ಆಗಿಲ್ಲ. ಅವರ ಕುಟುಂಬದ ಸಾಂತ್ವನಕರೂ ನಾವಾಗಿಲ್ಲದ ಕಾರಣ ಇಂತಹ ಆತ್ಮಹತ್ಯೆಗಳು ಸಂಭವಿಸುತ್ತಿವೆ.
ಶಾಲಾ ಪರೀಕ್ಷೆಯಲ್ಲಿ ಯಶಸ್ಸು ಕಾಣಲಾರದ ವಿದ್ಯಾರ್ಥಿಗಳನ್ನು ಸಮಾಜದ ಹೊರಗಿಟ್ಟು, ಅಂಕಗಳನ್ನಷ್ಟೇ ಅವರ ತಲೆಯೊಳಗೆ ತುಂಬಿ, ಯಾವ ಸಮಾಜವನ್ನು ನಾವು ಕಟ್ಟಲು ಹೊರಟ್ಟಿದ್ದೇವೆ, ಎಂದು ನಾವು ಆಲೋಚಿಸಬೇಕಿದೆ. ಉನ್ನತ ಶಿಕ್ಷಣದಿಂದ ದೂರ ಉಳಿದು, ಸಮಾಜವನ್ನು ಅರಿತು ಬದುಕಿ, ಹೊಸ ರೂಪದ ಸಮಾಜವನ್ನು ಕಟ್ಟಿದ ಸಾವಿರಾರು ಮಹನೀಯರ ಉದಾಹರಣೆಗಳು ನಮ್ಮ ಕಣ್ಣು ಮುಂದಿವೆ. ಹಾಗೆಯೇ ಪರೀಕ್ಷೆಯಲ್ಲಿ ಗರಿಷ್ಠ ಅಂಕಗಳನ್ನು ಪಡೆದೂ ಕೂಡ ಬದುಕಿನಲ್ಲಿ ಫೇಲಾದ ಅದೆಷ್ಟೋ ಯುವಕರು ನಮ್ಮ ಕಣ್ಣುಮುಂದಿದ್ದಾರೆ. ಅಂಕಗಳಿಂದ ಮಾತ್ರವೇ ವಿದ್ಯಾರ್ಥಿಯ ಬದುಕು ನಿರ್ಧಾರವಾಗದು ಎಂಬುದನ್ನು ಪರೀಕ್ಷೆಯಲ್ಲಿ ಸೋತ ವಿದ್ಯಾರ್ಥಿಗಳು, ಪೋಷಕರು ಅರಿತುಕೊಳ್ಳಬೇಕು.
ವಿದ್ಯಾರ್ಥಿಗಳ ಮೇಲೆ ಅಂಕಗಳಿಕೆಯ ಒತ್ತಡ ಹೇರುವುದನ್ನು ಬಿಡಿ. ಅವರ ಆಸಕ್ತಿಗೆ ನೀರೆರೆಯಿರಿ. ಅವರು ನಮ್ಮ ಕನಸುಗಳ ಸಾಕಾರಕ್ಕಾಗಿ ದುಡಿಯುವ ಯಂತ್ರಗಳಲ್ಲ ಎಂಬುದು ನಮಗೆ ಮನವರಿಕೆಯಾಗಬೇಕಿದೆ. ವ್ಯವಸ್ಥೆಯ ಕ್ರೌರ್ಯ ನಮ್ಮ ಮತ್ತು ನಮ್ಮ ಮಕ್ಕಳನ್ನು ಖಿನ್ನರನ್ನಾಗಿಸಿ ಅದು ಅತಿರೇಕದ ಹಂತ ತಲುಪಿ, ಆತ್ಮಹತ್ಯೆಯಂತಹ ದುರ್ಘಟನೆಗಳು ಸಂಭವಿಸುತ್ತವೆ. ಫೇಲಾಗಿ ಆತ್ಮಹತ್ಯೆಗೆ ಯತ್ನಿಸುವವರಿಗೊಂದು ಮಾತು,
ನೀವು ಫೇಲಾಗಿರುವುದು ಒಂದು ಪರೀಕ್ಷೆಯಲ್ಲಿ ಮಾತ್ರ. ಜೀವನದಲ್ಲಲ್ಲ. ಒಮ್ಮೆ ನೀವು ಫೇಲ್ ಆದರೆ ನಿಮ್ಮೆಳಗೊಂದು ಗುರಿ ಇರಿಸಿಕೊಳ್ಳಿ. ಆ ಗುರಿಯನ್ನು ಬೆನ್ನೆತ್ತಲು ಪ್ರಯತ್ನಿಸಿ. ಇಂದಿನ ಸೋಲುಗಳು ನಿಮ್ಮನ್ನು ಆತ್ಮಹತ್ಯೆಗೆ ದೂಡಿಬಿಟ್ಟರೆ ನಾಳೆ ನಿಮಗೆ ಸಿಗಬಹುದಾದ ಗೆಲುವುಗಳು ನಿಮ್ಮೆಟ್ಟಿಗೇ ನಶಿಸಿಹೋಗುತ್ತವೆ. ನಮ್ಮ ಸೋಲು ಜೀವಂತಿಕೆಯ ಪ್ರತೀಕವಾಗಬೇಕೇ ಹೊರತು ಜೀವತೆಗೆಯುವಂತಿರಬಾರದು.
ನೀವು ನಮ್ಮ ವಿಜ್ಞಾನಿಗಳನ್ನು ನೋಡಿ, ಯಾವುದೇ ಆವಿಷ್ಕಾರ ಒಮ್ಮೆಯೇ ಆದುದಲ್ಲ. ಒಂದೇ ಸೋಲಿಗೆ ಅವರು ಖಿನ್ನರಾಗಿದ್ದರೆ ಇಂದು ಜಗತ್ತಿನ ಯಾವುದೇ ಆವಿಷ್ಕಾರ ಕೂಡ ಆಗುತ್ತಿರಲಿಲ್ಲ. 9ನೇ ಬಾರಿಗೆ ಐಎಎಸ್ ಆದ ಅಧಿಕಾರಿಯೊಬ್ಬರು ‘‘ನಾನು ಫೇಲಾಗುವ ಅವಕಾಶಗಳನ್ನು ಸ್ವಾಗತಿಸುತ್ತೇನೆ, ಯಾಕೆಂದರೆ ಒಂದು ಸೋಲು ಸಾವಿರ ಗೆಲುವುಗಳ ತಾಯಿಯಾಗುತ್ತದೆ’’ ಎಂದಿದ್ದರು. ಸೋಲಿಗೆ ಆತ್ಮಹತ್ಯೆಯೇ ಪರಿಹಾರ ಎಂದಿದ್ದರೆ ಇವತ್ತು ನಮ್ಮಲ್ಲಿ ರಾಜಕಾರಣಿಗಳೇ ಇರುತ್ತಿರಲಿಲ್ಲ ಅಲ್ಲವೇ.