ಪ್ರಕೃತಿ ಚಿಕಿತ್ಸೆಗಾಗಿ ಮತ್ತೆ ಉಡುಪಿಗೆ ಆಗಮಿಸಿದ ದೇವೇಗೌಡ ದಂಪತಿ
ಉಡುಪಿ/ಮಂಗಳೂರು, ಮೇ 9: ಇತ್ತೀಚೆಗೆ ಮೂಳೂರಿನಲ್ಲಿ ಪ್ರಕೃತಿ ಚಿಕಿತ್ಸೆ ಪಡೆದು ತೆರಳಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪ್ರಕೃತಿ ಮುಂದುವರಿಸಲು ಮತ್ತೊಮ್ಮೆ ಉಡುಪಿಗೆ ಆಗಮಿಸಿದ್ದಾರೆ.
ಇಂದು ಬೆಳಗ್ಗೆ ಪತ್ನಿ ಚೆನ್ನಮ್ಮರೊಂದಿಗೆ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿದ ದೇವೇಗೌಡ ಅಲ್ಲಿಂದ ಕಾರಿನ ಮೂಲಕ ಕಾಪುವಿನಲ್ಲಿರುವ ಸಾಯಿರಾಧಾ ರೆಸಾರ್ಟ್ಗೆ ತೆರಳಿದರು. ಈ ಸಂದರ್ಭ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಲು ದೇವೇಗೌಡ ನಿರಾಕರಿಸಿದರು.
ಕಳೆದ ವಾರ ಸಾಯಿರಾಧಾ ರೆಸಾರ್ಟ್ಗೆ ಪುತ್ರ, ಮುಖ್ಯಮಂತ್ರಿ ಕುಮಾರಸ್ವಾಮಿ ಆಗಮಿಸಿದ್ದ ದೇವೇಗೌಡರು ಐದು ದಿನಗಳ ಪ್ರಕೃತಿ ಚಿಕಿತ್ಸೆ ಪಡೆದಿದ್ದರು. ಇದೀಗ ಮತ್ತೆ ಪತ್ನಿ ಸಮೇತ ಅವರು ಆಗಮಿಸಿದ್ದು, ಕಾಲು ನೋವು ಶಮನಕ್ಕಾಗಿ ಐದು ದಿನಗಳ ಚಿಕಿತ್ಸೆ ಪಡೆಯಲಿದ್ದಾರೆ ಎಂದು ತಿಳಿದಬಂದಿದೆ.
ಇದಕ್ಕೂ ಮೊದಲು ಎಚ್.ಡಿ.ದೇವೇಗೌಡ ಹಾಗೂ ಅವರ ಪತ್ನಿ ಚೆನ್ನಮ್ಮರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ದ.ಕ. ಜೆಡಿಎಸ್ ವತಿಯಿಂದ ಬರ ಮಾಡಿಕೊಳ್ಳಲಾಯಿತು. ಈ ಸಂದರ್ಭ ಜೆಡಿಎಸ್ ಜಿಲ್ಲಾ ವಕ್ತಾರ ಸುಶೀಲ್ ನೊರೊನ್ಹ, ಯುವ ಜನತಾದಳ ಅಧ್ಯಕ್ಷ ಅಕ್ಷಿತ್ ಸುವರ್ಣ, ಮಹಿಳಾ ಘಟಕದ ಅಧ್ಯಕ್ಷೆ ಸುಮತಿ ಹೆಗ್ಡೆ, ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಮುಖಂಡರಾದ ಧನರಾಜ್, ಯುವ ಜನತಾದಳದ ರತೀಶ್, ಮಹಮ್ಮದ್ ಆಸಿಫ್, ಹಿತೇಶ್ ರೈ ಉಪಸ್ಥಿತರಿದ್ದರು.