ಉಳ್ಳಾಲ: ಶ್ರೀ ಶಂಕರ ಜಯಂತಿ ಉತ್ಸವದ ಉದ್ಘಾಟನಾ ಸಮಾರಂಭ
ಉಳ್ಳಾಲ,ಮೇ.8: ಶ್ರೀ ಶಂಕರಾಚಾರ್ಯರ ಬೋಧನೆ, ತತ್ವಗಳು ಇಂದಿನ ಕಾಲದಲ್ಲೂ ಪ್ರಸ್ತುತ ಎಂದು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ, ಸಾಹಿತಿ, ನಟ ಡಾ.ಕಾಸರಗೋಡು ಅಶೋಕ್ ಕುಮಾರ್ ಅಭಿಪ್ರಾಯಪಟ್ಟರು.
ಕೋಟೆಕಾರಿನ ಶ್ರೀ ಶೃಂಗೇರಿ ಮಠದಲ್ಲಿ ಉತ್ಸವ ಸಮಿತಿಯ ವತಿಯಿಂದ ನಡೆದ ಶ್ರೀ ಶಂಕರ ಜಯಂತಿ ಉತ್ಸವದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯಾವುದೇ ಹಿಂಸೆ, ರಕ್ತಪಾತಗಳನ್ನು ಮಾಡದೆ, ಯಾವುದೇ ಆಯುಧಗಳನ್ನು ಕೈಗೆತ್ತಿಕೊಳ್ಳದೆ ಕೇವಲ ವಾದಗಳನ್ನು ಮಂಡಿಸಿ ಎದುರಾಳಿಗಳ ಮನಸ್ಸನ್ನು ಗೆದ್ದು ಅವರನ್ನು ಶಿಷ್ಯಂದಿರಾಗಿ ಪಡೆದ ಆದಿಶಂಕರಾಚಾರ್ಯರದ್ದು ಶಾಂತಿಯುತ ದಿಗ್ವಿಜಯ. ನಮ್ಮ ದೇವರು ಮೇಲು, ನಮ್ಮ ದೇವರು ಮೇಲು ಎಂದು ಪರಸ್ಪರ ಕಚ್ಚಾಡುತ್ತಿದ್ದ ಜನರಿಗೆ ಎಲ್ಲವೂ ಒಂದೇ ಈಶ್ವರನ ಬೇರೆ ಬೇರೆ ರೂಪಗಳೆಂದು ಬೋಧಿಸಿದವರು ಶಂಕರರು. ಭಜಗೋವಿಂದಂ ಮೂಲಕ ಅಂತ್ಯಕಾಲದಲ್ಲಿ ಮಾತ್ರ ದೇವರ ನಾಮ ಜಪಿಸುವುದಲ್ಲ, ಅನುದಿನ ಭಜನೆ ಮಾಡಬೇಕೆಂದು ಹೇಳಿದವರು ಶಂಕರರು ಎಂದರು.
ನ್ಯಾಯವಾದಿ ಕೆ.ಗಣೇಶ್ ಶೆಣೈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೇಂದ್ರೀಯ ವಿದ್ಯಾಲಯದ ನಿವೃತ್ತ ಅಧ್ಯಾಪಕ ಎಸ್. ಈಶ್ವರ್ ಭಟ್ ಶ್ರೀ ಶಂಕರರು ಪ್ರತಿಪಾದಿಸಿದ ಅದ್ವೈತ ಸಿದ್ದಾಂತ, ಸನಾತನ ವೈದಿಕ ಧರ್ಮದ ಪುನರುಜ್ಜೀವನ, ಶಂಕರಾಚಾರ್ಯರ ಹಾಗೂ ಮಂಡನ ಮಿಶ್ರರ ನಡುವೆ ನಡೆದ ವಾದಗಳ ಬಗ್ಗೆ ಉಪನ್ಯಾಸವನ್ನು ನೀಡಿದರು.
ಧರ್ಮದರ್ಶಿ ಸತ್ಯಶಂಕರ ಬೊಳ್ಳಾವ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಜನ ಮತ್ತು ಸ್ವಾತಿಕ್ ಪ್ರಾರ್ಥನೆ ನೆರವೇರಿಸಿದರು. ಸಮಿತಿಯ ಅಧ್ಯಕ್ಷ ಮಧುಸೂದನ್ ಅಯರ್ ಸ್ವಾಗತಿಸಿದರು. ಗೌರವ ಅಧ್ಯಕ್ಷ ರವೀಂದ್ರಶೆಟ್ಟಿ ಉಳಿದೊಟ್ಟು ವಂದಿಸಿದರು. ಪ್ರಧಾನ ಕಾರ್ಯದರ್ಶಿ ಸೀತಾರಾಮ ಕೊಪ್ಪಲು ಕಾರ್ಯಕ್ರಮ ನಿರೂಪಿಸಿದರು.