ಕನ್ನಡಿಗರಿಗೇ ಉದ್ಯೋಗ ಖಾಯಂ ಆಗಲಿ
ಮಾನ್ಯರೇ,
ರಾಜ್ಯದಲ್ಲಿರುವ ಖಾಸಗಿ ವಲಯದ ಉದ್ಯೋಗಗಳಲ್ಲಿ ಕನ್ನಡಿಗರಿಗೇ ಹೆಚ್ಚು ಒತ್ತು ನೀಡಬೇಕೆಂಬ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಈ ಕುರಿತು ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಪ್ರತಿಕ್ರಿಯಿಸಿರುವುದು ಕೂಡಾ ಈ ವಿಚಾರಕ್ಕೆ ಮತ್ತಷ್ಟು ಪ್ರಾಮುಖ್ಯತೆ ಬಂದಿದೆ. ಕಳೆದ ಹಲವಾರು ವರ್ಷಗಳ ಕಾಲ ರಾಜ್ಯದಲ್ಲಿ ವಿವಿಧ ರಾಜಕೀಯ ಪಕ್ಷಗಳು ಆಡಳಿತ ನಡೆಸಿದರೂ ಈ ಕುರಿತಾಗಿ ಸ್ಪಷ್ಟ ನಿಲುವನ್ನು ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಇವರು ಕೊಟ್ಟ ಭರವಸೆಗಳು ಕೇವಲ ಭರವಸೆಗಳಾಗಿಯೇ ಉಳಿದಿದ್ದು, ಈವರೆಗೂ ಇದು ಕಾರ್ಯರೂಪಕ್ಕೆ ಬಂದಿಲ್ಲ. ಸದ್ಯ ಕನ್ನಡ ನೆಲದಲ್ಲಿ ಕನ್ನಡಿಗರಿಗೇ ಉದ್ಯೋಗ ಸಿಗುವ ಲಕ್ಷಣಗಳು ಕಾಣುತ್ತಿವೆಯಾದರೂ ಇದಕ್ಕೆ ಬೇಕಾದ ಪೂರ್ವ ತಯಾರಿಗಳನ್ನು ಪೂರ್ಣಗೊಳಿಸುವ ಜವಾಬ್ದಾರಿ ಮೈತ್ರಿ ಸರಕಾರದ ಮೇಲಿದೆ. ಯಾಕೆಂದರೆ ಇದು ಕನ್ನಡಿಗರ ಬಹುದೊಡ್ಡ ಆಶಯ ಕೂಡಾ ಹೌದು. ಕನಸು, ಗುರಿ ಕೂಡಾ ಹೌದು. ರಾಜ್ಯದ ಜನತೆಯ ಬಗ್ಗೆ ಸರಕಾರಕ್ಕೆ ನೈಜ ಕಾಳಜಿ ಇದ್ದರೆ ಈ ದೊಡ್ಡ ಕೆಲಸವನ್ನು ಮಾಡಿ ತೋರಿಸಬೇಕಾಗಿದೆ. ಸರೋಜಿನಿ ಮಹಿಷಿ ವರದಿಯಲ್ಲಿರುವ ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸಲು ಸರಕಾರ ವಿವಿಧ ಕ್ಷೇತ್ರಗಳ ತಜ್ಞರ ಸಲಹೆ, ಸೂಚನೆಗಳನ್ನು ಪಡೆದು ಶೀಘ್ರವೇ ಈ ನಿಯಮ ಜಾರಿಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ. ಸಿ., ಡಿ. ದರ್ಜೆಯಿಂದ ಹಿಡಿದು ಉನ್ನತ ಹುದ್ದೆಗಳಲ್ಲಿ ಕನ್ನಡಿಗರ ನೇಮಕವಾಗಬೇಕಾಗಿದೆ. ಈಗಲೂ ರಾಜ್ಯದ ಬ್ಯಾಂಕಿಂಗ್ ಉದ್ಯೋಗದಲ್ಲಿ ನಮ್ಮ ರಾಜ್ಯಕ್ಕಿಂತ ಇತರ ರಾಜ್ಯದವರ ಸಂಖ್ಯೆಯೇ ಹೆಚ್ಚು. ನಮ್ಮಲ್ಲಿಯೇ ಆಯ್ಕೆಗೆ ಅವಕಾಶ ಇಲ್ಲವೇ?. ಉನ್ನತ ವ್ಯಾಸಂಗ ಮಾಡಿಯೂ ನಿರುದ್ಯೋಗಿಗಳಾಗಿರುವವರು ಇದ್ದಾರೆ. ಪ್ರತಿಭಾನ್ವಿತರು ಇದ್ದಾರೆ. ಆದರೂ ನಮ್ಮ ನಾಡಲ್ಲಿ ಉದ್ಯೋಗಕ್ಕಾಗಿ ಬೇಡುವ, ಅಲೆದಾಡುವ ಪರಿಸ್ಥಿತಿಗೆ ಕಾರಣ ಯಾರು? 'ಕನ್ನಡ ರಾಜ್ಯದಲ್ಲಿ ಕನ್ನಡಿಗರಿಗೇ ಉದ್ಯೋಗ' ಒಂದು ದೊಡ್ಡ ಮಟ್ಟದ ಅಭಿಯಾನ ಆಗಲಿ. ಈ ಮೂಲಕ ನಿರುದ್ಯೋಗ ಸಮಸ್ಯೆಗೆ ಅಂತ್ಯ ಸಿಗಲಿ.