ಕಂಕನಾಡಿ ಮಾರುಕಟ್ಟೆ ನಿರ್ಮಾಣ ತಡೆಗೆ ತೆರೆಮರೆಯಲ್ಲಿ ಯತ್ನ
ಖಾಸಗಿ ಸಿಟಿ-ಸರ್ವಿಸ್ ಬಸ್ ಮಾಲಕರ ಲಾಬಿ
► ಕ್ಯಾಬ್-ರಿಕ್ಷಾ ಚಾಲಕ-ಮಾಲಕರ ಸಹಕಾರದ ನಿರೀಕ್ಷೆಯಲ್ಲಿ ವ್ಯಾಪಾರಿಗಳು
ಮಂಗಳೂರು, ಮೇ 9: ನಗರದ 2ನೇ ಅತೀ ದೊಡ್ಡ ಮಾರುಕಟ್ಟೆ ಎಂಬ ಖ್ಯಾತಿ ಪಡೆದಿರುವ ಕಂಕನಾಡಿಯ ಹಳೆಯ ಮಾರುಕಟ್ಟೆಯನ್ನು ಕೆಡವಿ ಹೊಸ ಮಾರುಕಟ್ಟೆ ನಿರ್ಮಾಣಕ್ಕೆ ಭರದ ಸಿದ್ಧತೆ ನಡೆಯುತ್ತಿರುವ ಮಧ್ಯೆಯೇ ಕೆಲವರು ತಡೆಯೊಡ್ಡುತ್ತಿದ್ದಾರೆ ಎಂಬ ಆರೋಪ ಕಂಕನಾಡಿ ಮಾರುಕಟ್ಟೆಯ ವ್ಯಾಪಾರಿಗಳಿಂದ ಕೇಳಿ ಬಂದಿದೆ.
ಕುಸಿಯುವ ಭೀತಿ ಮತ್ತು ತೀರಾ ನಾದುರಸ್ತಿಯಲ್ಲಿರುವ ಕಂಕನಾಡಿ ಮಾರುಕಟ್ಟೆಯನ್ನು ನವೀಕರಿಸಬೇಕು ಅಥವಾ ಕೆಡವಿ ಹೊಸ ಮಾರುಕಟ್ಟೆ ನಿರ್ಮಿಸಬೇಕು ಎಂಬ ಕಂಕನಾಡಿ ಮಾರುಕಟ್ಟೆ ವ್ಯಾಪಾರಸ್ಥರ ಸಂಘ ಹಾಗೂ ಸ್ಥಳೀಯ ಮಾಜಿ ಕಾರ್ಪೊರೇಟರ್ ನವೀನ್ ಡಿಸೋಜರ ಬೇಡಿಕೆಯನ್ನು ಪರಿಗಣಿಸಿದ್ದ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ವಿಶೇಷ ಮುತುವರ್ಜಿ ವಹಿಸಿ ಫೆ.28ರಂದು ಮಾರುಕಟ್ಟೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಶೀಘ್ರ ಕಾಮಗಾರಿ ಆರಂಭಿಸಲಾಗುವುದು ಎಂದಿದ್ದರು.
ಅದರಂತೆ ಹಳೆಯ ಮಾರುಕಟ್ಟೆ ಕೆಡವಿ ಹೊಸ ಮಾರುಕಟ್ಟೆ ನಿರ್ಮಾಣಗೊಳ್ಳುವವರೆಗೆ ಅಲ್ಲಿನ ವ್ಯಾಪಾರಿಗಳಿಗೆ ತಾತ್ಕಾಲಿಕವಾಗಿ ವ್ಯಾಪಾರ ಮಾಡಲು ಕಂಕನಾಡಿ ಹೂವಿನ ಮಾರುಕಟ್ಟೆಯ ಮುಂದೆ ಗುರುತು ಹಾಕುವ ಸಿದ್ಧತೆ ಮಾಡುವಾಗಲೇ ವಿರೋಧ ವ್ಯಕ್ತವಾಗಿತ್ತು. ಅಂದರೆ ಕಂಕನಾಡಿಯಲ್ಲೇ ಠಿಕಾಣಿ ಹೂಡುವ ಖಾಸಗಿ ಸಿಟಿ ಮತ್ತು ಸರ್ವಿಸ್ ಬಸ್‌ಗಳ ಪ್ರವೇಶಕ್ಕೆ ತಡೆ ಉಂಟಾದಾಗ ಬಸ್ ಮಾಲಕರು ಅಸಮಾಧಾನ ವ್ಯಕ್ತಪಡಿಸತೊಡಗಿದರು. ಪೊಲೀಸರ ಮಧ್ಯೆ ಪ್ರವೇಶವೂ ಆಯಿತು. ಆದರೆ ಸಮಸ್ಯೆಗೆ ಪರಿಹಾರ ಕಾಣದೆ ಖುದ್ದು ಸಚಿವ ಯು.ಟಿ.ಖಾದರ್ ಸ್ಥಳಕ್ಕೆ ಆಗಮಿಸಿ ಅಹವಾಲು ಆಲಿಸಿ ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. ಈ ಮಧ್ಯೆ ಇಲ್ಲಿನ ರಿಕ್ಷಾ ಮತ್ತು ಕ್ಯಾಬ್ ಸ್ಟಾಂಡನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲು ಅಧಿಕಾರಿಗಳು ಮುಂದಾದಾಗ ಚಾಲಕ-ಮಾಲಕರು ವಿರೋಧ ವ್ಯಕ್ತಪಡಿಸತೊಡಗಿದರು. ನಮ್ಮಿಂದ ಹೊಸ ಮಾರುಕಟ್ಟೆ ನಿರ್ಮಾಣಕ್ಕೆ ಯಾವುದೇ ತೊಂದರೆಯಿಲ್ಲ. ನಮ್ಮ ಸ್ಥಳಾಂತರವು ಸಮಂಜಸವೂ ಅಲ್ಲ ಎಂದು ಹೇಳಿಕೊಳ್ಳತೊಡಗಿದರು. ಇದರಿಂದ ಹಳೆಯ ಮಾರುಕಟ್ಟೆ ಕೆಡಹುವ ಕಾರ್ಯಕ್ಕೆ ಸದ್ಯ ಕೊಂಚ ಹಿನ್ನಡೆಯಾಗಿದೆ. ಕಂಕನಾಡಿಯಲ್ಲಿ ಖಾಸಗಿ ಬಸ್ ನಿಲುಗಡೆಗೆ ಅವಕಾಶವೇ ಇಲ್ಲ. ಆದಾಗ್ಯೂ ಕೆಲವು ಬಸ್‌ಗಳು ಇಲ್ಲಿ ಅಕ್ರಮವಾಗಿ ನಿಲ್ಲುತ್ತದೆ. ಅಷ್ಟೇ ಅಲ್ಲ ಬಸ್ಸಿನ ಚಾಲಕರು, ನಿರ್ವಾಹಕರು ಪಕ್ಕದಲ್ಲೇ ‘ಶೌಚಾಲಯ’ವಿದ್ದರೂ ಅದನ್ನು ಬಳಸದೆ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ಶಂಕೆ ಮಾಡಿ ಪರಿಸರ ಹಾಳುಗೆಡವಿದ್ದಾರೆ. ಪ್ರಶ್ನಿಸಲು ಹೋದರೆ ನಮ್ಮನ್ನೇ ದಬಾಯಿಸುತ್ತಾರೆ ಎಂಬುದು ವ್ಯಾಪಾರಿಗಳು ಮತ್ತು ಸಾರ್ವಜನಿಕರ ಆರೋಪವಾಗಿದೆ.
ಒಟ್ಟಿನಲ್ಲಿ ಖಾಸಗಿ ಬಸ್, ರಿಕ್ಷಾ, ಕ್ಯಾಬ್ ಸ್ಟಾಂಡ್‌ಗಳ ಸ್ಥಳಾಂತರ ಮತ್ತು ಇತರ ತಳ್ಳುಗಾಡಿಗಳನ್ನು ತೆರವುಗೊಳಿಸಿದರೆ ಮಾತ್ರ ಮಾರುಕಟ್ಟೆ ನಿರ್ಮಾಣ ಕಾಮಗಾರಿ ಸುಸೂತ್ರವಾಗಿ ನಡೆಯಬಹುದು ಎಂಬುದು ವ್ಯಾಪಾರಿಗಳ ಅಭಿಪ್ರಾಯವಾಗಿದೆ.
ಸುಮಾರು 17 ವರ್ಷದ ಹಿಂದೆ ನಿರ್ಮಾಣಗೊಂಡ ಈ ಮಾರುಕಟ್ಟೆ ಕಟ್ಟಡವು ಕಳಪೆ ಕಾಮಗಾರಿಗೆ ಸಾಕ್ಷಿಯಾ ಗಿದೆ. ಇದನ್ನು ಸಮರ್ಪಕವಾಗಿ ನಿರ್ವಹಿಸದ ಕಾರಣ ಕೆಲವು ವರ್ಷದಿಂದ ಕಟ್ಟಡದ ಸೀಲಿಂಗ್‌ನ ಸಿಮೆಂಟ್ ತುಣುಕುಗಳು ಬೀಳುತ್ತಿವೆ. ಕಟ್ಟಡದ ಅಲ್ಲಲ್ಲಿ ಪಾಚಿ ಹಿಡಿದಿದ್ದು, ಹುಲ್ಲೂ ಬೆಳೆದಿದೆ. ಕುಡಿಯಲು ನೀರಿನ ವ್ಯವಸ್ಥೆಯೂ ಇಲ್ಲಿಲ್ಲ, ವಿದ್ಯುತ್ ಕೂಡ ಆಗಾಗ ಕೈ ಕೊಡುತ್ತಿದ್ದು, ಪಾರ್ಕಿಂಗ್ ವ್ಯವಸ್ಥೆ ಕೂಡ ಸಮರ್ಪಕವಾಗಿಲ್ಲ. ಹಾಗಾಗಿ ಆದಷ್ಟು ಬೇಗ ಮಾರುಕಟ್ಟೆ ನಿರ್ಮಾಣಕ್ಕೆ ಸಂಬಂಧಪಟ್ಟವರು ಒತ್ತು ನೀಡಬೇಕು ಎಂದು ವ್ಯಾಪಾರಿಗಳು ಆಗ್ರಹಿಸುತ್ತಿದ್ದಾರೆ.
► ಗಬ್ಬೆದ್ದ ಪರಿಸರ
ನಗರದಾದ್ಯಂತ ಆ್ಯಂಟನಿ ವೇಸ್ಟೇಜ್ ಕಂಪೆನಿಯು ಸಂಗ್ರಹಿಸಿದ ತ್ಯಾಜ್ಯವನ್ನು ಇಲ್ಲೇ ಇತರ ವಾಹನಗಳಿಗೆ ಲೋಡ್ ಮಾಡಲಾಗುತ್ತಿದೆ. ಅಲ್ಲದೆ ತ್ಯಾಜ್ಯ ಸಂಗ್ರಹ ಮಾಡುವ ವಾಹನವೂ ಇಲ್ಲಿ ನಿಂತಿರುತ್ತದೆ. ಇದರಿಂದ ಪರಿಸರ ಗಬ್ಬೆದ್ದು ನಾರುತ್ತಿದೆ. ಇನ್ನೊಂದೆಡೆ ಬಸ್ ಚಾಲಕ-ನಿರ್ವಾಹಕರು ಇಲ್ಲೇ ಮೂತ್ರ ಶಂಕೆ ಮಾಡುತ್ತಿದ್ದು, ಪ್ರಯಾಣಿಕರು ಮತ್ತು ಸಾರ್ವಜನಿಕರು ಮೂಗುಮುಚ್ಚಿ ಕೊಳ್ಳುವಂತಾಗಿದೆ. ಮತ್ತೊಂದೆಡೆ ಫಾಸ್ಟ್ ಫುಡ್‌ಗಳ, ತಳ್ಳುಗಾಡಿಗಳ ಭರಪೂರ ವ್ಯಾಪಾರವೂ ಇಲ್ಲಿ ಎಗ್ಗಿಲ್ಲದೆ ನಡೆಯುತ್ತದೆ. ಗ್ರಾಹಕರು ಬಳಸಿದ ತಿಂಡಿ-ತಿನಿಸುಗಳ ತ್ಯಾಜ್ಯವೂ ಪರಿಸರದ ಶುಚಿತ್ವಕ್ಕೆ ಧಕ್ಕೆ ತರುತ್ತಿದೆ.
ಹಳೆಯ ಮಾರ್ಕೆಟ್ ಕೆಡಹುವಾಗ ಹಾಲಿ ವ್ಯಾಪಾರಸ್ಥರಿಗೆ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಡಬೇಕಿದೆ. ಅದರಂತೆ ಪಾಲಿಕೆಯ ಅಧಿಕಾರಿಗಳು ಸುಮಾರು 90ರಷ್ಟು ಸ್ಟಾಲ್‌ಗಳಿಗೆ ಗುರುತು ಹಾಕುವಾಗ ಕೆಲವರು ವಿರೋಧ ವ್ಯಕ್ತಪಡಿಸಿರುವುದು ಸರಿಯಲ್ಲ. ಇನ್ನು ಕಂಕನಾಡಿಯಲ್ಲಿ ಕ್ಯಾಬ್ ಸ್ಟಾಂಡ್ ಮಾಡುವಾಗ ನಾವ್ಯಾರೂ ವಿರೋಧ ವ್ಯಕ್ತಪಡಿಸಿಲ್ಲ. ಅಲ್ಲದೆ ಖಾಸಗಿ ಸಿಟಿ- ಸರ್ವಿಸ್ ಬಸ್‌ನವರು ಕಂಕನಾಡಿಯ ಮೈದಾನದಲ್ಲಿ ಹಕ್ಕುಸ್ವಾಮ್ಯ ಸ್ಥಾಪಿಸುವುದು ಸರಿಯಲ್ಲ. ವಸ್ತುಸ್ಥಿತಿಯನ್ನು ಅರ್ಥ ಮಾಡಿಕೊಂಡು ಎಲ್ಲರೂ ಸಹಕರಿಸಬೇಕಿದೆ.
ಅಲಿ ಹಸನ್ | ಅಧ್ಯಕ್ಷ, ಕಂಕನಾಡಿ ಮಾರುಕಟ್ಟೆ ವರ್ತಕರ ಸಂಘ
41 ಕೋ.ರೂ.ವೆಚ್ಚದಲ್ಲಿ ಕೆಯುಐಎಫ್‌ಡಿಸಿ ಮೂಲಕ ನಿರ್ಮಾಣಗೊಳ್ಳಲಿರುವ ಹೈಟೆಕ್ ಮಾರ್ಕೆಟ್‌ಗೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಶಿಲಾನ್ಯಾಸ ನೆರವೇರಿಸಿದ್ದಾರೆ. ಅವರ ಮುತುವರ್ಜಿಯಿಂದಲೇ ಈ ಮಾರ್ಕೆಟ್ ನಿರ್ಮಾಣಗೊಳ್ಳಲಿದೆ. ಮಾರ್ಕೆಟ್ ನಿರ್ಮಾಣಕ್ಕೆ ಯಾರೂ ಅಡ್ಡಿಪಡಿಸುವಂತಿಲ್ಲ. ಮಂಗಳೂರು ಸ್ಮಾರ್ಟ್ ಸಿಟಿ ಆಗಿರುವಾಗ ಮಾರುಕಟ್ಟೆ ಕೂಡ ಸ್ಮಾರ್ಟ್ ಆಗಿರಬೇಕು. ನಗರದ ಬಹುತೇಕ ಮಾರುಕಟ್ಟೆಗಳು ಸ್ಮಾಟ್ ಆಗುತ್ತಲಿವೆ. ಹಾಗಾಗಿ ಕಂಕನಾಡಿ ಮಾರುಕಟ್ಟೆ ಕೂಡ ಸ್ಮಾರ್ಟ್ ಆಗಬೇಕು. ಕೇವಲ ಮಾರುಕಟ್ಟೆ ಮಾತ್ರವಲ್ಲ, ವ್ಯಾಪಾರಿಗಳ ಮತ್ತು ಗ್ರಾಹಕರ ವಾಹನಗಳ ಪಾರ್ಕಿಂಗ್‌ಗೆ ಕೂಡ ವ್ಯವಸ್ಥೆ ಕಲ್ಪಿಸಬೇಕು. ಇದನ್ನು ಬಸ್ ಮಾಲಕರು, ರಿಕ್ಷಾ-ಕ್ಯಾಬ್ ಚಾಲಕ-ಮಾಲಕರು ಅರ್ಥ ಮಾಡಿಕೊಂಡು ಸಹಕರಿಸುತ್ತಾರೆ ಎಂಬ ವಿಶ್ವಾಸ ನನಗಿದೆ. ಹಾಗೇ ಇನ್ನೆರಡು ವರ್ಷಗಳಲ್ಲಿ ಮಾರುಕಟ್ಟೆ ತಲೆ ಎತ್ತಲಿದೆ.
ನವೀನ್ ಡಿಸೋಜ |ಮಾಜಿ ಕಾರ್ಪೊರೇಟರ್, ಬೆಂದೂರ್ ವಾರ್ಡ್
1991ರಲ್ಲೇ ಸುಮಾರು 25 ಟ್ಯಾಕ್ಸಿಗಳ ಪಾರ್ಕಿಂಗ್‌ಗೆ ಜಿಲ್ಲಾಡಳಿತ ಅನುಮತಿ ನೀಡಿತ್ತು. ಅದರಂತೆ 8 ಕ್ಯಾಬ್ ಮತ್ತು 8 ರಿಕ್ಷಾಗಳ ಪಾರ್ಕಿಂಗ್ ಮಾಡಲಾಗುತ್ತಿದೆ. ಇನ್ನು ರಿಕ್ಷಾ-ಕ್ಯಾಬ್ ಸ್ಟಾಂಡ್‌ನಿಂದ ಮಾರುಕಟ್ಟೆ ನಿರ್ಮಾಣಕ್ಕೆ ಏನೂ ತೊಂದರೆಯಿಲ್ಲ. ನಮ್ಮ ಸ್ಟಾಂಡ್ ಒಂದು ಬದಿಯಲ್ಲಿದ್ದು, ನಮ್ಮ ಸ್ಥಳಾಂತರ ಸಮಸ್ಯೆಗೆ ಪರಿಹಾರವೇ ಅಲ್ಲ. ಮಾರುಕಟ್ಟೆ ನಿರ್ಮಾಣಕ್ಕೂ ನಮ್ಮ ವಿರೋಧವಿಲ್ಲ. ಸುಸಜ್ಜಿತ ಮಾರುಕಟ್ಟೆ ನಿರ್ಮಾಣ ಆಗುವಾಗ ನಮಗೂ ಸೂಕ್ತ ವ್ಯವಸ್ಥೆ ಕಲ್ಪಿಸುವ ಭರವಸೆ ಸಿಕ್ಕಿದೆ. ಹಾಗಾಗಿ ನಮಗೆ ಯಾರೂ ತೊಂದರೆ ಮಾಡಬಾರದು.
ಶುಭಕರ | ಕ್ಯಾಬ್ ಚಾಲಕ -ಕಂಕನಾಡಿ ಸ್ಟಾಂಡ್