ಮಂಗಳೂರಿನಲ್ಲಿ ಸಂಚಾರಿ ಪೀಠ ಸ್ಥಾಪಿಸಲು ಒತ್ತಾಯ
ಮಂಗಳೂರು, ಮೇ 10: ಕರಾವಳಿ ಜಿಲ್ಲೆಗಳಾದ ದ.ಕ., ಉಡುಪಿ, ಕಾರವಾರ ಹಾಗೂ ಕೊಡಗು ಜಿಲ್ಲೆಗಳ ಜನರು ಉಚ್ಛ ನ್ಯಾಯಾಲಯಕ್ಕೆ ದೂರು ಸಲ್ಲಿಸಿ ನ್ಯಾಯಕ್ಕಾಗಿ ಸಾಕಷ್ಟು ಸಂಕಷ್ಟ ಪಡಬೇಕಾಗಿರುವುದರಿಂದ ಮಂಗಳೂರಿನಲ್ಲಿ ಸಂಚಾರಿ ಪೀಠ ಸ್ಥಾಪಿಸುವ ಮೂಲಕ ಕರಾವಳಿ ಭಾಗದ ಜನರಿಗೆ ನೆರವಾಗಬೇಕು ಎಂದು ಸರಕಾರೇತರ ಸಂಘಟನೆಗಳ ಒಕ್ಕೂಟ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿಂದು ಈ ಬಗ್ಗೆ ಒತ್ತಾಯ ಮಾಡಿದ ಒಕ್ಕೂಟದ ಅಧ್ಯಕ್ಷ ಬಿ.ಎಸ್. ಚಂದ್ರು, ಉತ್ತರ ಕರ್ನಾಟಕದ ಗುಲ್ಬರ್ಗ, ಧಾರವಾಡದ ಮಾದರಿಯಲ್ಲಿ ನಗರದಲ್ಲಿ ಸಂಚಾರಿ ಪೀಠ ಸ್ಥಾಪಿಸಬೇಕು ಎಂದರು.
ಈ ಬಗ್ಗೆ ಒಕ್ಕೂಟದ ವತಿಯಿಂದ ಕಳೆದ ಎರಡು ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ ಎಂದು ಹೇಳಿದ ಅವರು, ಈ ಬಗ್ಗೆ ಮುಖ್ಯಮಂತ್ರಿ ಕಾನೂನು ಸಚಿವರು, ರಾಜ್ಯಪಾಲರು, ಮುಖ್ಯ ನ್ಯಾಯಾಧೀಶರು, ಸಂಸದರು, ಶಾಸಕರಿಗೆ ಮನವಿ ಸಲ್ಲಿಸಲಾಗಿದೆ. ಮುಖ್ಯಮಂತ್ರಿ, ಕಾನೂನು ಇಲಾಖೆ ಪ್ರಧಾನ ಕಾರ್ಯದರ್ಶಿಯಿಂದ ಸ್ಪಂದನೆ ದೊರಕಿದೆ. ಶೀಘ್ರದಲ್ಲಿ ಈ ಬೇಡಿಕೆ ಈಡೇರದಿದ್ದಲ್ಲಿ ಜನಪ್ರತಿನಿಧಿಗಳ ಎದುರು ಹೋರಾಟ ಅನಿವಾರ್ಯ ಎಂದವರು ಎಚ್ಚರಿಸಿದರು.
ಕೆರೆಗಳ ಸಂರಕ್ಷಣೆಗೆ ಒತ್ತು ನೀಡುತ್ತಿಲ್ಲ!
ಹೆಚ್ಚು ಮಳೆಯಾಗುವ ಕರಾವಳಿ ಜಿಲ್ಲೆಯಲ್ಲೇ ನೀರಿಲ್ಲ ಎಂದು ಹೇಳುತ್ತಿರುವುದು ನಾಚಿಕೆಗೇಡಿನ ಸಂಗತಿ. ಕೆರೆ ಸಂರಕ್ಷಣೆ ಮಾಡುವಲ್ಲಿ ಸಂಬಂಧಪಟ್ಟವರು ಹೆಚ್ಚಿನ ಮುತುವರ್ಜಿ ತೋರದಿರುವುದೇ ಜಿಲ್ಲೆಯಲ್ಲಿ ನೀರಿನ ಸಮಸ್ಯೆಗೆ ಪ್ರಮುಖ ಕಾರಣ. ನೀರು ಇಲ್ಲದಾಗ ಮಾತ್ರವೇ ಇಲ್ಲಿ ಎಚ್ಚೆತ್ತುಕೊಳ್ಳಲಾಗುತ್ತದೆ. ಒಕ್ಕೂಟದ ವತಿಯಿಂದ ಕಳೆದ ಅಕ್ಟೋಬರ್ನಲ್ಲಿಯೇ ಸಮಸ್ಯೆಗಳ ಬಗ್ಗೆ ಎನ್ಜಿಒ ಹಾಗೂ ತಜ್ಞರ ಜತೆ ಚರ್ಚೆ ನಡೆಸುವಂತೆ ಜಿಲ್ಲಾಧಿಕಾರಿ ಹಾಗೂ ಉಸ್ತುವಾರಿ ಸಚಿವರಿಗೆ ಮನವಿ ಮಾಡಲಾಗಿತ್ತು. ಆದರೆ ಅದಕ್ಕೆ ಸ್ಪಂದನವೇ ದೊರಕಿಲ್ಲ ಎಂದು ಒಕ್ಕೂಟದ ಸಲಹಾ ಮಂಡಳಿಯ ನಿರ್ದೇಶಕ ಪದ್ಮನಾಭ ಉಳ್ಳಾಲ ಅಭಿಪ್ರಾಯಿಸಿದರು.
ಕೈಗಾರಿಕೆಗಳಿಗೆ ನೀರು ನಿಲ್ಲಿಸಿ, ಜನಸಾಮಾನ್ಯರಿಗೆ ಒದಗಿಸಿ!
ಜಿಲ್ಲೆಯ ಧಾರಣಾ ಸಾಮರ್ಥ್ಯ ಅರಿಯದೆ ಬೇಕಾಬಿಟ್ಟಿಯಾಗಿ ಕೈಗಾರಿಕೆಗಳಿಗೆ ಅನುಮತಿ ನೀಡುವ ಜತೆಗೆ ನೀರು ಪೂರೈಕೆಯನ್ನು ಕೂಡಾ ಮಾಡುವ ಮೂಲಕ ಬೇಸಿಗೆಯಲ್ಲಿ ಜನಸಾಮಾನ್ಯರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುವಂತೆ ಮಾಡಲಾಗುತ್ತಿದೆ. ಕುದುರೆಮುಖ ಲಕ್ಯ ಡ್ಯಾಂನ ನೀರು ಸದುಪಯೋಗ ಮಾಡಿಕೊಂಡು, ಸಮುದ್ರದ ಉಪ್ಪು ನೀರು ಶುದ್ಧೀಕರಿಸಿ ನೀರು ವಿತರಣೆ ಮಾಡಬೇಕು. ಕೈಗಾರಿಕೆಗಳಾದ ಎಂಆರ್ಪಿಎಲ್, ಎಂಸಿಎಫ್, ನಂದಿಕೂರು ವಿದ್ಯುತ್ ಉಷ್ಣ ಸ್ಥಾವರಗಳಿಗೆ ಬೇರೆ ನೀರು ಸರಬರಾಜು ವ್ಯವಸ್ಥೆ ಮಾಡಿ ಜನಸಾಮಾನ್ಯರಿಗೆ ನೀರು ಒದಗಿಸಬೇಕು. ಈ ಬಗ್ಗೆ ಗಮನ ಹರಿಸದಿದ್ದಲ್ಲಿ ಆಡಳಿತದ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೂಲಕ ಹೋರಾಟ ನಡೆಸಲು ಒಕ್ಕೂಟ ನಿರ್ಧರಿಸಿದೆ ಎಂದು ಗೌರವಾಧ್ಯಕ್ಷ ವಿಜಯ ಕುಮಾರ್ ಹೆಗ್ಡೆ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಮೆಲ್ವಿನ್ ಲೆಸ್ಲಿ, ಉಪಾಧ್ಯಕ, ನಾಗರಾಜ್ ಕೋಡಿಕೆರೆ ಉಪಸ್ಥಿತರಿದ್ದರು.