ಸಂತ್ರಸ್ತ ಮೀನುಗಾರರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ಬಿಡುಗಡೆ: ಸಚಿವೆ ಜಯಮಾಲ
ಸುವರ್ಣ ತ್ರಿಭುಜ ಬೋಟು ಅವಘಡ
ಉಡುಪಿ, ಮೇ 10: ನಾಲ್ಕುವರೆ ತಿಂಗಳ ಹಿಂದೆ ಅವಘಡಕ್ಕೀಡಾದ ಸುವರ್ಣ ತ್ರಿಭುಜ ಬೋಟ್‌ನಲ್ಲಿ ನಾಪತ್ತೆಯಾದ ಏಳು ಮಂದಿ ಮೀನುಗಾರ ಕುಟುಂಬಗಳಿಗೆ ರಾಜ್ಯ ಸರಕಾರ ತಲಾ 10 ಲಕ್ಷ ರೂ. ಪರಿಹಾರಧನವನ್ನು ಬಿಡುಗಡೆ ಗೊಳಿಸಿ ಆದೇಶ ನೀಡಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀನುಗಾರರ ಸಂಕಷ್ಟ ಪರಿಹಾರ ನಿಧಿಯಿಂದ ಆರು ಲಕ್ಷ ರೂ. ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 4 ಲಕ್ಷ ರೂ. ಹೀಗೆ ಒಟ್ಟು 10ಲಕ್ಷ ರೂ. ಪರಿಹಾರ ಮೊತ್ತವನ್ನು ನೇರವಾಗಿ ನಾಪತ್ತೆಯಾದವರ ಕುಟುಂಬದ ವಾರಸುದಾರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುವುದು ಎಂದರು.
ಅದಕ್ಕಾಗಿ ಕುಟುಂಬದವರಿಂದ ಬಾಂಡ್ ಮತ್ತು ದಾಖಲಾತಿಗಳನ್ನು ಪಡೆದು ಈ ಪರಿಹಾರ ನೀಡಲಾಗುವುದು. ನಾಪತ್ತೆಯಾದವರು ಮರಳಿ ಬರಬೇಕೆಂದು ನಮಗೂ ಮತ್ತು ಆ ಕುಟುಂಬದವರಿಗೂ ಆಸೆ ಇದೆ. ನಾಪತ್ತೆಯಾದವರ ಕುಟುಂಬದ ನಿರ್ವಹಣೆ ಹಾಗೂ ಅವರೆಲ್ಲ ಬದುಕು ನಡೆಸಬೇಕೆಂಬ ಕಾಳಜಿ ಯಿಂದ ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ, ಮೀನುಗಾರಿಕಾ ಸಚಿವರು ಈ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಅವರು ತಿಳಿಸಿದರು.
ಸಮುದ್ರದಲ್ಲಿ ಹೋರಾಟದ ಬದುಕು ನಡೆಸುವ ಆ ಮೀನುಗಾರರ ಕುಟುಂಬಗಳಿಗೆ ಎಷ್ಟು ಪರಿಹಾರ ನೀಡಿದರೂ ಸಾಲದು. ಆದುದರಿಂದ ನಾವು ಪರಿಹಾರ ನೀಡಿದಂತೆ ಕೇಂದ್ರ ಸರಕಾರವು ಪರಿಹಾರ ನೀಡಬೇಕೆಂಬ ಶಿಫಾರಸ್ಸನ್ನು ಕುಟುಂಬದ ಪರವಾಗಿ ಕೇಂದ್ರಕ್ಕೆ ಕಳುಹಿಸಿಕೊಡಲಾಗುವುದು ಎಂದು ಅವರು ಹೇಳಿದರು.
ವಾರೀಸುದಾರರಿಗೆ ಪರಿಹಾರ ನೇರ ವರ್ಗಾವಣೆ
ನಾಪತ್ತೆಯಾದ ಮೀನುಗಾರರಾದ ಉಡುಪಿ ಬಡಾನಿಡಿಯೂರಿನ ಚಂದ್ರ ಶೇಖರ್ ಕೋಟ್ಯಾನ್ (ಅವಲಂಬಿತರಾದ ಪತ್ನಿ ಶ್ಯಾಮಲಾ), ಬಡಾನಿಡಿ ಯೂರಿನ ದಾಮೋದರ ಸಾಲ್ಯಾನ್ (ಪತ್ನಿ ಮೋಹಿನಿ), ಉತ್ತರ ಕನ್ನಡ ಜಿಲ್ಲೆಯ ಮಾದನಗೇರಿಯ ಸತೀಶ್ ಹರಿಕಂತ್ರ (ಪತ್ನಿ ಪ್ರಮೀಳಾ), ಕುಮಟಾ ಹೊಲನಗದ್ದೆಯ ಲಕ್ಷ್ಮಣ ಹರಿಕಂತ್ರ (ಪತ್ನಿ ಪ್ರೇಮಾ), ಹೊನ್ನಾವರ ಮಂಕಿಯ ರವಿ ಹರಿಕಂತ್ರ (ತಂದೆ ನಾಗಪ್ಪ ಮಂಜಪ್ಪ ಹರಿಕಂತ್ರ), ಭಟ್ಕಳ ಅಳ್ವೆಕೋಡಿಯ ಹರೀಶ್ ಮೊಗೇರ (ತಾಯಿ ದನವಂತಿ ಶನಿಯಾರ್ ಮೊಗೇರ), ಭಟ್ಕಳ ಬಂದರ್ ರೋಡ್‌ನ ರಮೇಶ್ ಮೊಗೇರ (ತಂದೆ ಶನಿಯಾರ ತಿಮ್ಮಪ್ಪ ಮೊಗೇರ) ಅವರ ಅವಲಂಬಿತ ವಾರೀಸುದಾರರ ಬ್ಯಾಂಕ್ ಖಾತೆಗೆ ಪರಿಹಾರ ಮೊತ್ತವನ್ನು ನೇರವಾಗಿ ವರ್ಗಾಯಿಸಲಾಗುವುದು ಎಂದು ಸರಕಾರಿ ಆದೇಶದಲ್ಲಿ ತಿಳಿಸಲಾಗಿದೆ ಎಂದು ಸಚಿವೆ ಜಯಮಾಲ ಹೇಳಿದರು.