ಅಧ್ಯಯನ ಪ್ರವಾಸಗಳ ಹೆಸರಲ್ಲಿ ದುಂದುವೆಚ್ಚ!
ದಿ ವೈರ್ ಸಲ್ಲಿಸಿದ್ದ ಆರ್ಟಿಐ ಅರ್ಜಿಯ ಮೂಲಕ ದೊರೆತ ಮಾಹಿತಿ ಆಘಾತಕಾರಿ ವಿಷಯಗಳನ್ನು ಹೊರಗೆಡಹಿದೆ. ಸಂಸತ್ ಸಮಿತಿಯ ಅಧ್ಯಯನ ಪ್ರವಾಸದ ಮೇಲೆ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರು ಮಾಡಬಹುದಾದ ವೆಚ್ಚಗಳಿಗೆ ಮಾರ್ಗದರ್ಶಿ ಸೂತ್ರಗಳಿವೆ. ಈ ಸೂತ್ರಗಳನ್ನು ಉಲ್ಲಂಘಿಸಿ ಸಂಸದರು ದೇಶದ ತೆರಿಗೆದಾರರ ಕೋಟಿಗಟ್ಟಲೆ ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡಿದ್ದಾರೆ.
ಮಾರ್ಗದರ್ಶಿ ಸೂತ್ರಗಳ ಪ್ರಕಾರ, ಸಂಸತ್ ಸಮಿತಿ ಅಧ್ಯಯನ ಪ್ರವಾಸಗಳ ವೇಳೆ ಸಂಸದರು ಸರಕಾರಿ ಅತಿಥಿಗೃಹಗಳಲ್ಲಿ ಅಥವಾ ಹೊಟೇಲ್ಗಳಲ್ಲಿ ಉಳಿದುಕೊಳ್ಳಬೇಕು. ವಿಶೇಷ ಸಂದರ್ಭಗಳಲ್ಲಿ ಮಾತ್ರ ಅವರಿಗೆ ಪಂಚತಾರಾ ಹೊಟೇಲ್ಗಳಲ್ಲಿ ವಸತಿ ವ್ಯವಸ್ಥೆ ಮಾಡಬಹುದು, ಆದರೆ ನಮ್ಮ ಸಂಸದರು ದೇಶದ ಅತ್ಯಂತ ಅದ್ದೂರಿಯ ಹಾಗೂ ಅತ್ಯಂತ ದುಬಾರಿಯಾದ ಹೊಟೇಲುಗಳಲ್ಲಿ ಉಳಿದುಕೊಂಡದ್ದಷ್ಟೆ ಅಲ್ಲದೆ, ಆ ಅವಧಿಯಲ್ಲಿ ಊಟೋಪಚಾರ ಮತ್ತು ಪ್ರಯಾಣಕ್ಕಾಗಿ ಭಾರೀ ಮೊತ್ತದ ಹಣವನ್ನು ವ್ಯಯಿಸಿದ್ದಾರೆ.
2013 ಮತ್ತು 2018ರ ನಡುವಿನ ಅವಧಿಯಲ್ಲಿ ಕೈಗೊಂಡ ಇಂತಹ ಪ್ರವಾಸಗಳಿಗಾಗಿ 115 ದಿನಗಳ ಅವಧಿಯಲ್ಲಿ 15 ಕೋಟಿ ರೂ. ಗಳಿಗಿಂತಲೂ ಹೆಚ್ಚಿನ ಮೊತ್ತವನ್ನು ವ್ಯಯಿಸಲಾಗಿದೆ. ಹೊಟೇಲ್ ಬಿಲ್ಗಳಲ್ಲದೆ ಖಾಸಗಿ ಕ್ರೂಸ್ (ಸಮುದ್ರ ವಿಹಾರ ಯಾನ)ಗಳಿಗಾಗಿ ಕೂಡ ದೊಡ್ಡ ಮೊತ್ತದ ಹಣವನ್ನು ವೆಚ್ಚ ಮಾಡಲಾಗಿದೆ.
ಉದಾಹರಣೆಗೆ, 2016-2017ರ ನಡುವೆ ಜೆಡಿ(ಯು) ಸಂಸದ ರಾಮ್ಚಂದ್ರ ಪ್ರಸಾದ್ ಸಿಂಗ್ ನೇತೃತ್ವದ ಉದ್ಯಮಗಳ ಕುರಿತಾದ ಸಂಸತ್ ಸಮಿತಿಯು ಐದು ಅಧ್ಯಯನ ಪ್ರವಾಸಗಳಿಗಾಗಿ ರೂ. 1.83 ಕೋಟಿಗಿಂತಲೂ ಹೆಚ್ಚು ಮೊತ್ತವನ್ನು ಖರ್ಚುಮಾಡಿತು. ಅಂದರೆ ಪ್ರತಿ ಪ್ರವಾಸಕ್ಕೆ ಸಮಿತಿ ವ್ಯಯಿಸಿದ ಮೊತ್ತ 37 ಲಕ್ಷ ರೂಪಾಯಿ. ಅದೇ ರೀತಿಯಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕುರಿತಾದ ಸಮಾಜವಾದಿ ಪಕ್ಷದ ಸಂಸದ ರಾಮ್ ಗೋಪಾಲ್ ಯಾದವ್ ನೇತೃತ್ವದ ಸಂಸದೀಯ ಸಮಿತಿ ಕೊಯಮತ್ತೂರು, ಊಟಿ ಮತ್ತು ಬೆಂಗಳೂರಿಗೆ 2015ರಲ್ಲಿ ಕೈಗೊಂಡ ಕೇವಲ ಐದು ದಿನಗಳ ಪ್ರವಾಸಕ್ಕೆ ಖರ್ಚು ಮಾಡಿದ ಮೊತ್ತ ರೂ. 24.85 ಲಕ್ಷ. ಪ್ರವಾಸದ ಅವಧಿಯಲ್ಲಿ ಸಂಸದರು ಊಟಿಯಲ್ಲಿ ಹೈಲ್ಯಾಂಡ್ ಹೊಟೇಲ್, ಬೆಂಗಳೂರಿನಲ್ಲಿ ಒಬೆರಾ ಮತ್ತು ಕೊಯಮುತ್ತೂರಿನಲ್ಲಿ ಅಲೋಫ್ಟ್ನಂತಹ ಭಾರೀ ದುಬಾರಿ ಹೊಟೇಲ್ಗಳಲ್ಲಿ ಉಳಿದುಕೊಂಡಿದ್ದರು. ಹೈಲ್ಯಾಂಡ್ ಹೊಟೇಲ್ನಲ್ಲಿ ಎರಡು ದಿನಗಳ ವಾಸ್ತವ್ಯಕ್ಕೆ 4.50ಲಕ್ಷ ರೂಪಾಯಿ ನೀಡಿದ್ದರು. ಇದರಲ್ಲಿ 3.56 ಲಕ್ಷ ರೂಪಾಯಿ ರೂಮ್ ಚಾರ್ಜಸ್ ಮತ್ತು 21,853 ರೂಪಾಯಿ ಫುಡ್ ಬಿಲ್ ಆಗಿತ್ತು. ಬೆಂಗಳೂರಿನಲ್ಲಿ ಒಬೆರಾ ಹೊಟೇಲ್ನಲ್ಲಿ ಅವರು ನೀಡಿದ ಬಿಲ್ನ ಮೊತ್ತ 12.05 ಲಕ್ಷ ರೂಪಾಯಿಗಳು. ಸಮಿತಿಯ ಓರ್ವ ಸದಸ್ಯ, ಸೆಕ್ಷನ್ ಆಫೀಸರ್ ಸಿ. ಆರ್. ಶ್ರೀನಿವಾಸ್, ಕೇವಲ ಒಂದೇ ದಿನದಲ್ಲಿ ರೂ. 3.78 ಲಕ್ಷ ಖರ್ಚು ಮಾಡಿದ್ದರು.
ಸಾರಿಗೆಗಾಗಿ ಕೂಡ ಗಣನೀಯ ಮೊತ್ತವನ್ನು ವ್ಯಯಿಸಲಾಯಿತು. 2015 ಜೂನ್ 7 ಮತ್ತು ಜೂನ್ 12ರ ನಡುವೆ ಸಮಿತಿಯು ಓಡಾಟಕ್ಕಾಗಿ 5.50 ಲಕ್ಷ ರೂಪಾಯಿ ವೆಚ್ಚಮಾಡಿತು.
ಸಂಸದೀಯ ಸಮಿತಿಯ ಅಧ್ಯಯನ ಪ್ರವಾಸಗಳಿಗೆ ಎಷ್ಟು ಯಾವಾಗ ಖರ್ಚು ಮಾಡಬೇಕೆಂದು 2005ರಲ್ಲಿ ಮಾರ್ಗದರ್ಶಿ ನಿಯಮಗಳನ್ನು ರೂಪಿಸಲಾಯಿತು. ನಿಯಮಗಳ ಪ್ರಕಾರ ಸದಸ್ಯರು ಸರಕಾರಿ ಅತಿಥಿಗೃಹಗಳಲ್ಲಿ, ಶಾಸಕ ಭವನ ಹಾಗೂ ಸರ್ಕಿಟ್ ಹೌಸ್ಗಳಲ್ಲಿ ಉಳಿದುಕೊಳ್ಳಬೇಕು. ಇವು ಯಾವುವೂ ಲಭ್ಯವಿಲ್ಲದ ಸ್ಥಳಗಳಲ್ಲಿ ಮಾತ್ರ ಸರಕಾರಿ ಮಾಲಕತ್ವದ ಹೊಟೇಲುಗಳಲ್ಲಿ ಉಳಿದುಕೊಳ್ಳಬೇಕು.
2016ರ ಫೆಬ್ರವರಿ 2ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕುರಿತಾದ ಸಂಸದರ ಸಮಿತಿಯ ಗುರ್ಗಾಂವ್ನ ಗುರುಗೋವಿಂದ್ ಸಿಂಗ್ ವೈದ್ಯಕೀಯ ಕಾಲೇಜಿಗೆ ಹಾಗೂ ದಿಲ್ಲಿಯ ವರ್ಧಮಾನ್ ಮಹಾವೀರ್ ಕಾಲೇಜಿಗೆ ಭೇಟಿ ನೀಡಿತು. ಅದು ಒಂದೇ ದಿನದಲ್ಲಿ ಮಾಡಿದ ಖರ್ಚು 1.25 ಲಕ್ಷ ರೂಪಾಯಿ. ಇದರಲ್ಲಿ ದಿಲ್ಲಿಯ ಚಾಣಕ್ಯಪುರಿಯಲ್ಲಿರುವ ಗ್ಲೋರಿಯಸ್ ಇಂಡಿಯಾ ಟ್ರಾವೆಲ್ ಎಂಬ ಏಜನ್ಸಿಗೆ ರೂ. 22,295 ನೀಡಲಾಗಿತ್ತು. ಹಾಗೆಯೇ, ಬಿಜೆಪಿ ಸಂಸದ ಪ್ರೇಮ್ಜಿ ಭಾ ಸೋಲಂಕಿ ನೇತೃತ್ವದ ಸಮಿತಿಯು 2016ರ ಸೆಪ್ಟಂಬರ್ 6ರಂದು ದಿಲ್ಲಿಯ ಎಐಐಎಂಎಸ್ಗೆ ಭೇಟಿ ನೀಡಿದಾಗ ಅವರ ಜತೆ 22 ಮಂದಿ ಇತರ ಸಂಸದರೂ ಇದ್ದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕುರಿತಾದ ಸಮಿತಿಯು ಬೆಂಗಳೂರು, ಮುಂಬೈ ಮತ್ತು ಗೋವಾಕ್ಕೆ ಕೈಗೊಂಡ ಅಧ್ಯಯನ ಪ್ರವಾಸಕ್ಕೆ ರೂ.30ಲಕ್ಷಕ್ಕಿಂತಲೂ ಹೆಚ್ಚು ಖರ್ಚು ಮಾಡಿತ್ತು. ಸಮಿತಿಯು ಸದಸ್ಯರ ವಾಸ್ತವ್ಯಕ್ಕಾಗಿ ಪಂಚತಾರಾ ಹೊಟೇಲ್ಗಳಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಬೆಂಗಳೂರಿನ ಲಲಿತ ಹೊಟೇಲ್ಗೆ 10.12 ಲಕ್ಷ ರೂಪಾಯಿ ಪಾವತಿಸಲಾಯಿತು. ಹಾಲಿಡೇ ಇನ್ಗೆ ಕೇವಲ ಒಂದು ದಿನಕ್ಕೆ ರೂ.7.89ಲಕ್ಷ ಪಾವತಿಸಲಾಯಿತು. ಇದರಲ್ಲಿ 4.63 ಲಕ್ಷ ರೂಪಾಯಿ ಕೇವಲ ವಸತಿಗಾಗಿ ನೀಡಲಾಯಿತು. ಬೆಂಗಳೂರಿನ ದಿ ರಾಯಲ್ ಆರ್ಚಿಡ್ ಬೀಚ್ ರಿಸಾರ್ಟ್ ಆ್ಯಂಡ್ ಸ್ಪಾ ಹೊಟೇಲ್ಗೆ ರೂ. 5.33ಲಕ್ಷ ಪಾವತಿಸಲಾಯಿತು. ಇದರಲ್ಲಿ ರೂ. 3.79 ಲಕ್ಷ ರೂಮ್ ಬಾಡಿಗೆ ಮತ್ತು ರೂ. 1.13 ಲಕ್ಷ ಔತಣ (ಬ್ಯಾಂಕ್ವೆಟ್) ಹಾಗೂ ರೂ. 40,965 ಊಟದ ಬಿಲ್ ಆಗಿತ್ತು.
ಇನ್ನೊಂದು ಅಧ್ಯಯನ ಪ್ರವಾಸವೆಂದು ಇಂಪಾಲ್, ಶಿಲ್ಲಾಂಗ್ ಮತ್ತು ಗುವಾಹತಿಗೆ ಹೋದ 20 ಮಂದಿ ಸಂಸದರ ಹಾಗೂ ಸಚಿವಾಲಯದ ಅಧಿಕಾರಿಗಳ ತಂಡ 2018ರ ಜನವರಿ 15-22ರ ನಡುವೆ ರೂ. 29.94 ಲಕ್ಷ ವೆಚ್ಚ ಮಾಡಿತು. ಸಾರಿಗೆಗೆ ಎಂದು ಟ್ರಾವೆಲ್ ಲೈನ್ ಏಜೆನ್ಸಿಗೆ ರೂ. 7.79ಲಕ್ಷ ಪಾವತಿಸಿದ್ದಲ್ಲದೆ ರೂ. 23,600 ವೌಲ್ಯದ ಲೆದರ್ ಬ್ಯಾಗ್ಗಳನ್ನು ಖರೀದಿಸಲಾಯಿತು. ಅಲ್ಲದೆ ತಂಡದ ಸದಸ್ಯರು ಒಂದು ಖಾಸಗಿ ಕ್ರೂಸ್ ಟ್ರಿಪ್ನ ಮೋಜು ಅನುಭವಿಸಲಿಕ್ಕಾಗಿ ರೂ.56,975 ವೆಚ್ಚ ಮಾಡಿದರು.
ನಿಯಮಾನುಸಾರ, ಸಂಸದೀಯ ಸಮಿತಿಗಳಿಗೆ ವಾರ್ಷಿಕ ಎರಡಕ್ಕಿಂತ ಹೆಚ್ಚು ಅಧ್ಯಯನ ಪ್ರವಾಸಗಳಿಗೆ ಅನುಮತಿ ನೀಡಕೂಡದು ಮತ್ತು ಗರಿಷ್ಠ ಮೂವರಿಗಿಂತ ಹೆಚ್ಚು ಅಧಿಕಾರಿಗಳು ಸಮಿತಿಯ ಜತೆ ಹೋಗುವಂತಿಲ್ಲ. ಆದರೆ ಈ ನಿಯಮಗಳನ್ನೆಲ್ಲ ಗಾಳಿಗೆ ತೂರಲಾಗುತ್ತದೆ. ಉದಾಹರಣೆಗೆ, ರಾಜ್ಯಸಭೆಯಲ್ಲಿ ಸರಕಾರಿ ಆಶ್ವಾಸನೆಗಳ ಕುರಿತು ಸಮಿತಿಯೊಂದು 2012 ಮತ್ತು 2018ರ ನಡುವೆ 17 ಅಧ್ಯಯನ ಪ್ರವಾಸಗಳನ್ನು ಕೈಗೊಂಡಿದೆ. ಇಂತಹ ಹಲವು ಉದಾಹರಣೆಗಳಿವೆ.
ಈ ರೀತಿಯಲ್ಲಿ ತೆರಿಗೆದಾರರ ಹಣ ದುಂದುವೆಚ್ಚವಾಗುತ್ತಿರುವ ಬಗ್ಗೆ ಟ್ರಾನ್ಸ್ಪರೆನ್ಸಿ ಇಂಟರ್ನ್ಯಾಶನಲ್ 2014ರಲ್ಲಿ ಪ್ರಧಾನಿಯವರ ಕಚೇರಿಗೆ ಬರೆದಿದ್ದ ಪತ್ರವೊಂದಕ್ಕೆ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಕೃಪೆ: thewire.in