ನೆಲ್ಲಿಕಾಯಿ ರಸ್ತೆ ಬದಿಯಲ್ಲೊಂದು ಅಪಾಯಕಾರಿ ವಿದ್ಯುತ್ ಕಂಬ
ಮಂಗಳೂರು, ಮೇ 11: ನಗರದ ಸ್ಟೇಟ್‌ಬ್ಯಾಂಕ್ ಸಮೀಪದ ನೆಲ್ಲಿಕಾಯಿ ರಸ್ತೆ ಬದಿಯಲ್ಲೊಂದು ವಿದ್ಯುತ್ ಕಂಬ ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ವಾಣಿಜ್ಯ ವಹಿವಾಟಿನ ಪ್ರಮುಖ ಕೇಂದ್ರವಾದ ಬಂದರು ಪ್ರದೇಶಕ್ಕೆ ದಿನನಿತ್ಯ ಸಾವಿರಾರು ಜನರು ಮತ್ತು ನೂರಾರು ವಾಹನಗಳು ಇದೇ ರಸ್ತೆಯನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಅಲ್ಲದೆ, ಇಲ್ಲೇ ಅಂಗಡಿ ಮುಂಗಟ್ಟುಗಳಲ್ಲದೆ ನಿರ್ಮಾಣ ಹಂತದ ವಾಣಿಜ್ಯ ಕಟ್ಟಡವೂ ಇದೆ. ಹಾಗಾಗಿ ಇಲ್ಲಿ ವಾಹನಗಳು ಕೂಡ ಪಾರ್ಕಿಂಗ್ ಮಾಡುತ್ತಿವೆ.
ಕಬ್ಬಿಣದ ಈ ವಿದ್ಯುತ್ ಕಂಬವು ತುಕ್ಕು ಹಿಡಿದಿದ್ದು, ಕಂಬದ ಬುಡ ಭಾಗವು ಭಾಗಶಃ ಹೋಳಾಗಿದೆ. ಹಾಗಾಗಿ ಈ ಕಂಬವು ಇಂದೋ-ನಾಳೆಯೋ ಮುರಿದು ಬಿದ್ದರೆ ಅಚ್ಚರಿ ಇಲ್ಲ. ಜನನಿಬಿಡ ಪ್ರದೇಶದಲ್ಲೇ ಇರುವ ಈ ಕಂಬದ ದಯನೀಯ ಸ್ಥಿತಿಯ ಬಗ್ಗೆ ಮೆಸ್ಕಾಂ ಇಲಾಖೆಯ ಅಧಿಕಾರಿಗಳು ಗಮನ ಹರಿಸದಿರುವುದು ವಿಪರ್ಯಾಸ.
ಕೆಲವು ಸಮಯದಿಂದ ಈ ಕಂಬ ಅಪಾಯಕಾರಿ ಸ್ಥಿತಿಯಲ್ಲಿದೆ. ಸಾವಿರಾರು ಮಂದಿ ದಿನನಿತ್ಯ ಓಡಾಟ ಮಾಡುವ ರಸ್ತೆ ಇದಾಗಿದೆ. ಮೆಸ್ಕಾಂ ಅಧಿಕಾರಿಗಳು, ಸಿಬ್ಬಂದಿ ವರ್ಗ, ಮೆಸ್ಕಾಂ ಕೆಲಸಗಾರರು ಕೂಡ ಇದೇ ರಸ್ತೆಯಲ್ಲಿ ಓಡಾಡುತ್ತಿದ್ದರೂ ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹಾಗಾಗಿ ಮೆಸ್ಕಾಂ ಅಧಿಕಾರಿಗಳು ಶೀಘ್ರ ಇತ್ತ ಗಮನಹರಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.