ಓ ಮೆಣಸೇ…
ವಿಧಾನ ಸಭೆ ವಿಪಕ್ಷ ನಾಯಕ ಮತ್ತು ಪಕ್ಷದ ಅಧ್ಯಕ್ಷ ಸ್ಥಾನ ಎರಡನ್ನೂ ನಿಭಾಯಿಸುವುದು ಕಷ್ಟವಾಗುತ್ತಿದೆ - ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
ನಿಮ್ಮ ಎಲ್ಲ ಕಷ್ಟಗಳನ್ನು ಪರಿಹಾರ ಮಾಡಿ ಮನೆಯಲ್ಲಿ ಕೂರಿಸಲು ಪಕ್ಷದೊಳಗೆ ಭಾರೀ ಕೆಲಸ ನಡೆಯುತ್ತಿದೆ.
---------------------
ಜೂನ್ ಮೊದಲ ವಾರದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಲಿದ್ದಾರೆ
- ವಿ.ಸೋಮಣ್ಣ, ಶಾಸಕ
ಹೀಗೆ ಹೇಳಿ ಎಷ್ಟು ಬಾರಿ ಯಡಿಯೂರಪ್ಪರನ್ನು ಏಮಾರಿಸುತ್ತೀರಿ?
---------------------
ನಿಜ ಅರ್ಥದಲ್ಲಿ ಸಂಗೀತ ಜಾತ್ಯತೀತ ಮತ್ತು ಭಾಷಾತೀತ - ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ
ಆದರೆ ಸಂಗೀತ ನುಡಿಸುವ ಮನುಷ್ಯ ಮಾತ್ರ ಅತೀತನಾಗಿಲ್ಲ.
---------------------
ಪ್ರತಿ ಹನಿ ರಕ್ತಕ್ಕೂ ಪ್ರತೀಕಾರ ತೀರಿಸುವೆ - ನರೇಂದ್ರಮೋದಿ, ಪ್ರಧಾನಿ
ಪುಲ್ವಾಮದಲ್ಲಿ ಹರಿದ ರಕ್ತಕ್ಕೆ ಮತದಾರರು ನಿಮ್ಮ ವಿರುದ್ಧ ಪ್ರತೀಕಾರ ತೀರಿಸುವ ಎಲ್ಲ ಸೂಚನೆಗಳು ಕಾಣುತ್ತಿವೆ.
---------------------
ರಾಹುಲ್‌ಗಾಂಧಿ - ನರೇಂದ್ರಮೋದಿ ಹೋಲಿಕೆ ಸಲ್ಲದು - ಅಮಿತ್ ಶಾ, ಬಿಜೆಪಿ ಅಧ್ಯಕ್ಷ
ಹೌದು. ಅದು ರಾಹುಲ್‌ಗಾಂಧಿಗೆ ಮಾಡುವ ಅವಮಾನ.
---------------------
ಜೆಡಿಎಸ್‌ನವರು ಬಿಜೆಪಿಗೆ ಮತ ಹಾಕಿದ್ದು ಸತ್ಯ - ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ಕಾಂಗ್ರೆಸ್‌ನವರು ಬಿಜೆಪಿಗೆ ಮತಹಾಕಿದ್ದು ಮಾತ್ರ ನಿಜವೇ?
---------------------
ನನ್ನತ್ತ ಕೆಸರು ಎರಚಿದಷ್ಟೂ ಕಮಲ ಅರಳುತ್ತೆ - ನರೇಂದ್ರ ಮೋದಿ, ಪ್ರಧಾನಿ
ನಿಮಗೆ ನೀವೇ ಕೆಸರೆರಚುಕೊಳ್ಳುತ್ತಿರುವಾಗ, ಉಳಿದವರಿಗೇನು ಕೆಲಸ?
---------------------
ನಿಜವಾದ ಮಣ್ಣಿನ ಮಗ ಯಡಿಯೂರಪ್ಪ - ಈಶ್ವರಪ್ಪ, ಬಿಜೆಪಿ ನಾಯಕ
ಅಂದರೆ, ಶೀಘ್ರದಲ್ಲೇ ಮಣ್ಣು ಮಾಡುವ ಉದ್ದೇಶವಿದೆಯೇ?
---------------------
ಸಮ್ಮಿಶ್ರ ಸರಕಾರದಿಂದ ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ
- ಜಗದೀಶ್ ಶೆಟ್ಟರ್, ಮಾಜಿ ಮುಖ್ಯಮಂತ್ರಿ
ನೋಟು ನಿಷೇಧ ಮಾಡಿದ್ದು ಸಮ್ಮಿಶ್ರ ಸರಕಾರವೇ?
---------------------
ಚಿಕ್ಕಂದಿನಿಂದಲೇ ಮನೆ ಬಿಟ್ಟಿರುವುದರಿಂದ ಪ್ರಧಾನಿ ಮೋದಿಗೆ ಸಂಸ್ಕಾರ ಇಲ್ಲ - ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ
ಸಂಸ್ಕಾರ ಇಲ್ಲವೆಂದು ಮನೆಯಿಂದ ಓಡಿಸಿರಬೇಕು.
---------------------
ಎಲ್ಲವೂ ಅಂದುಕೊಂಡಂತೆ ನಡೆದರೆ ನಾನೇ ಪ್ರಧಾನಿ
- ಮಾಯಾವತಿ, ಬಿಎಸ್ಪಿ ನಾಯಕಿ
ಬಿಜೆಪಿಯೊಂದಿಗೆ ಕೈ ಮಿಲಾಯಿಸುವ ಉದ್ದೇಶವೇನಾದರೂ ಇದೆಯೇ?
---------------------
ರಾಜ್ಯದಲ್ಲಿ ಹಿಂಬಾಗಿಲ ತುರ್ತುಪರಿಸ್ಥಿತಿ ಜಾರಿಯಾಗಿದೆ - ನಳಿನ್‌ಕುಮಾರ್ ಕಟೀಲು, ಸಂಸದ
ಮುಂಬಾಗಿಲ ತುರ್ತುಪರಿಸ್ಥಿತಿಯನ್ನು ಕೇಂದ್ರ ಜಾರಿಗೊಳಿಸಿದೆ.
---------------------
ನಾನು ದಣಿದಿದ್ದೇನೆ, ಆದರೆ ನಿವೃತ್ತಿಯಾಗಿಲ್ಲ
- ಉಮಾಭಾರತಿ, ಕೇಂದ್ರ ಸಚಿವೆ
ಗಂಗಾನದಿಯನ್ನು ಪೂರ್ಣ ಗಬ್ಬೆಬ್ಬಿಸಿಯೇ ನಿವೃತ್ತಿಯಾಗುವ ಉದ್ದೇಶವಿರಬೇಕು.
---------------------
ಎಂ.ಬಿ.ಪಾಟೀಲ್ ಬಿಜೆಪಿಗೆ ಬಂದರೆ ಸಿಎಂ ಸ್ಥಾನವೊಂದನ್ನು ಬಿಟ್ಟು ಅವರು ಬೇಡಿದ್ದನ್ನು ಕೊಡಿಸುವೆ - ಬಸವನಗೌಡ ಪಾಟೀಲ್ ಯತ್ನಾಳ್, ಶಾಸಕ
ಪ್ರಧಾನಿ ಹುದ್ದೆಯನ್ನು ಕೇಳುವ ಸಾಧ್ಯತೆ ಇದೆ.
---------------------
ಕೇಸರಿ ಬಣ್ಣ ್ಯಾಗದ ಸಂಕೇತ - ಪ್ರಜ್ಞಾಸಿಂಗ್ ಠಾಕೂರ್ ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ
ಸದ್ಯಕ್ಕೆ ಅದು ಭಯೋತ್ಪಾದನೆಯ ಸಂಕೇತವಾಗಿ ಮಾರ್ಪಟ್ಟಿದೆ.
---------------------
ಮಹಾಭಾರತದ ದುರ್ಯೋಧನನಿಗೂ ಪ್ರಧಾನಿ ಮೋದಿಯಂತಹ ಅಹಂಕಾರ ಇತ್ತು - ಪ್ರಿಯಾಂಕಾ ವಾದ್ರಾ, ಕಾಂಗ್ರೆಸ್ ನಾಯಕಿ
ಆದರೆ ದುರ್ಯೋಧನ ನೋಟು ನಿಷೇಧ ಮಾಡಿ ಪ್ರಜೆಗಳಿಗೆ ತೊಂದರೆ ಕೊಟ್ಟಿಲ್ಲ.
---------------------
ಬಿಳಿ ಬಟ್ಟೆ ಹಾಕಿಕೊಂಡವರೆಲ್ಲ ರಾಜಕಾರಣಿಗಳಲ್ಲ - ಡಿ.ಕೆ.ಶಿವಕುಮಾರ್, ಸಚಿವ
ಮತ್ತೇಕೆ ಬಿಳಿ ಬಟ್ಟೆ ಹಾಕಿಕೊಂಡಿದ್ದೀರಿ?
---------------------
ಭಾರತೀಯರೇ ಟಿಪ್ಪು ಪುಣ್ಯತಿಥಿ ಮರೆತಿದ್ದು ನಿರಾಶಾದಾಯಕ - ಶಶಿತರೂರು, ಸಂಸದ
ಪರವಾಗಿಲ್ಲ ಬ್ರಿಟನ್ ಈಗಲೂ ಟಿಪ್ಪುವನ್ನು ನೆನಪಿಟ್ಟುಕೊಂಡಿದೆ.
---------------------
ಇಂದಿನ ಜನರು ರಾಜಕಾರಣಿಗಳು ಹಾಗೂ ಸಾಹಿತಿಗಳನ್ನು ನಂಬುವುದಿಲ್ಲ
- ಚಂದ್ರಶೇಖರ ಪಾಟೀಲ, ಸಾಹಿತಿ
ಸದ್ಯಕ್ಕೆ ಜನ ಸಾಹಿತಿಗಳನ್ನು ಕೂಡ ನಂಬುತ್ತಿಲ್ಲ.
---------------------
ಮುಖ್ಯಮಂತ್ರಿಯಾಗಬೇಕೆಂಬ ಆಕಾಂಕ್ಷೆ ನನಗೂ ಇದೆ. ಆದರೆ ಕಾಲ ಕೂಡಿಬರಬೇಕು
- ಆರ್.ವಿ.ದೇಶಪಾಂಡೆ, ಸಚಿವ
ಬಿಜೆಪಿ ಸೇರುವ ಕಾಲದ ಕುರಿತು ಕನಸಿರಬೇಕು.
---------------------
ಜನರಿಗೆ ದಡ್ಡ ನಾಯಕನ ಅಗತ್ಯವಿಲ್ಲ - ಯೋಗಿ ಆದಿತ್ಯನಾಥ್, ಉತ್ತರ ಪ್ರದೇಶ ಮುಖ್ಯಮಂತ್ರಿ
ನಿಮ್ಮನ್ನು ಆಯ್ಕೆ ಮಾಡಿ ತಾವು ದಡ್ಡ ಮತದಾರರು ಎನ್ನುವುದನ್ನು ಜನರು ಸಾಬೀತು ಮಾಡಿದ್ದಾರೆ.
---------------------
ಮಾತೃ ಭಾಷೆಯ ಬಗ್ಗೆ ಕೀಳರಿಮೆ ಬೇಡ - ಕಲ್ಲಡ್ಕ ಪ್ರಭಾಕರ ಭಟ್, ಆರೆಸ್ಸೆಸ್ ಮುಖಂಡ
ಆದರೆ ನೀವು ಸಾರ್ವಜನಿಕ ವೇದಿಕೆಯಲ್ಲಿ ಆಡುವ ಭಾಷೆಯ ಬಗ್ಗೆ ಕಲ್ಲಡ್ಕಕ್ಕೆ ಕೀಳರಿಮೆ ಇದೆ