ಚಿರಪರಿಚಿತರಾಗಬೇಕಾಗಿದ್ದ ಅಪರಿಚಿತ ಸಾಹಿತಿ ಕೈಂತಜೆ ಗೋವಿಂದ ಭಟ್ಟರು
ಭಾಗ - 1
ನೋಡುವುದಕ್ಕೆ ಮತ್ತು ಉಡುಪು ತೊಡುಪಿನಲ್ಲಿ ಇಂಗ್ಲಿಷಿನ ಆಧುನಿಕ ಸಾಹಿತಿಗಳನ್ನು ನೆನಪಿಸುವ ರೂಪು ಅವರದ್ದು. ನಾನು ಗಮನಿಸಿದಂತೆ ಇದು ಕಾರಣವಾಗಿಯೇ ವಕೀಲ ವೃತ್ತಿ ನಡೆಸುವ ಅವರನ್ನು ಸಾಹಿತಿಗಳೆಂದು ಗುರುತಿಸಲು ಸಮಾಜ ಮತ್ತು ವಿಶೇಷವಾಗಿ ಸಾಹಿತ್ಯ ಕ್ಷೇತ್ರ ನಿರಾಕರಿಸಿರಬೇಕು. ಬೆಳ್ಳೆ ರಾಮಚಂದ್ರ ರಾಯರೂ ಸೇರಿದಂತೆ ಎಲ್ಲ ಪ್ರತಿಷ್ಠಿತ ವಕೀಲರಿಗೆ ಇದನ್ನು ಮೀರುವುದು ಒಂದು ಸಾಹಸ ಮತ್ತು ಸವಾಲು ಆಗಿತ್ತು.
1950ರ ದಶಕ ನವ್ಯ ಅರಳಿದ ಕಾಲ. ಕನ್ನಡ ಕಾವ್ಯದ ಮಟ್ಟಿಗೆ ಆಗಲೇ ಆಧುನಿಕ ಆಂಗ್ಲ ಕಾವ್ಯ ಮಾದರಿಯಾಗಿ ಗೋಕಾಕ, ಅಡಿಗ, ರಾಮಚಂದ್ರ ಶರ್ಮ ಮುಂತಾದವರು ಹೊಸ ಬಗೆಯ ಪದ್ಯಗಳನ್ನು ಬರೆದು ಯುವ ಜನಾಂಗವನ್ನು ಆಕರ್ಷಿಸಿದ ಕಾಲ. ಕನ್ನಡ ಗದ್ಯ ಹೊಸ ಮಾದರಿಯನ್ನು ಹುಡುಕುತ್ತಿತ್ತಾದರೂ ರಮ್ಯ, ಪ್ರಗತಿಶೀಲ ಬರಹಗಳು ತಮ್ಮ ಆಕರ್ಷಣೆಯನ್ನು ಕಳೆದುಕೊಂಡಿರಲಿಲ್ಲ; (ಇಂದೂ ಕಳೆದುಕೊಂಡಿಲ್ಲ!)
ಈ ಅವಧಿಯಲ್ಲಿ ಅನೇಕ ಬರಹಗಾರರು ಉದಿಸಿದರು. ಕೆಲವರು ಪ್ರಖ್ಯಾತರಾದರು. ಇನ್ನು ಕೆಲವರು ಅಪರಿಚಿತರಾಗಿ ಉಳಿದರು. ಅವರ ಬರಹಗಳನ್ನು ಪರಿಚಯಿಸಿ ಚಲಾವಣೆಗೆ ತರಲು, ಅವುಗಳ ಮೌಲ್ಯಮಾಪನ ಮಾಡಿ, ಸೂಕ್ತ ಸ್ಥಾನ ಕಲ್ಪಿಸಲು ವಿಮರ್ಶಾರಂಗ ವಿಫಲವಾಯಿತು. ಈ ಪೈಕಿ ಸಾಹಿತ್ಯದ ಕೇಂದ್ರ ಸ್ಥಾನದಲ್ಲಿ ಮತ್ತು ಅವುಗಳ ಸುತ್ತಮುತ್ತ ಇರುವವರು ಇನ್ನು ಕೆಲವು ಅದೃಷ್ಟವಂತರು ಅದು ಹೇಗೋ ಮಿಕ್ಕಿಕೊಂಡರು. ಕರಾವಳಿಯ ಅನೇಕ ಒಳ್ಳೆಯ ಬರಹಗಾರರು ಅವಕಾಶವಂಚಿತರಾದರು. ‘ಚಿರವಿರಹಿ’, ‘ರಾಯರು ಕಂಡ ರಂಗು’ ಕಾದಂಬರಿಗಳ ಬೆಳ್ಳೆ ರಾಮಚಂದ್ರ ರಾಯರು, ‘ಜೀವನ ಮತ್ತು ಕಥೆಗಳು’ ಕೃತಿಯ ಕಾರ್ಯಹಳ್ಳ ರಾಮಕೃಷ್ಣ ಶೆಟ್ಟಿ, ‘ಬಿದ್ದ ಗರಿ’ಯ ಕುಞಿಹಿತ್ಲು ರಾಮಚಂದ್ರ, ‘ಅಬ್ಬಿಯ ಮಡಿಲು’ ಕೃತಿಯ ಟಿ.ಜಿ.ಮೂಡೂರು, ‘ಕಾಲೂರ ಚೆಲುವೆ’ ಕೃತಿಯ ಕೊಳಂಬೆ ಪುಟ್ಟಣ್ಣ ಗೌಡ, ಲಲಿತ ಪ್ರಬಂಧಕಾರ ಎಸ್.ಆರ್. ಚಂದ್ರ ಮುಂತಾದವರು ಅಲ್ಲೋ ಇಲ್ಲೋ ಉಲ್ಲೇಖಿಸಲ್ಪಟ್ಟರೆಂಬುದನ್ನು ಬಿಟ್ಟರೆ ಕನ್ನಡ ಸಾಹಿತ್ಯ ಮುಖ್ಯ ವಾಹಿನಿಯಲ್ಲಿ ಚರ್ಚೆಗೊಳ್ಳಲೇ ಇಲ್ಲ. (ಇನ್ನೂ ಅನೇಕ ಕೃತಿ-ಕರ್ತೃಗಳಿದ್ದಾರೆ; ಕೆಲವರನ್ನಷ್ಟೇ ನಾನಿಲ್ಲಿ ಉಲ್ಲೇಖಿಸಿದ್ದೇನೆ.) ಈ ಸಾಲಿಗೆ ಸೇರುವ ಮತ್ತೊಬ್ಬ ಸಾಹಿತಿ ಕೈಂತಜೆ ಗೋವಿಂದ ಭಟ್ಟರು (26.04.1924-15.09.1982).
ಕೈಂತಜೆ ಗೋವಿಂದ ಭಟ್ಟರು ದಕ್ಷಿಣ ಕನ್ನಡದ ಹವ್ಯಕ ಮನೆತನಕ್ಕೆ ಸೇರಿದವರು. ಕೃಷಿ ಕುಟುಂಬದವರು. ಅವರ ಕುಟುಂಬದ ವಂಶಾವಳಿಯಲ್ಲಿ ‘ಸಾಹಿತ್ಯ ಕ್ಷೇತ್ರದಲ್ಲಿ ಕೈಯಾಡಿಸಿದವರಲ್ಲಿ ಮೊದಲಿಗರು’ ಎಂಬ ಚಾರಿತ್ರಿಕ ದಾಖಲೆಯೂ ಇದೆ. ಮಂಗಳೂರಿನ ಕಾಲೇಜಿನಲ್ಲಿ ಕಲಿಯುತ್ತಿದ್ದಾಗ ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಅಧ್ಯಯನಮಾಡಿದರು. ಅವರು ಪ್ರಕಾಂಡ ಪಂಡಿತ ಮುಳಿಯ ತಿಮ್ಮಪ್ಪಯ್ಯನವರ ಶಿಷ್ಯ. ಆದರೆ ಆನಂತರ ಮದ್ರಾಸಲ್ಲಿ ಕಾನೂನು ಪದವೀಧರರಾಗಿ ಮರಳಿ ಮಂಗಳೂರಿಗೆ ಬಂದು ವಕೀಲ ವೃತ್ತಿಯನ್ನು ನಡೆಸಿದರು. ನೋಡುವುದಕ್ಕೆ ಮತ್ತು ಉಡುಪು ತೊಡುಪಿನಲ್ಲಿ ಇಂಗ್ಲಿಷಿನ ಆಧುನಿಕ ಸಾಹಿತಿಗಳನ್ನು ನೆನಪಿಸುವ ರೂಪು ಅವರದ್ದು. ನಾನು ಗಮನಿಸಿದಂತೆ ಇದು ಕಾರಣವಾಗಿಯೇ ವಕೀಲ ವೃತ್ತಿ ನಡೆಸುವ ಅವರನ್ನು ಸಾಹಿತಿಗಳೆಂದು ಗುರುತಿಸಲು ಸಮಾಜ ಮತ್ತು ವಿಶೇಷವಾಗಿ ಸಾಹಿತ್ಯ ಕ್ಷೇತ್ರ ನಿರಾಕರಿಸಿರಬೇಕು. ಬೆಳ್ಳೆ ರಾಮಚಂದ್ರ ರಾಯರೂ ಸೇರಿದಂತೆ ಎಲ್ಲ ಪ್ರತಿಷ್ಠಿತ ವಕೀಲರಿಗೆ ಇದನ್ನು ಮೀರುವುದು ಒಂದು ಸಾಹಸ ಮತ್ತು ಸವಾಲು ಆಗಿತ್ತು. (ಬೆಳ್ಳೆಯವರ ಚಿರವಿರಹಿ ಕಾದಂಬರಿಯ ಕುರಿತು ಕುರ್ತಕೋಟಿಯವರು ತಮ್ಮ ಯುಗಧರ್ಮ ಮತ್ತು ಸಾಹಿತ್ಯ ದರ್ಶನದಲ್ಲಿ ಬರೆದಿದ್ದಾರೆ.)
ಕೈಂತಜೆ ಗೋವಿಂದ ಭಟ್ಟರ ಎರಡು ಪ್ರಕಟಿತ ಕೃತಿಗಳು- ‘ಕಾಳಿಗೆ ಕಾಣಿಕೆ’ ಎಂಬ ಕಥಾಸಂಗ್ರಹ ಮತ್ತು ‘ಚಿರಪರಿಚಿತರು’ ಎಂಬ ಕಾಲ್ಪನಿಕ ವ್ಯಕ್ತಿಚಿತ್ರಗಳ ಕೃತಿ. ಇವೆರಡೂ 1950ರ ದಶಕದ ಪೂರ್ವಾರ್ಧದಲ್ಲಿ ಪ್ರಕಟವಾದವು. 1955ರ ಆನಂತರ ಅವರ ಯಾವ ಕೃತಿಗಳೂ ಪ್ರಕಟವಾದಂತಿಲ್ಲ. ಆದರೆ ಅವರ ಕುರಿತ ಇತ್ತೀಚೆಗಿನ ಉಲ್ಲೇಖವೊಂದರಲ್ಲಿ ‘‘ಇವರ ಪ್ರಕಟಣೆಗೊಳ್ಳದ, ಪೂರ್ತಿಯಾಗದ ಅವರ ಕೈ ಬರಹದ ಲೇಖನಗಳು ಹಾಗೇ ಉಳಿದಿವೆ.’’ ಎಂಬ ವಾಕ್ಯವಿದೆ. ‘ಹಾಗೇ ಉಳಿದಿವೆ’ಯಾದರೂ ‘ಉಳಿದಿವೆ’ಯೆಂಬ ಸಮಾಧಾನದೊಂದಿಗೆ ಅವೂ ಪ್ರಕಟವಾದಾವು ಎಂದು ನಿರೀಕ್ಷಿಸೋಣ. -2-
‘ಕಾಳಿಗೆ ಕಾಣಿಕೆ’ ಎಂಬ ಅವರ ಮೊದಲ ಕೃತಿ ಏಳು ಕಥೆಗಳ ಗುಚ್ಛ. ನಿಖರವಾಗಿ ಯಾವ ವರ್ಷದಲ್ಲಿ ಈ ಕೃತಿ ಪ್ರಕಟವಾಯಿತೆಂಬುದಕ್ಕೆ ಕೃತಿಯಲ್ಲಿ ಯಾವುದೇ ಮಾಹಿತಿಯಿಲ್ಲ. ಆದರೆ ಇದು ವಿದ್ವಾನ್ ರಾಮ ಮೊಳೆಯಾರರು ಸಂಪಾದಿಸಿ ಪ್ರಕಟಿಸುತ್ತಿದ್ದ ವಿವೇಕ ಸಾಹಿತ್ಯ ಮಾಲೆ, ಮಂಗಳೂರು ಇದರ ಮೂರನೇ ವರ್ಷದ 6ನೇ ಮತ್ತು ಒಟ್ಟಾರೆಯಾಗಿ 16ನೇ ಪ್ರಕಟಣೆ. ಪ್ರಾಯಃ ದಶಂಬರ 1952-53ರಲ್ಲಿ ಪ್ರಕಟವಾಗಿರಬೇಕು. 70-80 ವರ್ಷಗಳ ಹಿಂದಿನ ಪ್ರಕಟಣೆಯ ಮಾಹಿತಿಯ (ಕೊರತೆಯ) ಕುರಿತು ಇಷ್ಟು ಅಸ್ಪಷ್ಟತೆಯಿದೆಯೆಂಬುದನ್ನು ನಾವು ಲಜ್ಜಾಪೂರ್ವಕವಾಗಿ ಸ್ವೀಕರಿಸಲೇಬೇಕು. ಕಾಳಿಗೆ ಕಾಣಿಕೆ ಕೃತಿಯ ಮೊದಲ ಮಾತುಗಳಲ್ಲಿ ಲೇಖಕರು ‘‘ಏಳು ಕತೆಗಳನ್ನು ಪೋಣಿಸಿರುವೆನು. ಏಳು ಬಣ್ಣಗಳನ್ನು ಬರೆದಿರುವೆನು. ಕಾಮನ ಬಿಲ್ಲಾಗಿ ಒಂದಿನಿತು ಕಾಲ ಮನ ಸೆಳೆದು ಅದರ ಸಪ್ತರಾಗ ಮನಸ್ಸಿನಲ್ಲಿ ನಿಂದರೆ ನನ್ನ ಕೆಲಸ ಸಾರ್ಥಕವೆಂದು ನಂಬುತ್ತೇನೆ’’ ಎಂದಿದ್ದಾರೆ. ಇವುಗಳಲ್ಲಿ ಹೆಚ್ಚಿನ ಕತೆಗಳು ಆಗಲೇ ಕರ್ಮವೀರ, ಸುಬೋಧವೂ ಸೇರಿದಂತೆ ಕನ್ನಡದ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು ಎಂಬುದರಿಂದ ಮತ್ತು ಅದು ಓದುವ ಕಾಲವಾದ್ದರಿಂದ ಅವರು ಓದುಗ ಮತ್ತು ಸಾಹಿತ್ಯ ವಲಯದಲ್ಲಿ ಆಗಲೇ ಚಿರಪರಿಚಿತರಾಗಿದ್ದರೆನ್ನಬಹುದು. ಗೋವಿಂದ ಭಟ್ಟರ ಮೊದಲ ಮಾತುಗಳು ಅವರ ಬರಹಗಳ ಹಿಂದಿನ ಪ್ರೇರಣೆ, ಪ್ರಭಾವಗಳನ್ನು ಗುರುತಿಸುತ್ತವೆ. ‘‘ನನ್ನನ್ನು ಬರೆಯುವಂತೆ ಪ್ರೋತ್ಸಾಹಿಸಿದವರು ಅದಕ್ಕೆ ಕೈಹಚ್ಚಿಸಿದವರು ಶ್ರೀ ಪೆರೋಡಿ ಪುಟ್ಟಪ್ಪಯ್ಯ ಕಾರಂತರು, ಮೊಳಕೆಗೊಂಡ ಸಸಿಗೆ ನೀರೆರೆದವರು ಶ್ರೀಮತಿ ಟಿ. ಪದ್ಮಾವತಿ ಪರಮೇಶ್ವರ್ ಮಡಿಕೇರಿ’’ ಎಂದು ಸ್ಮರಿಸಿದ್ದಾರೆ. ಎರಡು ಹಂತದಲ್ಲಿ ಸಿಕ್ಕ ಪ್ರೇರಣೆಯನ್ನು ಅವರು ರೂಪಕಗಳ ಮೂಲಕ (‘ಕೈಹಚ್ಚಿಸಿದವರು’, ‘ನೀರೆರೆದವರು’) ಗುರುತಿಸಿದ ಸಂವೇದನೆ ಗಮನಾರ್ಹವಾಗಿದೆ. ಅಷ್ಟೇ ಅಲ್ಲ ಮಾಮೂಲಾಗಿ ಮುದ್ರಕರನ್ನು ಬಾಯ್ತುಂಬ ಹೊಗಳುವ ಇಂದಿಗೂ ಮುಂದುವರಿದಿರುವ ಪರಂಪರೆಯ ನಡುವೆ ಒಂದು ವಾಸ್ತವದ ನೆಲೆಯಾಗಿ ನಿಲ್ಲುವ ಅವರ ಮಾತೆಂದರೆ ‘‘...ಆದಷ್ಟು ಕಮ್ಮಿ ತಪ್ಪುಗಳು ಉಳಿವಂತೆ ಮುತುವರ್ಜಿ ವಹಿಸಿದ ವಿಜಯ ಪ್ರಿಂಟರ್ಸ್‌ನ ಸಂಚಾಲಕರಿಗೂ ವಂದನೆಗಳು’’ ಎಂಬ ಕೊನೆಯ ವಾಕ್ಯ.
ಈ ಕತೆಗಳು ವಿವಿಧ ರೀತಿಯವು. ಕೆಲವು ತೀರ ಚಿಕ್ಕ ಕತೆಗಳಾದರೆ ಕೆಲವು ಇಂದಿನ ಸಣ್ಣ ಕತೆಗಳಷ್ಟು ದೀರ್ಘವಾದ ಮತ್ತು ನೀಳ್ಗತೆಗಳಿಗಿಂತ ಕಿರಿದಾದ ಕತೆಗಳು. ಸ್ವಲ್ಪಮಟ್ಟಿನ ಕಪ್ಪು-ಬಿಳುಪು ವಿಂಗಡಣೆಗಳನ್ನು ಸ್ಪರ್ಶಿಸುವ, ದರ್ಶಿಸುವ ಕತೆಗಳು. ಆದರೆ ಮಾನವೀಯ ಮೌಲ್ಯಗಳಾದ ನೋವು-ನಲಿವುಗಳು, ಬಡತನ-ಹಸಿವೆ-ಅನಾರೋಗ್ಯ, ಪ್ರಾಣಿದಯೆ ಇವನ್ನು ಸಂವೇದಿಸುವವು. ಮೊದಲ ಕತೆ ‘ವರದನ ನಾಯಿ’ ಪೇಪರು ಮಾರುವ ಬಡ ಹುಡುಗನೊಬ್ಬನ ಪ್ರೀತಿಯ ನಾಯಿಯ ಕುರಿತಾದ್ದು. ತನಗೆ ಹಸಿವಿದ್ದಾಗಲೂ ನಾಯಿಗೆ ಕೊಟ್ಟು, ಇರುವ ಒಂದೇ ಸೋಪಿನಲ್ಲಿ ಅದನ್ನು ಮೀಯಿಸುವ ಮತ್ತು ಈ ಪರಮಹಂಸ ವರ್ತನೆಗೆ ಮನೆಯಲ್ಲಿ ಬಡತನದಲ್ಲಿ ಜೀವಿಸುವ ಅಮ್ಮನ ಬೈಗುಳಕ್ಕೆ ಪಾತ್ರನಾಗುವ ಈ ಹುಡುಗ ವರದನ ನಾಯಿ ಟಾಮಿ ಮುನಿಸಿಪಾಲಿಟಿಯವರ ಕೈಗೆ ಸಿಕ್ಕಿಹೋಗುತ್ತದೆ. ಎಲ್ಲ ಬೀಡಾಡಿ ನಾಯಿಗಳೊಂದಿಗೆ ಇದನ್ನೂ ಅವರು ಗಾಡಿಯೊಳಗೆ ದೂಡುತ್ತಾರೆ. ವರದ ಅದರ ಹಿಂದೆಯೆ ಓಡುತ್ತಾನೆ. ಅದೂ ಅರಚುತ್ತದೆ. ಕೊಂಡೊಯ್ಯುವ ತೋಟಿಗೆ ಒಂದರೆಕ್ಷಣ ಅನುಕಂಪವುಂಟಾದರೂ (ಈ ದಯೆ ನಾಯಿಯ ಬಗ್ಗೆಯೂ ಅಲ್ಲ, ವರದನ ಬಗ್ಗೆಯೂ ಅಲ್ಲ, ನಾಯಿಯಲ್ಲಿ ಮಗು ಇಟ್ಟ ಪ್ರೀತಿಯ ಬಗ್ಗೆ.) ಆದರೆ ಅವನಿಗೆ ಕರ್ತವ್ಯ ಮುಖ್ಯ. (ಅದನ್ನೂ ವಿನಿಮಯ ಮಾಡಲು ಆತ ಸಿದ್ಧ; ಆದರೆ ಅವನ ಬೇಡಿಕೆ ಅವನಿಗೆ ಸಿಗುವ ದುಡ್ಡಿಗೆ: ಗಂಡು ನಾಯಿಗೆ ಎಂಟಾಣೆ, ಹೆಣ್ಣು ನಾಯಿಗೆ ಹನ್ನೆರಡಾಣೆ! (ಇಲ್ಲೂ ಸೃಷ್ಟಿ ಶಕ್ತಿಗೆ ತಾರತಮ್ಯ!) ಅದನ್ನು ಕೊಡಲು ವರದನ ತಾಯಿಗೆ ಶಕ್ತಿಯಿಲ್ಲ. ಹೀಗಾಗಿ ನಾಯಿಯ ಭವಿಷ್ಯ ನಿಶ್ಚಿತವಾಗುತ್ತದೆ. ವಧಾ ಸ್ಥಾನದಲ್ಲಿ ಇತರ ಕೆಲವು ನಾಯಿಗಳನ್ನು ಕೊಲ್ಲುವುದನ್ನು ವರದ ಕಾಣುತ್ತಾನೆ. ಇನ್ನೇನು ಟಾಮಿಯೂ ಹತವಾಗಬೇಕು; ಅಷ್ಟರಲ್ಲಿ ಅಲ್ಲೊಬ್ಬ ಐರೋಪ್ಯ ಬಂದು ಟಾಮಿಯನ್ನು ಕಂಡು ಇಷ್ಟಪಟ್ಟು ಎರಡು ರೂಪಾಯಿ ಎಸೆದು ತನ್ನ ಸೊಂಟದ ಬೆಲ್ಟಿನಿಂದ ಕಟ್ಟಿ ಕರೆದುಕೊಂಡು ಹೋಗುತ್ತಾನೆ. ವರದ ನಾಯಿಯನ್ನು ಬೇಡಿದರೂ ಆತ ಕೊಡುವುದಿಲ್ಲ. ನಾಯಿ ಉಳಿದರೂ ಬೇರೊಬ್ಬನ ಪಾಲಾದುದಕ್ಕೆ ವರದನಿಗೆ ತುಂಬ ದುಃಖವಾಯಿತು.
ಕೊನೆಯ ಭಾಗ ಮಾನವೀಯತೆಯನ್ನು ಅನಾವರಣಗೊಳಿಸುತ್ತದೆ: ‘‘ನಡೆಯುತ್ತ ನಡೆಯುತ್ತ ವರದನ ಮನೆಬಂತು. ಅಷ್ಟರ ತನಕ ರಪರಪನೆ ನಡೆಯುತ್ತಿದ್ದ ನಾಯಿ ಗಡಕ್ಕನೆ ನಿಂತಿತು. ಎಷ್ಟು ಎಳೆದರೂ ಬರಲೊಲ್ಲದು. ಯುರೋಪಿಯನ್ ನಾಲ್ಕು ಅಡಿ ದೂರ ಅದನ್ನು ನೆಲದ ಮೇಲೆ ಎಳೆದ. ಆದರೂ ಟಾಮಿ ನಾಲ್ಕು ಕಾಲು ಊರಿಕೊಳ್ಳಲೇ ಇಲ್ಲ. ಬೂಟುಕಾಲಿನಿಂದ ಎರಡು ಒದೆದರೂ ಮುಖವೆತ್ತಿ ಕಾಲುಗಳನ್ನು ಮೇಲೆ ಚಾಚಿ ದಮ್ಮಯ್ಯ ಹೊಡೆಯಬೇಡವೆಂದಿತು ಟಾಮಿ. ವರದ ದೈನ್ಯಭಾವದಿಂದ ನೋಡುತ್ತಿದ್ದನು. ಟಾಮಿಯ ದೃಷ್ಟಿಯೂ ಅವನ ಕಡೆಗೆ ಹರಿಯಿತು. ಅವರ ದೃಷ್ಟಿಯಲ್ಲಿ ಆ ಯುರೋಪಿಯನನಿಗೆ ಏನು ಕಂಡಿತೋ ಏನೋ! ವರದನ ಮತ್ತು ಟಾಮಿಯ ಸ್ನೇಹಪೂರ್ಣ ಬೆಸುಗೆ ಆ ದೃಷ್ಟಿಯಲ್ಲಿ ಅವನಿಗೆ ಕಂಡಿರಬೇಕು. ಮುಗುಳುನಗೆಯೊಡನೆ ಬೆಲ್ಟನ್ನು ಕಳಚಿ ನಾಯಿಯನ್ನು ಬಿಟ್ಟುಬಿಟ್ಟನು. ಟಾಮಿ ವರದನ ಮೇಲೆ ಪ್ರೀತಿಯಿಂದ ಚಿಮ್ಮಿತು. ವರದ ಟಾಮಿಯನ್ನು ಅಪ್ಪಿಕೊಂಡನು.’’
ಸರಳವಾಗಿ ನಿರೂಪಿತವಾದ ಈ ಕತೆ ಮುಗ್ಧತೆಯೊಂದಿಗೆ ದಾರುಣ ಕ್ರೌರ್ಯ ಮತ್ತು ಅದನ್ನು ಪ್ರತಿರೋಧಿಸುವ ಛಲ ಮತ್ತು ಎಲ್ಲೋ ಒಂದು ಕಡೆ ಮನುಷ್ಯತ್ವ ಅರಳುವ ನೆಲೆ-ಸೆಲೆಗಳನ್ನು ಕಾಣಿಸುತ್ತದೆ. ಧರ್ಮ-ದೇವರು-ಹಣ-ಅಧಿಕಾರಗಳ ಗದ್ದಲದಲ್ಲಿ ನೈತಿಕತೆ ಮತ್ತು ಮನುಷ್ಯತ್ವ ಮರೆಯಾಗುತ್ತಿರುವ ನಾಗರಿಕ ಸಮಾಜದಲ್ಲಿ ಇಂತಹ ಚಿತ್ರಣಗಳು ಅವಶ್ಯವೆಂಬಂತಿವೆ. ‘ಅನ್ನಪೂರ್ಣೇಶ್ವರಿ ಕೃಪೆ’ ಎಂಬ ಇನ್ನೊಂದು ಕತೆ ವ್ಯಂಗ್ಯದ ಧಾಟಿಯಲ್ಲಿದೆ. ದೇವರ ಹೆಸರಿನಲ್ಲಿ ಮನುಷ್ಯರು ಮಾಡುವ ಮೋಸ, ಕೊನೆಗೂ ಅನ್ನಪೂರ್ಣೇಶ್ವರಿಯ ಕೃಪೆ ಪ್ರಾಮಾಣಿಕರಿಗೆ ದಕ್ಕದಿರುವುದು ಮತ್ತು ದನಕರು, ಹಣ ಇವೆಲ್ಲ ವಕೀಲರ ರುಸುಮಿಗೂ, ಕಷ್ಟಪಟ್ಟು ಗಳಿಸಿದ ತೋಟ ದೇವರ ಹೆಸರಿನಲ್ಲಿ ನಡೆವ ಮೋಸಕ್ಕೂ ಬಲಿಯಾಗುವ ಮತ್ತು ಅನ್ನಪೂರ್ಣೇಶ್ವರಿ ಅನ್ನವನ್ನೇ ಕಿತ್ತುಕೊಳ್ಳುವ ಕಥಾವಸ್ತುವಿನೊಂದಿಗೆ ಈ ಕತೆಯ ಶೀರ್ಷಿಕೆ ಕೊನೆಯ ವರೆಗೂ ವ್ಯಂಗ್ಯರೂಪಕವಾಗಿ ನಿಲ್ಲುತ್ತದೆ. ‘ಪತ್ರೊಡೆ’ ಎಂಬ ಮತ್ತೊಂದು ಕತೆ ಬಡತನದ ಮತ್ತು ಶೋಷಣೆಯ ವಾಸ್ತವ ಚಿತ್ರ. ಕರಾವಳಿ ಭಾಗದಲ್ಲಿ ಆಟಿಯ ಸಮಯದಲ್ಲಿ ಮಾಡುವ ಕೆಸುವಿನ ಕಡುಬಿಗೆ ಈ ಹೆಸರು. ಯಜಮಾನಿ ಕೊಟ್ಟ ಎರಡು ಪತ್ರೊಡೆಗಳನ್ನು ಮನೆಗೆ ತಂದು ಮಕ್ಕಳಿಗೆ ಬಡಿಸಿದಾಗ ಅವು ಇನ್ನಷ್ಟು ಬೇಕೆಂದು ಇಷ್ಟಪಡುತ್ತವೆ. ಅದಕ್ಕಾಗಿ ತಾಯಿ ಪಡುವ ಶ್ರಮ, ಮಣ್ಣಿನ ಮಡಿಕೆಯಲ್ಲಿ ತೂತುಗಳನ್ನು ಕೊರೆದು ಕಳಸಿಗೆಯಂತೆ ಮಾರ್ಪಡಿಸಿ ಆನಂತರ ಒಂದಿಷ್ಟು ಉಪ್ಪು, ಮೆಣಸು, ಬಾಳೆಲೆಯನ್ನು ಸಂಗ್ರಹಿಸಿ ಅಕ್ಕಿ ಸಿಕ್ಕದೆ ಬ್ಲಾಕಿನಲ್ಲಿ ಅದನ್ನೂ ಖರೀದಿಸಿ ಮನೆಗೆ ಮರಳುವಾಗ ಅದನ್ನು ಪೊಲೀಸನೊಬ್ಬ ಹೆದರಿಸಿ ಕಿತ್ತುಕೊಳ್ಳುತ್ತಾನೆ. ಬರಿಗೈಯಲ್ಲಿ ಮನೆಗೆ ಬಂದಾಗ ಮಕ್ಕಳ ಉತ್ಸಾಹದ ಓಡಾಟದಲ್ಲಿ ಮಡಿಕೆ ಒಡೆದಿರುತ್ತದೆ. ‘‘ಮಡಿಕೆ ಒಡೆದುದೂ ಚುಕುಣಿ ಜಗಲಿಗೆ ಬಂದುದೂ ಸರಿಯಾಯಿತು. ತಾಯಿ ಬಯ್ಯುತ್ತಾಳೆಂದು ಬೀರ ಸುಮ್ಮನೆ ಚಿಕ್ಕ ಮೋರೆಮಾಡಿಕೊಂಡು ಒಂದು ಬದಿಯಲ್ಲಿ ನಿಂತ. ಬರಿಗೈಯನ್ನು ನೋಡಿ ಭಾಗಿ- ‘ಅಕ್ಕಿ ಎಲ್ಲಿ’ ಎಂದು ಕೇಳಿದಳು. ‘ಸರಕಾರದವರು ಕೊಂಡು ಹೋದರು’ ಎಂದಳು ಚುಕುಣಿ. ನಾಗುವಿನ ಕೆಸು ಹಚ್ಚುತ್ತಿದ್ದ ಕೈ ಪಟಕ್ಕನೆ ನಿಂತಿತು. ಇಷ್ಟು ಕಷ್ಟಪಟ್ಟದ್ದು ಮಣ್ಣಿಗಾಯಿತು. ಮಡಿಕೆಯೂ ಹೋಯಿತು. ಭಾಗಿ ಎದ್ದು ಒಂದು ಬದಿಯಲ್ಲಿ ನಿಂತಳು. ಚುಕುಣಿ ಒಡೆದ ಮಡಿಕೆಗಳನ್ನೊಮ್ಮೆ, ಬಾಳೆಲೆಯನ್ನೊಮ್ಮೆ, ಹೆಚ್ಚಿದ ಕೆಸುವನ್ನೊಮ್ಮೆ, ಮಕ್ಕಳನ್ನೊಮ್ಮೆ ನೋಡಿದಳು. ಕಣ್ಣಿಗೆ ಕೈ ಇಟ್ಟುಕೊಂಡಳು.’’ ಭಗ್ನಗೊಂಡ ಆಶಯಗಳನ್ನು ಪ್ರತಿಬಿಂಬಿಸುವ ಮಡಿಕೆ, ಕೊಚ್ಚಿಕೊಂಡ ಕೆಸು, ಇವೆಲ್ಲ ಬಡತನದ ಅಸಹಾಯಕತೆಯನ್ನು ನಿರೂಪಿಸುತ್ತದೆ. ‘ನಲ್ಮೆ’, ‘ಕಲ್ಯಾಣಿ’ ಇವೆರಡೂ ಸ್ವಲ್ಪರಮ್ಯ ಸಂಪ್ರದಾಯಕ್ಕೆ ಶರಣಾದ ಪ್ರಗತಿಶೀಲ ಕತೆಗಳು. ಉಳಿದ ಕತೆಗಳಿಗೆ ಹೋಲಿಸಿದರೆ ತುಸು ದೀರ್ಘವಾಗಿವೆ. ಆದರೂ ಇಲ್ಲಿ ಕೊನೆ ಎಲ್ಲವೂ ಸುಖಾಂತವಾಯಿತು ಎಲ್ಲರೂ ಒಟ್ಟಾದರು ಎಂಬ ಕೃತಕ ಮುಗಿತಾಯಗಳಿಲ್ಲ. ‘ನಲ್ಮೆ’ ಕತೆಯಲ್ಲಿ ರಾಮಯ್ಯನನ್ನೇ ಪ್ರೀತಿಸಿದ್ದ ಆದರೆ ಇನ್ನೊಬ್ಬರನ್ನು ಮದುವೆಯಾಗಿ ವಿಧವೆಯಾಗಿ ಮರಳಿದ ಲಕ್ಷ್ಮಿ ನಾಯಕ ರಾಮಯ್ಯನ ಪತ್ನಿ ಶಾಂತಾ ಮಗಳನ್ನು ಬಿಟ್ಟು ಸತ್ತ ನಂತರ ಅವನಲ್ಲಿ ನೆರಳು ಪಡೆಯುತ್ತಾಳೆ. ಮಗು ಅವಳನ್ನು ತೀರಾ ಹಚ್ಚಿಕೊಳ್ಳುತ್ತದೆ. ಆದರೆ ರಾಮಯ್ಯನಿಗೆ ಬರಬಹುದಾದ ತನ್ನೊಂದಿಗಿನ ಅಕ್ರಮ ಸಂಬಂಧದ ಅಪವಾದವನ್ನು ತಡೆಯಲು ಲಕ್ಷ್ಮಿ ಬೇರೆಡೆ ಹೋಗುತ್ತಾಳೆೆ. ಅವಳಿಲ್ಲದೆ ಮಗು ಕಾಯಿಲೆ ಬೀಳುತ್ತದೆ. ಅದನ್ನು ಉಳಿಸಿಕೊಳ್ಳುವ ಸಲುವಾಗಿ ಅವಳ ಮರಳುವಿಕೆ ಅನಿವಾರ್ಯವಾಗುತ್ತದೆ. ಹಾಗೆಂದು ರಾಮಯ್ಯ ಅವಳನ್ನು ತನ್ನ ಸಾಂಸಾರಿಕ ಬದುಕಿಗೆ ಎಳೆಯುವುದಿಲ್ಲ. ಮಗುವಿನ ಮಮತೆಯ ಹೊಸ್ತಿಲಿನಲ್ಲೇ ಈ ನಲ್ಮೆ ಮಿತಿಗೊಳ್ಳುವುದು ಈ ಕತೆಯನ್ನು ಮೆಲೊಡ್ರಾಮವಾಗಿಸದೆ ಸಹಜವಾಗಿಸುತ್ತದೆ.