ಮಲೆನಾಡಿನಲ್ಲಿ ತೀವ್ರಗೊಳ್ಳುತ್ತಿದೆ ಕುಡಿಯುವ ನೀರಿಗೆ ಹಾಹಾಕಾರ: ಜನ-ಜಾನುವಾರು ತತ್ತರ
ಶಿವಮೊಗ್ಗ ಜಿಲ್ಲೆಯ 46 ಗ್ರಾಮಗಳಲ್ಲಿ ಜೀವಜಲಕ್ಕೆ ಪರದಾಟ
ಸಾಂದರ್ಭಿಕ ಚಿತ್ರ
► ನೀರಿಲ್ಲದೆ ಬರಿದಾಗಿದೆ ನೂರಾರು ಕೆರೆಕಟ್ಟೆಗಳು
ಶಿವಮೊಗ್ಗ, ಮೇ 16: ಮಲೆನಾಡಿನಲ್ಲಿ ಬಿಸಿಲಿನ ಬೇಗೆ ತೀವ್ರಗೊಳ್ಳಲಾರಂಭಿಸಿದೆ. ತಾಪಮಾನ ಹೆಚ್ಚಳದಿಂದ ಅಂತರ್ಜಲ ಮಟ್ಟ ಕುಸಿಯಲಾರಂಭಿಸಿದೆ. ಜಲಮೂಲಗಳು ಬರಿದಾಗಲಾರಂಭಿಸಿವೆ. ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೀವ್ರ ಹಾಹಾಕಾರ ತಲೆದೋರಲಾರಂಭಿಸಿದೆ. ಇದರಿಂದ ಜನ-ಜಾನುವಾರುಗಳು ತತ್ತರಿಸುವಂತಾಗಿದೆ.
ಬುಧವಾರದವರೆಗಿನ ಮಾಹಿತಿಯಂತೆ, ಶಿವಮೊಗ್ಗ ಜಿಲ್ಲೆಯ ಒಟ್ಟಾರೆ 46 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ಇದರಲ್ಲಿ ಸಾಗರ ತಾಲೂಕಿನಲ್ಲಿಯೇ ಅತ್ಯಧಿಕ ಪ್ರಮಾಣದ ಗ್ರಾಮಗಳಲ್ಲಿ ಜೀವಜಲದ ಪರದಾಟ ಎದುರಾಗಿದೆ. ಇನ್ನೂ ಕೆಲ ದಿನಗಳ ಕಾಲ ಉಷ್ಣಾಂಶದ ತೀವ್ರತೆ ಇದೇ ರೀತಿ ಮುಂದುವರಿದರೆ, ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿನ ಅಭಾವ ಮತ್ತಷ್ಟು ಬಿಗಡಾಯಿಸುವ ಆತಂಕವಿದೆ.
'ಭದ್ರಾವತಿಯಲ್ಲಿ 3, ಸಾಗರದಲ್ಲಿ 25, ಸೊರಬದಲ್ಲಿ 5, ಶಿಕಾರಿಪುರದಲ್ಲಿ 9 ಹಾಗೂ ಶಿವಮೊಗ್ಗ ತಾಲೂಕಿನ ಏಳು ಗ್ರಾಮಗಳಲ್ಲಿ ನೀರಿನ ಅಭಾವ ಕಾಣಿಸಿಕೊಂಡಿದೆ. ಇದೀಗ ತೀರ್ಥಹಳ್ಳಿ ತಾಲೂಕಿನ ಹಲವು ಗ್ರಾಮಗಳಲ್ಲಿಯೂ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ನೀರಿಗೆ ಪರದಾಟ ಎದುರಾಗಿರುವ ಎಲ್ಲಾ ಗ್ರಾಮಗಳಲ್ಲಿಯೂ ಅಗತ್ಯ ಪರಿಹಾರ ಕ್ರಮಕೈಗೊಳ್ಳಲಾಗಿದೆ. ಅಗತ್ಯವಿರುವ ಕಡೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ' ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಡಾ. ಎಸ್. ರಂಗಸ್ವಾಮಿಯವರು ತಿಳಿಸಿದ್ದಾರೆ.
ಗುರುವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. 'ಕಳೆದ ಜನವರಿಯಿಂದ ಮೇ 15 ರವರೆಗೂ ಜಿಲ್ಲೆಯ ವಿವಿಧೆಡೆ ಒಟ್ಟಾರೆ 1180 ಟ್ಯಾಂಕರ್ ನೀರು ಪೂರೈಕೆ ಮಾಡಲಾಗಿದೆ. ಟ್ಯಾಂಕರ್ ಮೂಲಕ ನೀರು ಪೂರೈಸುವ ಅಧಿಕಾರವನ್ನು ಸರ್ಕಾರ ತಹಶೀಲ್ದಾರ್ ಗಳಿಗೆ ನೀಡಿದೆ' ಎಂದರು.
ಕೆಲ ಗ್ರಾಮಗಳಲ್ಲಿ ಖಾಸಗಿಯವರಿಗೆ ಸೇರಿದ 20 ಬೋರ್ ವೆಲ್ಗಳನ್ನು ಬಾಡಿಗೆ ಆಧಾರದ ಮೇಲೆ ಪಡೆದು, ನಾಗರಿಕರಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಕೆಲ ಖಾಸಗಿ ಬೋರ್ ವೆಲ್ ಮಾಲಕರು ಉಚಿತವಾಗಿ ತಮ್ಮ ಒಡೆತನದ ಬೋರ್ ವೆಲ್ಗಳನ್ನು ಸಾರ್ವಜನಿಕರ ಸೇವೆಗೆ ನೀಡಿದ್ದಾರೆ.
ಅಕ್ರಮ ತಡೆಗಟ್ಟುವ ಉದ್ದೇಶದಿಂದ ಜಿಪಿಎಸ್ ಅಳವಡಿಕೆ ಮಾಡಿದ ಟ್ಯಾಂಕರ್ ಗಳ ಮೂಲಕವೇ ಕುಡಿಯುವ ನೀರು ಪೂರೈಕೆ ಮಾಡುವಂತೆ ಗ್ರಾಮ ಪಂಚಾಯತ್ ಆಡಳಿತಗಳಿಗೆ ಸೂಚನೆ ನೀಡಲಾಗಿದೆ. ಸದ್ಯಕ್ಕೆ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಿಲ್ಲ. ಯಾವುದೇ ಗೋಶಾಲೆ ತೆರೆದಿಲ್ಲ' ಎಂದು ಡಾ.ಎಸ್.ರಂಗಸ್ವಾಮಿ ಮಾಹಿತಿ ನೀಡಿದ್ದಾರೆ.
ಗಂಭೀರ ಸ್ಥಿತಿಗೆ: ಜಿಲ್ಲೆಯಲ್ಲಿ ಅಂತರ್ಜಲದ ಮಟ್ಟ ಗಂಭೀರ ಸ್ಥಿತಿಗೆ ತಲುಪಿದೆ. ದಿನದಿಂದ ದಿನಕ್ಕೆ ಕುಸಿಯಲಾರಂಭಿಸಿದೆ. ಈಗಾಗಲೇ ಜಿಲ್ಲೆಯಲ್ಲಿ ನೂರಾರು ಕೆರೆಕಟ್ಟೆ, ಬೋರ್ ವೆಲ್, ತೆರೆದ ಬಾವಿಗಳು ನೀರಿಲ್ಲದೆ ಬರಿದಾಗಿವೆ. ತಾಪಮಾನ ಇದೇ ರೀತಿ ಮುಂದುವರಿದರೆ, ಅಂತರ್ಜಲದ ಪ್ರಮಾಣ ಮತ್ತಷ್ಟು ಕುಸಿಯುವ ಆತಂಕ ಎದುರಾಗಿದೆ.
ಬೋರ್ ವೆಲ್-ಬಾವಿಗಳಲ್ಲಿ ಅಂತರ್ಜಲ ಕುಸಿತ, ಕೆರೆಕಟ್ಟೆಗಳಲ್ಲಿ ನೀರಿನ ಕೊರತೆಯಿಂದ ಜಿಲ್ಲೆಯ ಹಲವೆಡೆ ಕೃಷಿ-ತೋಟಗಾರಿಕೆ ಬೆಳೆಗಳು ಒಣಗಲಾರಂಭಿಸಿವೆ. ಕೆಲ ತೋಟಗಳ ಮಾಲಕರು ಟ್ಯಾಂಕರ್ ಗಳ ಮೂಲಕ ನೀರು ತರಿಸಿ, ಬೆಳಗಳ ಸಂರಕ್ಷಣೆ ಮಾಡಿಕೊಳ್ಳುತ್ತಿದ್ದಾರೆ. ಒಟ್ಟಾರೆ ನಿಗದಿತ ವೇಳೆಗೆ ಮುಂಗಾರು ಮಳೆ ಜಿಲ್ಲೆಯಲ್ಲಿ ಆರಂಭವಾಗದಿದ್ದರೆ, ಕುಡಿಯುವ ನೀರಿನ ಸ್ಥಿತಿ ಮತ್ತಷ್ಟು ಹದಗೆಡಲಿರುವುದು ನಿಶ್ಚಿತವಾಗಿದೆ.
ಕಲುಷಿತ ನೀರು ಸೇವನೆಯಿಂದ ವಾಂತಿ-ಭೇದಿ
ಕಲುಷಿತ ನೀರು ಕುಡಿದು ವಾಂತಿ-ಭೇದಿಯಿಂದ ಜನರು ಅಸ್ವಸ್ಥಗೊಂಡಿದ್ದ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೊನ್ನೇತಾಳು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡುವಳ್ಳಿ, ಕೋಟೆಗುಡ್ಡ, ನೆಲ್ಲಿಗುಡ್ಡೆ ಗ್ರಾಮಕ್ಕೆ ಆರೋಗ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಸುಮಾರು 20 ಜನರಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿತ್ತು. ನದಿ ಬತ್ತಿರುವ ಕಾರಣದಿಂದ ಅನಿವಾರ್ಯವಾಗಿ ನಾಗರಿಕರು ಬಾವಿಯ ನೀರನ್ನು ಕುಡಿಯಲು ಬಳಸುತ್ತಿದ್ದರು. ಆದರೆ ಈ ನೀರು ಸಂಪೂರ್ಣ ಕಲುಷಿತವಾಗಿದ್ದ ಕಾರಣದಿಂದ, ಗ್ರಾಮಸ್ಥರ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ ಎನ್ನಲಾಗಿದೆ.
ಈ ನಡುವೆ ಹೊನ್ನೇತಾಳು ಗ್ರಾಮ ಪಂಚಾಯತ್ ವ್ಯಾಪ್ತಿಯ ವಾರಳಿ ಗ್ರಾಮದ ಕೆಲವರಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿದೆ. ರೋಗಿಗಳನ್ನು ತೀರ್ಥಹಳ್ಳಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದು ಸ್ಥಳೀಯ ಗ್ರಾಮಸ್ಥರಲ್ಲಿ ತೀವ್ರ ಆತಂಕ ಉಂಟು ಮಾಡಿದೆ.
ಕಾಲಮಿತಿಯಲ್ಲಿ ಪರಿಹಾರಕ್ಕೆ ಸೂಚನೆ: ಜಿ.ಪಂ. ಉಪ ಕಾರ್ಯದರ್ಶಿ ಡಾ. ಎಸ್. ರಂಗಸ್ವಾಮಿ
ಕುಡಿಯುವ ನೀರಿನ ಸಮಸ್ಯೆ ಕಂಡುಬರುವ ಗ್ರಾಮಗಳಿಗೆ ಖುದ್ದಾಗಿ ಭೇಟಿಯಿತ್ತು ಪರಿಶೀಲಿಸಬೇಕು. ಕಾಲಮಿತಿಯಲ್ಲಿ ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕು. ಅಗತ್ಯವಿದ್ದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವಂತೆ ಗ್ರಾಮ ಪಂಚಾಯತ್ಗಳಿಗೆ ನಿರ್ದೇಶನ ನೀಡಲಾಗಿದೆ. ಅಗತ್ಯವಿರುವ ಕಡೆ ಟ್ಯಾಂಕರ್ ಮೂಲಕ ನೀರು ಪೂರೈಸುವಂತೆಯೂ ಸೂಚನೆ ನೀಡಲಾಗಿದೆ' ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯದರ್ಶಿ (ಅಭಿವೃದ್ದಿ ವಿಭಾಗ) ಡಾ.ಎಸ್. ರಂಗಸ್ವಾಮಿ ಗುರುವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.