ಸರಳರೇಖೆಯಲ್ಲಿರದ ಸತ್ಯಗಳು!
ಮೋದಿಗೆ ಕಂಟಕವಾಗುತ್ತಿರುವ ಗಡ್ಕರಿ
ಭಾಗ-1
ಆರೆಸ್ಸೆಸ್‌ನ ಹೆಡ್‌ಕ್ವಾರ್ಟರ್ಸ್ ನಾಗ್ಪುರದ ಸಂಸದರೂ ಆಗಿರುವ ಗಡ್ಕರಿ ಮೇಲೆ ಇವತ್ತಿಗೂ ಸಂಘ ಪರಿವಾರಕ್ಕೆ ಮೋದಿಗಿಂತಲೂ ಹೆಚ್ಚು ಮಮಕಾರ. ಆರೆಸ್ಸೆಸ್‌ಗೆ ಗಡ್ಕರಿ ಮೇಲೆ ಇಂತಹ ಸೆಳೆತ ಇರುವುದು ಗೊತ್ತಿದ್ದುದರಿಂದಲೇ ಮೋದಿ ಆರಂಭದಿಂದಲೂ ಗಡ್ಕರಿಯನ್ನು ತುಂಬಾ ನಾಜೂಕಾಗಿ ನಿಯಂತ್ರಿಸುವ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ, ಅದಕ್ಕೆ ಗಡ್ಕರಿಯೂ ಪ್ರತಿರೋಧಿಸುತ್ತಲೇ ಬಂದಿದ್ದಾರೆ.
‘ಮೈ ನಿತಿನ್ ಗಡ್ಕರಿ ಬೋಲ್ ರಹಾ ಹೂಂ....
ರೇಡಿಯೊ ಅಥವಾ ಎಫ್‌ಎಂ ಕೇಳುವ ಅಭ್ಯಾಸ ಇರುವವರಿಗೆ ಹೀಗೊಂದು ಜಾಹೀರಾತಿನ ಧ್ವನಿ ಕಿವಿ ಮೇಲೆ ಖಂಡಿತ ಬಿದ್ದಿರುತ್ತೆ. ಅದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದಿಂದ ಬಿತ್ತರವಾಗುವ ರಸ್ತೆ ಸುರಕ್ಷತೆಯ ಜಾಹೀರಾತು ಹಾಗೂ ಅದರಲ್ಲಿ ಕೇಳಿಬರುವುದು ಕೇಂದ್ರ ಸಚಿವ ನಿತಿನ್ ಗಡ್ಕರಿಯವರ ದನಿ. ಮೇಲ್ನೋಟಕ್ಕೆ ಈ ಜಾಹೀರಾತಿನಲ್ಲಿ ಘನಂದಾರಿ ರಾಜಕಾರಣವೇನೂ ಇಲ್ಲ. ಆದರೆ ಕಳೆದ ಐದು ವರ್ಷಗಳಿಂದ ಕೇಂದ್ರ ಸರಕಾರದ ಪ್ರಚಾರ ವೈಖರಿಯನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿದರೆ, ಅದು ಇಂಧನ ಇಲಾಖೆ ಇರಲಿ, ರಕ್ಷಣಾ ಇಲಾಖೆ ಇರಲಿ, ಆರ್ಥಿಕ ಇಲಾಖೆಯಿರಲಿ, ವಿದೇಶಾಂಗ ಸಚಿವಾಲಯ ಆಗಿರಲಿ, ರೈಲ್ವೆ ಇಲಾಖೆಯೇ ಇರಲಿ.... ಎಲ್ಲಾ ಇಲಾಖೆಗಳ ಮುದ್ರಣ ಮತ್ತು ದೃಶ್ಯ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವುದು ಪ್ರಧಾನಿ ಮೋದಿಯವರ ಮುಖ ಮತ್ತು ದನಿ ಮಾತ್ರ. ಇಂಥ ಏಕಸ್ವಾಮ್ಯ ವಾತಾವರಣವನ್ನು ಬ್ರೇಕ್ ಮಾಡಿ ತಮ್ಮ ಇಲಾಖೆಯಿಂದ, ತನ್ನದೇ ಜಾಹೀರಾತು ಕೊಟ್ಟ ಏಕೈಕ ಮಂತ್ರಿ ನಿತಿನ್ ಗಡ್ಕರಿ!
ನಿಜ, ಯಾವ ಕಾರಣಕ್ಕೂ ಈ ಜಾಹೀರಾತೊಂದೇ ಬಿಜೆಪಿಯ ಆಂತರಿಕ ರಾಜಕಾರಣವನ್ನು ಅಳೆಯುವ ಸಾಧನವಲ್ಲ. ಆದರೆ ಮೋದಿ-ಗಡ್ಕರಿ ನಡುವೆ ಕಳೆದ ಐದಾರು ವರ್ಷಗಳಿಂದ ನಡೆಯುತ್ತಾ ಬಂದಿರುವ ಇಂತಹ ಸಣ್ಣಸಣ್ಣ ಸಂಗತಿಗಳನ್ನೆಲ್ಲ ಸಾಲಾಗಿ ಪೋಣಿಸಿ ನೋಡಿದಾಗ ಬಿಜೆಪಿಯೊಳಗೆ ಉಲ್ಬಣಿಸಿರುವ ಒಂದು ರಾಜಕೀಯ ಸಂದಿಗ್ಧ ಸನ್ನಿವೇಶದ ಅಂದಾಜು ಸಿಗುತ್ತದೆ. ಆ ಸಂದಿಗ್ಧತೆಯೂ ಸರಳ ರೇಖೆಯಲ್ಲಿರುವಂತಹದ್ದಲ್ಲ, ಪರಸ್ಪರ ಅನ್ಯೋನ್ಯತೆಯ ಹೊದಿಕೆಯಡಿ ಅವಿತಿಟ್ಟುಕೊಂಡ ಸತ್ಯಗಳ ಸಮೂಹ ಅದು.
Politicised expansionಇತ್ತ್ತೀಚೆಗೆ ಎಎನ್‌ಐಗೆ ನೀಡಿದ ಸಂದರ್ಶನವೊಂದರಲ್ಲಿ ‘‘ಬಿಜೆಪಿ ಮೋದಿ-ಕೇಂದ್ರಿತ ಪಕ್ಷವಲ್ಲ. ನಮ್ಮದು ಸಿದ್ಧ್ದಾಂತ ಕೇಂದ್ರಿತ ಪಕ್ಷವೇ ಹೊರತು ವ್ಯಕ್ತಿ ಕೇಂದ್ರಿತ ಪಾರ್ಟಿಯಲ್ಲ. ಈ ಹಿಂದೆಯೂ ಬಿಜೆಪಿ ಅಟಲ್‌ಜಿ ಅಥವಾ ಅಡ್ವಾಣೀಜಿ ಪಾರ್ಟಿಯಾಗಿರಲಿಲ್ಲ, ಈಗಲೂ ಮೋದಿ ಅಥವಾ ಶಾ ಪಾರ್ಟಿಯಾಗಿಲ್ಲ’’ ಅನ್ನೋ ಹೇಳಿಕೆ ನೀಡಿದ್ದರು. ಬಹಳಷ್ಟು ವಿಶ್ಲೇಷಣೆಗಳು ಈ ಹೇಳಿಕೆಯನ್ನು ‘ಮೋದಿಯವರಿಗೆ ಪರ್ಯಾಯವಾಗಿ ರೂಪುಗೊಳ್ಳುತ್ತಿರುವ ನಾಯಕತ್ವದ ಸೂಚನೆಗಳು’ ಎಂದು ವಿಶ್ಲೇಷಿಸಿವೆ. ಇದನ್ನು ಮತ್ತಷ್ಟು ಗೆ ಒಳಪಡಿಸುವುದಾದರೆ ‘ಅಕಸ್ಮಾತ್ ಅತಂತ್ರ ಲೋಕಸಭಾ ಫಲಿತಾಂಶವೇನಾದರೂ ಏರ್ಪಟ್ಟರೆ, ಆಗ ಮೋದಿ ಬದಲು ಗಡ್ಕರಿಯೇ ಪ್ರಧಾನಿಯಾಗಲಿದ್ದಾರೆ ಎಂಬ ಸುಳಿವನ್ನೂ ಆ ಹೇಳಿಕೆಯಿಂದ ಗ್ರಹಿಸಬಹುದು.
ಆದರೆ ಅದೇ ಸಂದರ್ಶನದಲ್ಲಿ ಗಡ್ಕರಿಯವರು ಹೇಳಿದ ‘‘2019ರಲ್ಲೂ ಮೋದಿ ನೇತೃತ್ವದಲ್ಲಿ ಬಿಜೆಪಿ ಮುನ್ನೂರಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ. ಮೋದಿಯವರೇ ಮತ್ತೆ ಪ್ರಧಾನಿಯಾಗಲಿದ್ದಾರೆ’’ ಎಂಬ ಇನ್ನೊಂದು ಮಾತು ಮೇಲಿನ ವಿಶ್ಲೇಷಣೆಗಳನ್ನು ತುಸು ಗೊಂದಲಕ್ಕೆ ದೂಡುತ್ತದೆ. ಹೀಗೆ ಗಡ್ಕರಿಯವರು ಗೊಂದಲ ಮೂಡಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ 2018ರ ಡಿಸೆಂಬರ್‌ನಲ್ಲಿ ಹೊರಬಿದ್ದ ಐದು ರಾಜ್ಯಗಳ ಚುನಾವಣೆಯ ಫಲಿತಾಂಶದ ನಂತರ ‘‘ಈ ರಾಜ್ಯಗಳಲ್ಲಿನ ಬಿಜೆಪಿ ಸೋಲಿನ ಹೊಣೆಯನ್ನು ಪಕ್ಷದ ಅಧ್ಯಕ್ಷರೇ (ಅಮಿತ್ ಶಾ) ಹೊತ್ತುಕೊಳ್ಳಬೇಕು’’, ‘‘ತನ್ನ ಮನೆಯನ್ನು ನಿಭಾಯಿಸಲಾಗದವನು, ದೇಶ ನಿಭಾಯಿಸಲಾರ’’ ಎಂಬಿತ್ಯಾದಿ ಸೂಚ್ಯ ರೆಬೆಲುತನದ ಹೇಳಿಕೆಗಳ ಮೂಲಕ ‘ಪರ್ಯಾಯ ನಾಯಕತ್ವ’ದ ಸುಳಿವು ಕೊಟ್ಟಿದ್ದ ಗಡ್ಕರಿಯವರು ನಂತರ ‘ಇಂಡಿಯಾ ಟುಡೇ’ ಮೀಡಿಯಾ ಗ್ರೂಪ್‌ನ ರಾಜ್‌ದೀಪ್ ಸರ್ದೇಸಾಯಿಯವರಿಗೆ ನೀಡಿದ ಸಂದರ್ಶನದಲ್ಲಿ ‘‘ನಾನು ಪ್ರಧಾನಿ ಹುದ್ದೆಯ ಆಕಾಂಕ್ಷಿಯಲ್ಲ. ಮೋದಿಯವರೇ ನಮ್ಮ ನಾಯಕ, ಅವರೇ ಮುಂದಿನ ಪ್ರಧಾನಿ. ನಾನು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನದನ್ನು ಸಂಘ ಮತ್ತು ಪಕ್ಷ ನನಗೆ ನೀಡಿದೆ. ಅಷ್ಟೇ ಸಾಕು’’ ಎಂದು ಹೇಳಿ ವಿಶ್ಲೇಷಣೆಕಾರರನ್ನು ತಬ್ಬಿಬ್ಬು ಮಾಡಿದ್ದರು. ಆಮೇಲೆ ಅಕ್ಷರಶಃ ಬಂಡಾಯ ಹೇಳಿಕೆಗಳಿಂದ ದೂರವೇ ಉಳಿದಿದ್ದ ಗಡ್ಕರಿಯವರು ಇದೀಗ ಚುನಾವಣೆಯ ನಾಲ್ಕು ಹಂತಗಳು ಮುಗಿದ ಮೇಲೆ ಮತ್ತೆ ಯಥಾಶೈಲಿಯ ಕನ್‌ಪ್ಯೂಸಿಂಗ್ ರೆಬೆಲ್ ಹೇಳಿಕೆಯ ಮುಖಾಂತರ ಚರ್ಚೆಗೆ ಬಂದಿದ್ದಾರೆ.
2014ರ ನಂತರ ಬಿಜೆಪಿಯಲ್ಲಿ ಮೋದಿ-ಶಾ ಜೋಡಿಯ ಶಕೆ ಆರಂಭವಾದ ನಂತರ ಪಕ್ಷದೊಳಗೆ ಭಿನ್ನ ದನಿಗಳೆಲ್ಲ ಮೂಲೆಗುಂಪಾಗುತ್ತಾ ಬಂದವು. ಮಾರ್ಗದರ್ಶಕ ಮಂಡಳಿ ಸೇರಿದ ಅಡ್ವಾಣಿ, ಮು.ಮ. ಜೋಷಿಯಂತಹವರ ಮಾತಂತಿರಲಿ ಸರಕಾರದ ಭಾಗವಾಗಿದ್ದ ಸುಶ್ಮಾ ಸ್ವರಾಜ್, ರಾಜನಾಥ್ ಸಿಂಗ್ ಥರದವರೂ ತಮ್ಮ ಸ್ವಾತಂತ್ರ್ಯ ಕಳೆದುಕೊಂಡು ಡಮ್ಮಿಯಾಗುತ್ತಾ ಬಂದರು. ದಿವಂಗತ ಅನಂತ ಕುಮಾರ್ ಥರದವರು ತಮ್ಮ ವಿಧೇಯತೆಯನ್ನು ಅಡ್ವಾಣಿಯವರಿಂದ ಮೋದಿಯವರತ್ತ ಶಿಫ್ಟ್ ಮಾಡಿಕೊಳ್ಳಬೇಕಾಯಿತು. ಅಂತಹ ಪ್ರತಿಕೂಲ ಸಂಪುಟದಲ್ಲೂ ಮೋದಿ-ಶಾ ಜೋಡಿಗೆ ಪ್ರತಿರೋಧ ತೋರುತ್ತಾ ಬಂದದ್ದು ನಿತಿನ್ ಗಡ್ಕರಿ ಮಾತ್ರ. ಯಾಕೆಂದರೆ ಸಂಘ ಪರಿವಾರ ಇಡಿಯಾಗಿ ಗಡ್ಕರಿಯ ಬೆನ್ನಿಗೆ ನಿಂತಿತ್ತು. ಆರೆಸ್ಸೆಸ್‌ನ ಹೆಡ್‌ಕ್ವಾರ್ಟರ್ಸ್ ನಾಗ್ಪುರದ ಸಂಸದರೂ ಆಗಿರುವ ಗಡ್ಕರಿ ಮೇಲೆ ಇವತ್ತಿಗೂ ಪರಿವಾರಕ್ಕೆ ಮೋದಿಗಿಂತಲೂ ಹೆಚ್ಚು ಮಮಕಾರ. ಆರೆಸ್ಸೆಸ್‌ಗೆ ಗಡ್ಕರಿ ಮೇಲೆ ಇಂತಹ ಸೆಳೆತ ಇರುವುದು ಗೊತ್ತಿದ್ದುದರಿಂದಲೇ ಮೋದಿ ಆರಂಭದಿಂದಲೂ ಗಡ್ಕರಿಯನ್ನು ತುಂಬಾ ನಾಜೂಕಾಗಿ ನಿಯಂತ್ರಿಸುವ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ, ಅದಕ್ಕೆ ಗಡ್ಕರಿಯೂ ಪ್ರತಿರೋಧಿಸುತ್ತಲೇ ಬಂದಿದ್ದಾರೆ.
ಬಹುಶಃ ಬಹಳಷ್ಟು ಜನರಿಗೆ ತಿಳಿದಿರಲಿಕ್ಕಿಲ್ಲ. 26 ಜುಲೈ 2014, ಅಂದರೆ ಮೋದಿಯವರು ಪ್ರಧಾನಿಯಾದ ಎರಡು ತಿಂಗಳಾಗುವ ಮೊದಲೇ, ‘ಸಂಡೇ ಗಾರ್ಡಿಯನ್’ ಪತ್ರಿಕೆ ಒಂದು ಸುದ್ದಿಯನ್ನು ಹೊರಗೆಡವಿತ್ತು. ಕೇಂದ್ರ ಮಂತ್ರಿ ನಿತಿನ್ ಗಡ್ಕರಿಯವರ ಅಧಿಕೃತ ನಿವಾಸದಲ್ಲಿ ಒಂದು ಸೂಕ್ಷ್ಮ ಕದ್ದಾಲಿಕೆಯ ಯಂತ್ರ ಸಿಕ್ಕಿದೆ ಎಂಬ ಸುದ್ದಿ ಅದಾಗಿತ್ತು. ಬಿಜೆಪಿ-ಪರ ಪತ್ರಿಕೆಯೊಂದು ‘ಅದು ಅಮೆರಿಕ ಬೇಹುಗಾರರ ಕೆಲಸ’ ಎಂದು ವಿಶ್ಲೇಷಿಸಿದ್ದರೆ, ಬಿಜೆಪಿಯ ಸುಬ್ರಮಣಿಯನ್ ಸ್ವಾಮಿ ‘ಇದು ಹಿಂದಿನ ಯುಪಿಎ ಸರಕಾರದ ಚಿತಾವಣೆ’ ಎಂದು ಆರೋಪಿಸಿದ್ದರು. ಅಂದರೆ ಅಲ್ಲಿ ಕದ್ದಾಲಿಕೆ ಯಂತ್ರ ಸಿಕ್ಕಿದ್ದು ನಿಜ ಎಂಬುದನ್ನು ಅವರು ಒಪ್ಪಿಕೊಂಡಂತಾಗಿತ್ತು.
‘‘ಕೇಂದ್ರ ಸಚಿವರ ಮನೆಯಲ್ಲೇ ಕದ್ದಾಲಿಕೆ ಸಾಧನ ಸಿಕ್ಕಿರುವುದರಿಂದ ಸೂಕ್ತ ತನಿಖೆ ನಡೆಯಬೇಕು’’ ಎಂದು ವಿರೋಧ ಪಕ್ಷಗಳು ಸದನದಲ್ಲಿ ಗದ್ದಲ ನಡೆಸಿದ ಎರಡು ದಿನಗಳ ನಂತರವಷ್ಟೇ ಗಡ್ಕರಿಯವರು ಆ ಸುದ್ದಿಯನ್ನು ನಿರಾಕರಿಸಿ ತನ್ನ ಮನೆಯಲ್ಲಿ ಯಾವ ಸಾಧನವೂ ಸಿಕ್ಕಿಲ್ಲ ಎಂಬ ಸ್ಪಷ್ಟೀಕರಣ ಕೊಟ್ಟಿದ್ದರು. ಆದರೆ ಒಂದು ತಿಂಗಳ ನಂತರ ‘ಔಟ್‌ಲುಕ್’ ಪತ್ರಿಕೆ ಪ್ರಕಟಿಸಿದ್ದ ತನಿಖಾ ವರದಿಯಲ್ಲಿ ‘ಬಿಜೆಪಿಯ ಮಾತೃಸಂಸ್ಥೆ ಆರೆಸ್ಸೆಸ್‌ನ ಮೋಹನ್ ಭಾಗವತರು ಮಧ್ಯಪ್ರವೇಶ ಮಾಡಿ ‘‘ಈ ಪ್ರಕರಣ ಬಿಜೆಪಿ ಮತ್ತು ಪ್ರಧಾನಿ ಮೋದಿಯವರ ಘನತೆಗೆ ಕುಂದು ತರುವ ಸಾಧ್ಯತೆ ಇರುವುದರಿಂದ ಜನರ ಮುಂದೆ ಇದನ್ನು ನಿರಾಕರಿಸಿ’’ ಎಂದು ಗಡ್ಕರಿಯವರ ಮನವೊಲಿಸಿದ್ದರು’ ಎಂದು ಉಲ್ಲೇಖಿಸಲಾಗಿತ್ತು.
2009ರಲ್ಲಿ ಬಿಜೆಪಿಯ ಅತ್ಯಂತ ಕಿರಿಯ ಅಧ್ಯಕ್ಷನಾಗಿ ಆಯ್ಕೆಯಾಗುವುದಕ್ಕೂ ಮೊದಲಿನಿಂದಲೂ ಆರೆಸ್ಸೆಸ್‌ಗೆ ಗಡ್ಕರಿ ಮೇಲೆ ಅಪಾರ ಒಲವು. 2013ರಲ್ಲಿ ಗಡ್ಕರಿಯವರನ್ನೇ ಎರಡನೇ ಅವಧಿಗೆ ಬಿಜೆಪಿ ಅಧ್ಯಕ್ಷರನ್ನಾಗಿ ಮುಂದುವರಿಸಲು ಆರೆಸ್ಸೆಸ್ ಪಕ್ಷದ ಬೈಲಾವನ್ನೇ ತಿದ್ದುಪಡಿ ಮಾಡಿತ್ತು. ಆದರೆ ಗಡ್ಕರಿ ಮೇಲೆ ಭ್ರಷ್ಟಾಚಾರ ಮತ್ತು ಭೂಹಗರಣದ ಆರೋಪ ಕೇಳಿ ಬಂದಿದ್ದರಿಂದ ಅದು ಸಾಧ್ಯವಾಗದೆ, ರಾಜನಾಥ್ ಸಿಂಗ್‌ರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕಾಯಿತು. ಗಡ್ಕರಿ ಮೇಲೆ ಆರೆಸ್ಸೆಸ್‌ನ ಈ ಒಲವಿಗೆ ಅವರ ಬ್ರಾಹ್ಮಣ ಜಾತಿ ಒಂದು ಕಾರಣವಾದರೆ, ಆರೆಸ್ಸೆಸ್‌ಗೆ ಅವರು ತೋರುತ್ತಾ ಬಂದಿರುವ ನಿಷ್ಠೆ, ಬೇರೆ ಪಕ್ಷಗಳ ನಾಯಕರ ಜೊತೆಗೂ ಅವರು ಹೊಂದಿರುವ ಅನ್ಯೋನ್ಯ ಒಡನಾಟ, ಕಾರ್ಪೊರೇಟ್ ಕಂಪೆನಿಗಳ ದಿಗ್ಗಜರ ಜೊತೆ ಇರುವ ನಿಕಟ ಸ್ನೇಹ ಇವೆಲ್ಲವೂ ಅವರನ್ನು ಆರೆಸ್ಸೆಸ್ ಫೇವರಿಟ್ ಆಗಿಸಿವೆ. ಎಷ್ಟರಮಟ್ಟಿಗೆಂದರೆ, ಇವತ್ತು ಗಡ್ಕರಿ ಮೇಲಿರುವ ಅಧಿಕಾರದ ಆತಂಕ, ಆವತ್ತು ಮಹಾರಾಷ್ಟ್ರದ ಇನ್ನಿಬ್ಬರು ಘಟಾನುಘಟಿ ಬಿಜೆಪಿಗರಾದ ಪ್ರಮೋದ್ ಮಹಾಜನ್ ಮತ್ತು ಗೋಪಿನಾಥ್ ಮುಂಢೆಯವರಿಗಿತ್ತು. ‘‘ಹಾಗಾಗಿಯೇ ಅವರಿಬ್ಬರು 2004ರಲ್ಲಿ ಗಡ್ಕರಿ ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾದಾಗ, ಗಡ್ಕರಿಯನ್ನು ಕೌಂಟರ್ ಮಾಡಲು ಅದೇ ಬ್ರಾಹ್ಮಣ ಸಮುದಾಯದ, ನಾಗ್ಪುರ ಮೂಲದ, ಆರೆಸ್ಸೆಸ್ ನಿಷ್ಠೆ ಹೊಂದಿದ ದೇವೇಂದ್ರ ಫಡ್ನವೀಸ್‌ರನ್ನು ಪರ್ಯಾಯವಾಗಿ ಬೆಳೆಸುತ್ತಾ ಬಂದಿದ್ದರು. ಆದರೆ ಅದರ ಲಾಭ ಆ ಇಬ್ಬರಿಗಿಂತ ಹೆಚ್ಚಾಗಿ ಮೋದಿಯವರಿಗೆ ಸಿಕ್ಕಿತು’’ ಎನ್ನುತ್ತಾರೆ ಮರಾಠಿ ರಾಜಕೀಯ ಪತ್ರಕರ್ತೆ ಸುಜಾತ ಆನಂದನ್.
2014ರಲ್ಲಿ ಮೋದಿ ಪ್ರಧಾನಿಯಾದ ನಾಲ್ಕು ತಿಂಗಳ ಅವಧಿಯಲ್ಲೇ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಎದುರಿಸಿತು. ಎರಡು ದಶಕಗಳ ರಾಜಕೀಯ ಮಿತ್ರ ಶಿವಸೇನೆ ಜೊತೆ ಮೈತ್ರಿ ಮುರಿದುಕೊಂಡ ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸಿದ್ದಲ್ಲದೆ 288 ಸ್ಥಾನಗಳ ಪೈಕಿ 122 ಕ್ಷೇತ್ರಗಳಲ್ಲಿ ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಗಡ್ಕರಿಯವರು ಸಂಸದನಾಗಿ ಪ್ರತಿನಿಧಿಸುವ ನಾಗ್ಪುರ ಕ್ಷೇತ್ರವಿರುವ ವಿದರ್ಭ ಪ್ರಾಂತದ ಒಟ್ಟು 62 ಕ್ಷೇತ್ರಗಳಲ್ಲಿ ಬಿಜೆಪಿಯ 44 ಎಂಎಲ್‌ಎಗಳು ಆಯ್ಕೆಯಾಗಿದ್ದರು. ಅದರಲ್ಲಿ 39 ಎಂಎಲ್‌ಎಗಳು ಸುಧೀರ್ ಮುಂಗಟೀವಾರ್ (ಗಡ್ಕರಿಯವರ ಆಪ್ತ ಶಾಸಕ) ನೇತೃತ್ವದಲ್ಲಿ ಸಭೆ ಸೇರಿ ಗಡ್ಕರಿಯವರೇ ಮುಖ್ಯಮಂತ್ರಿ ಅಭ್ಯರ್ಥಿಯಾಗಬೇಕು ಎಂದು ಒತ್ತಾಯ ಮಾಡಿದ್ದರು. ಅಷ್ಟೇ ಅಲ್ಲ, ಎನ್‌ಸಿಪಿಯ ಶರದ್ ಪವಾರ್ ಕೂಡಾ ‘‘ಗಡ್ಕರಿ ಸಿಎಂ ಆಗುವುದಾದರೆ ನನ್ನ ಪಕ್ಷದ 41 ಶಾಸಕರು ಬಿಜೆಪಿಯನ್ನು ಬೆಂಬಲಿಸಲಿದ್ದಾರೆ’’ ಎಂದು ಹೇಳಿದ್ದರು. ಆದರೆ ಗಡ್ಕರಿ ಮಾತ್ರ ನಾನು ಯಾವ ಕಾರಣಕ್ಕೂ ರಾಜ್ಯ ರಾಜಕಾರಣಕ್ಕೆ ಮರಳುವುದಿಲ್ಲ ಎಂದು ಹೇಳಿ ಸುಮ್ಮನಾಗಿದ್ದರು. ಕೊನೆಗೆ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿ ಆಯ್ಕೆಯಾದರು.
ಆದರೆ ಪತ್ರಕರ್ತ ಕುಮಾರ್ ಕೇಟ್ಕಾರ್‌ರವರು ಅಲ್ಲಿ ನಡೆದಿದ್ದ ರಾಜಕೀಯವನ್ನು ಹೀಗೆ ವಿಶ್ಲೇಷಿಸುತ್ತಾರೆ, ‘‘ಕೇಂದ್ರ ಮಂತ್ರಿಯಾಗಿ ಅಧೀನ ಹುದ್ದೆಯಲ್ಲಿರುವುದಕ್ಕಿಂತ ಮಹಾರಾಷ್ಟ್ರ ಸಿಎಂ ಆಗಿ ಸ್ವತಂತ್ರ ನಾಯಕನಾಗಿ ರೂಪುಗೊಳ್ಳುವುದನ್ನು ಗಡ್ಕರಿ ತಳ್ಳಿ ಹಾಕಲಿಕ್ಕೆ ಸಾಧ್ಯವೇ ಇರಲಿಲ್ಲ. ಆದರೆ ಮೋದಿಯವರೇ ಗಡ್ಕರಿ ಸಿಎಂ ಆಗದಂತೆ ಅಡ್ಡಗಾಲು ಹಾಕಿದರು. ಯಾಕೆಂದರೆ ಮೋದಿಗೆ ಪಕ್ಷದಲ್ಲಿ ಪರ್ಯಾಯ ನಾಯಕತ್ವ ರೂಪುಗೊಳ್ಳುವುದು ಸುತಾರಾಂ ಇಷ್ಟವಿಲ್ಲ. ದೇಶದ ಆರ್ಥಿಕ ರಾಜಧಾನಿಯಾದ ಮುಂಬೈ ಮಹಾನಗರವನ್ನು ಒಳಗೊಂಡ ಮಹಾರಾಷ್ಟ್ರದ ಮುಖ್ಯಮಂತ್ರಿ ಆಗುವುದೆಂದರೆ ಕಾರ್ಪೊರೇಟ್ ಜಗತ್ತಿನ ಸಖ್ಯ ಹಿಗ್ಗುವುದಲ್ಲದೆ, ನಾಗ್ಪುರದ ಆರೆಸ್ಸೆಸ್ ಬಾಂಧವ್ಯಗಳೂ ಗಡ್ಕರಿಯವರಿಗೆ ಮತ್ತಷ್ಟು ಗಾಢವಾಗಲಿದ್ದವು. ಸ್ಟಾಕ್ ಮಾರುಕಟ್ಟೆ ಮತ್ತು ದೇಶದ ಅತಿ ಶ್ರೀಮಂತ ಉದ್ಯಮಪತಿಗಳು ವಾಸವಿರುವ ಮುಂಬೈ ಮಹಾನಗರಿಯ ಮೇಲೆ ಗಡ್ಕರಿಯವರ ಪ್ರಭಾವ ಹೆಚ್ಚಾದರೆ ತನಗಿರುವ ಅಷ್ಟೂ ಕಾರ್ಪೊರೇಟ್ ಶಕ್ತಿ ಅತ್ತ ಸರಿದುಹೋಗುತ್ತದೆ ಎಂಬ ಲೆಕ್ಕಾಚಾರದಿಂದಲೇ ಗಡ್ಕರಿಯನ್ನು ರಾಜ್ಯ ರಾಜಕಾರಣಕ್ಕೆ ಮರಳದಂತೆ ಕಟ್ಟಿಹಾಕಿ, ಈ ಹಿಂದೆ ಮಹಾಜನ್ ಮತ್ತು ಮುಂಢೆ ಬೆಳೆಸಿದ್ದ, ತಮ್ಮ ಪರ ಒಲವಿರುವ ಫಡ್ನವೀಸ್‌ರನ್ನು ಮೋದಿ-ಶಾ ಜೋಡಿ ಆಯ್ಕೆ ಮಾಡಿತು.’’
ಸುಜಾತ ಆನಂದನ್ ಕೂಡಾ ಇದನ್ನು ಅನುಮೋದಿಸುತ್ತಾ, ‘‘ಒಂದೊಮ್ಮೆ ಗಡ್ಕರಿ ಮಹಾರಾಷ್ಟ್ರದ ಸಿಎಂ ಆದರೆ, ಕೆಲವೇ ತಿಂಗಳಲ್ಲಿ ರಾಜ್ಯವನ್ನು ಆಕ್ರಮಿಸಿಕೊಂಡು ಬಿಡುತ್ತಾರೆ ಎಂಬುದು ಮೋದಿ-ಶಾ ಜೋಡಿಗೆ ತಿಳಿದಿತ್ತು. ಆಗ ತಾವು ಮಹಾರಾಷ್ಟ್ರದ ಕಾರ್ಪೊರೇಟ್ ರಾಜಕಾರಣದೊಳಗೆ ಹಾಗೂ ಸಂಘ ಪರಿವಾದ ರಾಜಕಾರಣದೊಳಗೆ ಗಡ್ಕರಿಯ ಅನುಮತಿಯಿಲ್ಲದೆ ಪ್ರವೇಶಿಸಲಾಗದೆ ದುರ್ಬಲರಾಗುತ್ತೇವೆ, ಅದರ ಬದಲು ದಿಲ್ಲಿಯಲ್ಲೇ ಇಟ್ಟುಕೊಂಡರೆ ಗಡ್ಕರಿಯನ್ನು ನಿಯಂತ್ರಿಸುವುದಕ್ಕೂ ಸುಲಭವಿರುತ್ತದೆ ಎಂಬುದು ಆ ಜೋಡಿಯ ತರ್ಕ’’ ಎನ್ನುತ್ತಾರೆ.
ಮೋದಿಯ ಸಂಪುಟದೊಳಗೆ ಸ್ಥಾನ ಪಡೆದ ನಂತರವೂ ಮೋದಿ-ಗಡ್ಕರಿ ನಡುವಿನ ಇಂತಹ ಸಂಘರ್ಷ ಮುಂದುವರಿದುಕೊಂಡೇ ಬಂದಿತ್ತು. ಯಥೇಚ್ಛ ನಿರ್ಮಾಣ ಕಾಮಗಾರಿ ಮತ್ತು ಆ ಮೂಲಕ ಅಪಾರ ಹಣದ ಹರಿದಾಟದ ಸಾಧ್ಯತೆಯಿರುವ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಪಟ್ಟುಹಿಡಿದು ದಕ್ಕಿಸಿಕೊಂಡ ಗಡ್ಕರಿ, ರೈಲ್ವೆ ಖಾತೆಯನ್ನೂ ಕೇಳಿದರಾದರೂ ಮೋದಿ ಅದನ್ನು ಸದಾನಂದ ಗೌಡರಿಗೆ ವಹಿಸಿಕೊಟ್ಟರು. ‘ಮಿನಿಮಮ್ ಗೌರ್ಮೆಂಟ್ ಮ್ಯಾಕ್ಸಿಮಮ್ ಗೌರ್ನೆನ್ಸ್’ ಘೋಷಣೆಯ ಮೂಲಕ ಆರಂಭದಲ್ಲಿ ಕಡಿಮೆ ಸಚಿವರನ್ನು ನೇಮಿಸಿಕೊಂಡ ಮೋದಿ ಯವರು ಎಲ್ಲಾ ಇಲಾಖೆಗಳನ್ನು ತಮ್ಮ ಬಿಗಿಮುಷ್ಟಿಯಲ್ಲಿ ಹಿಡಿದುಕೊಳ್ಳುತ್ತಾ ಬಂದರು. ಆದರೆ ಅಂತಹ ಪ್ರಯತ್ನ ಗಡ್ಕರಿಯವರ ಇಲಾಖೆಯಲ್ಲಿ ಸಫಲವಾಗಲಿಲ್ಲ.
ಆಧಾರ: ದಿ ಕಾರಾವಾನ್