varthabharthi


ನೇಸರ ನೋಡು

ರಂಗಭೂಮಿ ಅಭಿವೃದ್ಧಿ ಪ್ರಾಧಿಕಾರ

ವಾರ್ತಾ ಭಾರತಿ : 19 May, 2019
ಜಿ.ಎನ್.ರಂಗನಾಥ ರಾವ್

ತಾಲೂಕು ರಂಗಮಂದಿರಗಳಂತೆಯೇ ಬೆಂಗಳೂರು ಮಹಾನಗರ ಹಾಗೂ ಸ್ಮಾರ್ಟ್ ಸಿಟಿಗಳಾಗಿ ಬೆಳೆಯುತ್ತಿರುವ ಮೈಸೂರು, ಮಂಗಳೂರು, ತುಮಕೂರು, ದಾವಣಗರೆಯಂಥ ಜಿಲ್ಲಾ ಕೇಂದ್ರಗಳ ಹೊಸ ಬಡಾವಣೆಗಳಲ್ಲಿ ಮಿನಿ ರಂಗಮಂದಿರಗಳ ನಿರ್ಮಾಣ ಅಗತ್ಯವಾಗಿದೆ. ಬಡಾವಣೆಗಳಲ್ಲಿ ಮಿನಿ ರಂಗಮಂದಿರಗಳನ್ನು ನಿರ್ಮಿಸುವುದರಿಂದ ರಂಗಭೂಮಿಯ ಬೆಳವಣಿಗೆಗೆ ಸಹಾಯವಾಗುವಂತೆಯೇ ಸ್ಥಳೀಯ ರಂಗಾಸಕ್ತರಿಗೂ ಅನುಕೂಲವಾಗಲಿದೆ.


ರ ಂಗಭೂಮಿ ಮನೋರಂಜನೆಯ ಮಾಧ್ಯಮವೂ ಹೌದು ಬೋಧನೆಯ ಮಾಧ್ಯಮವೂ ಹೌದು. ಇದಕ್ಕೆ ಒಂದು ಶತಮಾನಕ್ಕೂ ಮಿಗಿಲಾದ ಇತಿಹಾಸವುಳ್ಳ ಕನ್ನಡ ವೃತ್ತಿ ಮತ್ತು ಹವ್ಯಾಸಿ ರಂಗಭೂಮಿಗಳ ನಾಟಕಗಳೇ ನಿದರ್ಶನ. ರಂಗ ಮಂದಿರಗಳ ಕೊರತೆಯೂ ಸೇರಿದಂತೆ ಕನ್ನಡ ರಂಗಭೂಮಿಯನ್ನು ಕಾಡುತ್ತಿರುವ ಸಮಸ್ಯೆಗಳು ಹಲವಾರು. ಈ ಸಕಲ ಸಮಸ್ಯೆಗಳ ಮಧ್ಯೆಯೂ ಕರ್ನಾಟಕದ ಪ್ರಮುಖ ಸ್ಥಳಗಳಲ್ಲಿ ರಂಗಭೂಮಿ ಇನ್ನೂ ಜೀವಂತವಾಗಿರುವುದು ಒಂದು ವಿಸ್ಮಯವೇ. ವೃತ್ತ ಪತ್ರಿಕೆಯ ‘ನಗರದಲ್ಲಿ ಇಂದು ಅಂಕಣ’ದತ್ತ ಕಣ್ಣು ಹಾಯಿಸಿದಾಗ ಬೆಂಗಳೂರಿನಲ್ಲೇ ವಾರಾಂತ್ಯದಲ್ಲಿ ಎರಡು-ಮೂರು ನಾಟಕಗಳ ಪ್ರದರ್ಶನಗಳ ಮಾಹಿತಿ ಇರುತ್ತದೆ. ಇದು ಇತ್ತೀಚಿನ ವಿದ್ಯಮಾನ. ಕಳೆದ ಶತಮಾನದ ಅರವತ್ತರ ದಶಕದಲ್ಲಿ ಬಿ.ವಿ. ಕಾರಂತರ ದೋಹದಿಂದ ಚಿಗುರಿ, ವೃತ್ತಿ ರಂಗಭೂಮಿಯ ಕೆಲವು ಒಳ್ಳೆಯ ಅಂಶಗಳನ್ನು ಮೈಗೂಡಿಸಿಕೊಂಡು ಸೌಷ್ಠವವಾಗಿ ಬೆಳೆದ ಕನ್ನಡ ಹವ್ಯಾಸಿ ರಂಗಭೂಮಿ ಕೊನೆಯಲ್ಲಿ ಒಂದಷ್ಟು ಕಾಲ ನಾಟಕಗಳ ಕೊರತೆ, ಕಲಾವಿದರನ್ನು ಸೆಳೆದ ದೂರದರ್ಶನ ಆಕರ್ಷಣೆ ಎನ್ನಲಾದ ಕಾರಣಗಳಿಂದ ಸೊರಗಿತ್ತು.

ಈ ಮಧ್ಯೆ ಬಿ. ವಿ. ಕಾರಂತರು ಕಂಡ ಐದು ರಂಗಾಯಣಗಳ ಕನಸು ನನಸಾಯಿತು. ಮೈಸೂರು, ಧಾರವಾಡ, ಶಿವಮೊಗ್ಗ, ಕಲಬುರಗಿಗಳಲ್ಲಿ ರಂಗಾಯಣಗಳು ತಲೆಯೆತ್ತಿ ರಂಗ ಚಟುವಟಿಕಗಳು ಪುನಶ್ಚೇತನ ಪಡೆದವು. ಸರಕಾರಿ ರಂಗಾಯಣಗಳಲ್ಲದೆ ನೀನಾಸಂ, ಸಾಣೆಹಳ್ಳಿ ಶಿವಸಂಚಾರ ರಂಗಶಾಲೆ ಮೊದಲಾದ ಖಾಸಗಿ ರೆಪರ್ಟರಿಗಳು ಹುಟ್ಟಿಕೊಂಡವು. ಉಡುಪಿ ಮತ್ತು ಬೆಂಗಳೂರು ನಗರ ಜಿಲ್ಲೆಯಲ್ಲಿ ಇನ್ನೆರಡು ರಂಗಾಯಣಗಳನ್ನು ತೆರೆಯಲು ಸರಕಾರ ಈಗ ಸಿದ್ಧತೆ ನಡೆಸಿದೆ. ಈ ಪರಿಯ ರಂಗ ಶಿಕ್ಷಣ ಮತ್ತು ತರಬೇತಿಯ ಫಲವಾಗಿ ಪ್ರತಿ ವರ್ಷ ನಾಟಕ ನಿರ್ದೇಶನ, ಅಭಿನಯ, ಪ್ರಸಾಧನ ಮತ್ತು ಇತರ ತಂತ್ರಜ್ಞಾನಗಳಲ್ಲಿ ತರಬೇತಿ ಪಡೆದ ಸಾವಿರಾರು ಮಂದಿ ಯುವಕ ಯುವತಿಯರು ರಂಗಭೂಮಿಯಲ್ಲಿ ಅಡಿ ಇಟ್ಟರು. ಹೀಗೆ ಕನ್ನಡ ರಂಗಭೂಮಿಗೆ ಹೊಸ ನೀರು ಹರಿದು ಬಂದಂತೆ ನಾಟಕ ಪ್ರದರ್ಶನ ಮತ್ತಿತರ ರಂಗ ಚಟುವಟಿಕೆಗಳೂ ಗರಿಗೆದರಿದವು. ಇದೊಂದು ಉತ್ಸಾಹದಾಯಕ ಬೆಳವಣಿಗೆಯೇ ಸರಿ. ಪ್ರತಿವರ್ಷ ಇಷ್ಟು ದೊಡ್ಡ ಪ್ರಮಾಣದಲ್ಲಿ ಬರುತ್ತಿರುವ ಹೊಸ ಪ್ರತಿಭೆಗಳನ್ನು ನೀರೆರೆದು ಪೋಷಿಸುವಂಥ ವ್ಯವಸ್ಥೆ ನಮ್ಮಲ್ಲಿದೆಯೇ ಎಂದು ಕೇಳಿಕೊಂಡರೆ ‘ಇಲ್ಲ’ ಎನ್ನುವ ವಿಷಾದಕರ ಉತ್ತರವೇ ಎದುರಾಗುತ್ತದೆ. ಎಲ್ಲ ಕ್ಷೇತ್ರಗಳಂತೆ ಕನ್ನಡ ರಂಗಭೂಮಿಯಲ್ಲೂ ಮೂಲ ಸೌಕರ್ಯಗಳ ಕೊರತೆಯೇ ದೊಡ್ಡ ಸಮಸ್ಯೆ. ಮುಖ್ಯವಾಗಿ ರಂಗ ಮಂದಿರಗಳ ಕೊರತೆ. ವೃತ್ತಿ ರಂಗಭೂಮಿ ಕಾಲದಲ್ಲಿ ನಾಟಕದ ಕಂಪೆನಿಗಳು ತಾವು ಮೊಕ್ಕಾಂ ಮಾಡುತ್ತಿದ್ದ ಸ್ಥಳಗಳಲ್ಲಿ ಅರೆಬರೆ ನಿರ್ಮಾಣದ ಥಡಿಕೆ ಗೋಡ, ಜಿಂಕ್ ಶೀಟ್ ಛಾವಣಿಯ ರಂಗ ಮಂದಿರಗಳನ್ನು ನಿರ್ಮಿಸಿಕೊಳ್ಳುತ್ತಿದ್ದವು. ಮೊಕ್ಕಾಮ ಮುಗಿದ ಕೊಡಲೇ ಅವುಗಳನ್ನು ಕಳಚಿ ಗಂಟುಮೂಟೆ ಕಟ್ಟಿಕೊಂಡು ಮುಂದಿನ ಊರಿಗೆ ಪಯಣಿಸುತ್ತಿದ್ದರು.

ಕವಿ ರವೀಂದ್ರನಾಥ ಟ್ಯಾಗೂರರ ಜನ್ಮ ಶತಾಬ್ದಿ ಸ್ಮರಣಾರ್ಥ ಬೆಂಗಳೂರಿನಲ್ಲಿ ಪ್ರೊಸೀನಿಯಂ ಥಿಯೇಟರಿನ ಪ್ರತೀಕ ಎನ್ನಬಹುದಾದ ರವೀಂದ್ರ ಕಲಾಕ್ಷೇತ್ರ ನಿರ್ಮಾಣಗೊಂಡಿತು. ಮೈಸೂರು, ಧಾರವಾಡದಂಥ ನಗರಗಳಲ್ಲೂ ರಂಗಮಂದಿರಗಳು ನಿರ್ಮಾಣಗೊಂಡವು. ಕೆಲವು ಕಡೆ ಪುರಭವನಗಳೇ ಸಂದರ್ಭಾನುಸಾರ ರಂಗಮಂದಿರಗಳಾಗುತ್ತವೆ. ಆದಾಗ್ಯೂ ನಾಟ್ಯಶಾಸ್ತ್ರಬದ್ಧವಾದ ರಂಗ ಮಂದಿರಗಳ ಕೊರತೆ ಇದ್ದೇ ಇದೆ. ಪ್ರಥಮ ವಿಶ್ವ ಕನ್ನಡ ಸಮ್ಮೇಳನ ಸಮಯದಲ್ಲಿ ಜಿಲ್ಲೆಗೊಂದು ರಂಗ ಮಂದಿರ ನಿರ್ಮಿಸುವುದಾಗಿ ಅಂದಿನ ಮುಖ್ಯ ಮಂತ್ರಿ ಆರ್. ಗುಂಡೂ ರಾವ್ ಘೋಷಿಸಿದರು. ಇದು ಹೊಸ ಘೋಷಣೆಯೇನಾಗಿರಲಿಲ್ಲ. ಪ್ರತಿ ಜಿಲ್ಲಾ ಕೇಂದ್ರದಲ್ಲೂ ರಂಗಮಂದಿರ ನಿರ್ಮಾಣವಾಗಬೇಕೆಂಬ ರಂಗಾಸಕ್ತರ ಬೇಡಿಕೆ ಆ ಕಾಲಕ್ಕೇ ಹಳೆಯದಾಗಿತ್ತು. ಎಂ.ಜಿ.ಆರ್. ಅವರು ಮಧುರೆಯಲ್ಲಿ ನಡೆಸಿದ ವಿಶ್ವ ತಮಿಳು ಸಮ್ಮೇಳನದಿಂದ ಸ್ಫೂರ್ತಿ ಪಡೆದ ಗುಂಡೂರಾವ್ ಮೈಸೂರಿನಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಸಲು ಸಿದ್ಧತೆ ನಡೆಸಿದರು. ವಿಶ್ವ ಕನ್ನಡ ಸಮ್ಮೇಳನ ನಡೆಸಲು ಬೃಹತ್ ಸಭಾಂಗಣದ ಕೊರತೆ ಇದ್ದುದರಿಂದ ಮೈಸೂರಿನಲ್ಲಿ ಒಂದು ರಂಗ ಮಂದಿರ ನಿರ್ಮಿಸುವ ಆಲೋಚನೆ ಹೊಮ್ಮಿತು.

ಅದರೊಟ್ಟಿಗೇ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ರಂಗ ಮಂದಿರ ನಿರ್ಮಿಸುವ ಯೋಜನೆಯೂ ರೂಪು ಗೊಂಡಿತು. ಗುಂಡೂರಾಯರೇನೋ ಜಿಲ್ಲೆಗೊಂದು ರಂಗಮಂದಿರ ಯೋಜನೆ ಘೋಷಿಸಿದ್ದರು. ಆದರೆ ಆಯವ್ಯಯ ಮುಂಗಡ ಪತ್ರದಲ್ಲಿ ಈ ಯೋಜನೆಗೆ ಹಣವೇ ಮಂಜೂರಾಗಿರಲಿಲ್ಲ. ಅಷ್ಟರಲ್ಲಿ ಗುಂಡೂರಾವ್ ಸರಕಾರ ಪದಚ್ಯುತಿಹೊಂದಿ ಜನತಾ ಸರಕಾರ ಅಧಿಕಾರಕ್ಕೆ ಬಂತು. ಹೊಸ ಸರಕಾರ ಹಣ ಮಂಜೂರು ಮಾಡಿ ಜಿಲ್ಲಾ ರಂಗಮಂದಿರಗಳ ನಿರ್ಮಾಣ ಶುರುವಾಗಲು ಒಂದೆರಡು ವರ್ಷಗಳೇ ಹಿಡಿದವು. ಸರಕಾರ ಹಣ ಬಿಡುಗಡೆಮಾಡದಂತೆ ಈ ರಂಗ ಮಂದಿರಗಳ ನಿರ್ಮಾಣ ಕುಂಟುತ್ತಾ ಸಾಗಿತ್ತು. ಕೆಲವು ಜಿಲ್ಲಾ ಕೇಂದ್ರಗಳಲ್ಲಿ ಶತಮಾನದ ಕೊನೆಯ ದಶಕದಲ್ಲೂ ರಂಗಮಂದಿರಗಳ ನಿರ್ಮಾಣ ಅಪೂರ್ಣವಾಗಿಯೇ ಉಳಿದಿತ್ತು. ಈ ಜಿಲ್ಲಾ ರಂಗಮಂದಿರಗಳ ಈಗಿನ ಸ್ಥಿತಿಗತಿ ಹೇಗಿದೆ? ಅಲ್ಲಿ ನಾಟಕಗಳ ಪ್ರದರ್ಶನ ನಡೆಯುತ್ತಿದೆಯೇ, ಏನು ಕಥೆ ಎಂಬುದು ತಿಳಿಯದು. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರವೂ ಸೇರಿದಂತೆ ಈ ರಂಗಮಂದಿರಗಳು ಕನ್ನಡ ಸಂಸ್ಕೃತಿ ಇಲಾಖೆಯ ಆಡಳಿತದ ಹತೋಟಿಯಲ್ಲಿ ಬರುತ್ತವೆ.

ಇದಲ್ಲದೆ ಬೆಂಗಳೂರು ಮಹಾ ನಗರ ಪಾಲಿಕೆ ಮತ್ತಿತರ ನಗರಪಾಲಿಕೆಗಳು ನಿರ್ಮಿಸಿರುವ ರಂಗಮಂದಿರಗಳು ಅವುಗಳ ಆಡಳಿದ ಹತೋಟಿಯಲ್ಲೇ ಇವೆ. ರಾಜ್ಯದಲ್ಲಿರುವ ಬಹುತೇಕ ರಂಗಮಂದಿರಗಳು ಅವುಗಳ ನಿರ್ಮಿತ ಉದ್ದೇಶದಂತೆ ನಾಟಕ ಪ್ರದರ್ಶನಗಳಿಗೆ ಎಡೆಯಾಗದೇ ಸರಕಾರಿ ಕಾರ್ಯಕ್ರಮಗಳಿಗೆ ತಾಣವಾಗಿರುವುದು ಅವುಗಳ ನಿರ್ವಹಣೆಯಲ್ಲಿನ ಲೋಪ ದೋಷಗಳಿಂದಾಗಿ. ರಂಗಭೂಮಿಯ ಓನಾಮ ತಿಳಿಯದವರು, ರಂಗಭೂಮಿಯಲ್ಲಿ ಆಸಕ್ತಿ ಇಲ್ಲದವರು ಈ ರಂಗಮಂದಿರಗಳ ಮೇಲ್ವಿಚಾರಕ ಅಧಿಕಾರಿಗಳಾಗಿರುವುದರಿಂದ ನಿರ್ವಹಣೆಯಲ್ಲಿನ ಲೋಪದೋಷಗಳು ಖಾಯಮ್ಮಾಗಿ ಉಳಿದುಬಿಟ್ಟಿವೆ. ಉದಾಹರಣೆಗೆ ರಾಜಧಾನಿ ಬೆಂಗಳೂರಿನ ಕಲಾಗ್ರಾಮದಲ್ಲಿರುವ ಸರಕಾರಿ ರಂಗಮಂದಿರವನ್ನು ಗಮನಿಸಬಹುದು. ಇದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಡಳಿತಕ್ಕೊಳಪಟ್ಟಿದೆ. ಕೆಲವು ತಿಂಗಳುಗಳ ಹಿಂದೆ ಇಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದಾಗಿ ಅಗ್ನಿ ಅಪಘಾತ ಸಂಭವಿಸಿ ಸಣ್ಣಪುಟ್ಟ ಹಾನಿಯುಂಟಾಯಿತು.

ಈ ರಂಗ ಮಂದಿರದಲ್ಲಿ ಬಹುತೇಕ ಪ್ರತಿದಿನ ನಾಟಕಗಳ ಪ್ರದರ್ಶನ ನಡೆಯುತ್ತಿತ್ತು. ಕಲಾಗ್ರಾಮದ ಆಸುಪಾಸಿನ ಕೆಂಗೇರಿ, ಬಸವೇಶ್ವರನಗರ, ವಿಜಯನಗರ ಈ ಬಡಾವಣೆಗಳ ನಾಟಕ ಪ್ರಿಯರಿಗೆ ಮನರಂಜನಾ ಕೇಂದ್ರವಾಗಿತ್ತು. ರಂಗಕರ್ಮಿಗಳ ರಂಗ ಚಟುವಟಿಕೆಗಳ ತಾಣವಾಗಿತ್ತು. ಅಗ್ನಿ ಆಕಸ್ಮಿಕ ಸಂಭವಿಸಿ ಕೆಲವು ತಿಂಗಳುಗಳಾದರೂ ರಂಗ ಮಂದಿರ ದುರಸ್ತಿಯಾಗದಿರುವುದರಿಂದ ಇವರೆಲ್ಲ ಈಗ ನಿರಾಶೆಗೊಂಡಿದ್ದಾರೆ. ರವೀಂದ್ರ ಕಲಾಕ್ಷೇತ್ರ, ರಂಗಶಂಕರ, ಅಂಬೇಡ್ಕರ್ ಭವನ, ಚೌಡಯ್ಯ ಮೆಮೋರಿಯಲ್ ಹಾಲ್ ಮೊದಲಾದ ಮಹಾನಗರದ ರಂಗಮಂದಿರಗಳ ದುಬಾರಿ ಬಾಡಿಗೆ ಕೊಡಲಾಗದೆ ನಟರು, ನಿರ್ದೇಶಕರು, ತಂತ್ರಜ್ಞರು ನಿರುದ್ಯೋಗಿಗಳಾಗಿದ್ದಾರೆ. ಮಹಾನಗರದಲ್ಲಿ ನಗರಪಾಲಿಕೆ ಆಡಳಿತದ ಗುಬ್ಬಿ ವೀರಂಣ್ಣರಂಗಮಂದಿರ ಒಂದಿದೆ. ಅದರ ಹಣೇಬರಹವೂ ಇದೇ. ಅಧಿಕಾರಿಗಳ ನಿರ್ಲಕ್ಷದಿಂದಾಗಿ ಪಾಳು ಬಿದ್ದಿದೆ. ಖಾಸಗಿ ಕ್ಷೇತ್ರದ ವರದಾಚಾರ್ ರಂಗಮಂದಿರವೂ ಸೂಕ್ತ ನಿರ್ವಹಣೆ ಇಲ್ಲದೆ ಲಾರಿಗಳ ತಂಗುದಾಣವಾಗಿದೆ.

ನಮ್ಮ ರಂಗ ಮಂದಿರಗಳ ಈ ದು:ಸ್ಥಿತಿಗೆ ಮುಖ್ಯ ಕಾರಣ ಅವುಗಳ ನಿರ್ವಹಣೆಯಲ್ಲಿನ ಅಲಕ್ಷ. ರಂಗಮಂದಿಗಳಲ್ಲಿ ನಿರಂತರವಾಗಿ ನಾಟಕ ಪ್ರದರ್ಶನ ಮತ್ತಿತರ ರಂಗ ಚಟುವಟಿಕೆಗಳು ನಡೆಯುತ್ತ ಅವುಗಳ ನಿರ್ಮಾಣದ ಘನಉದ್ದೇಶ ಈಡೇರಬೇಕಾದರೆ ಅವುಗಳ ನಿರ್ವಹಣೆಯನ್ನು ರಂಗಭೂಮಿ ತಜ್ಞರ ಕೈಗೆ ಒಪ್ಪಿಸಬೇಕು. ರಾಜ್ಯದಲ್ಲಿನ ಎಲ್ಲ ರಂಗಮಂದಿರಗಳ ನಿರ್ವಹಣೆಗಾಗಿ ಸರಕಾರ ರಂಗಭೂಮಿ ಪ್ರಾಧಿಕಾರವೊಂದನ್ನು ಸ್ಥಾಪಿಸಬೇಕು ಎನ್ನುತ್ತಾರೆ ಕರ್ನಾಟಕ ನಾಟಕ ಅಕಾಡಮಿಯ ಅಧ್ಯಕ್ಷರಾದ ಜೆ. ಲೋಕೇಶ್ ಅವರು. ಇದು ಅವರ ಅನ್ನಿಸಿಕೆಯಷ್ಟೆ ಅಲ್ಲ, ಅಕಾಡಮಿ ಸರಕಾರದ ಮುಂದಿರಿಸಿರುವ ಬೇಡಿಕೆಯೂ ಹೌದು. ರಂಗಭೂಮಿಗೆ ಹರಿದು ಬರುತ್ತಿರುವ ಹೊಸ ಪ್ರತಿಭೆಗಳಿಗೆ ಉದ್ಯೋಗಾವಕಾಶ ಕಲ್ಪಿಸಲು ಹಾಗೂ ರಂಗಭೂಮಿಯನ್ನು ಜನಸಾಮಾನ್ಯರ ಹತ್ತಿರಕ್ಕೆ ಒಯ್ಯಲು ತಾಲೂಕಿಗೊಂದು ರಂಗ ಮಂದಿರ ನಿರ್ಮಾಣವಾಗಬೇಕೆಂಬುದು ನಾಟಕ ಅಕಾಡಮಿಯ ಇನ್ನೊಂದು ಬೇಡಿಕೆ. ರಂಗ ಮಂದಿರಗಳ ಕಸಗುಡಿಸುವುದು-ಸಾರಿಸುವಿಕೆಯಿಂದ ಹಿಡಿದು ಬೆಳಕಿನ ವ್ಯವಸ್ಥೆ, ಶಬ್ದ ವ್ಯವಸ್ಥೆ, ಪ್ರಸಾಧನ ಕೊಠಡಿ, ಈ ಯಾವ ವ್ಯವಸ್ಥೆಯೂ ಸರಿಯಿಲ್ಲ. ರಂಗ ಮಂದಿರಗಳ ಕಾಯಿದಿರಿಸುವಿಕೆ ಇವು ಯಾವುದೂ ತೃಪ್ತಿಕರವಾಗಿಲ್ಲ.

ರವೀಂದ್ರ ಕಲಾಕ್ಷೇತ್ರದಲ್ಲೂ ಆದ್ಯತೆ ನಾಟಕ ಪ್ರದರ್ಶನಕ್ಕಲ್ಲ, ಸರಕಾರಿ ಕಾರ್ಯಕ್ರಮಗಳಿಗೇ ಮೊದಲ ಆದ್ಯತೆ. ರಂಗ ಮಂದಿರಗಳ ನಿರ್ಮಾಣದ ಉದ್ದೇಶವೇ ಬುಡಮೇಲು ಆಗಿರುವ ಇಂಥ ಪರಿಸ್ಥಿತಿಯಲ್ಲಿ ಅವುಗಳ ಸ್ಥಾಪನೆಯ ಹಿಂದಿನ ಧ್ಯೇಯ-ಉದ್ದೇಶಗಳಿಗನುಗುಣವಾಗಿ ಅವುಗಳನ್ನು ನಿರ್ವಹಿಸಲು ಪ್ರತ್ಯೇಕ ಪ್ರಾಧಿಕಾರವೊಂದರ ಅಗತ್ಯವಿದೆ ಎಂಬ ಬೇಡಿಕೆ ಯೋಗ್ಯವಾದುದೇ. ಪುಸ್ತಕ ಪ್ರಾಧಿಕಾರ, ವಸ್ತು ಪ್ರದರ್ಶನ ಪ್ರಾಧಿಕಾರಗಳಿರುವಂತೆ ಸರಕಾರ ರಂಗಮಂದಿರ ಅಭಿವೃದ್ಧಿ ಪ್ರಾಧಿಕಾರವೊಂದನ್ನು ರಚಿಸಿದಲ್ಲಿ ಕನ್ನಡ ರಂಗಭೂಮಿಯ ಬಹುತೇಕ ಸಮಸ್ಯೆಗಳನ್ನು ಪರಿಹರಿಸುವುದು ಸಾಧ್ಯವಾದೀತು. ಪ್ರತಿ ತಾಲೂಕಿಗೊಂದು ರಂಗ ಮಂದಿರ ಬೇಕೆಂಬ ಬೇಡಿಕೆಯೂ ನ್ಯಾಯೋಚಿತವಾದುದೇ ಆಗಿದೆ. ರಂಗ ಮಂದಿರಗಳ ನಿರ್ಮಾಣ ಮತ್ತು ನಿರ್ವಹಣೆಗಾಗಿ ರಂಗಭೂಮಿ ಅಭಿವೃದ್ಧಿ ಪ್ರಾಧಿಕಾರವನ್ನು ಸ್ಥಾಪಿಸ ಬೇಕೆಂಬ ಬೇಡಿಕೆ ಹೊಸದೇನಲ್ಲ, ಹಿಂದೆ ವೈಕುಂಠರಾಜು ಅವರು ಕರ್ನಾಟಕ ನಾಟಕ ಅಕಾಡಮಿ ಅಧ್ಯಕ್ಷರಾಗಿದ್ದಾಗ ಇಂಥದೊಂದು ಪ್ರಸ್ತಾವವನ್ನು ಸರಕಾರಕ್ಕೆ ಸಲ್ಲಿಸಿದ್ದರು. ಆಗಿನ ರಾಮಕೃಷ್ಣ ಹೆಗಡೆಯವರ ಸರಕಾರ ಅದಕ್ಕೆ ಒಪ್ಪಿಗೆ ನೀಡಿದ್ದು, ವಾರ್ತಾ ಸಚಿವ ಎಂ.ಪಿ. ಪ್ರಕಾಶ್ ಅವರು ರಂಗಭೂಮಿ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಲು ಸರಕಾರ ನಿರ್ಧರಿಸಿರುವುದಾಗಿ ಅಕಾಡಮಿಯ ರಂಗಚೈತ್ರೋತ್ಸವ ಸಮಾರಂಭದಲ್ಲಿ ಪ್ರಕಟಿಸಿದ್ದರು. ಸರಕಾರದ ಈ ನಿರ್ಧಾರ ಆಗ ಏಕೆ ಕಾರ್ಯಗತವಾಗಲಿಲ್ಲವೋ ತಿಳಿಯದು. ಈಗಿನ ಸರಕಾರವಾದರೂ ರಂಗಭೂಮಿ ಅಭಿವೃದ್ಧಿ ಪ್ರಾಧಿಕಾರ ರಚಿಸಲು ಕೂಡಲೇ ಕಾರ್ಯೋನ್ಮುಖವಾಗಬೇಕು.

ರಂಗ ಮಂದಿರಗಳ ನಿರ್ಮಾಣ ಮತ್ತು ಅವುಗಳ ನಿರ್ವಹಣೆ ಪ್ರಾಧಿಕಾರದ ಮುಖ್ಯ ಕರ್ತವ್ಯವಾಗಬೇಕು. ರಾಜ್ಯದಲ್ಲಿರುವ ಸರಕಾರ ಹಾಗೂ ಮಹಾ ನಗರ ಪಾಲಿಕೆ ಮತ್ತು ನಗರ ಪಾಲಿಕೆಗಳು ನಿರ್ಮಿಸಿರುವ ಎಲ್ಲ ರಂಗಮಂದಿರಗಳನ್ನು ಪ್ರಾಧಿಕಾರದ ಅಧೀನಕ್ಕೆಒಳಪಡಿಸಬೇಕು. ರಂಗಭೂಮಿಯ ತಜ್ಞರು ಪ್ರಾಧಿಕಾರದ ಅಧ್ಯಕ್ಷರಾಗಿರಬೇಕು. ಆಡಳಿತಾನುಭವ ಮತ್ತು ರಂಗ ಕಲೆಯ ಅರಿವು ಎರಡೂ ಉಳ್ಳಂಥವರು ಅಧ್ಯಕ್ಷ ಸ್ಥಾನಕ್ಕೆ ಹೆಚ್ಚು ಯೋಗ್ಯರಾದಾರು. ಹಾಗೂ ಸದಸ್ಯರೂ ರಂಗಭೂಮಿಯ ವಿವಿಧ ಶಾಖೆಗಳ ತಜ್ಞರಾಗಿರಬೇಕು. ರಂಗ ಮಂದಿರಗಳ ನಿರ್ಮಾಣ ಮಾಮೂಲಿ ಕಟ್ಟಡಗಳ ನಿರ್ಮಾಣದಂತಲ್ಲ, ಎಂದೇ ಪ್ರಾಧಿಕಾರದಲ್ಲಿ ಸಿವಿಲ್ ಇಂಜಿನಿಯರ್ ಸದಸ್ಯರ ಜೊತೆಗೆ ರಂಗ ವಾಸ್ತು ತಜ್ಞರೂ ಇರಬೇಕು. ತಾಲೂಕಿಗೊಂದು ರಂಗ ಮಂದಿರ ಬೇಕೆಂಬ ಬೇಡಿಕೆ ಹಣಕಾಸಿನ ಕಾರಣದಿಂದ ತಿರಸ್ಕೃತವಾಗಬಾರದು. ತಾಲೂಕಿನ ಪುರಸಭೆಗಳು ಪ್ರಾಧಿಕಾರಕ್ಕೆ ಉಚಿತವಾಗಿ ನಿವೇಶನ ಒದಗಿಸಿದಲ್ಲಿ ಪ್ರಾಧಿಕಾರವು ಕಾರ್ಪೊರೇಟ್ ಕ್ಷೇತ್ರದಂಥ ಖಾಸಗಿಯವರ ಸಹಭಾಗಿತ್ವದಲ್ಲಿ ಈ ರಂಗಮಂದಿರಗಳನ್ನು ನಿರ್ಮಿಸಬಹುದು. ತಾಲೂಕಿನ ರಂಗಮಂದಿರಗಳು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಂತೆಯೇ ಇರಬೇಕಾಗಿಲ್ಲ.

ಇವು ಮುನ್ನೂರು ಜನ ಪ್ರೇಕ್ಷಕರು ಕುಳಿತುಕೊಳ್ಳಲು ಸಾಧ್ಯವಾಗುವಂಥ ಮಿನಿ ರಂಗಮಂದಿರಗಳಾಗಬೇಕು. ಹಾಗೂ ಬೆಳಕು, ಧ್ವನಿ(ಅಕೋಸ್ಟಿಕ್ಸ್) ಇತ್ಯಾದಿ ಎಲ್ಲ ರೀತಿಯಲ್ಲೂ ಸುಸಜ್ಜಿತವಾಗಿರಬೇಕು, ಆಧುನಿಕವಾಗಿರಬೇಕು. ಈ ರಂಗ ಮಂದಿರಗಳಿಗೆ ಹೊಂದಿಕೊಂಡಂತೆ ತಾಲೀಮು ಕೋಣೆಗಳು, ಸಣ್ಣದಾದ ಗ್ರಂಥಾಲಯ/ವಾಚನಾಲಯ, ಪುಸ್ತಕಗಳು ಮತ್ತು ಕಲಾಕೃತಿಗಳ ಮಾರಾಟಕ್ಕೆ ಅನುಕೂಲವಾಗುವಂತೆ ಸಾಧಾರಣ ಅಳತೆಯ ಮಳಿಗೆಗಳು ಅಪೇಕ್ಷಣೀಯ. ಆಗ ತಾಲೂಕಿನ ರಂಗ ಮಂದಿರಗಳಿಗೆ ಕಲಾ ಸಮುಚ್ಚಯದ ಸ್ವರೂಪವೂ ಪ್ರಾಪ್ತವಾಗುತ್ತದೆ. ಜನಸಾಮಾನ್ಯರಲ್ಲಿ ವೌಲ್ಯಾಭಿರುಚಿ ಬೆಳೆಸಲು ಸಹಾಯಕವಾಗುತ್ತದೆ. ತಾಲೂಕು ರಂಗಮಂದಿರಗಳಂತೆಯೇ ಬೆಂಗಳೂರು ಮಹಾನಗರ ಹಾಗೂ ಸ್ಮಾರ್ಟ್ ಸಿಟಿಗಳಾಗಿ ಬೆಳೆಯುತ್ತಿರುವ ಮೈಸೂರು, ಮಂಗಳೂರು, ತುಮಕೂರು, ದಾವಣಗರೆಯಂಥ ಜಿಲ್ಲಾ ಕೇಂದ್ರಗಳ ಹೊಸ ಬಡಾವಣೆಗಳಲ್ಲಿ ಮಿನಿ ರಂಗಮಂದಿರಗಳ ನಿರ್ಮಾಣ ಅಗತ್ಯವಾಗಿದೆ. ಬಡಾವಣೆಗಳಲ್ಲಿ ಮಿನಿ ರಂಗಮಂದಿರಗಳನ್ನು ನಿರ್ಮಿಸುವುದರಿಂದ ರಂಗಭೂಮಿಯ ಬೆಳವಣಿಗೆಗೆ ಸಹಾಯವಾಗುವಂತೆಯೇ ಸ್ಥಳೀಯ ರಂಗಾಸಕ್ತರಿಗೂ ಅನುಕೂಲವಾಗಲಿದೆ.

ರಂಗಮಂದಿರಗಳ ನಿರ್ಮಾಣ ಮತ್ತು ನಿರ್ವಹಣೆ ಸುಲಭದ ಕೆಲಸವಲ್ಲ. ರಂಗಮಂದಿರಗಳ ನಿರ್ಮಾಣಕ್ಕೆ ಕೋಟ್ಯಂತರ ರೂಪಾಯಿ ಬೇಕಾಗುತ್ತದೆ. ಅವುಗಳ ನಿರ್ವಹಣಾ ವೆಚ್ಚವೂ ಲಕ್ಷ ರೂಪಾಯಿಯ ಗಡಿಯಲ್ಲೇ ಇರುತ್ತದೆ. ಅತ್ಯಾಧುನಿಕ ರಂಗ ಮಂದಿರಗಳು ನಿರ್ಮಾಣಗೊಂಡು, ಅವುಗಳ ಸಮರ್ಥ ನಿರ್ವಹಣೆಗೆ ಪ್ರಾಧಿಕಾರವೊಂದರ ರಚನೆ ಅತ್ಯಗತ್ಯವಾಗಿದೆ. ಇಲ್ಲವಾದಲ್ಲಿ ರಂಗ ಮಂದಿರಗಳೆಲ್ಲ ತಜ್ಞನಿರ್ವಹಣೆ-ಮೇಲ್ವಿಚಾರಣೆಗಳಿಲ್ಲದೆ ಗೋಡೌನುಗಳಾಗ ಬಹುದು-ನಗರದ ಶಂಕರಪುರದಲ್ಲಿನ ಮಹಾನಗರಪಾಲಿಕೆಯ ಮಾಸ್ತಿ ರಂಗಮಂದಿರದಂತೆ. ನಾಟಕ ಅಕಾಡಮಿ ಇರುವಾಗ ಪ್ರಾಧಿಕಾರವೇಕೆ ಎಂಬ ಪ್ರಶ್ನೆ ಏಳಬಹುದು. ಅಕಡಮಿಯ ಕೆಲಸ ರಂಗಭೂಮಿಯ ಸ್ಥಿತಿಗತಿಗಳ ಅಧ್ಯಯನ, ವಿವಿಧ ರಂಗಪ್ರಕಾರಗಳು ಮತ್ತು ರಂಗ ಸಂಗೀತಗಳ ದಾಖಲೀಕರಣ (ಡಾಕ್ಯುಮೆಂಟೇಶನ್), ರಂಗಪರಿಕರಗಳು ಮತ್ತು ವಸ್ತುಗಳ ರಕ್ಷಣೆ, ರಂಗವಸ್ತು ಸಂಗ್ರಹಾಲಯ, ರಂಗ ಕಲಾವಿದರಿಗೆ, ಮಾನ್ಯತೆ, ನವ ಪ್ರತಿಭೆಗಳಿಗೆ ಪ್ರೋತ್ಸಾಹ-ಪೋಷಣೆ, ರಂಗಭೂಮಿ ಸಾಹಿತ್ಯ ಪ್ರಕಟನೆ, ಸಂಶೋಧನೆ ಇತ್ಯಾದಿಯಾಗಿ ಅಕಾಡಮಿಕ್ ಸ್ವರೂಪದ್ದು. ರಂಗ ಮಂದಿರ ಕಟ್ಟೋಣ ಮತ್ತು ನಿರ್ವಹಣೆ ಪ್ರಾಧಿಕಾರದ ಕೆಲಸವಾಗಬೇಕು. ಅಕಾಡಮಿ ಮತ್ತು ಪ್ರಾಧಿಕಾರ ಪರಸ್ಪರ ಪೂರಕವಾಗಿ ರಂಗಭೂಮಿಯ ಪುರೋಭಿವೃದ್ಧಿಗೆ ಕೆಲಸಮಾಡಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)