ಮಾನವೀಯ ಆಶಯಗಳನ್ನು ಹೊಂದಿದ ಕವಿತೆಗಳು
ಈ ಹೊತ್ತಿನ ಹೊತ್ತಿಗೆ
‘ಮಾನವರಾಗುವ’ ಹೊರೆಯಾಲ ದೊರೆ ಸ್ವಾಮಿಯವರ ಒಂಬತ್ತನೆಯ ಕವನ ಸಂಕಲನ. ‘ಮಾನವರಾಗೋಣ...’ ಎನ್ನುವ ಕವಿಯ ಆಶಯ ಇಂದು ನಿನ್ನೆಯದಲ್ಲ. ಪಂಪನಿಂದ ಹಿಡಿದು ಕುವೆಂಪುವರೆಗೆ ಎಲ್ಲ ಕವಿಗಳೂ ಮಾನವರಾಗುವ, ವಿಶ್ವಮಾನವರಾಗುವ ಆಶಯಗಳನ್ನು ಇಟ್ಟು ಹಾಡಿದ್ದಾರೆ. ಇಂತಹ ಮಾನವೀಯ ಸಂವೇದನೆಗಳುಳ್ಳ ಸುಮಾರು 70 ಕವಿತೆಗಳು ಇಲ್ಲಿವೆ. ಇಲ್ಲಿರುವ ಕವನಗಳು ಬೇರೆ ಬೇರೆ ಕಾಲಘಟ್ಟದಲ್ಲಿ ಬರೆದಂಥವುಗಳು. ಹೆಚ್ಚಿನವುಗಳು ನಿಯತಕಾಲಿಕಗಳಲ್ಲಿ ಪ್ರಕಟಗೊಂಡಿವೆ. ಈ ಹಿನ್ನೆಲೆಯಲ್ಲಿ ವಿಷಯ ವೈವಿಧ್ಯತೆಗಳಿರುವುದು ಸಹಜ.
‘ಅಂದಂದಿನ ಕಾಲಕ್ಕೆ ನಾನು ನೀನೆಂಬುದಷ್ಟೇ ಸತ್ಯ, ಉಳಿದುದೆಲ್ಲ ಸುಳ್ಳು....’ ಎನ್ನುವುದನ್ನು ಅವರು ‘ಸತ್ಯ-ನಿತ್ಯ’ ಕವಿತೆಯಲ್ಲಿ ಹೇಳುತ್ತಾರೆ. ನಮ್ಮ ನಡೆಯುವ ದಾರಿಯಲ್ಲಿ ಎಡರು ತೊಡರುಗಳಾಗಿ ಸಿಲುಕುವ ಒಳಗಿನ ಹಾಗೂ ಹೊರಗಿನ ಕೆಡುಕುಗಳನ್ನು ‘ಹೆಬ್ಬಾವುಗಳು’ ಕವಿತೆಯಲ್ಲಿ ನಿರೂಪಿಸುತ್ತಾರೆ. ‘ಒಂದು ಅಕ್ಕಿ ಕಾಳಿನ ಕತೆ’ ಕಥನ ರೂಪದ ಕವಿತೆ. ನವೋದಯದ ಗೇಯತೆಯನ್ನು ಇದರಲ್ಲಿ ಕಾಣಬಹುದು. ಸಾಹುಕಾರರ ಸ್ವಾರ್ಥ, ಲೋಭಗಳನ್ನು ಹೇಳುತ್ತಾ, ಬದುಕಿನ ಹಸಿ ವಾಸ್ತವವನ್ನು ಹೇಳುವ ಕವಿತೆ ಇದು. ‘ಮನುಷ್ಯರೋ ಅವರು ಮನುಷ್ಯರು’ ಕವಿತೆ ಧರ್ಮಗಳಿಗೆ ಕ್ರೌರ್ಯಗಳನ್ನು ಅಂಟಿಸದೇ ಮನುಷ್ಯರನ್ನು ಮನುಷ್ಯರನ್ನಾಗಿ ನೋಡಲು ಕಲಿಸುತ್ತದೆ. ಈ ಸಂಕಲನಗಳಲ್ಲಿ ಹಲವು ಗೇಯ ಗೀತೆಗಳಿವೆ. ನಾಡಭಕ್ತಿ, ದೈವಭಕ್ತಿ ಮೊದಲಾದ ಜನಪ್ರಿಯ ದಾಟಿಯ ಪದ್ಯಗಳನ್ನೂ ಒಳಗೊಂಡಿವೆ. ‘ಹೊರೆಯಾಲ ದೊರೆಸ್ವಾಮಿಯವರ ಕವನಗಳು ಹೆಚ್ಚಿನ ಅಧ್ಯಯನಕ್ಕೆ ಒಳಗಾದರೆ ನವ್ಯದ ಭರಾಟೆಯಲ್ಲಿ ನಾವು ಮರೆತಿರುವ ಜನಪದೀಯ ಲಯ, ಮಟ್ಟುಗಳನ್ನು, ನವೋದಯದ ಹೊಸ ಛಂದೋಪಪೂರಗಳನ್ನು ಪುನರುಜ್ಜೀವಿಸಿ, ಅವುಗಳ ಮೂಲಕ ವರ್ತಮಾನದ ಬಗೆ ಬಗೆಯ ವಿದ್ಯಮಾನಗಳನ್ನು ಎಲ್ಲರಿಗೂ ರುಚಿಸುವಂತೆ, ಎಲ್ಲ ಸ್ತರದ ಮನಸ್ಸುಗಳಿಗೂ ತಲುಪುವಂತೆ ಮಾಡಬಹುದು ....’ ಎಂದು ಪ್ರೊ. ಡಿ. ಎ. ಶಂಕರ್ ತಮ್ಮ ವುುನ್ನುಡಿಯಲ್ಲಿ ಅಭಿಪ್ರಾಯ ಪಡುತ್ತಾರೆ.
ಸಮಾನತಾ ಪ್ರಕಾಶನ ಮೈಸೂರು ಹೊರ ತಂದಿರುವ ಈ ಕೃತಿಯ ಒಟ್ಟು ಪುಟಗಳು 140. ಮುಖಬೆಲೆ 100 ರೂ. ಆಸಕ್ತರು 94828 08474 ದೂರವಾಣಿಯನ್ನು ಸಂಪರ್ಕಿಸಬಹುದು.