ದೇಶ ವಿಭಜನೆಗೆ ಗಾಂಧೀಜಿ ಕಾರಣರೇ?
ಭಾಗ-32
ಹಿಂದೂಗಳಲ್ಲಿ ಸಂಘ ಪರಿವಾರದವರು ಮುಸ್ಲಿಮರನ್ನು, ಮುಸ್ಲಿಮರು ಹಿಂದೂಗಳನ್ನು ದ್ವೇಷಿಸುವ ಮನೋಭೂಮಿಕೆಯನ್ನು ಸಿದ್ಧಪಡಿಸಿದವರು ಯಾರು? ಗಾಂಧೀಜಿ ಹಿಂದೂ ಮುಸ್ಲಿಮರ ನಡುವೆ ಪ್ರೇಮ ಸೇತುವೆಯನ್ನು ಕಟ್ಟಲು ಶ್ರಮಿಸಿದ್ದರು. ಅವರ ತದ್ವಿರುದ್ಧವಾಗಿ ಆ ಮೈತ್ರಿ ಸಾಧ್ಯವೇ ಇಲ್ಲವೆಂದು ದ್ವೇಷವನ್ನೇ ಸಾಧಿಸಿದ ವ್ಯಕ್ತಿ ಶಕ್ತಿಗಳು ಯಾವುವು? ದೇಶ ವಿಭಜನೆ ಆದದ್ದು ಕೋಮು ಸೌಹಾರ್ದ ಅಭಾವದಿಂದ ಎಂಬುದನ್ನು ಮರೆಯಬಾರದು.
ಗಾಂಧಿ ಹತ್ಯೆಯ ಆರೋಪಿಗಳೆಲ್ಲ ಆರೆಸ್ಸೆಸ್ನೊಡನೆ ಸಂಪರ್ಕ ಇದ್ದವರು. ಪ್ರಮುಖ ಆರೋಪಿ ನಾಥೂರಾಮ್ ಗೋಡ್ಸೆಗೂ ತಮಗೂ ನಿಕಟ ಸಂಪರ್ಕ ಇರಲಿಲ್ಲವೆಂದು ಸಾವರ್ಕರ್ ನ್ಯಾಯಾಲಯದಲ್ಲಿ ಹೇಳಿಕೆ ಕೊಟ್ಟರೂ ನಾಥೂರಾಮ್ ರತ್ನಗಿರಿಯಲ್ಲಿದ್ದಾಗ ಅವನು ಸಾವರ್ಕರ್ ಆಪ್ತ ಕಾರ್ಯದರ್ಶಿ ಆಗಿದ್ದನೆಂಬುದು ನಿರಾಕರಿಸಲಾಗದ ಸತ್ಯ. ಆ ತರುವಾಯ ಮಹಾಸಭಾ ಅಧ್ಯಕ್ಷರಾಗಿ ಅವರು ಅವನಿಗೆ ‘ಅಗ್ರಣಿ’ ಪತ್ರಿಕೆ ಸ್ಥಾಪನೆಗೆ ಧನಸಹಾಯ ಮಾಡಿದರೆಂಬುದನ್ನು ಅವರೇ ಒಪ್ಪಿಕೊಂಡಿದ್ದಾರೆ. ಆ ಪತ್ರಿಕೆ ಹಿಂದೂ ಮಹಾಸಭೆಯ ಮುಖವಾಣಿ ಪ್ರಚಾರ ಮಾಧ್ಯಮವಾಗಿದ್ದರಿಂದ ಧನಸಹಾಯ ಮಾಡಿದರೆಂಬುದನ್ನು ಅವರೇ ಒಪ್ಪಿಕೊಂಡಿದ್ದಾರೆ. ಆಗ ಅವರು ಹಿಂದೂ ಮಹಾಸಭಾ ಅಧ್ಯಕ್ಷರಾಗಿದ್ದರು-1938ರಿಂದ 44ರ ವರೆಗೆ. ಗೋಡ್ಸೆ ತಮ್ಮೆಡನೆ ಪ್ರವಾಸ ಮಾಡುವುದನ್ನು ನಿಷೇಧಿಸಿದ್ದರು ಎಂಬುದಾಗಿ ನ್ಯಾಯಾಲಯದಲ್ಲಿ ಹೇಳಿಕೆಕೊಟ್ಟರು. ಆದರೆ 1944ರಲ್ಲಿ ಶಿವಮೊಗ್ಗೆಯಲ್ಲಿ ಸೇರಿದ್ದ ಮೈಸೂರು ಹಿಂದೂ ಮಹಾಸಭಾ ಅಧಿವೇಶನಕ್ಕೆ ಸಾವರ್ಕರ್ ಬಂದಾಗ ಅವರೊಡನೆ ನಾಥೂರಾಮ್ ಗೋಡ್ಸೆ ಬಂದಿದ್ದನೆಂಬುದು ಆಗ ತೆಗೆದ ಭಾವಚಿತ್ರದಲ್ಲಿ ಕಾಣುತ್ತದೆ. (‘ಭೂಪಾಳಂ-ಬದುಕು ಬರಹ’-ಪ್ರಧಾನ ಸಂಪಾದಕರು: ಬಳ್ಳೆಕೆರೆ ಹನುಮಂತಪ್ಪ, ಪ್ರಕಾಶಕರು: ಭೂಪಾಳಂ ಚಂದ್ರಶೇಖರಯ್ಯ ಸ್ಮಾರಕ ಪ್ರತಿಷ್ಠಾನ, ಬೆಂಗಳೂರು-70 ಪ್ರಕಟಿಸಿದ ಗ್ರಂಥದಲ್ಲಿ ಆ ಭಾವಚಿತ್ರ ಪ್ರಕಟವಾಗಿದೆ.)ಅದೇ ಭಾವಚಿತ್ರ ಗ್ರಂಥ ಬಿಡುಗಡೆ ಆದಾಗ ಹಿಂದೂ ಪತ್ರಿಕೆಯಲ್ಲಿ ಪ್ರಮೋದ ಮೆಳ್ಳಿಗಟ್ಟಿ ಅವರ ಲೇಖನದೊಡನೆ ಪ್ರಕಟವಾಗಿದೆ. ಗೋಡ್ಸೆಗೆ ತಾವು ಹತ್ತಿರವಾಗಿರಲಿಲ್ಲ ಅವನನ್ನು ತಮ್ಮಿಡನೆ ಪ್ರಯಾಣ ಮಾಡಬೇಡವೆಂದು ನಿರ್ದೇಶಿಸಿದ್ದರೆಂದೂ ಅವರು ನ್ಯಾಯಾಲಯಕ್ಕೆ ಅರಿಕೆ ಮಾಡಿಕೊಂಡರು. ಆದರೆ 2004ರಲ್ಲಿ ಹಿಂದೂ ಪತ್ರಿಕೆಯಲ್ಲಿ ಪ್ರಕಟಿಸಿದಂತೆ ಸಾವರ್ಕರ್ರು ಶಿವಮೊಗ್ಗೆಗೆ ಪ್ರಯಾಣ ಮಾಡುವಾಗ ತನ್ನನ್ನೂ ಅವರೊಡನೆ ಪ್ರಥಮ ದರ್ಜೆ ಡಬ್ಬಿಯಲ್ಲಿ ಕರೆದೊಯ್ಯಬೇಕೆಂದು, ಅವರೊಡನೆ ಖಾಸಗಿಯಾಗಿ ಚರ್ಚಿಸಬೇಕಾದ ಮಹತ್ವದ ವಿಷಯಗಳಿರುವುದರಿಂದ ತನ್ನನ್ನು ತಾವು ಪ್ರಯಾಣಿಸುತ್ತಿದ್ದ ಡಬ್ಬಿಯಲ್ಲಿ ಜೊತೆಗೆ ಬರಲು ಟೆಕೆಟ್ ತೆಗೆಸಲು ವಿನಂತಿಸಿದ್ದ ಗೋಡ್ಸೆ. ಶಿವಮೊಗ್ಗ ಹಿಂದೂ ಮಹಾಸಭಾ ಅಧಿವೇಶನದ ನಂತರ 1944 ರಲ್ಲಿ ಗಾಂಧೀಜಿ ಪಂಚಗಣಿ (ಪುಣೈ-ಮುಂಬೈಗಳ ಹತ್ತಿರದ ವಿಶ್ರಾಂತಿ ಧಾಮ)ಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾಗ ನಾಥೂರಾಮ್ ಗಾಂಧೀಜಿಗೆ ಚೂರಿ ಹಾಕಲು ಅವರತ್ತ ನುಗ್ಗಿದ್ದ ಎಂದು ಪುಣೆಯ ಸುರತಿ ಲಾಜ್ ಮೂಲಕ ಮಣಿಶಂಕರ ಪುರೋಹಿತರು ಸಾಕ್ಷ ನೀಡಿದ್ದರು. ಮಹಾಬಲೇಶ್ವರದ ಮಾಜಿ ಲೋಕ ಸದಸ್ಯರಾಗಿದ್ದ ಭಿ. ದಾ. ಭಿಸಾರೆ ನಾಥೂರಾಮನ ಕೈಯಿಂದ ಚೂರಿಯನ್ನು ಕಸಿದುಕೊಂಡಿದ್ದರು. ಆಗ ಗಾಂಧೀಜಿ ನಾಥೂರಾಮ್ ತಮ್ಮನ್ನು ಭೇಟಿ ಮಾಡಿ ಚರ್ಚಿಸಲು ಹೇಳಿಕಳಿಸಿದ್ದರು. ಆದರೆ ನಾಥೂರಾಮ್ ಅದಕ್ಕೆ ಒಪ್ಪಲಿಲ್ಲ.
ಸಾವರ್ಕರ್ರು, ನಾಥೂರಾಮನೊಡನೆ ತಮಗೆ ನಿಕಟ, ಆತ್ಮೀಯ ಸಂಪರ್ಕ ಇರಲಿಲ್ಲವೆಂದೂ, ಅವನ ಪತ್ರಿಕೆಗೆ ತಾವು ಲೇಖನ ಬರೆಯಲು ನಿರಾಕರಿಸಿದ್ದರೆಂದೂ ನ್ಯಾಯಾಲಯದಲ್ಲಿ ಹೇಳಿಕೆ ಕೊಟ್ಟಿದ್ದರು.ಆದರೆ 2004ರಲ್ಲಿ ದೊರೆತ, ನಾಥೂರಾಮ್ ಗೋಡ್ಸೆ ಸಾವರ್ಕರ್ರಿಗೆ ಬರೆದ ಒಂದು ಪತ್ರದಲ್ಲಿ ಕಸ್ತೂರಿ ಬಾ ಸ್ಮಾರಕ ನಿಧಿಗೆ ಜನರು ಧನಸಹಾಯ ಮಾಡಬಾರದೆಂದು ಒಂದು ಲೇಖನ ಬರೆಯಬೇಕೆಂದು ವಿನಂತಿಸಿದ್ದ. ಸಾವರ್ಕರ್ರು ಅವನ ಅಪೇಕ್ಷೆಯಂತೆ ಒಂದು ಲೇಖನವನ್ನು ಬರೆದಿದ್ದರು. ಅದು ‘ಅಗ್ರಣಿ’ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.
(Benefit of doubt)ಈ ಎಲ್ಲ ಪತ್ರ ವ್ಯವಹಾರ ಮತ್ತು ಘಟನಾವಳಿಯನ್ನು ಗಮನಿಸಿದರೆ ನಾಥೂರಾಮನಿಗೂ ಸಾವರ್ಕರ್ಗೂ ನಿಕಟ ಸಂಬಂಧ, ಪರಿಚಯ ಇರಲಿಲ್ಲ ಎಂಬುದು ಸತ್ಯಕ್ಕೆ ದೂರವೆಂದೇ ತೋರುತ್ತದೆ. ಸಾವರ್ಕರ್ರು ತಮ್ಮ ಮತ್ತು ಅವನ ನಿಕಟ ಪರಿಚಯವನ್ನು ನಿರಾಕರಿಸದೆಯೂ ನಾಥೂರಾಮ್ ಎಸಗಿದ ಈ ಅಪರಾಧದ ಸಂಗತಿ ತಮಗೆ ಗೊತ್ತೇ ಇರಲಿಲ್ಲ. ಆ ಪಿತೂರಿಯಲ್ಲಿ ತಾವು ಭಾಗಿಯಾಗಿರಲಿಲ್ಲ ಎಂದು ಸಾಧಿಸಬಹುದಾಗಿತ್ತು.ಅದು ಸಾಧ್ಯವೂ, ಸಾಧುವೂ ಸತ್ಯವೂ ಆಗುತ್ತಿತ್ತು. ಇಷ್ಟೆಲ್ಲ ನಿಕಟ ಪರಿಚಯವಿದ್ದ ಮಾತ್ರಕ್ಕೆ 1948ರಲ್ಲಿ ನಡೆದ ಗಾಂಧಿ ಹತ್ಯೆಯ ಪಿತೂರಿಯಲ್ಲಿ ಭಾಗಿಯಾಗಿದ್ದರೆಂಬುದಕ್ಕೆ ಪ್ರಬಲ ಆಧಾರವೆಂದು ಸಾಧಿಸುವುದು ಕಷ್ಟವಾಗುತ್ತಿತ್ತು. ಅಂಥ ಸಂದರ್ಭದಲ್ಲಿ ಸಂಶಯದ ಸೌಲಭ್ಯ ಕೊಟ್ಟ ನ್ಯಾಯಾಧೀಶ ಆತ್ಮಚರಣರು ದೋಷಮುಕ್ತರೆಂದು ತೀರ್ಮಾನಿಸುವುದೂ ಅವರು ನಿಃಸಂದಿಗ್ಧವಾಗಿ ನಿರ್ದೋಷಿಯೆಂದು ಸಾರುವುದೂ ಒಂದೇ ಅಲ್ಲ. ಆದರೆ ಶಾಸನದ ದೃಷ್ಟಿಯಲ್ಲಿ ದೋಷಮುಕ್ತರು ಅಷ್ಟೆ, ನಿರ್ದೋಷಿಗಳೆಂದಲ್ಲ.
ನಾಥೂರಾಮ್ ಹೇಳುವಂತೆ ಗಾಂಧೀಜಿಯೆ ಈ ದೇಶ ಇಬ್ಭಾಗವಾಗಲು ಕಾರಣವಾಗಿದ್ದರಿಂದ ಈ ದೇಶದ ಹಿತದೃಷ್ಟಿಯಿಂದ ಅವರನ್ನು ಮುಗಿಸುವುದು ದೇಶಭಕ್ತಿಯೇ ಆಗಿತ್ತೆಂಬ ಮನೋಭೂಮಿಕೆಯನ್ನು ಸಿದ್ಧಪಡಿಸುವುದರಲ್ಲಿ ಸಾವರ್ಕರ್ರ ಪಾತ್ರವೇನು? ಮೊದಲು ಈ ದೇಶ ವಿಭಜನೆಯಲ್ಲಿ ಅವರ ಪಾತ್ರವೇನು? ಎಂಬುದರ ವಿಶ್ಲೇಷಣೆ ಅಗತ್ಯ. ಗಾಂಧೀಜಿ ಈ ದುರಂತಕ್ಕೆ ಪ್ರಮುಖ ಕಾರಣಕರ್ತರು ಎಂಬುದು ಅವರ ಜೀವನ ಚರಿತ್ರೆ, ಈ ದೇಶದ ಇತಿಹಾಸ ಬಲ್ಲವರಿಗೆ ಶುದ್ಧ ಅವಿವೇಕದ ಮಾತು. ಹಿಂದೂ ಮುಸ್ಲಿಮರು ಸೌಹಾರ್ದಯುತವಾಗಿ ಬದುಕಿದ್ದರೆ ಅವರಲ್ಲಿ ಏಕತೆ ಇದ್ದಿದ್ದರೆ ದೇಶ ನಿಶ್ಚಯವಾಗಿ ಇಬ್ಭಾಗವಾಗುತ್ತಿರಲಿಲ್ಲ. ಇದು ನಿಃಸಂಶಯ. ಹಾಗೆ ಒಂದಾಗಿ ಹೊಂದಿಕೊಂಡು, ಸೌಹಾರ್ದಯುತವಾಗಿ ಬದುಕಲು ಸಾಧ್ಯವಾಗದಂಥ ಸ್ಥಿತಿ, ಸನ್ನಿವೇಶವನ್ನು ಉಂಟುಮಾಡಿದವರಾರು?
ಗಾಂಧೀಜಿ ಮೊದಲಿನಿಂದಲೂ ಹಿಂದೂ ಮುಸ್ಲಿಂ ಏಕತೆಯ ಹರಿಕಾರರು. ಈ ಗುರಿಯನ್ನು ಸಾಧಿಸಲಿಕ್ಕಾಗಿಯೇ ಅವರು ಖಿಲಾಫತ್ ಚಳವಳಿಯ ನಾಯಕತ್ವ ವಹಿಸಿದರು. ಅವರು ಕೈಗೊಂಡ ಈ ಮಾರ್ಗ ಮುಸ್ಲಿಮರನ್ನು ಓಲೈಸುವ ಅವರ ಪ್ರಪ್ರಥಮ ತಪ್ಪು ಹೆಜ್ಜೆ ಎಂದು ಜಾತ್ಯತೀತ ಶಕ್ತಿಗಳು, ವ್ಯಕ್ತಿಗಳು ಆಕ್ಷೇಪಿಸುವುದರಲ್ಲಿ ಸತ್ಯವಿದೆ. ಟರ್ಕಿ ದೇಶದಲ್ಲಿ ಖಿಲಾಫತ್ ಧರ್ಮಧುರಂಧರರನ್ನು ಪದಚ್ಯುತಿಗೊಳಿಸಿದರೆ ಭಾರತದ ಮುಸ್ಲಿಮರೇಕೆ ಪ್ರತಿಭಟಿಸಬೇಕು? ಅದಕ್ಕೆ ಭಾರತದ ಹಿಂದೂಗಳೇಕೆ ಸಹಾನುಭೂತಿ ವ್ಯಕ್ತಪಡಿಸಬೇಕು? ಈ ಆಕ್ಷೇಪಣೆ ನಿರಾಧಾರವಲ್ಲ, ನಿಜ. ಆದರೆ ಅಂದಿನ ಸಂದರ್ಭದಲ್ಲಿ ಭಾರತದಲ್ಲಿ ಮುಸ್ಲಿಮರ ನಾಯಕರಾಗಿದ್ದ ಮುಹಮ್ಮದಲಿ, ಶೌಕತ್ಅಲಿ ನೇತೃತ್ವದಲ್ಲಿ ಇಡೀ ಮುಸ್ಲಿಂ ಸಮುದಾಯ ಹಿಂದೂ ರಾಷ್ಟ್ರ ನಾಯಕರೊಡನೆ ಹಿಂದೂ ಮುಸ್ಲಿಂ ಐಕ್ಯ ಉಂಟಾದದ್ದು ಐತಿಹಾಸಿಕ ಸತ್ಯ. ಆದರೆ ಆ ಏಕತೆಯ ತಳಹದಿ ಜಾತಿಯ ಮರಳಿನ ಅಭದ್ರ ಹುಸಿ ಆಧಾರವಾಗಿತ್ತು ಎಂಬುದೂ ಸತ್ಯ. ಈ ಮಾತು ನಿಜವಾದರೂ ಗಾಂಧೀಜಿಯ ಪ್ರಾಮಾಣಿಕತೆಯನ್ನು ಯಾರೂ ಪ್ರಶ್ನಿಸಲಾರರು ಹಾಗೂ ಅದರಿಂದ ಭಾರತದಲ್ಲಿ ಕೋಮು ಸೌಹಾರ್ದ, ಪರಸ್ಪರ ಪ್ರೇಮ ವೃದ್ಧಿಯಾಗಿದ್ದು ಅಲ್ಲಗಳೆಯಲಾಗದ ಸತ್ಯ. ಅದು ಶಾಶ್ವತ ಸತ್ಯವಾಗಿ ಉಳಿಯದಿದ್ದರೂ ದ್ವೇಷದ ಜ್ವಾಲೆಯಂತೂ ಆಗಿರಲಿಲ್ಲ. ಅಂತಹ ಹಿಂದೂ ಮುಸ್ಲಿಂ ಸೌಹಾರ್ದ, ಸ್ನೇಹ, ಏಕತೆ 1857ರ ‘ಸಿಪಾಯಿ ದಂಗೆ’ ಎಂದು ಬ್ರಿಟಿಷರು ಕರೆದ, ಪ್ರಥಮ ಸ್ವಾತಂತ್ರ್ಯ ಸಮರ ಎಂದು ಭಾರತೀಯರು-ತತ್ರಾಪಿ ಸಾವರ್ಕರರು ಕರೆದ ಕಾಲದಿಂದ 1918ರವರೆಗೂ ಭಾರತ ಕಂಡಿರಲಿಲ್ಲ. ಅಂತಹ ಅಗಾಧ ಘಟನೆಗೆ ಕಾರಣರಾದ ಗಾಂಧೀಜಿ ಭಾರತವನ್ನು ವಿಭಜಿಸಲು ಕಾರಣರಾದರು ಎಂಬುದು ತಲೆ ಸಮ ಇದ್ದವರಾಡುವ ಮಾತಲ್ಲ! ದೇಶದ ವಿಭಜನೆಯ ಮೂಲ ಕಾರಣ ಹಿಂದೂ ಮುಸ್ಲಿಮರ ಒಂದಾಗದ ಒಡೆದ ಮನ. ಅದಕ್ಕೆ ಮತ್ತೆ ಮೂಲ ಬೇರು ಎರಡು ಕೋಮುಗಳ ಪರಸ್ಪರ ದ್ವೇಷ. ಅಂತಹ ಕಿಚ್ಚು ಹಚ್ಚುವ ಕೆಲಸ ಯಾರಿಂದ ಆಯಿತು? ದೇಶ ವಿಭಜನೆಗೆ ಆ ದ್ವೇಷದ ಕಿಚ್ಚು ಹಚ್ಚಿದವರೇ ನಿಜವಾದ ಕಾರಣಕರ್ತರು.
ಗಾಂಧೀಜಿ ಮುಸ್ಲಿಮರ ಸಖ್ಯ ಸಂಪಾದನೆಗಾಗಿ, ಹಿಂದೂ ಮುಸ್ಲಿಂ ಕೋಮು ಸೌಹಾರ್ದದ ಸಾಧನೆಗಾಗಿ ಎಷ್ಟೊಂದು ‘ತಗ್ಗಿ-ಬಗಿ’್ಗ ನಡೆದುಕೊಂಡಿರುವುದನ್ನು ಸ್ಮರಿಸಬೇಕು. ಜಾತಿ ಆಧಾರದ ಮೇಲೆ ರಾಜಕೀಯ ಪಕ್ಷಗಳನ್ನು ಕಟ್ಟುವುದು, ಜನರನ್ನು ಪ್ರತಿನಿಧಿಸುವುದು ಪ್ರಜಾಸತ್ತೆಯಲ್ಲ್ಲ ಎಂಬುದು ಜಗತ್ತಿನ ರಾಜಕೀಯ ಮುತ್ಸದ್ದಿಗಳ ನಿಶ್ಚಿತ ಅಭಿಪ್ರಾಯ. ಆದ್ದರಿಂದ ಜಿನ್ನಾ ಸಾಹೇಬರು ಭಾರತೀಯ ಮುಸ್ಲಿಮರ ಏಕೈಕ ಮುಂದಾಳು ಎಂಬುದನ್ನು ಕಾಂಗ್ರೆಸ್ ನಾಯಕರು ಒಪ್ಪಿರಲಿಲ್ಲ. ಆದರೆ ಬ್ರಿಟಿಷ್ ಸರಕಾರ ಜಿನ್ನಾ ಅವರನ್ನು ಕಡೆಗಣಿಸುವಂತಿರಲಿಲ್ಲ. ಆಗ ಗಾಂಧೀಜಿ ಜಿನ್ನಾ ಅವರನ್ನು ಒಲಿಸಿಕೊಂಡು ಹಿಂದೂ ಮುಸ್ಲಿಂ ಏಕತೆಯನ್ನು ಸಾಧಿಸಲು ಅವರೊಡನೆ ಹದಿನೆಂಟು ದಿನಗಳಷ್ಟು ದೀರ್ಘಕಾಲ ಸಂಧಾನ ನಡೆಸಿದರು. ಅವರ ಆ ‘ಶ್ರೀ ಕೃಷ್ಣ ರಾಯಭಾರ’ ಸಫಲವಾಗಿದ್ದಿದ್ದರೆ ಈ ದೇಶ ಇಬ್ಭಾಗವಾಗುತ್ತಲೇ ಇರಲಿಲ್ಲ. ಗಾಂಧೀಜಿಯನ್ನು ಮುಗಿಸುವ ಅವಕಾಶ ಗೋಡ್ಸೆಗೆ ಒದಗಿ ಬರುತ್ತಿರಲಿಲ್ಲ. ಆ ಸಂಧಾನ ಪ್ರಯತ್ನ ಮಾಡಲೇ ಬಾರದೆಂದು ಅವರು ಪ್ರಯಾಣಿಸುತ್ತಿದ್ದ ರೈಲನ್ನು ಉರುಳಿಸಲು ರೈಲ್ವೆ ಹಳಿಗಳ ಮೇಲೆ ಕಲ್ಲು ಗುಂಡುಗಳನ್ನು ಅಡ್ಡ ಹಾಕಿದವರು ಯಾರು? ಇಂತಹ ದ್ವೇಷದ ಕಿಚ್ಚು ಹಚ್ಚಿದವರು ಯಾರು? ಅದಕ್ಕೆ ಗೋಡ್ಸೆ ಬಳಗದವರ ಮನಸ್ಸು ಹದಗೊಳಿಸಿದರು ಯಾರು? ಹಿಂದೂಗಳಲ್ಲಿ ಸಂಘ ಪರಿವಾರದವರು ಮುಸ್ಲಿಮರನ್ನು, ಮುಸ್ಲಿಮರು ಹಿಂದೂಗಳನ್ನು ದ್ವೇಷಿಸುವ ಮನೋಭೂಮಿಕೆಯನ್ನು ಸಿದ್ಧಪಡಿಸಿದವರು ಯಾರು? ಗಾಂಧೀಜಿ ಹಿಂದೂ ಮುಸ್ಲಿಮರ ನಡುವೆ ಪ್ರೇಮ ಸೇತುವೆಯನ್ನು ಕಟ್ಟಲು ಶ್ರಮಿಸಿದ್ದರು. ಅವರ ತದ್ವಿರುದ್ಧವಾಗಿ ಆ ಮೈತ್ರಿ ಸಾಧ್ಯವೇ ಇಲ್ಲವೆಂದು ದ್ವೇಷವನ್ನೇ ಸಾಧಿಸಿದ ವ್ಯಕ್ತಿ ಶಕ್ತಿಗಳು ಯಾವುವು? ದೇಶ ವಿಭಜನೆ ಆದದ್ದು ಕೋಮು ಸೌಹಾರ್ದ ಅಭಾವದಿಂದ ಎಂಬುದನ್ನು ಮರೆಯಬಾರದು. ಆದರೆ ಎಂದೆಂದಿಗೂ ಒಂದಾಗಲಾರದವರಿಬ್ಬರೂ ಒಂದಾಗಿ ಬನ್ನಿ ಎಂದು ಬ್ರಿಟಿಷರು ಬೀಸಿದ್ದ ಜಾಲದಲ್ಲಿ ಬೀಳಬಾರದಿತ್ತು ಎಂದು ವಾದಿಸಿದವರೂ ಇದ್ದರು. ಹಾಗಾದರೆ ಬ್ರಿಟಿಷರು ದೇಶ ಬಿಟ್ಟು ಹೋಗುವಾಗ ಇದನ್ನು ಯಾರಿಗೆ ಒಪ್ಪಿಸಬೇಕೆಂದು ಪ್ರಶ್ನೆ ಎದುರಾದಾಗ ಗಾಂಧೀಜಿಯೇ ಹೇಳಿದರು-‘‘ಅದರ ಗೊಡವೆ ನಿಮಗೇಕೆ? ನೀವು ಬಿಟ್ಟು ತೊಲಗಿ. ನಾವು ಅದನ್ನು ಸರಿಪಡಿಸಿಕೊಳ್ಳುತ್ತೇವೆ. ನಮ್ಮ ಪಾಲಿಗೆ ನಮ್ಮನ್ನು ಬಿಡಿ’’ ‘‘ಹಾಗಾದರೆ ಇಲ್ಲಿ ಅರಾಜಕತೆ ಉಂಟಾಗುತ್ತದೆ. ಸೈನಿಕರಲ್ಲಿ ಯಾದವೀ ಯುದ್ಧವಾದೀತು. ಹಾಗೆ ದೇಶವನ್ನು ಅರಾಜಕತೆ, ಯಾದವೀ ಯುದ್ಧದ ದಳ್ಳುರಿಗೆ ತಳ್ಳುವುದು ನಾಗರಿಕ ವರ್ತನೆಯಲ್ಲ’’ ಎಂದು ಬ್ರಿಟಿಷ್ ಸರಕಾರ ಉತ್ತರಿಸಿತು. ದೇಶ ಇಬ್ಭಾಗವಾಗದೆ, ಸೌಹಾರ್ದ, ಸಾಮರಸ್ಯದ ಸುವ್ಯವಸ್ಥಿತ ಅಧಿಕಾರ ಹಸ್ತಾಂತರಿಸುವ ಸಲುವಾಗಿ ಬ್ರಿಟಿಷ್ ಸರಕಾರ ‘ಕ್ರಿಪ್ಸ್ ಕೊಡುಗೆ’ ಎಂಬ ಯೋಜನೆಯನ್ನು ದೇಶದ ಮುಂದಿಟ್ಟಿತು. ಆ ಕೊಡುಗೆಯನ್ನು ಕಾಂಗ್ರೆಸ್ ಅಂಗೀಕರಿಸಿದ್ದರೆ ದೇಶ ಇಬ್ಭಾಗವಾಗಬಹುದಾಗಿದ್ದ ವಿಪತ್ತನ್ನು ತಪ್ಪಿಸಬಹುದಾಗಿತ್ತು. ಆ ಯೋಜನೆಯನ್ನು ಮುಸ್ಲಿಂ ಲೀಗ್ ಜಿನ್ನಾ ಒಪ್ಪಿಕೊಂಡಿದ್ದರೆ ದೇಶ ವಿಭಜನೆಯ ವಿಪತ್ತು ತಪ್ಪಿಸಬಹುದಾಗಿತ್ತು. ಹಾಗೆ ಆಗಿದ್ದರೆ ಭಾರತ ಸ್ವಾಯತ್ತತೆವುಳ್ಳ ರಾಜ್ಯಗಳ ಒಕ್ಕೂಟವಾಗುತ್ತಿತ್ತು. ಅದನ್ನು ಸಾವರ್ಕರರು ಹಿಂದೆ ಹೇಳಿದಂತಹ ‘ಯುನೈಟೆಡ್ ಸ್ಟೇಟ್ಸ್ ಆಫ್ ಇಂಡಿಯಾ’ (ಭಾರತೀಯ ಸಂಯುಕ್ತ ಸಂಸ್ಥಾನಗಳು) ಅಸ್ತಿತ್ವದಲ್ಲಿ ಬರುತ್ತಿದ್ದವು ಈ ಏರ್ಪಾಟನ್ನು ಒಪ್ಪಿಕೊಳ್ಳಬೇಕೆಂದು ಶ್ರೀ ಅರವಿಂದರು ಕಾಂಗ್ರೆಸ್ ನಾಯಕರಿಗೆ ಸಂದೇಶ ಕಳಿಸಿದರು. ಆ ಸಂದೇಶ ತಲುಪುವ ಒಳಗಾಗಿ ಸಂಧಾನ ಮುರಿದುಬಿತ್ತು. ದೇಶ ವಿಭಜನೆಗೆ ನಾಂದಿಯಾಯಿತು! ಅದಕ್ಕೆ ಗಾಂಧೀಜಿಯೇ ಕಾರಣ ಎಂದು ಅವರನ್ನೇ ಬಲಿ ತೆಗೆದುಕೊಂಡಿದ್ದು ವಿಧಿವಿಲಾಸ ವೆಂದೇ ಹೇಳಬೇಕು.