ನೀಲಿ ಧ್ಯಾನದ ನರಿ
ತನ್ನ ತಾ ಕೊಲ್ಲುವುದು
ಆತ್ಮ ಸ್ತುತಿಯ ಧ್ಯಾನದಲ್ಲಿ.
ಕುರುಕ್ಷೇತ್ರದಲ್ಲಿ ಯುದ್ಧ ಸನ್ನಾಹ
ಮೋಡಿಯ ಮಹಾನ್ ನಾಯಕ
ಕೇದಾರದ ಗವಿ ಹೊಕ್ಕು ಕುಂತು
ಕಮಲ, ಕುಂಡಲ, ಕಮಂಡಲ
ಪವಿತ್ರ ಜಲ ಪ್ರೋಕ್ಷಣೆ
ಮಾಧ್ಯಮಕ್ಕಿನ್ನೇನು ಕೆಲಸ
ದಿನವೂ ನಿರಂತರ ಬಿತ್ತರ
ಚಹಾ ಮಾರಿದ್ದು, ಮಾವು ತಿಂದಿದ್ದು
ಹಿಮಾಲಯ ಹತ್ತಿ ಇಳಿದಿದ್ದು
ಯುದ್ಧ ಕಾರ್ಮೋಡ ಕವಿದಾಗ
ಗವಿ ಹೊಕ್ಕು ಕುಳಿತ ನರಿ
ನೀಲಿ ಧ್ಯಾನದಲಿ ನಿರತವಾಗಿ.
**********
ಕಾರ್ಪೊರೇಟ್ ಶಕ್ತಿ ವರ್ಧಿಸಲು
ಜಿಎಸ್ಟಿ, ನೋಟ್ ಬ್ಯಾನ್ ಮಾಡಿ
ದುಬಾರಿ ಮಶ್ರೂಮ್ ತಿನ್ನುತ್ತದೆ.
ಬಂಗಾರದ ಕೋಟು ಧರಿಸಿ
ಕಪಟ ಸನ್ಯಾಸಿಯ ನಾಟಕವಾಡುತ್ತದೆ
ಪೋಸು ನೀಡುತ್ತ ಫೋಟೊಕ್ಕೆ
ಹಿಮಾಲಯ ಏರಿದ್ದಾಯಿತು,
ಚಹಾ ಮಾರಿದ್ದಾಯಿತು
ದೇಶಕ್ಕೆ ಹೇಳುತ್ತಿದೆಯೀಗ
ಮಾವು ಹೇಗೆ ತಿನ್ನಬೇಕೆಂದು
ಡಿಜಿಟಲ್ ಕ್ಯಾಮರಾಕ್ಕೆ ಪೋಸು ನೀಡುತ್ತದೆ
ಗವಿ ಹೊಕ್ಕು ಕಾವಿ ತೊಟ್ಟ
ನರಿಯ ನೀಲಿ ಧ್ಯಾನ.
**********
ಲೋಕ ಮರುಳಾಗುತ್ತಿದೆ
ಚಾಯ್ವಲಾನ ಕಾವಿಯ ಕಂಡು
ರೂಪಕ, ನಾಟಕ ಕಲ್ಪನೆಗೆ ನಿಲುಕದ್ದು
ಧ್ಯಾನಸ್ಥ ನರಿಯ ಧ್ಯಾನ ಸ್ಮತಿ
ಪಟಲದಲ್ಲಿ ಗೆಲುವಿನ ಕನಸು,
ಏನೋ ಸಾಧಿಸಿದ ಹಮ್ಮು
ಸುಳ್ಳು ಬಯಲಾಗಿತ್ತು
ಬಾಲಕೋಟ್ ಬಣ್ಣಗೆಟ್ಟು.
ಧ್ಯಾನದಲ್ಲೂ ಕನ್ನಡಕ ಬಿಟ್ಟಿಲ್ಲ
ಲಾಡ್ಜ್‌ನಂತೆಯೇ ಬಾಡಿಗೆ ಗುಹೆ
ಎಲ್ಲವೂ ಕೃತಕ ಲೋಕ
ಇದೂ ಒಂದು ಫೋಟೋ ಸೇಶನ್
ಜನರಿಗೆ ಚಳ್ಳೆ ಹಣ್ಣು ತಿನಿಸಲು
ಕಪಟ ನರಿಯ ಪ್ಲಾನು
ಗವಿ ಹೊಕ್ಕು ಕುಂತಿದೆ
ನರಿ ನೀಲಿ ಧ್ಯಾನದಲ್ಲಿ.
*****************
ತಾನೇ ರಾಜನೆಂದು ಎದೆಯುಬ್ಬಿಸಿ
ಮೆರೆಯುತ್ತಿದ್ದ ನರಿಗೆ
ಗೊತ್ತಿಲ್ಲ ಸದ್ದಿಲ್ಲದ ಗುದ್ದು.
ದುಡ್ಡಿನ ಧಣಿಗೆ ಸಾಥ್ ನೀಡುವ
ಠಕ್ಕನ ನಡೆ ನಿಗೂಢವೇನಲ್ಲ
ಹಿಟ್ಲರನಾಗಿ ಮೆರೆದ ನರಿಗೆ
ಒಮ್ಮೆಲೇ ಬಂದಿದೆ ವೈರಾಗ್ಯ
ಹಿಂದೊಮ್ಮೆ ಬಂಗಾರ ಕದ್ದು
ಮನೆ ಬಿಟ್ಟು ಓಡಿತ್ತು ಹಿಮಾಲಯಕ್ಕೆ
ಜನರ ತೀರ್ಮಾನಕ್ಕೆ ಹೆದರಿ
ಈಗ ಗವಿ ಹೊಕ್ಕು ಕುಂತಿದೆ
ಧ್ಯಾನಸ್ಥ ಮೂಡಿನಲ್ಲಿ
ಮೋಡಗಳ ತೆರೆ ದಾಟಿ
ರೇಡಾರ್ ಕಕ್ಷೆಗೂ ಸಿಗದೆ ಪರಾರಿ
ಕ್ಲೈಮ್ಯಾಕ್ಸ್ ಮಥಿಸುತ್ತ ಕೇದಾರನಾಥನ ಸನ್ನಿಧಿಯಲ್ಲಿ
ನರಿಯು ನೀಲಿ ಧ್ಯಾನದಲ್ಲಿ.
*******************
ಪ್ರಜಾಸತ್ತೆಗೂ ಪುಣ್ಯಕ್ಷೇತ್ರಕ್ಕೂ
ಏನಕೇನ ಸಂಬಂಧ?
ದೇವರಿಗೆ ಬೆನ್ನು ಕೊಟ್ಟು
ಫೋಟೊಕ್ಕೆ ಪೋಸು ಕೊಟ್ಟು
ಶಂಖ ಊದುತ್ತಿದೆ ಕಳ್ಳ ನರಿ
ತನ್ನ ಜಾಣ ನಡೆಯಲಿ
ಎದೆಯುಬ್ಬಿಸಿ ಹೇಳುತ್ತಿದೆ
ರಕ್ತ ಮೆತ್ತಿದೆ ದೇಹಪೂರ್ತಿ
ಕಾವಿ ಹೊದ್ದು ಕುಂತಿದೆ ನರಿ
ಕೃತಕ ರೆಸಾರ್ಟ್‌ನಲ್ಲಿ
ಮತದಾರನ ಸೆಳೆಯಲು
ಮಾಡುತ್ತಿದೆ ಧ್ಯಾನ
ಎಲ್ಲವೂ ಕೇಸರಿಮಯ
ಕೇದಾರನ ಸಾನಿಧ್ಯದಲ್ಲಿ
ಧ್ಯಾನ ಕುಂತಿದೆ ನರಿ
ಕಣ್ಣು ಮುಚ್ಚಿ ಕನ್ನಡಕ ಹಚ್ಚಿ.