ಗೋಡ್ಸೆಗೆ ಗುರುಬೋಧೆ ಮಾಡಿದವರು ಯಾರು?
ಗಾಂದಿ ಕಗ್ಗೊಲೆ: ಕಾರಣ - ಪರಿಣಾಮ
ಭಾಗ - 33
ಗೋಡ್ಸೆಗೆ ಗುರುವಾಗಿದ್ದವರು ಸಾವರ್ಕರ್. ಗುರುಬೋಧೆ ಕೊಟ್ಟವರು ಸಾವರ್ಕರ್. ಆ ಗುರುಬೋಧೆಯ ಫಲವೇ ಗಾಂಧಿ ಹತ್ಯೆ. ಹಾಗಾದರೆ ಆ ‘ಗುರುಬೋಧೆ’ ಏನು? ಗಾಂಧಿಯನ್ನು ಗುಂಡಿಕ್ಕಿ ಕೊಲ್ಲು ಎಂಬುದಾಗಿರಲಿಕ್ಕಿಲ್ಲ ಎಂಬುದನ್ನು ಒಡನೆಯೇ ಇಲ್ಲಿಯೇ ಸ್ಪಷ್ಟಪಡಿಸುತ್ತೇನೆ. ಆದರೆ ಗೋಡ್ಸೆ ಹೇಳುವಂತೆ ಅಖಂಡ ಭಾರತ ತುಂಡುಮಾಡಿದ್ದು ‘ಪಾತಕ ಕೃತ್ಯ’ ಎಂಬ ಗುರೂಪದೇಶ ಅವರಿಂದಲೇ ಆದದ್ದು. ಆ ಪಾತಕ ಕೃತ್ಯಕ್ಕೆ ತಲೆದಂಡ ತೆರಬೇಕಾಗಿದ್ದವರು ಗಾಂಧೀಜಿ! ಈ ಭಾವಬೀಜವನ್ನು ಬಿತ್ತಿದವರಾರು?
ರಾಜಕೀಯ ಜಗದ್ವಾಪಾರ ವ್ಯವಹಾರ ಯಾರೊಬ್ಬ ವ್ಯಕ್ತಿಯಿಂದ ನಡೆಯುವುದಿಲ್ಲ. ಅದಕ್ಕೆ ಅನಂತಾನಂತ ವ್ಯಕ್ತಿಗಳು, ಶಕ್ತಿಗಳು, ಸನ್ನಿವೇಶಗಳು, ಘಟನಾ ಪರಂಪರೆಗಳು, ದೇಶ ವಿದೇಶಗಳಲ್ಲಿ ಆಗುವ ರಾಜಕೀಯ ಬೆಳವಣಿಗೆಗಳು, ಅಷ್ಟೇಕೆ ಕೆಲವೊಮ್ಮೆ ಅನಿರೀಕ್ಷಿತ ಘಟನೆಗಳು, ಯಾರೋ ಒಬ್ಬ ಮುಖಂಡ ಇಲ್ಲವೇ ಮೂರ್ಖ ಆಡಿದ ಮಾತುಗಳು, ಒಮ್ಮಿಮ್ಮೆ ನಿರ್ಜೀವ ಯಃಕಶ್ಚಿತ್ ವಸ್ತುಗಳು ಹೀಗೆ ಊಹಿಸಲೂ ಆಗದಂತಹ ವಸ್ತು, ಸಂಗತಿಗಳು ಒಂದು ದೇಶದ ಇತಿಹಾಸದ ದಿಕ್ಕನ್ನೇ ಬದಲಾಯಿಸಬಹುದು. ಉದಾಹರಣೆಗೆ, ಪರ್ಲ್ ಹಾರ್ಬರ್ ಮೇಲೆ ಜಪಾನ್ ದಾಳಿ ಮಾಡಿ ಆಕ್ರಮಿಸಿಕೊಂಡಿದ್ದರಿಂದ ಅಮೆರಿಕ ದ್ವಿತೀಯ ಜಾಗತಿಕ ಯುದ್ಧದಲ್ಲಿ ಪ್ರತ್ಯಕ್ಷ ಪಾಲ್ಗೊಳ್ಳಬೇಕಾಯಿತು. ಬ್ರಿಟನ್‌ನ ಮಿತ್ರಪಕ್ಷ ಸೇರಬೇಕಾಯಿತು. ಆಗ ಬ್ರಿಟಿಷ್ ಭಾರತದ ಜನಬಲ, ಧನಬಲ, ಯುದ್ಧ ಸಾಮಗ್ರಿಗಳ ಸಹಾಯ ಅಗತ್ಯವಾಯಿತು. ಭಾರತದ ಅಸಹಕಾರ ಚಳವಳಿ ಯುದ್ಧ ಸಿದ್ಧತೆಗೆ ದೊಡ್ಡ ಅಡ್ಡಿಯಾಯಿತು. ಯುದ್ಧವನ್ನು ಗೆಲ್ಲಲೇ ಬೇಕಾಗಿದ್ದರಿಂದ ಅಮೆರಿಕದ ಪಕ್ಷದ ಅಧ್ಯಕ್ಷ ರೂಜ್‌ವೆಲ್ಟ್, ಬ್ರಿಟನ್ ಪ್ರಧಾನಿ ಚರ್ಚಿಲ್‌ರ ಮೇಲೆ ಭಾರತ ಸ್ವಾತಂತ್ರದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯ ತಂದರು. ಅದರಿಂದ ಬ್ರಿಟನ್ ಭಾರತೀಯರೊಡನೆ ಸಂಧಾನ ನಡೆಸಲೇಬೇಕಾಯಿತು. ಅದರಿಂದ ನಮ್ಮ ಸ್ವಾತಂತ್ರ ಪ್ರಾಪ್ತಿ ಶೀಘ್ರವಾಗಲು ಕಾರಣವಾಯಿತು. ಎಲ್ಲಿಯ ಪರ್ಲ್ ಹಾರ್ಬರ್! ಎಲ್ಲಿಯ ಯುದ್ಧ ! ವಾಷಿಂಗ್ಟನ್‌ಗೆ ದಿಲ್ಲಿಯ ಸಂಬಂಧವೇನು? ಕಾಂಗ್ರೆಸ್ ಹೂಡಿದ್ದ 'ಚಲೇಜಾವ್' ಚಳವಳಿಯಿಂದಲೇ ಸ್ವಾತಂತ್ರ ಪ್ರಾಪ್ತಿಯಾಯಿತು ಎಂಬುದು ಹೇಗೆ ಪೂರ್ಣ ಸತ್ಯವಾಗಲಾರದೋ ಹಾಗೆಯೇ ಗಾಂಧೀಜಿಯ ಧೋರಣೆಯೇ ಈ ದೇಶದ ವಿಭಜನೆಗೆ ಕಾರಣವೆಂಬುದೂ ಸತ್ಯವಲ್ಲ. ಅರ್ಧಸತ್ಯವೂ ಅಲ್ಲ; ಕಿಂಚಿತ್ ಸತ್ಯವೂ ಅಲ್ಲ. ಅದು ಶುದ್ಧಾಂಗ ಅಪದ್ಧ.
ಹಾಗಾದರೆ ದೇಶ ವಿಭಜನೆಗೆ ಮುಖ್ಯ ಕಾರಣ ಹಿಂದೂ- ಮುಸ್ಲಿಮರಲ್ಲಿ ದ್ವೇಷದ ಕಿಚ್ಚು ಹಚ್ಚಿ, ಅದನ್ನು ಪ್ರಜ್ವಲಗೊಳಿಸಿ ಅವರಿಬ್ಬರೂ ಕೂಡಿ ಒಂದೇ ದೇಶದಲ್ಲಿ ಬದುಕಲಾರರು ಎಂಬ ಕಿಡಿಯನ್ನು ಹುಟ್ಟಿಸಿದವರಾರು? ಅಖಂಡ ಭಾರತವನ್ನು ತುಂಡರಿಸುವ ಪಾತಕ ಕೃತ್ಯಕ್ಕೆ ವಿಷಬೀಜ ನೆಟ್ಟವರಾರು? ಗೋಡ್ಸೆ ಮತ್ತು ಅವನ ಪರಿವಾರದ ಪ್ರಕಾರ ಗಾಂಧೀಜಿಯವರೇ ದೇಶ ವಿಭಜನೆಗೆ ಕಾರಣ. ಗಾಂಧಿ ಜೀವನ ಚರಿತ್ರೆಯನ್ನು ಬಲ್ಲವರು, ಗಾಂಧೀಜಿ ಹಿಂದೂ ಮುಸ್ಲಿಂ ಏಕತೆಗಾಗಿ ಮಾಡಿದ ಹರಸಾಹಸವನ್ನು ಪ್ರತ್ಯಕ್ಷ ಕಂಡವರು ಅವರು ದೇಶ ವಿಭಜನೆಗೆ ಕಾರಣರಲ್ಲ ಎಂಬುದು ಲೋಕವಿಖ್ಯಾತ. ಗಾಂಧೀಜಿ ಹೇಳಿದರು: ''ನನ್ನ ಹೆಣವನ್ನು ತುಳಿದು ದಾಟಿ ದೇಶವನ್ನು ವಿಭಜಿಸಬೇಕಾದೀತು.'' ಈ ಮಾತನ್ನು ಹಿಡಿದು ಗೋಡ್ಸೆ 'ಆಕ್ರಂದನ' ಮಾಡಿದ. ''ದೇಶ ತುಂಡಾಯಿತು. ಗಾಂಧಿ ಇನ್ನೂ ಬದುಕಿಯೇ ಇದ್ದಾರೆ! ಅವರಿನ್ನು ಬದುಕಿರಬಾರದು'' ಎಂದು. ಗಾಂಧೀಜಿ ಹೇಳಿದರು: ''ಈ ದೇಶ ಒಂದಾಗಿ ಬಾಳುವುದಾದರೆ ಖಾಯಿದೆ ಆಜಂ ಜಿನ್ನಾ ಅವರೇ ಅಖಂಡ ಭಾರತದ ರಾಷ್ಟ್ರಪತಿಯೋ, ಪ್ರಧಾನಿಯೋ ಆಗಲಿ. ಅವರಿಗೇ ಈ ದೇಶದ ಅಧಿಕಾರವನ್ನು ಬಿಟ್ಟುಕೊಡಿ!'' ಅವರ ಈ ನಿಲುಮೆಯನ್ನು ಪ್ರಬಲವಾಗಿ ವಿರೋಧಿಸಿದವರು ಸಾವರ್ಕರ್‌ರ 'ಶಿಷ್ಯಾಗ್ರಣಿ' ಗೋಡ್ಸೆ, ಅವನಿಗೆ ಶಿಷ್ಯತ್ವ ದೀಕ್ಷೆ ಕೊಟ್ಟವರು ಸಾವರ್ಕರ್. 'ಅಗ್ರಣಿ' ಪತ್ರಿಕೆಯ ದ್ವಿತೀಯ ವಾರ್ಷಿಕದ ಸಂದರ್ಭದಲ್ಲಿ ಮಾರ್ಚ್ 28,1944ರಂದು ಗೋಡ್ಸೆ ಸಾವರ್ಕರ್‌ರಿಗೆ ಬರೆದ ಪತ್ರದಲ್ಲಿ (ಜೋತಿರ್ಮಯಿ ಶರ್ಮ ಬರೆದ, ದಿನಾಂಕ 20-9-2004ರ ಹಿಂದೂ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ) ...ನನ್ನ ಮಾತು ಸರಿ ಎಂದೇ ಆಗಲಿ, ಅಲ್ಲ ಎಂದೇ ಆಗಲಿ ನಿಮ್ಮ ಶಿಷ್ಯನ ಮೇಲೆ ಸಿಟ್ಟಾಗಬೇಡಿ. ಇಲ್ಲವೇ ಅದನ್ನು ನನ್ನ ವಿರುದ್ಧ ಎತ್ತಿಗಟ್ಟಬೇಡಿ. ಇದು ನನ್ನ ಕಳಕಳಿಯ ಪ್ರಾರ್ಥನೆ. ('ಅಭ್ಯರ್ಥನ' ಮರಾಠಿಯಲ್ಲಿ ಬರೆದ ಮಾತು) ಇದನ್ನು ಬರೆದದ್ದು ಅಗ್ರಣಿ ಪತ್ರಿಕೆಯ ಭವಿಷ್ಯ ಮತ್ತು ಹಣೆಬರಹವನ್ನು ಕುರಿತ ಸಂದರ್ಭ. ಆ ಸಂದರ್ಭದಲ್ಲಿ ಗೋಡ್ಸೆ ಸಾವರ್ಕರ್‌ರಲ್ಲಿ ವಿನಂತಿ ಮಾಡುತ್ತಾನೆ: ''ನೀವು ಅಗ್ರಣಿ ಪತ್ರಿಕೆಗೆ ಲೇಖನಗಳನ್ನು ಬರೆದು ಸಹಕರಿಸಬೇಕು. ಹಿಂದೆ ಲೋಕಮಾನ್ಯ ತಿಲಕರು 'ಕೇಸರಿ' ಪತ್ರಿಕೆಗೆ, ಗಾಂಧೀಜಿ 'ಹರಿಜನ' ಪತ್ರಿಕೆಗೆ ಲೇಖನ ಬರೆದಂತೆ ತಾವೂ ಲೇಖನ ಬರೆಯಬೇಕೆಂದು ಪ್ರಾರ್ಥಿಸುತ್ತೇನೆ.'' ಇದರಿಂದ ಗೋಡ್ಸೆಗೆ ಗುರುವಾಗಿದ್ದವರು ಸಾವರ್ಕರ್. ಗುರುಬೋಧೆ ಕೊಟ್ಟವರು ಸಾವರ್ಕರ್. ಆ ಗುರುಬೋಧೆಯ ಫಲವೇ ಗಾಂಧಿ ಹತ್ಯೆ. ಹಾಗಾದರೆ ಆ 'ಗುರುಬೋಧೆ' ಏನು? ಗಾಂಧಿಯನ್ನು ಗುಂಡಿಕ್ಕಿ ಕೊಲ್ಲು ಎಂಬುದಾಗಿರಲಿಕ್ಕಿಲ್ಲ ಎಂಬುದನ್ನು ಒಡನೆಯೇ ಇಲ್ಲಿಯೇ ಸ್ಪಷ್ಟಪಡಿಸುತ್ತೇನೆ. ಆದರೆ ಗೋಡ್ಸೆ ಹೇಳುವಂತೆ ಅಖಂಡ ಭಾರತ ತುಂಡುಮಾಡಿದ್ದು 'ಪಾತಕ ಕೃತ್ಯ' ಎಂಬ ಗುರೂಪದೇಶ ಅವರಿಂದಲೇ ಆದದ್ದು. ಆ ಪಾತಕ ಕೃತ್ಯಕ್ಕೆ ತಲೆದಂಡ ತೆರಬೇಕಾಗಿದ್ದವರು ಗಾಂಧೀಜಿ! ಈ ಭಾವಬೀಜವನ್ನು ಬಿತ್ತಿದವರಾರು?
ಹಿಂದೂ- ಮುಸ್ಲಿಮರು ಒಂದಾಗಿ ಬಾಳುವುದು ಸಾಧ್ಯವೇ ಇಲ್ಲ. ಆದ್ದರಿಂದ ಮುಸ್ಲಿಂ ಬಹುಸಂಖ್ಯಾತ ಪ್ರಾಂತಗಳಾದ ಪಂಜಾಬ್, ಅಫ್ಘಾನಿಸ್ತಾನ, ಕಾಶ್ಮೀರ, ಸಿಂದ್ ಮತ್ತು ಪೂರ್ವ ಬಂಗಾಳಗಳನ್ನು ಭರತಖಂಡದಿಂದ ಪ್ರತ್ಯೇಕಿಸಿ ಪಾಕಿಸ್ತಾನ ರಾಷ್ಟ್ರ ರಚನೆ ಆಗಬೇಕೆಂದು ಜಿನ್ನಾರೇ ಮುಸ್ಲಿಂ ಲೀಗ್ ಹಠ ಹಿಡಿದು ಮಾರಣಹೋಮದಲ್ಲಿ ಭುಗಿಲೆದ್ದ ಹಿಂದೆಂದೂ ಕಂಡರಿಯದಿದ್ದ ಹೋರಾಟ, ಮತಧರ್ಮದ ಆಧಾರದ ಮೇಲೆ ರಾಜ್ಯ, ರಾಷ್ಟ್ರ ನಿರ್ಮಾಣ ಸಾಧುವಲ್ಲ ಎಂದು ವಾದಿಸಿದವರು ದೇಶ ವಿಭಜನೆಯನ್ನು ವಿರೋಧಿಸಿದ್ದು ಗಾಂಧೀಜಿ ನಾಯಕತ್ವದ ಕಾಂಗ್ರೆಸ್. ಆದರೆ ಮತೀಯ ಆಧಾರದ ಮೇಲೆ ದ್ವಿ-ರಾಷ್ಟ್ರವನ್ನು ಪ್ರತಿಪಾದಿಸಿದವರು ಸಾವರ್ಕರ್!! ಅವರ ಈ ಸಿದ್ಧಾಂತವನ್ನು ಅವಲಂಬಿಸಿಯೇ ಜಿನ್ನಾ ಪಾಕಿಸ್ತಾನದ ಹಕ್ಕು ಸಾಧಿಸಿದ್ದು. ಹಾಗಾದರೆ ಸಾವರ್ಕರ್‌ರ ರಾಜಕೀಯ ಸಿದ್ಧಾಂತವೇನು? ಅನಿಲ್ ನೌರಿಯಾ ಎಂಬ ಲೇಖಕರೊಬ್ಬರು 'ಸಾವರ್ಕರಿಸಂ' ಅಂದರೆ ಏನೆಂಬುದನ್ನು ಕ್ರೋಡೀಕರಿಸಿದ್ದಾರೆ: ಸಾವರ್ಕರಿಸಂ ಪ್ರಥಮ ತತ್ವ ಒಂದು ಜನಾಂಗವನ್ನು ಧರ್ಮದ (ಜಾತಿಯ)ಆಧಾರದ ಮೇಲೆ ನಿರ್ವಚನ ಮಾಡುವುದು. ಅವರ ಈ ಸಿದ್ಧಾಂತವನ್ನು ಅವರು ಬಹಿರಂಗವಾಗಿ ದಿನಾಂಕ 15-08-1943ರಂದು ಘೋಷಣೆ ಮಾಡಿದರು. ಆ ಘೋಷಣೆಯಲ್ಲಿ:
''ಜಿನ್ನಾರ ದ್ವಿ-ರಾಷ್ಟ್ರ ಸಿದ್ಧಾಂತದ ಬಗ್ಗೆ ನನ್ನ ಕಲಹವಿಲ್ಲ. ಹಿಂದೂಗಳಾದ ನಾವೆಲ್ಲಾ ಒಂದು ರಾಷ್ಟ್ರ ಹಾಗೂ ಹಿಂದೂಗಳು ಮುಸ್ಲಿಮರು ಎರಡು ರಾಷ್ಟ್ರಗಳೆಂಬುದು ಐತಿಹಾಸಿಕ ಸಂಗತಿ.''(Indian annual register 1943,vol.2,page 10)
''ಸಾವರ್ಕರಿಸಂನ ದ್ವಿತೀಯ ತತ್ವದ ಪ್ರಕಾರ ಧಾರ್ಮಿಕ (ಜಾತಿಯ) ವಿಚಾರಗಳ ಸಂಬಂಧವಾಗಿ ನಡೆಯುವ ವಧೆ, ಹತ್ಯೆ ಕ್ಷಮಾರ್ಹ. ಅವರ ಈ ತತ್ವಕ್ಕೆ ಆಧಾರವಾಗಿ ಜರ್ಮನಿಯಲ್ಲಿ ಆರ್ಯ ಜರ್ಮನರಿಗೂ, 'ಜ್ಯೂ' (ಯಹೂದಿ)ಜನಾಂಗದವ ರಿಗೂ ಆದ ನರಮೇಧ (Holocaust)ವನ್ನು ಉದಾಹರಿ ಸುತ್ತಾರೆ. ಇದೇ ತತ್ವವನ್ನು ಡಾ.ಹೆಡ್ಗೆವಾರ್ ವಿರಚಿತ 'We the nation' ಎಂಬ ಸಂಘಪರಿವಾರದ ಆಧಾರ ಗ್ರಂಥ ಗುರೂಜಿ ಗೋಳ್ವಾಲ್ಕರ್ ಅವರ: 'Bunch of thoughts' ಅವರ ಪಾಲಿಗೆ ಗೀತೋಪದೇಶವೆನಿಸಿದ ಗ್ರಂಥದಲ್ಲಿ ಜರ್ಮನಿಯೇ ತಮ್ಮ ಆದರ್ಶ ದೇಶ; ಅದರ ನಾಯಕ ಹಿಟ್ಲರನೇ ಆದರ್ಶ ನಾಯಕ ಎಂಬುದಾಗಿ ಪ್ರತಿಪಾದಿಸಿದ್ದಾರೆ. ಇದೇ ತತ್ವವನ್ನು ಇಂದಿಗೂ ಎತ್ತಿ ಹಿಡಿಯುವ ಅದರಂತೆ ಆಚರಿಸುವ ಶಿವಸೇನೆ ಸಂಘಪರಿವಾರದ ನಿಕಟಬಂಧು!! ಜರ್ಮನರೂ ಜ್ಯೂ(ಯಹೂದಿ)ಜನರೂ ಹೇಗೆ ಒಂದಾಗಿ ಬಾಳಲಾರರೋ ಜನಾಂಗೀಯ ಪಾರಿಶುದ್ಧತೆ ಕಾಪಾಡಿಕೊಳ್ಳಲು ಬಾಳಕೂಡದೋ ಹಾಗೆಯೆ ಹಿಂದೂ ಮುಸ್ಲಿಮರು ಒಂದಾಗಿ ಬಾಳಲಾರರು. ಭಾರತದಲ್ಲಿಯೆ ಹುಟ್ಟಿ, ಬೆಳೆದು, ಸಾಯುವ ಮುಸ್ಲಿಮರು ಭಾರತೀಯರಲ್ಲ.ಆದ್ದರಿಂದ ಅವರಿಗೆ ಭಾರತದಲ್ಲಿ ಸ್ಥಾನವಿಲ್ಲ.ಅವರಿಲ್ಲಿ ಬದುಕುವು ದಾದರೆ ಅವರು ಭಾರತದ ಬಹುಸಂಖ್ಯಾತರಾದ ಹಿಂದೂಗಳ 'ಸಾಂಸ್ಕೃತಿಕ ರಾಷ್ಟ್ರೀಯತೆ'ಗೆ ತಲೆಬಾಗಿ ದ್ವಿತೀಯ ದರ್ಜೆಯ ಪ್ರಜೆಗಳು/ನಾಗರಿಕರಾಗಿ ಇರಬೇಕು. ಈ ಸಿದ್ಧಾಂತದ ಫಲವೆ ಪಾಕಿಸ್ತಾನದ ಸ್ಥಾಪನೆ. ಅದು ಅಲ್ಲಿಗೆ ನಿಲ್ಲಲಿಲ್ಲ. ಇಂದು ಗುಜರಾತಿನಲ್ಲಿ ನಡೆಯುತ್ತಿರುವ ಮುಸ್ಲಿಂ ವಿರೋಧಿ ರಾಜನೀತಿಯ ಬುನಾದಿ ಸಾವರ್ಕರಿಸಂನ ಈ 'ತತ್ವ'. ಹಾಗಾದರೆ ಭಾರತ ಇಬ್ಭಾಗವಾದುದಕ್ಕೆ ಕಾರಣರಾರು? ಗಾಂಧೀಜಿಯೇ? ಸಾವರ್ಕರ್‌ರೇ?
(ಬುಧವಾರದ ಸಂಚಿಕೆಗೆ ಮುಂದುವರಿಯುವುದು)